ನೈನ್ ರಾಮ್ ಬಜೆಲಾ ಅವರು ಮುನ್ಸಿಯಾರಿ ತೆಹಸಿಲ್‌ನ ಜೈತಿ ಗ್ರಾಮದಲ್ಲಿ ತಮ್ಮ ಮನೆಯ ಛಾವಣಿಯ ಮೇಲೆ ಕುಳಿತು, ತಂಡಿ ಚಳಿಗಾಲದ ಬೆಳಿಗ್ಗೆ ಬುಟ್ಟಿಗಳನ್ನು ನೇಯುತ್ತಿದ್ದಾರೆ. ಅವರ ಹಿಂದೆ ಬಟ್ಟೆಯ ಸಾಲು, ಮೇಲೆ ತೆಳುವಾದ ಮೋಡಗಳು ಮತ್ತು ದೂರದಲ್ಲಿ ಪಂಚಚೂಲಿ ಪರ್ವತಗಳು. ಅವರು ಹಿಮಾಲಯನ್ ಬಿದಿರಿನ ರಿಂಗಲ್ ಅಥವಾ ಪಹಾಡಿ ರಿಂಗಲ್ ಅನ್ನು ಬಾಗಿದ ಚಾಕುವಿನಿಂದ ತೆಳುವಾದ ಪಟ್ಟಿಗಳಾಗಿ ಕತ್ತರಿಸುತ್ತಾರೆ, ಅದನ್ನು ಅವರು ತನ್ನ ಪಹಾಡಿ ಭಾಷೆಯಲ್ಲಿ 'ಬರಾಂಶ್' ಎಂದು ಕರೆಯುತ್ತಾರೇ. ಈ ಮೈನಸ್ ಡಿಗ್ರಿ ತಾಪಮಾನದಲ್ಲಿ ಚರ್ಮ ಚುಚ್ಚುವ ತಂಡಿ ಗಾಳಿಯಲ್ಲಿಯೂ ಸಹ ಯಾವುದೇ ಕೈಗವಸುಗಳು ಅಥವಾ ಸಾಕ್ಸ್‌ಗಳನ್ನು ಧರಿಸಿಲ್ಲ. ನೈನ್ ರಾಮ್ ಇದ್ಯಾವುದ್ದನ್ನು ಲೆಕ್ಕಿಸದೆ ಶ್ರಮಿಸುತ್ತಿದ್ದಾರೆ.
“ನಾನು ನಿನ್ನೆ ಈ ರಿಂಗಲ್ ಅನ್ನು ಕಾಡಿನಿಂದ ಸಂಗ್ರಹಿಸಿದೆ. ಎರಡು ಬುಟ್ಟಿಗಳನ್ನು ಮಾಡಲು ಈ ಬಿದಿರು ಸಾಕು” ಎಂದು ಅವರು ನನ್ನತ್ತ ಮತ್ತು ಕ್ಯಾಮೆರಾ ಕಡೆ ನೋಡದೆ ಹೇಳಿದರು. ನೈನ್ ರಾಮ್ ಅವರು 12 ನೇ ವಯಸ್ಸಿನಿಂದ ಬಿದಿರಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ; ಅವರು ತನ್ನ ತಂದೆಯಿಂದ ಈ ಕೌಶಲ್ಯವನ್ನು ಕಲಿತರು, ಆದಾಯವಿಲ್ಲದ ಕಾರಣದಿಂದಾಗಿ ತನ್ನ ಮಗನಿಗೆ ಈ ಕೆಲಸವನ್ನು ಮಾಡಲು ಅನುಮತಿ ನೀಡಲು ಹಿಂಜರಿಯುತ್ತಾರೆ. ಅವರು ಹೇಳುತ್ತಾರೆ, "ನಾನು ಬಾಲ್ಯದಲ್ಲಿ ಜನರ ಭೂಮಿಯಿಂದ ರಿಂಗಲ್ ಕದ್ದು ಬುಟ್ಟಿಗಳು, ಹೂವಿನ ಹೂದಾನಿಗಳು, ಡಸ್ಟ್‌ಬಿನ್‌ಗಳು, ಪೆನ್ ಸ್ಟ್ಯಾಂಡ್‌ಗಳು ಮತ್ತು ಬಿಸಿ ಚಪಾತಿ ಬಾಕ್ಸ್‌ಗಳನ್ನು ತಯಾರಿಸುತ್ತಿದ್ದೆ."
ಪ್ರಸ್ತುತ 54 ವರ್ಷ ಪ್ರಾಯದ ನೈನ್ ರಾಮ್ ಕೇವಲ ಕೈ ಮತ್ತು ಚಾಕು ಬಳಸಿ ರಿಂಗಲ್ ಮೂಲಕ ಏನನ್ನೂ ಬೇಕಿದ್ದರೂ ಸೃಷ್ಟಿಸಬಲ್ಲರು. “ಇದು ನನ್ನ ಪಾಲಿಗೆ ಜೇಡಿ ಮಣ್ಣಿದ್ದಂತೆ. ಇದನ್ನು ನನಗೆ ಬೇಕಾದ ಆಕಾರಕ್ಕೆ ತಿರುಗಿಸಬಲ್ಲೆ” ಎಂದು ಅವರು ತೆಳು ಮತ್ತು ದಪ್ಪ ಪಟ್ಟಿಗಳನ್ನು ನೇಯುತ್ತಾ ಹೇಳುತ್ತಾರೆ. “ಇದೊಂದು ಹೊಟ್ಟೆಪಾಡಿನ ಕೆಲಸವಲ್ಲ. ಇದೊಂದು ಕೌಶಲ. ಇದಕ್ಕೆ ಇತರ ಕಲೆಗಳೆಂತೆಯೇ ತಾಳ್ಮೆ ಬೇಕು, ತರಬೇತಿ ಬೇಕು.”









