“ಇವು ಕೇವಲ ಚರ್ಮದ ವಸ್ತುಗಳಲ್ಲ. ಇವರು ನಮ್ಮ ದೇವಾನುದೇವತೆಗಳು. ಇವು ದೈವಿಕ ಶಕ್ತಿಗಳ ಮೂರ್ತರೂಪಗಳು,” ಎಂದು ತಮ್ಮ ಮುಂದೆ ಹರಡಲಾಗಿರುವ ಬೊಂಬೆಗಳನ್ನು ನೋಡುತ್ತಾ ರಾಮಚಂದ್ರ ಪುಲವರ್ ಹೇಳುತ್ತಾರೆ. ಅವರ ಮುಂದೆ ಇಡಲಾದ ಸಂಕೀರ್ಣವಾದ ಕೆತ್ತನೆಯುಳ್ಳ ಆಕೃತಿಗಳನ್ನು ಕೇರಳದ ಮಲಬಾರ್ನ ದಕ್ಷಿಣ ಕರಾವಳಿ ಪ್ರದೇಶದ ಜನಪ್ರಿಯ ಕಲಾಪ್ರಕಾರವಾದ ತೋಳ್ಪಾವಕೂತ್ತು ಬೊಂಬೆಯಾಟದಲ್ಲಿ ಬಳಸಲಾಗುತ್ತದೆ.
ಈ ಬೊಂಬೆಗಳನ್ನು ಚಕ್ಕಿಲಿಯನ್ ನಂತಹ ನಿರ್ದಿಷ್ಟ ಸಮುದಾಯಗಳು ಸಾಂಪ್ರದಾಯಿಕವಾಗಿ ತಯಾರಿಸುತ್ತವೆ. ಈ ಕಲೆಗಿದ್ದ ಜನಪ್ರಿಯತೆ ಕಡಿಮೆಯಾಗುತ್ತಿದ್ದಂತೆ ಈ ಸಮುದಾಯದವರೂ ಇದರಿಂದ ದೂರ ಸರಿಯುತ್ತಿದ್ದಾರೆ. ಆದ್ದರಿಂದ ಕೃಷ್ಣನ್ಕುಟ್ಟಿ ಪುಲವರ್ ಅವರು ಈ ಕಲೆಯನ್ನು ಜೀವಂತವಾಗಿಡಲು ಬೊಂಬೆ ತಯಾರಿಸುವ ಕೌಶಲವನ್ನು ಇತರರಿಗೆ ಕಲಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅವರ ಮಗ ರಾಮಚಂದ್ರ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕುಟುಂಬ ಮತ್ತು ನೆರೆಹೊರೆಯ ಮಹಿಳೆಯರಿಗೆ ಬೊಂಬೆ ತಯಾರಿಸುವ ತರಬೇತಿ ನೀಡುತ್ತಿದ್ದಾರೆ. ರಾಜಲಕ್ಷ್ಮಿ, ರಜಿತಾ ಮತ್ತು ಅಶ್ವತಿ - ಇವರು ಪುರುಷರ ಕೆಲಸಕ್ಕಷ್ಟೇ ಮೀಸಲಾಗಿರುವ ದೇವಾಲಯದ ಆವರಣದಲ್ಲಿ ಕೆಲಸ ಮಾಡುವ ಮಹಿಳಾ ಬೊಂಬೆಯಾಟಗಾರರು.
ಈ ಬೊಂಬೆಗಳನ್ನು ಅದರ ಕೆಲಸ ಮಾಡುವವರು ಮಾತ್ರವಲ್ಲ, ಪ್ರದರ್ಶನಕ್ಕೆ ಬರುವ ಭಕ್ತರು ಕೂಡ ದೈವಿಕ ಶಕ್ತಿಗಳೆಂದು ನಂಬುತ್ತಾರೆ. ಇವುಗಳನ್ನು ಎಮ್ಮೆ ಮತ್ತು ಮೇಕೆ ಚರ್ಮವನ್ನು ಬಳಸಿ ತಯಾರಿಸಲಾಗಿದೆ. ತೊಗಲು ಗೊಂಬೆಯಾಟಗಾರರು ಚರ್ಮದ ಮೇಲೆ ಚಿತ್ತಾರಗಳನ್ನು ಬಹಳ ನಾಜೂಕಿನಿಂದ ಚಿತ್ರಿಸುವ ಮೂಲಕ ಈ ಕೆಲಸವನ್ನು ಪ್ರಾರಂಭಿಸುತ್ತಾರೆ. ಕೆತ್ತನೆ ಕೆಲಸಗಳಿಗೆ ಉಳಿ ಮತ್ತು ಪಂಚ್ಗಳಂತಹ ವಿಶೇಷ ಸಾಧನಗಳನ್ನು ಬಳಸುತ್ತಾರೆ. “ನುರಿತ ಕಮ್ಮಾರರು ಕಡಿಮೆಯಾಗಿರುವುದರಿಂದ ಇಂತಹ ಸಾಧನಗಳು ಸಿಗುವುದು ಬಹಳ ಕಷ್ಟವಾಗಿ ಹೋಗಿದೆ,” ಎಂದು ರಾಮಚಂದ್ರ ಅವರ ಪುತ್ರ ರಾಜೀವ್ ಪುಲವರ್ ಹೇಳುತ್ತಾರೆ.


