ಸುಮಾರು 1990ರ ದಶಕದವರೆಗೆ ಈ ಪ್ರದೇಶದಲ್ಲಿ 10ನೇ ತರಗತಿಗಿಂತ ಮೇಲೆ ಓದಿದವರು ಯಾರೂ ಇರಲಿಲ್ಲ. ಹೊಸ ತಲೆಮಾರು ನಿಧಾನವಾಗಿ ಔಪಚಾರಿಕ ಶಿಕ್ಷಣವನ್ನು ಮುಂದುವರಿಸಲು ಶುರುಮಾಡಿದೆ. 1 ನೇ ತರಗತಿಗೆ 25 ವಾರ್ಲಿ ವಿದ್ಯಾರ್ಥಿಗಳು ದಾಖಲಾದರೆ, ಹತ್ತನೇ ತರಗತಿಗೆ ಕೇವಲ ಎಂಟು ವಿದ್ಯಾರ್ಥಿಗಳು ಬರುತ್ತಾರೆ. ಡ್ರಾಪ್ಔಟ್ ಪ್ರಮಾಣವೂ ತುಂಬಾ ಹೆಚ್ಚಾಗಿದೆ. ಆ ಎಂಟು ಮಂದಿಯಲ್ಲಿ ಐದಾರು ಮಂದಿ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು 12 ನೇ ತರಗತಿಯನ್ನು ತಲುಪುವ ವೇಳೆಗೆ ಓದನ್ನು ಕೈಬಿಡುತ್ತಾರೆ. ಆದ್ದರಿಂದ ಕೊನೆಗೆ 3-4 ವಿದ್ಯಾರ್ಥಿಗಳು ಮಾತ್ರ ಶಾಲಾ ಶಿಕ್ಷಣವನ್ನು ಮುಗಿಸುತ್ತಾರೆ.
ತಾಲೂಕು ಮಟ್ಟದಲ್ಲಿ ಮಾತ್ರ ಪದವಿಪೂರ್ವ ಶಿಕ್ಷಣವನ್ನು ಪಡೆಯಲು ಸಾಧ್ಯ - ಅದಕ್ಕಾಗಿ ಸುಮಾರು 10 ಕಿಲೋಮೀಟರ್ ಪ್ರಯಾಣ ಮಾಡಬೇಕು. ಆದರೆ ಈ ಪ್ರದೇಶದಲ್ಲಿ ಹೆಚ್ಚು ಏನೂ ಇಲ್ಲ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಥಾಣೆ, ನಾಸಿಕ್ ಅಥವಾ ಪಾಲ್ಘರ್‌ನಂತಹ ನಗರಗಳಿಗೆ ಹೋಗುತ್ತಾರೆ. ಇದರಿಂದಾಗಿ ಈ ತಾಲೂಕಿನಲ್ಲಿ ಕೇವಲ ಶೇಕಡಾ ಮೂರರಷ್ಟು ಮಂದಿ ಮಾತ್ರ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ.
ವಾರ್ಲಿ ಸಮುದಾಯದಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣವು ವಿಶೇಷವಾಗಿ ಕಡಿಮೆ. ಇದನ್ನು ಸುಧಾರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ನಾವು ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಮತ್ತು ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಹೆಚ್ಚು ಹೆಚ್ಚು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಎರಡೂ ಮಾರ್ಗಗಳ ಮೂಲಕ ಸಂಪರ್ಕವನ್ನು ಬೆಳೆಸಲು ಮತ್ತು ನಂಬಿಕೆಯನ್ನು ಹುಟ್ಟುಹಾಕಲು ಶ್ರಮಿಸುತ್ತಿದ್ದೇವೆ.
ಈ ವರದಿ ತಯಾರಿಸಲು ಸಹಾಯ ನೀಡಿದ ಎಆರ್‌ಒಇಎಚ್‌ಎಎನ್ ಸಂಸ್ಥೆಯ ಹೇಮಂತ್ ಶಿಂಗಾಡೆಯವರಿಗೆ ಪರಿ ತನ್ನ ಧನ್ಯವಾದವನ್ನು ಅರ್ಪಿಸುತ್ತದೆ
ಸಂದರ್ಶನ: ಮೇಧಾ ಕಾಳೆ
ಈ ಕಥೆಯು ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆಯ ಭಾಗವಾಗಿದ್ದು, ದೇಶದಲ್ಲಿರುವ ದುರ್ಬಲ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ದಾಖಲು ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.
ವಾರ್ಲಿಯು ಗುಜರಾತ್, ದಾಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾದಲ್ಲಿ ವಾಸಿಸುವ ಭಾರತದ ವಾರ್ಲಿ ಅಥವಾ ವರ್ಲಿ ಆದಿವಾಸಿಗಳು ಮಾತನಾಡುವ ಇಂಡೋ-ಆರ್ಯನ್ ಭಾಷೆಯಾಗಿದೆ. ಯುನೆಸ್ಕೋನ ಅಟ್ಲಾಸ್ ಆಫ್ ಲ್ಯಾಂಗ್ವೇಜ್ ವಾರ್ಲಿಯನ್ನು ಭಾರತದಲ್ಲಿ ಸಂಭಾವ್ಯ ದುರ್ಬಲ ಭಾಷೆಗಳಲ್ಲಿ ಒಂದೆಂದು ಪಟ್ಟಿ ಮಾಡಿದೆ.
ನಾವು ಮಹಾರಾಷ್ಟ್ರದಲ್ಲಿ ಮಾತನಾಡುವ ವಾರ್ಲಿ ಭಾಷೆಯನ್ನು ದಾಖಲು ಮಾಡುವ ಗುರಿ ಹೊಂದಿದ್ದೇವೆ.
ಕನ್ನಡ ಅನುವಾದ: ಚರಣ್ ಐವರ್ನಾಡು