"ಯೆ ಬಾರಾ ಲಾಖ್ ವಾಲಾ ನಾ? ಇಸೀ ಕೀ ಬಾತ್ ಕರ್ ರಹೇ ಹೈ ನಾ?" 30 ವರ್ಷದ ಶಾಹಿದ್ ಹುಸೇನ್ ನನ್ನ ಮುಂದೆ ತನ್ನ ಫೋನ್ ಹಿಡಿದು ವಾಟ್ಸಾಪ್ ಸಂದೇಶವನ್ನು ತೋರಿಸಿದರು. ನಾವು ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದ್ದೆವು. ಶಾಹಿದ್ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕ್ರೇನ್ ಆಪರೇಟರ್ ಆಗಿದ್ದು, ಬೆಂಗಳೂರಿನ ಮೆಟ್ರೋ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ.
"ಈ 12 ಲಕ್ಷ ತೆರಿಗೆ ಮುಕ್ತ ಬಜೆಟ್ ಬಗ್ಗೆ ನಾವು ಸಾಕಷ್ಟು ಸುದ್ದಿಗಳನ್ನು ಕೇಳುತ್ತಿದ್ದೇವೆ" ಎಂದು ಅದೇ ಸೈಟಿನಲ್ಲಿದ್ದ ಬ್ರಿಜೇಶ್ ಯಾದವ್ ಗೇಲಿ ಮಾಡಿದರು. "ಇಲ್ಲಿ ಯಾರೂ ವಾರ್ಷಿಕವಾಗಿ 3.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವುದಿಲ್ಲ." 20ರ ಹರೆಯದ ಬ್ರಿಜೇಶ್ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ದುಮಾರಿಯಾ ಗ್ರಾಮದ ಕೌಶಲರಹಿತ ವಲಸೆ ಕಾರ್ಮಿಕ.
"ಈ ಕೆಲಸ ಇರುವ ತನಕ, ನಾವು ತಿಂಗಳಿಗೆ ಸುಮಾರು 30,000 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ಬಿಹಾರದ ಕೈಮೂರ್ (ಭಬುವಾ) ಜಿಲ್ಲೆಯ ಬಿಯೂರ್ ಎನ್ನುವ ಊರಿನವರಾದ ಶಾಹಿದ್ ಹೇಳುತ್ತಾರೆ. ಅವರು ಕೆಲಸ ಹುಡುಕಿಕೊಂಡು ಅನೇಕ ರಾಜ್ಯಗಳಿಗೆ ಹೋಗಿದ್ದಾರೆ. "ಈ ಕೆಲಸದ ನಂತರ, ಕಂಪನಿಯು ನಮ್ಮನ್ನು ಬೇರೆಡೆಗೆ ಕಳುಹಿಸುತ್ತದೆ, ಅಥವಾ ನಾವು 10-15 ರೂಪಾಯಿ ಹೆಚ್ಚು ಸಿಗುವ ಇತರ ಕೆಲಸವನ್ನು ಹುಡುಕುತ್ತೇವೆ."






