ಬಜೆಟ್ ಕುರಿತು ತಿಳಿದುಕೊಳ್ಳುವುದು ಪುರುಷರಿಗೆ ಸಂಬಂಧಿಸಿದ ವ್ಯವಹಾರ ಎನ್ನುವುದು ಅಂಜನಾ ದೇವಿಯವರ ನಂಬಿಕೆ.
“ಮರದ್ ಲೋಗ್ ಹೀ ಜಾನತಾ ಹೈ ಇ ಸಬ್, ಲೇಕಿನ್ ಡೋ ತೋ ನಹೀ ಹೈ ಘರ್ ಪರ್ [ಇದೆಲ್ಲ ಗಂಡಸರಿಗೆ ಮಾತ್ರ ಗೊತ್ತಿರುವ ವ್ಯವಹಾರ, ಆದರೆ ನನ್ನ ಗಂಡ ಮನೆಯಲ್ಲಿಲ್ಲ” ಎಂದು ಅವರು ಹೇಳಿದರು. ಬಜೆಟ್ ತನಗೆ ಸಂಬಂಧಿಸಿದ ವಿಷಯವಲ್ಲ ಎನ್ನುವ ಅವರು ಮನೆಯ ಬಜೆಟನ್ನು ಪೂರ್ತಿಯಾಗಿ ತಾನೇ ನಿರ್ವಹಿಸುತ್ತಾರೆ. ಅಂಜನಾ ಅವರು ಚಮಾರ್ ಜಾತಿಗೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ.
ಬಜೆಟ್ ಅನ್ನು “ಬಜಟ್” ಎಂದು ಕರೆಯುವ ಅವರು ಹೊಸ ಘೋಷಣೆಗಳ ಕುರಿತು ನೆನಪಿಸಿಕೊಳ್ಳಲು ಪ್ರಯತ್ನಿಸಿದರು. “ಓ ಸಬ್ ತಾ ಹಮ್ ನಹೀ ಸುನೆ ಹೈ [ನಾನು ಅದರ ಬಗ್ಗೆ ಕೇಳಿಲ್ಲ]. ಆದರೆ, ಬಿಹಾರದ ವೈಶಾಲಿ ಜಿಲ್ಲೆಯ ಸೋಂಧೋ ರಟ್ಟಿ ಗ್ರಾಮದ ಈ ದಲಿತ ನಿವಾಸಿ ಹೇಳುತ್ತಾರೆ: "ಇ ಸಬ್ [ಬಜೆಟ್] ಪೈಸಾ ವಾಲಾ ಲೋಗ್ ಕೆ ಲಿಯೆ ಹೈ [ಇದೆಲ್ಲ ಶ್ರೀಮಂತರಿಗಾಗಿ ಅಷ್ಟೇ]."
ಅಂಜನಾ ಅವರ ಗಂಡ, 80 ವರ್ಷದ ಶಂಭುರಾಮ್ - ನಾವು ಭೇಟಿಗೆಂದು ಹೋಗಿದ್ದ ಸಂದರ್ಭದಲ್ಲಿ ಭಜನೆಗೆಂದು ಹೊರಗೆ ಹೋಗಿದ್ದರು – ರೇಡಿಯೋ ರಿಪೇರಿ ಕೆಲಸ ಮಾಡುತ್ತಾರೆ. ಆದರೆ ಇದಕ್ಕೆ ಗಿರಾಕಿಗಳು ಕಡಿಮೆ. ವಾರಕ್ಕೆ 300-400 ರೂಪಾಯಿಗಳನ್ನು ಗಳಿಸುತ್ತೇವೆ" ಎಂದು ಅವರು ಹೇಳುತ್ತಾರೆ. ಅಂದರೆ ವಾರ್ಷಿಕ ಸರಾಸರಿ 16,500 ರೂ. ಅಥವಾ ಈಗ ತೆರಿಗೆ ಮಿತಿ ವಿಧಿಸಿರುವ 12 ಲಕ್ಷ ರೂಪಾಯಿಗಳ ಕೇವಲ 1.37 ಪ್ರತಿಶತ. ಈಗ ಮಿತಿಯನ್ನು ಹೆಚ್ಚಿಸಿರುವ ಕುರಿತು ಹೇಳಿದರೆ ಅವರು ನಗುತ್ತಾರೆ. “ಕೆಲವೊಮ್ಮೆ ವಾರಕ್ಕೆ 100 ರೂಪಾಯಿ ಕೂಡಾ ಸಂಪಾದನೆಯಾಗುವುದಿಲ್ಲ. ಇದು ಮೊಬೈಲ್ ಫೋನ್ ಗಳ ಯುಗ. ಈಗಿನ ದಿನಗಳಲ್ಲಿ ಯಾರೂ ರೇಡಿಯೋ ಕೇಳುವುದಿಲ್ಲ" ಎಂದು ಅವರು ದೂರುತ್ತಾರೆ.





