ಕೆಲವು ತಿಂಗಳ ಹಿಂದೆ, ಮೋಹನ್ ಚಂದ್ರ ಜೋಶಿಯವರ ಸಹೋದರನು ಭಾರತೀಯ ಸೇನೆಗೆ ಆಯ್ಕೆಯಾದಾಗ, ತಕ್ಷಣವೇ ಅವರು, ಅಲ್ಮೋರಾ ಅಂಚೆ ಕಛೇರಿಯಲ್ಲಿನ ಪರಿಚಯಸ್ಥರೊಬ್ಬರಿಗೆ ನೇಮಕಾತಿಯ ಪತ್ರವನ್ನು “ನಮ್ಮ ಮನೆಗೆ ಕಳುಹಿಸದೆ,” ಹಾಗೆಯೇ ಇಟ್ಟುಕೊಳ್ಳಬೇಕೆಂದು ತಿಳಿಸಿದ್ದರು. ಮೋಹನ್ ಚಂದ್ರ ಅವರು ತಮ್ಮ ಸಹೋದರನು ಸೇನೆಗೆ ಸೇರುವುದನ್ನು ತಡೆಯಲು ಪ್ರಯತ್ನಿಸುತ್ತಿರಲಿಲ್ಲ. ಅಂಚೆಯು ತಡವಾಗಿ ತಲುಪಬಹುದು ಅಥವಾ ತಲುಪದೇ ಇರಬಹುದೆಂದು ಚಿಂತಿತರಾಗಿದ್ದರಷ್ಟೇ. ಉತ್ತರಾಖಂಡ್‌ನ ಪಿತೋರಾಗಢ್‌ನಲ್ಲಿನ ಭನೋಲಿ ಗುಂಠ್ ಗ್ರಾಮಸ್ಥರಿಗೆ ಇದು ಸರ್ವೇಸಾಮಾನ್ಯ. ಅವರ ಸಮೀಪದ ಅಂಚೆ ಕಛೇರಿಯು ಮತ್ತೊಂದು ಜಿಲ್ಲೆಯಲ್ಲಿದೆ.
ಮೋಹನ್ ಚಂದ್ರ, “ಸಂದರ್ಶನದ ಪತ್ರವು ಅತ್ಯಂತ ತಡವಾಗಿ ತಲುಪಿದ ಕಾರಣ ಅನೇಕ ಜನರು ನೌಕರಿಯನ್ನು ಕಳೆದುಕೊಂಡಿದ್ದಾರೆ. ಆಗಾಗ್ಗೆ ಅಂಚೆಯವನು ಸಂದರ್ಶನದ ದಿನಾಂಕವು ಮುಗಿದ ನಂತರದ ದಿನಗಳಲ್ಲಿ ಟಪಾಲನ್ನು ತಲುಪಿಸುತ್ತಾನೆ. ಉದ್ಯೋಗಗಳಿಲ್ಲದ ದೂರದಲ್ಲೆಲ್ಲೋ ಇರುವ ಇಂತಹ ಸ್ಥಳಗಳಲ್ಲಿ ಅಂತಹ ಪತ್ರವನ್ನು ಅದೂ ಸರ್ಕಾರಿ ನೇಮಕಾತಿಯ ಪತ್ರವನ್ನು ಕಳೆದುಕೊಳ್ಳಲು ಯಾರಿಗೆ ತಾನೇ ಸಾಧ್ಯ? ಎಂದು ಕೇಳಿದರು. ಬಹುತೇಕ ಮಾತುಗಳನ್ನು ಅವರ ಕಣ್ಣುಗಳೇ ಹೇಳುತ್ತಿದ್ದವು.
ಪತ್ರವನ್ನು ಖುದ್ದಾಗಿ ಪಡೆಯಲು ಮೋಹನ್, ೭೦ ಕಿ.ಮೀ. ದೂರದ ಅಲ್ಮೋರಾದ ಜನರಲ್ ಪೋಸ್ಟ್ ಆಫೀಸ್‌ಗೆ ತೆರಳಿದರು. ಹೌದು, “ಅಂಚೆ ಕಚೇರಿಯಿಂದ ನಾವು ಅವನ್ನು ತೆಗೆದುಕೊಳ್ಳಬಾರದೆಂದು ನನಗೆ ಗೊತ್ತು. ಅಂಚೆಯವನು ನಮ್ಮ ಮನೆಗೆ ಅವನ್ನು ತಲುಪಿಸಬೇಕು. ಆದರೆ ನಮಗೆ ಇಂತಹ ಸವಲತ್ತಿನ ಅವಕಾಶವಿಲ್ಲ. ನಾವೇ ಪತ್ರಗಳನ್ನು ಪಡೆದುಕೊಳ್ಳದಿದ್ದಲ್ಲಿ, ಅವನ್ನು ಪಡೆಯಲು ಒಂದು ತಿಂಗಳಾದರೂ ಆಗಬಹುದು (ಅವು ತಲುಪಿದ್ದೇ ಆದರೆ). ಅಷ್ಟರಲ್ಲಿ, ನನ್ನ ಸಹೋದರನು ಉದ್ಯೋಗಕ್ಕೆ ಸೇರುವ ಸಮಯವು ಮುಗಿದಿರುತ್ತದೆ” ಎಂದರವರು.
ಉತ್ತರಾಖಂಡದ ಪಿತೋರಾಗಡ್ ಜಿಲ್ಲೆಯ ಭನೋಲಿ ಸೆರ ಗುಂಠ್‌ನಲ್ಲಿನ (ಭನೋಲಿ ಸೆರ ಎಂದೂ ಇದನ್ನು ಕರೆಯಲಾಗುತ್ತದೆ.) ಚಹಾದ ಅಂಗಡಿಯಲ್ಲಿ ಮೋಹನ್ ಚಂದ್ರ ಮತ್ತು ಇತರೆ ಕೆಲವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಇತರೆ ಐದು ಗ್ರಾಮಗಳ ಅಂಚೆಯ ಸ್ಥಿತಿಯು ಇದೇ ರೀತಿಯಿದೆ – ಪತ್ರಗಳು ತಡವಾಗಿ ತಲುಪುತ್ತವೆ ಅಥವಾ ತಲುಪುವುದೇ ಇಲ್ಲ. ಈ ಗ್ರಾಮಗಳೆಂದರೆ, ಸೆರ (ಉರುಫ್) ಬಡೋಲಿ, ಸರ್‌ತೋಲ, ಚೌನಾ ಪಾಟಲ್, ನೈಲಿ ಹಾಗೂ ಇದೇ ರೀತಿ ಧ್ವನಿಸುವ ಆದರೆ ಬೇರೆಯದೇ ಆದ ಬಡೋಲಿ ಸೆರ ಗುಂಠ್.
ಈ ಗ್ರಾಮಗಳು ಅಲ್ಮೋರಾ ಮತ್ತು ಪಿತೋರಾಗಢ್ ಜಿಲ್ಲೆಯ ಸರಹದ್ದಿನಲ್ಲಿವೆ. ಸರಯು ನದಿಯ ಮೇಲಿನ ಸೆರಘಾಟ್ ಉಕ್ಕಿನ ಸೇತುವೆಯಿಂದ ಈ ಸರಹದ್ದನ್ನು ಗುರುತಿಸಲಾಗಿದೆ. ಎಲ್ಲ ಆರು ಗ್ರಾಮಗಳು ಪಿತೋರಾಗಢ್‌ನ ಗಂಗೊಲಿಹಾಟ್ ವಲಯದಲ್ಲಿದ್ದು, ಅವುಗಳ ಅಂಚೆ ಕಚೇರಿಯು ಸೇತುವೆಯ ಮತ್ತೊಂದು ಭಾಗದಲ್ಲಿದೆ. ಅಂದರೆ, ಐದು ಕಿ.ಮೀ. ದೂರದ ಅಲ್ಮೋರಾ ಜಿಲ್ಲೆಯ ಭಸಿಯಾಚನಾ ವಲಯದಲ್ಲಿದೆ. ಅಲ್ಲಿಂದ ಅಂಚೆಯು ರವಾನೆಯಾಗಲು 10 ದಿನಗಳು ಬೇಕಾಗುತ್ತಿದ್ದು, ಅವರದೇ ಜಿಲ್ಲೆಯ ಕೇಂದ್ರ ಕಾರ್ಯಾಲಯದಿಂದ ಪತ್ರವು ತಲುಪಲು ಒಂದು ತಿಂಗಳು ಹಿಡಿಯುತ್ತದೆ. ಚಹಾದ ಲೋಟವನ್ನು ಕೈಯಲ್ಲಿ ಹಿಡಿದ ಮದನ್ ಸಿಂಗ್, ಹೀಗೆಂದರು: “ಎಂತಹ ವಿಪರ್ಯಾಸ. ಈಗಲೂ ಅವರು ನಮ್ಮನ್ನು ಪಿತೋರಾಗಢ್ ಜಿಲ್ಲೆಯ ಭಾಗವೆಂದು ಒಪ್ಪಿಕೊಳ್ಳುವುದಿಲ್ಲ. ಇದು, ನಾವು ಇಲ್ಲಿ ವಾಸಿಸುತ್ತೇವಾದರೂ, ನಮ್ಮ ವಿಳಾಸ ಅಲ್ಮೋರಾದಲ್ಲಿ ಎಂಬಂತಿದೆ.
ಪ್ರತ್ಯೇಕ ಜಿಲ್ಲೆಯಾಗಿ ಪಿತೋರಾಗಢ್ ಅನ್ನು ಅದರಿಂದ ಬೇರ್ಪಡಿಸಿದ ನಂತರದ 56 ವರ್ಷಗಳ ನಂತರವೂ ಈ ಗ್ರಾಮಗಳು ಹಾಗೂ ಕೊಪ್ಪಲುಗಳ 2,0003 ನಿವಾಸಿಗಳು ಒಂದೊಮ್ಮೆ ತಮ್ಮ ವಾಸಸ್ಥಾನವೆಂದು ಕರೆಯುತ್ತಿದ್ದ ಅಲ್ಮೋರಾದ ನಂಟಿನಿಂದ ಹೊರಬಂದಿರುವುದಿಲ್ಲ. ಈ ಎರಡನೆಯದರ ಕೇಂದ್ರ ಕಾರ್ಯಾಲಯದಿಂದ ಅವರು ೭೦ ಕಿ.ಮೀ. ದೂರದಲ್ಲಿದ್ದು, ಪಿತೋರಾಗಢ್‌ನಿಂದ ೧೩೦ ಕಿ.ಮೀ. ದೂರದಲ್ಲಿದ್ದಾರೆ. ಅಲ್ಮೋರಾದ ಭಸಿಯಾಚನಾ ಅತ್ಯಂತ ಸಮೀಪದ ಅಂಚೆ ಕಛೇರಿಯಾಗಿದೆ.
2014ರಲ್ಲಿ ಹೊಸ ಆಧಾರ್ ಕಾರ್ಡಿನಲ್ಲಿ ಗ್ರಾಮಸ್ಥರ ವಿಳಾಸ ಭಸಿಯಾಚನಾ ಅಂಚೆ ಕಚೇರಿ, ಪಿತೋರಾಗಢ್ ಎಂದಿದೆ. “ನಾವು ದೂರು ಸಲ್ಲಿಸಿದಾಗ, ಇದನ್ನು ಸರಿಪಡಿಸಿ, ಕಾರ್ಡುಗಳನ್ನು 12 ಕಿ.ಮೀ. ದೂರದ ಗನೈ ಅಂಚೆ ಕಚೇರಿಗೆ ಕಳುಹಿಸಲಾಯಿತು. ಆದರೆ ಅಲ್ಲಿಂದ ನಮ್ಮ ಗ್ರಾಮಕ್ಕೆ ಯಾವ ಅಂಚೆಯವನೂ ಬರುವುದಿಲ್ಲ. ನಮಗೆ ಪತ್ರಗಳನ್ನು ತಲುಪಿಸುವವನು ಸೇತುವೆಯ ಮತ್ತೊಂದು ಭಾಗದ ಭಸಿಯಾಚನಾದಿಂದ ಬರುತ್ತಾನೆ. ನಮ್ಮ ಆಧಾರ್ ಕಾರ್ಡುಗಳನ್ನು ಪಡೆಯಲು ನಾವು ಗನೈಗೆ ಹೋಗಬೇಕು” ಎನ್ನುತ್ತಾರೆ ಸರ್‌ತೊಲ ಗ್ರಾಮದ ಸಿಂಗ್ ನುಬಲ್.
ಬಡೋಲಿ ಸೆರ ಗುಂಠ್‌ನ ಪರಿಸ್ಥಿತಿಯು ಹೆಚ್ಚು ಮನಕಲಕುವಂತಿದೆ. ಇದು ಸುಮಾರು 14 ಕುಟುಂಬಗಳ ಚಿಕ್ಕ ಗ್ರಾಮ. ಪ್ರಮುಖವಾಗಿ ಸ್ತ್ರೀಯರು ಹಾಗೂ ಮುದುಕರೇ ಇಲ್ಲಿನ ನಿವಾಸಿಗಳು. 10 ಸ್ತ್ರೀಯರನ್ನೊಳಗೊಂಡ ಒಂದು ಸಾಲಿನೊಂದಿಗೆ (ಆ ಗ್ರಾಮದಲ್ಲಿನ ಎಲ್ಲ ಸ್ತ್ರೀಯರು) ನಾವು ಮಾತನಾಡುತ್ತಿದ್ದೇವೆ. ಅವರ ಪುತ್ರರು ಮತ್ತು ಗಂಡಂದಿರು ಅಲ್ಮೋರಾ, ಹಲ್ದ್‌ವನಿ, ಪಿತೋರಾಗಢ್, ಲಕ್ನೋ ಅಥವಾ ಡೆಹ್ರಾಡೂನ್‌ನಂತಹ ದೊಡ್ಡ ಊರುಗಳು ಮತ್ತು ನಗರಗಳಲ್ಲಿ ಉದ್ಯೋಗದಲ್ಲಿದ್ದು, ದೂರದಲ್ಲಿದ್ದಾರೆ. ಅವರು ವರ್ಷಕ್ಕೊಮ್ಮೆ ಹಿಂದಿರುಗುತ್ತಾರೆಯಾದರೂ, ಪ್ರತಿ ತಿಂಗಳೂ ಮನೆಗೆ ಹಣವನ್ನು ಕಳುಹಿಸುತ್ತಾರೆ. “ಮನಿಯಾರ್ಡರುಗಳು ಸಹ ನಮಗೆ ತಡವಾಗಿ ತಲುಪುತ್ತವೆ. ನಮಗೆ ತುರ್ತಾಗಿ ಹಣದ ಅವಶ್ಯಕತೆಯಿದ್ದಾಗಲೂ, ಮನಿಯಾರ್ಡರ್‌ನೊಂದಿಗೆ ಅಂಚೆಯವನು ಬರುವುದನ್ನು ಕಾಯಬೇಕಷ್ಟೇ“ ಎನ್ನುತ್ತಾರೆ ಇಲ್ಲಿನ ನಿವಾಸಿಯಾದ ರೈತ ಮಹಿಳೆ ಕಮಲಾ ದೇವಿ.
ಪಿತೋರಾಗಢ್‌ನ ಜನರಲ್ ಪೋಸ್ಟ್ ಆಫೀಸಿನ ನಿರ್ವಾಹಕರಿಗೆ ಗ್ರಾಮಸ್ಥರು ಅನೇಕ ಬಾರಿ ದೂರು ನೀಡಿದಾಗ್ಯೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. “ಒಂದು ಬಾರಿ ಬೆರಿನಾಗ್ ಅಂಚೆ ಕಚೇರಿಯು ಸಮೀಕ್ಷೆಯೊಂದನ್ನು ಕೈಗೊಂಡಿತಾದರೂ, ಅವರ ತಂಡವು ಎಲ್ಲ ಗ್ರಾಮಗಳಿಗೆ ಭೇಟಿ ನೀಡಲಿಲ್ಲ. ನಮಗೆ ಕುಡಿಯುವ ನೀರು, ಉದ್ಯೋಗದ ಸೌಲಭ್ಯವಿಲ್ಲ. ಅಂಚೆ ಸೇವೆಯು ಶೋಚನೀಯವಾಗಿದೆ. ನಮ್ಮ ಗ್ರಾಮದಲ್ಲಿ ಯಾರು ತಾನೇ ವಾಸಿಸಲು ಬಯಸುತ್ತಾರೆ?” ಎನ್ನುತ್ತಾರೆ ನಿಯುಲಿಯ. ಕೆಲವು ವರ್ಷಗಳ ಹಿಂದೆ, ಬಡೋಲಿ ಸೆರದಲ್ಲಿ 22 ಕುಟುಂಬಗಳಿದ್ದವು. ಇಂದು, ಇಲ್ಲಿನ ಹಾಗೂ ಸರ್‌ತೋಲ ಗ್ರಾಮದಲ್ಲಿ ಜನರು ತೊರೆದುಹೋದ ಅನೇಕ ಪಾರಂಪರಿಕ ಕುಮಾವೂ ಮನೆಗಳು ದೈನಂದಿನ ಬದುಕಿನ ಅಗಾಧ ಕಠಿಣ ಪರೀಕ್ಷೆಗಳಿಗೆ ಸಾಕ್ಷಿಯಾಗಿ ನಿಂತಿವೆ.
ಈ ಲೇಖಕರು ಡೆಹ್ರಾಡೂನ್‌ನ ದ ಟೈಮ್ಸ್ ಆಫ್ ಇಂಡಿಯಾದಲ್ಲಿ (ಡಿಸೆಂಬರ್ 17, 2015) ಈ ಸಮಸ್ಯೆಯನ್ನು ವರದಿಮಾಡಿದಾಗ, ಉತ್ತರಾಖಂಡ್ ಮಾನವ ಹಕ್ಕುಗಳ ಆಯೋಗವು ಅಂದೇ ಈ ಸುದ್ದಿಯ ವರದಿಯತ್ತ ಸ್ವಯಂಪ್ರೇರಿತವಾಗಿ ಗಮನಹರಿಸಿತು. “ಜಿಲ್ಲೆಯು ರೂಪುಗೊಂಡು 50ಕ್ಕಿಂತಲೂ ಹೆಚ್ಚು ವರ್ಷಗಳು ಸಂದಿವೆ.” ಸರ್ಕಾರವು ಬಹಳ ಹಿಂದೆಯೇ ಈ ಕುಂದುಕೊರತೆಗಳನ್ನು ನಿವಾರಿಸಬೇಕಿತ್ತು ಎಂದು ತಿಳಿಸಿದ ಆಯೋಗವು, ಸಮಸ್ಯೆಯ ಪರಿಹಾರಕ್ಕಾಗಿ ಡೆಹ್ರಾಡೂನಿನ ಪೋಸ್ಟ್‌ಮಾಸ್ಟರ್ ಜನರಲ್ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ ವಾಸ್ತವಿಕ ವರದಿಯೊಂದನ್ನು ಸಲ್ಲಿಸುವಂತೆ ಪಿತೋರಾಗಢ್ ಮತ್ತು ಅಲ್ಮೋರಾ ಜಿಲ್ಲಾಡಳಿತಗಳಿಗೆ ಆದೇಶವನ್ನು ನೀಡಿತು. ಆಯೋಗದ ಸದಸ್ಯರಾದ ಹೇಮಲತ ಧೌಂಡಿಯಾಲ್ ಅವರ ಸಹಿಯನ್ನೊಳಗೊಂಡ ವರದಿಯು ಹೀಗಿದೆ: “ಪಿತೋರಾಗಢ್, ರಾಜ್ಯದ ಸರಹದ್ದಿನ ಜಿಲ್ಲೆಯಷ್ಟೇ ಅಲ್ಲದೆ, ರಾಷ್ಟ್ರದ ಸರಹದ್ದೂ ಹೌದು. ಜನರು ಎಲ್ಲೊ ಕಾಡುಮೂಲೆಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರಲ್ಲದೆ, ಅಂಚೆ ಕಚೇರಿ ಮೂಲಕ ಮಾತ್ರ ಅವರ ಸಂಪರ್ಕವು ಸಾಧ್ಯ. ಹೀಗಾಗಿ, ಅವರ ಹಕ್ಕುಗಳನ್ನು ನಿರಾಕರಿಸುವಂತಿಲ್ಲ.”
ಈಕೆಯ ನೆರೆಮನೆಯಾಕೆ 70ರ ವಯಸ್ಸಿನ ಪಾರ್ವತಿ ದೇವಿಯವರಿಗೆ ನಡೆದಾಡುವುದು ಕಷ್ಟಕರವಾದರೂ, ತಮ್ಮ 800 ರೂ.ಗಳ ವಿಧವಾ ವೇತವನ್ನು ಪಡೆಯಲು ಗನೈ ಅಂಚೆ ಕಚೇರಿಗೆ ಭೇಟಿ ನೀಡಲೇಬೇಕು. ಆಕೆಗೆ ಹಣದ ತುರ್ತು ಅವಶ್ಯಕತೆಯಿದ್ದಾಗ್ಯೂ ತಮ್ಮ ಅನಾರೋಗ್ಯದಿಂದಾಗಿ ಪ್ರತಿ ತಿಂಗಳು ಅಂಚೆ ಕಚೇರಿಗೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇನ್ನಿಬ್ಬರು ಹಿರಿಯ ಹೆಂಗಸರ ಜೊತೆಗೆ ಮೂರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗುತ್ತಾರೆ. “ಜೀಪಿನಲ್ಲಿ ಗನೈ ಅನ್ನು ತಲುಪಲು 30 ರೂ.ಗಳು ಖರ್ಚಾಗುತ್ತವೆ. ನನ್ನ ಪಿಂಚಣಿಯನ್ನು ಪಡೆಯಲಿಕ್ಕೇ ಪ್ರತಿ ತಿಂಗಳು 60 ರೂ.ಗಳನ್ನು ಖರ್ಚುಮಾಡಿದಲ್ಲಿ ನನಗೆ ಉಳಿಯುವುದಾದರೂ ಎಷ್ಟು? ಎನ್ನುತ್ತಾರೆ ಪಾರ್ವತಿ ದೇವಿ. ಅವರು ವಯಸ್ಸಿನಲ್ಲಿದ್ದಾಗ ಪತ್ರಗಳು ಹಾಗು ಮನಿಯಾರ್ಡರುಗಳು ಸಾಕಷ್ಟು ತಡವಾಗಿ ತಲುಪುತ್ತಿದ್ದು, ಅವರಿಗೆ ಅದು ಅಭ್ಯಾಸವಾಗಿಬಿಟ್ಟಿದೆ. ಅಂಚೆ ಕಚೇರಿಯ ಕುರಿತು ಇವರಿಗೆ ಹೆಚ್ಚಿನ ತಾಳ್ಮೆಯಿದ್ದು, ಇತರರಿಗೆ ಇದರ ಬಗ್ಗೆ ಅಸಹನೆಯಿದೆ. “ಅಂತರ್ಜಾಲದಲ್ಲಿ ಪತ್ರಗಳು ಸೆಕೆಂಡುಗಳಲ್ಲಿ ತಲುಪುವಾಗ, ನಾವು ಮನೆಯಲ್ಲಿ ಅವುಗಳನ್ನು ಪಡೆಯಲು ಒಂದು ತಿಂಗಳವರೆಗೆ ಏಕೆ ಕಾಯಬೇಕು?” ಎಂಬುದಾಗಿ ನಿವೃತ್ತ ಸರ್ಕಾರಿ ನೌಕರರಾದ ಸುರೇಶ್ ಚಂದ್ರ ನಿಯುಲಿಯ ಪ್ರಶ್ನಿಸುತ್ತಾರೆ.
ಭಸಿಯಾಚನಾದಲ್ಲಿ ನೆಲೆಸಿದ್ದು, ಆರು ಗ್ರಾಮಗಳಿಗೆ ಅಂಚೆಯನ್ನು ವಿತರಿಸುವ 46ರ ಮೆಹರ್‌ಬಾನ್ ಸಿಂಗ್, “ಪ್ರತಿ ದಿನವೂ ಈ ಎಲ್ಲ ಸ್ಥಳಗಳಿಗೆ ತೆರಳುವುದು ಅಸಾಧ್ಯ. ಅವುಗಳಲ್ಲಿ ಕೆಲವಕ್ಕೆ ರಸ್ತೆಗಳಿಲ್ಲ. ಅಲ್ಲಿಗೆ ತೆರಳಲು ಹಾಗೂ ವಾಪಸ್ಸು ಬರಲು ದಿನಂಪ್ರತಿ 10-12 ಕಿ.ಮೀ.ಗಳ ಕಾಲ್ನಡಿಗೆಯಲ್ಲಿ ಸಾಗಬೇಕು. ಪ್ರತಿಯೊಂದು ಸ್ಥಳಕ್ಕೂ ವಾರಕ್ಕೊಮ್ಮೆ ಭೇಟಿ ನೀಡುತ್ತೇನೆ” ಎಂದರು. 2002ರಿಂದಲೂ ಇವರು ಅಂಚೆಯವನ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಪ್ರತಿ ಮುಂಜಾನೆ, ಸಿಂಗ್, 7 ಗಂಟೆಗೆ ಮನೆಯಿಂದ ಹೊರಟು ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. “ಪತ್ರಗಳನ್ನು ವಿತರಿಸಿದ ನಂತರ ಮಧ್ಯಾಹ್ನದ ಹೊತ್ತಿಗೆ ಅಂಚೆ ಕಚೇರಿಗೆ ತಲುಪುತ್ತೇನೆ. 3 ಗಂಟೆಯವರೆಗೂ ಮಧ್ಯಾಹ್ನದ ಟಪಾಲಿನ ಬರುವಿಕೆಗಾಗಿ ಕಾಯುತ್ತೇನೆ. ಹೊಸ ಟಪಾಲುಗಳನ್ನು ಪಡೆದು ನನ್ನ ಮನೆಗೆ ತೆರಳುತ್ತೇನೆ.” ಎಂದು ಅವರು ತಿಳಿಸಿದರು. 10 ಗಂಟೆಗೆ ಅಂಚೆ ಕಚೇರಿಯು ತೆರೆಯುತ್ತಿದ್ದು, ಅದಕ್ಕೂ 3 ಗಂಟೆ ಮೊದಲೇ ತಮ್ಮ ದೀರ್ಘ ಪ್ರಯಾಣವನ್ನು ಆರಂಭಿಸುವ ಕಾರಣ, ಅವರು ಟಪಾಲನ್ನು ಮನೆಗೆ ಕೊಂಡೊಯ್ಯುತ್ತಾರೆ. ಸ್ವಲ್ಪ ಕಾಲದವರೆಗೆ ಕೇವಲ ಅವರೊಬ್ಬರೇ ಭಸಿಯಾಚನಾ ಕಚೇರಿಯ ಅಂಚೆಯ ವಿತರಕರಾಗಿದ್ದರು. ಅಂದರೆ, 16 ಗ್ರಾಮಗಳ ಅಂಚೆಯ ವಿತರಣೆಯ ನಿರ್ವಹಣೆ. ಕೇವಲ ಇತ್ತೀಚೆಗೆ ಮತ್ತೊಬ್ಬ ನೌಕರರು ಇಲ್ಲಿಗೆ ಸೇರಿದ್ದು, ಸಿಂಗ್ ಅವರ ಕೆಲಸದ ಹೊರೆಯು ಕಡಿಮೆಯಾಗಿದೆ.
2016ರ ಮೇ 3ರಂದು ಆಯೋಜಿಸಲ್ಪಟ್ಟ ಮೊದಲನೇ ವಿಚಾರಣೆಯಲ್ಲಿ, ಇದಕ್ಕೂ ಮೊದಲು ಗ್ರಾಮಸ್ಥರು ಎಂದಿಗೂ ಈ ಸಮಸ್ಯೆಯನ್ನು ತಮ್ಮ ಅವಗಾಹನೆಗೆ ತಂದಿರುವುದಿಲ್ಲವೆಂದು ಸಾಧಿಸಿದ ಪಿತೋರಾಗಢ್ ಅಂಚೆ ಕಚೇರಿಯ ಮೇಲ್ವಿಚಾರಕರಾದ ಜಿ.ಸಿ. ಭಟ್, “ಬಡೋಲಿ ಸೆರ ಗುಂಠ್‌ನಲ್ಲಿ ಹೊಸ ಅಂಚೆ ಕಚೇರಿಯನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ” ಎಂದು ತಿಳಿಸಿದರು. ಮಾನವ ಹಕ್ಕುಗಳ ಆಯೋಗವು ಡೆಹ್ರಾಡೂನಿನ ಪೋಸ್ಟ್‌ಮಾಸ್ಟರ್ ಜನರಲ್ ಅವರಿಗೆ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ, ಆದೇಶವಿತ್ತಿದ್ದು, ತಪ್ಪಿದಲ್ಲಿ, ಕ್ರಮವನ್ನು ಜರುಗಿಸುವುದಾಗಿ ಎಚ್ಚರಿಸಿದೆ.
ಒಂದು ತಿಂಗಳು ಕಳೆದು ಸ್ವಲ್ಪ ದಿನಗಳ ನಂತರ ಪಿತೋರಾಗಢ್ ಜನರಲ್ ಅಂಚೆ ಕಚೇರಿಗೆ ಮಂಜೂರಾತಿ ಪತ್ರವೊಂದನ್ನು ಕಳುಹಿಸಲಾಯಿತು. ಹೀಗಾಗಿ, ಅಂಚೆ ಕಚೇರಿಯ ಹೊಸ ಶಾಖೆಯೊಂದನ್ನು 2016ರ ಜೂನ್ 30ರ ಹೊತ್ತಿಗೆ ಬಡೋಲಿ ಸೆರ ಗುಂಠ್‌ನಲ್ಲಿ ತೆರೆಯಲಾಗುತ್ತದೆ. ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿ ಮತ್ತು ಟಪಾಲಿನವ – ಈ ಎರಡೂ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.
ಇನ್ನು ಮುಂದೆ ಅನವಶ್ಯಕ ವಿಳಂಬಗಳಿರುವುದಿಲ್ಲವೆಂದು ನಂಬಿದ್ದ ಕಾರಣ, ಮೆಹರ್‌ಬಾನ್ ಸಿಂಗ್ ಅವರು ಸಂತೋಷಗೊಂಡಿದ್ದರು. ಪತ್ರಗಳು ತುಂಬಿದ್ದ ಚೀಲವನ್ನು ಭುಜದಲ್ಲಿ ಹೊತ್ತ ಅವರು, “ಹೊಸ ವ್ಯಕ್ತಿಯು ಸೇರುವ ತನಕ ಭಸಿಯಾಚನಾದಲ್ಲಿರುವ ಇಬ್ಬರು ಟಪಾಲಿನವರಲ್ಲಿ ಒಬ್ಬರು ಈ ಆರು ಜಿಲ್ಲೆಗಳಿಗೆ ಟಪಾಲನ್ನು ವಿತರಿಸುತ್ತಾರೆ,” ಎಂದು ಮುಗುಳ್ನಕ್ಕರು.
ತಮ್ಮ ಗ್ರಾಮಗಳ ಅವಶ್ಯಕತೆಗಳನ್ನು ಪೂರೈಸಲೆಂದೇ ಹೊಸ ಅಂಚೆ ಕಚೇರಿಯು ಶೀಘ್ರದಲ್ಲಿ ಪ್ರಾರಂಭವಾಗುತ್ತದೆಂದು ಮೋಹನ್ ಚಂದ್ರ, ಮದನ್ ಸಿಂಗ್, ನಿಯುಲಿಯ ಮತ್ತು ಕಮಲ ದೇವಿಯವರು ಸಹ ಸಂತೋಷಗೊಂಡಿದ್ದಾರೆ. ಹೊಸ ಘೋಷಣೆಯು ಜಾರಿಯಾಗದ ಇತರೆ ಪ್ರಕಟಿತ ಸರ್ಕಾರಿ ಯೋಜನೆಗಳಂತೆ ಆದೀತೋ ಎಂದು ಸಹ ಅವರು ವ್ಯಾಕುಲರಾಗಿದ್ದಾರೆ.
ಅನುವಾದ: ಶೈಲಜಾ ಜಿ.ಪಿ.