ನಾರಾಯಣ ಗಾಯಕವಾಡ್ ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿರುವ ಬೆರಳೆಣಿಕೆಯಷ್ಟು ಹರಳು ಗಿಡಗಳನ್ನು ನೋಡುತ್ತಾ, ನೆನಪಿನಂಗಳಕ್ಕೆ ಜಾರಿದರು. ತಾನು ಆ ದಿನಗಳಲ್ಲಿ ತೊಡುತ್ತಿದ್ದ ಕೊಲ್ಹಾಪುರಿ ಚಪ್ಪಲಿಯನ್ನು ನೆನಪಿಸಿಕೊಳ್ಳುತ್ತಾ “ಅದರ [ಚಪ್ಪಲಿಯ] ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ಅದಕ್ಕೆ ಹರಳೆಣ್ಣೆ ಹಚ್ಚುತ್ತಿದ್ದೆವು” ಎಂದು ಸ್ಥಳೀಯ ಚಪ್ಪಲಿಗೂ ಹರಳೆಣ್ಣೆಗೂ ಇದ್ದ ಸಂಬಂಧವನ್ನು ವಿವರಿಸಿದರು. ಅವರು ಆ ಚಪ್ಪಲಿ ಬಳಸುವುದನ್ನು ಬಿಟ್ಟು ಈಗ 20 ವರ್ಷ ಕಳೆದಿದೆ.
ಈ ಕೊಲ್ಹಾಪುರಿ ಚಪ್ಪಲಿಗಳಿಗೆ ಬಳಿಯುವ ಸಲುವಾಗಿಯೇ ಕೊಲ್ಹಾಪುರ ಜಿಲ್ಲೆಯಲ್ಲಿ ಹರಳೆಣ್ಣೆ ತಯಾರಿಸಲಾಗುತ್ತಿತ್ತು. ಎಮ್ಮೆ ಅಥವಾ ದನದ ಚರ್ಮದಿಂದ ಮಾಡಿದ ಈ ಚಪ್ಪಲಿಯ ಮೃದುತ್ವ ಮತ್ತು ಆಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಜಿಡ್ಡು ಹಚ್ಚಲಾಗುತ್ತಿತ್ತು. ಮತ್ತು ಇದಕ್ಕೆ ಹರಳೆಣ್ಣೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿತ್ತು.
ಹರಳು ಕೊಲ್ಹಾಪುರದ ಸ್ಥಳೀಯ ಬೆಳೆಯಲ್ಲವಾದರೂ ಇಲ್ಲಿ ಈ ಬೆಳೆ ಒಂದು ಕಾಲದಲ್ಲಿ ಬಹಳ ಜನಪ್ರಿಯ ಬೆಳೆಯಾಗಿತ್ತು. ಹಸಿರು ಎಲೆಗಳನ್ನು ಹೊಂದಿರುವ ಈ ದಪ್ಪ ಕಾಂಡದ ಸಸ್ಯವನ್ನು ವರ್ಷಪೂರ್ತಿ ಬೆಳೆಸಬಹುದು. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಹರಳೆಣ್ಣೆ ಉತ್ಪಾದಿಸುವ ದೇಶವಾಗಿದ್ದು, 2021-22ರಲ್ಲಿ ಅಂದಾಜು 16.5 ಲಕ್ಷ ಟನ್ ಹರಳು ಬೀಜವನ್ನು ಉತ್ಪಾದಿಸಿದೆ. ಭಾರತದಲ್ಲಿ ಹರಳು ಬೀಜ ಉತ್ಪಾದಿಸುವ ಪ್ರಮುಖ ರಾಜ್ಯಗಳೆಂದರೆ ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ರಾಜಸ್ಥಾನ.
“ಮಾಝೆ ವಾಡಿಲ್ 96 ವರ್ಷ್ ಜಾಗ್ಲೆ [ನನ್ನ ತಂದೆ 96 ವರ್ಷಗಳ ಕಾಲ ಬದುಕಿದ್ದರು] - ಮತ್ತು ಅವರು ಪ್ರತಿವರ್ಷ ಎರಾಂಡಿ (ಹರಳೆಣ್ಣೆ) ನೆಡುತ್ತಿದ್ದರು" ಎಂದು ತಂದೆಯ ಸಂಪ್ರದಾಯವನ್ನು ಮುಂದುವರಿಸಿರುವ ನಾರಾಯಣ್ ಗಾಯಕವಾಡ್ ಹೇಳುತ್ತಾರೆ. ಅವರ ಬಳಿ ಒಟ್ಟು 3.25 ಎಕರೆ ಹರಳು ಗಿಡದ ಹೊಲವಿದೆ. ಅವರ ಪ್ರಕಾರ ಅವರ ಕುಟುಂಬವು ಸುಮಾರು 150 ವರ್ಷಗಳಿಂದ ಹರಳು ಕೃಷಿಯಲ್ಲಿ ತೊಡಗಿಕೊಂಡಿದೆ. "ನಾವು ಈ ಸ್ಥಳೀಯ ಎರಾಂಡಿಯ ಹುರುಳಿ ಆಕಾರದ ಬೀಜಗಳನ್ನು ಸಂರಕ್ಷಿಸಿ ಇಟ್ಟಿದ್ದೇವೆ. ಇವು ಕನಿಷ್ಠ ಒಂದು ಶತಮಾನದಷ್ಟು ಹಿಂದಿನವು" ಎಂದು ನಾರಾಯಣ್ ಗಾಯಕವಾಡ್ ಅವರು ಪತ್ರಿಕೆಯಲ್ಲಿ ಸುರಕ್ಷಿತವಾಗಿ ಸುತ್ತಿಟ್ಟ ಬೀಜಗಳನ್ನು ತೋರಿಸುತ್ತಾ ಹೇಳುತ್ತಾರೆ. "ಫಕ್ತ್ ಬೈಕೊ ಆಣಿ ಮಿ ಶೆವ್ಕಿನ್ [ನನ್ನ ಹೆಂಡತಿ ಮತ್ತು ನಾನು ಮಾತ್ರ ಈಗ ಈ ಬೆಳೆಯನ್ನು ನೋಡಿಕೊಳ್ಳುತ್ತಿದ್ದೇವೆ]."
ನಾರಾಯಣ್ ಗಾಯಕವಾಡ್ ಮತ್ತು ಅವರ ಪತ್ನಿ 66 ವರ್ಷದ ಕುಸುಮ್ ಗಾಯಕವಾಡ್ ಅವರು ತಾವು ಬೆಳೆದ ಹರಳು ಬೀಜದ ಎಣ್ಣೆಯನ್ನು ಕೈ ಗಾಣದಿಂದಲೇ ತೆಗೆಯುತ್ತಿದ್ದಾರೆ. ಈಗ ಸುತ್ತಲೂ ಹಲವು ಯಂತ್ರ ಚಾಲಿತ ಗಿರಣಿಗಳಿವೆಯಾದರೂ ಅವರು ತಮ್ಮ ಸಾಂಪ್ರದಾಯಿಕ ಶೈಲಿಯನ್ನೇ ಎಣ್ಣೆ ತೆಗೆಯಲು ನೆಚ್ಚಿಕೊಂಡಿದ್ದಾರೆ. “ಹಿಂದೆಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ಎಣ್ಣೆ ತೆಗೆಯುತ್ತಿದ್ದೆವು” ಎನ್ನುತ್ತಾರೆ ನಾರಾಯಣ್ ಗಾಯಕವಾಡ್.



















