“ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಆನಂದಿಸುವುದನ್ನು ನಮಗೆ ಸಾಧ್ಯವಾಗಿಸುವುದು ಯಾವುದೆಂದು ನಿಮಗೆ ತಿಳಿದಿದೆಯೇ? ಅದು, ಭಾರತದ ಸಂವಿಧಾನ.” ತಮ್ಮ ಸಂಚಾರಿ ಪುಸ್ತಕದಂಗಡಿಯಲ್ಲಿ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದ ಗ್ರಾಹಕರೊಬ್ಬರಿಗೆ ರಾಮ್‌ಪ್ಯಾರಿ ಕವಚಿ, ಆ ಗ್ರಂಥವವನ್ನು ಹಿಡಿದು ತೋರಿಸಿದರು. ಛತ್ತಿಸ್‌ಗಡದ ಧಮ್ತರಿ ಜಿಲ್ಲೆಯ ಘೊಟ್‌ಗಾಂವ್ ಹಳ್ಳಿಯ ಸಂತೆಯಲ್ಲಿನ ಅವರ ಅಂಗಡಿಯಲ್ಲಿ ಪ್ರದರ್ಶಿಸಿದ ಪುಸ್ತಕಗಳಲ್ಲಿ ಸಂವಿಧಾನವು ಅತ್ಯಂತ ದಪ್ಪನೆಯ ಪುಸ್ತಕ. ಧಮ್ತರಿಯ ನಗ್ರಿ ವಲಯದ ತಮ್ಮ ಹಳ್ಳಿಯಾದ ಜೊರದಬ್ರಿ Rytಯಿಂದ 13 ಕಿ.ಮೀ. ದೂರದಲ್ಲಿ ವಾರದ ಸಂತೆಯು ನಡೆಯುತ್ತದೆ.
ಓದಲು ಅಥವಾ ಬರೆಯಲು ಬಾರದ ರಾಮ್‌ಪ್ಯಾರಿ, ಅಂದು ತಮ್ಮ ಸರಕುಗಳನ್ನು ನೋಡಲು ಬಂದ ಎಲ್ಲರಿಗೂ ಸಂವಿಧಾನದ ಪ್ರಾಮುಖ್ಯತೆಯನ್ನು ವಿವರಿಸುತ್ತಿದ್ದರು. ಇವರ ಸಂಭಾವ್ಯ ಗ್ರಾಹಕರೂ ಸಹ ಇವರಂತೆಯೇ ಆ ಪ್ರದೇಶದ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಭಾರತದ ಸಂವಿಧಾನವನ್ನು ಅವರಿಗೆ ಪರಿಚಯಿಸಲು ರಾಮ್‌ಪ್ಯಾರಿ ಬಹಳ ಉತ್ಸುಕರಾಗಿದ್ದರು.
ಇದು, ಎಲ್ಲರೂ ತಮ್ಮ ಮನೆಯಲ್ಲಿಟ್ಟುಕೊಳ್ಳಬೇಕಾದಂತಹ “ಪವಿತ್ರ ಪುಸ್ತಕ”ವಾಗಿದ್ದು, ಇದರಿಂದ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅವರು ತಿಳಿದುಕೊಳ್ಳಬೇಕು ಎಂದರು ರಾಮ್‌ಪ್ಯಾರಿ. ಮುಖ್ಯವಾಗಿ, ದಿನಸಿ, ತರಕಾರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಘೊಟ್‌ಗಾಂವ್‌ನ ಸಂತೆಯಲ್ಲಿದ್ದ ಜನರನ್ನು ಉದ್ದೇಶಿಸಿ ಅವರು ಹೀಗೆಂದರು: “ಭಾರತದ ಸಂವಿಧಾನ, ಅದರ ಒದಗಣೆಗಳು (provisions) ಮತ್ತು ಐದು ಹಾಗೂ ಆರನೆಯ ಅನುಸೂಚಿಯ (ಆದಿವಾಸಿ ಸಮುದಾಯಗಳನ್ನು ರಕ್ಷಿಸುವ) ಕಾರಣದಿಂದಾಗಿ ಆದಿವಾಸಿ ಮತ್ತು ದಲಿತರಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯು ದೊರೆಯುತ್ತಿದೆ ಎಂಬುದು ನಿಮಗೆ ಗೊತ್ತೇ?”
ರಾಮ್‌ಪ್ಯಾರಿ ಕವಚಿ, 50ರ ವಯೋಮಾನದವರಂತೆ ಕಾಣುತ್ತಾರೆ. ಇವರು ಛತ್ತಿಸ್‌ಗಡದ ಬಹು ದೊಡ್ಡ ಆದಿವಾಸಿ ಪಂಗಡವೆನಿಸಿದ ಗೊಂಡ್ ಸಮುದಾಯಕ್ಕೆ ಸೇರಿದವರು. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದವರ ಪ್ರಮಾಣವು ಮೂರನೇ ಒಂದರಷ್ಟಿದೆ. ತೀಸ್ರಿ ಆಜಾದಿ ಕಿ ಸಿಂಹಗರ್ಜನ; ಬಿರ್ಸಾ ಮುಂಡ: ಸಚಿತ್ರ ಜೀವನಿ; ಭ್ರಷ್ಟಾಚಾರ್; ಹಿಂದೂ ಆದಿವಾಸಿ ನಹಿ ಹೈ… ಮುಂತಾದ ಶೀರ್ಷಿಕೆಗಳ ಪುಸ್ತಕಗಳನ್ನೊಳಗೊಂಡಂತೆ, ಅವರು ಮಾರಾಟಮಾಡುವ ಬಹುತೇಕ ಪುಸ್ತಕಗಳು ಹಿಂದಿಯಲ್ಲಿವೆಯಾದರೂ, ಗೊಂಡಿ ಮತ್ತು ಆಂಗ್ಲ ಭಾಷೆಯ ಕೆಲವು ಪುಸ್ತಕಗಳನ್ನೂ ಅವರು ಸಂಗ್ರಹಿಸಿದ್ದಾರೆ. ಯಾರಾದರೂ ಪುಸ್ತಕವೊಂದನ್ನು ಕೈಗಿತ್ತಿಕೊಂಡಾಗ, ಅದು ಒಳಗೊಂಡಿರುವ ವಿಷಯವನ್ನು ರಾಮ್‌ಪ್ಯಾರಿ ವಿವರಿಸುತ್ತಾರೆ. ಈ ವಿವರಣೆಯು ಅರ್ಥಾತ್, ಪುಸ್ತಕದ ಸಣ್ಣ ಮುನ್ನೋಟದಂತಿರುತ್ತದೆ.







