ಟೆಂಪು ಮಾಂಝಿ ಕುಟುಂಬವು ಹೇಳುವಂತೆ, ಅವರು ತಾವು ಮಾಡದ ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಜೆಹಾನಾಬಾದ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಪೊಲೀಸರು ಅವರ ಮನೆಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ, ಆದರೆ ಅವರ ಮನೆಯಿಂದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳನ್ನು ನೀಡಿಲ್ಲ ಎಂದು ಕುಟುಂಬ ಹೇಳಿದೆ.

"ಅವರನ್ನು ಒಂದು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ" ಎಂದು ಅವರ 35 ವರ್ಷದ ಪತ್ನಿ ಗುಣಾ ದೇವಿ ಹೇಳುತ್ತಾರೆ.

ಟೆಂಪು ಮಾಂಝಿಯ ಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಐವರು ಪ್ರತ್ಯಕ್ಷದರ್ಶಿಗಳೆಲ್ಲರೂ ಪೊಲೀಸರಾಗಿದ್ದರು ಎಂಬ ಅಂಶವು ಅವರ ಹೇಳಿಕೆಯನ್ನು ಬಲಪಡಿಸುತ್ತದೆ. ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆ, 2016 ರ ಅಡಿಯಲ್ಲಿ ಟೆಂಪು ವಿರುದ್ಧ ದಾಖಲಾದ ಪ್ರಕರಣದಲ್ಲಿ, ವಿಚಾರಣೆಯ ಸಮಯದಲ್ಲಿ ಒಬ್ಬನೇ ಒಬ್ಬ ಸ್ವತಂತ್ರ ಸಾಕ್ಷಿಯನ್ನು ಸಹ ಹಾಜರುಪಡಿಸಲಾಗಿಲ್ಲ.

ಗುಣಾ ದೇವಿ ಹೇಳುತ್ತಾರೆ, "ಮನೆಯ ಹಿಂಭಾಗದ ಹೊಲದಲ್ಲಿ ಮದ್ಯ ಪತ್ತೆಯಾಗಿದೆ. ಆ ಜಮೀನು ಯಾರಿಗೆ ಸೇರಿದ್ದೆಂದು ನಮಗೆ ತಿಳಿದಿಲ್ಲ. ವಶಪಡಿಸಿಕೊಂಡ ಮದ್ಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ. ಆಗ ಪೊಲೀಸರು, "ತೋರಾ ಘರ್‌ ಕೇ ಪೀಚೆ [ಮದ್ಯ] ಹೈ, ತಾ ತೋರೇ ನಾ ಹೋತಾವು [ನಿಮ್ಮ ಮನೆಯ ಹಿಂದೆ ಮದ್ಯ ಸಿಕ್ಕಿದೆ, ಹೀಗಾಗಿ ಅದು ನಿಮ್ಮದೇ]." ಎಂದು ಅವರಿಗೆ ಹೇಳಿದರು.

ಟೆಂಪು ಮಾಂಝಿಯವರನ್ನು 2019ರಲ್ಲಿ ಬಂಧಿಸಲಾಯಿತು. ಮೂರು ವರ್ಷಗಳ ನಂತರ, ಮಾರ್ಚ್ 25, 2022ರಂದು, ಮನೆಯಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿದ್ದಕ್ಕಾಗಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಯಿತು.

ಟೆಂಪು ಮಾಂಝಿ ಮತ್ತು ಗುಣಾ ದೇವಿ ತಮ್ಮ ನಾಲ್ಕು ಮಕ್ಕಳೊಂದಿಗೆ ಜೆಹಾನಾಬಾದ್ ಜಿಲ್ಲೆಯ ಕೆನಾರಿ ಗ್ರಾಮದಲ್ಲಿ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬವು ಮುಸಹರ್ ಸಮುದಾಯಕ್ಕೆ ಸೇರಿದ್ದು, ಗ್ರಾಮದ ಮುಸಹರ್ ಟೋಲಿಯಲ್ಲಿ ವಾಸಿಸುತ್ತಿದೆ. 2019ರಲ್ಲಿ, ಮಾರ್ಚ್ 20ರ ಬೆಳಿಗ್ಗೆ ಅವರ ಮನೆಯ ಮೇಲೆ ದಾಳಿ ನಡೆದಾಗ ಟೆಂಪು ಮಾಂಝಿ ಮನೆಯಲ್ಲಿ ಇರಲಿಲ್ಲ. ಅಂದು ಬೆಳೆಗ್ಗೆ ಅವರು ಊರಿನ ಭೂಮಾಲಕರೊಬ್ಬರ ಮನೆಯಲ್ಲಿ ಕೊಯ್ಲು ಮಾಡಿದ ಧಾನ್ಯದ ಹೊರೆಯನ್ನು ಹೊರುವ ಖಲಾಸಿ (ಸಹಾಯಕ) ಕೆಲಸಕ್ಕೆ ಹೋಗಿದ್ದರು.

Left: After Tempu Manjhi got convicted, his wife Guna Devi had to take care of their four children.
PHOTO • Umesh Kumar Ray
Right: Tempu used to work as a labourer on a harvest-carrying cart where he used to get Rs.400 a day
PHOTO • Umesh Kumar Ray

ಎಡ: ಟೆಂಪು ಜೈಲಿಗೆ ಹೋದ ನಂತರ, ನಾಲ್ಕು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಗುಣಾ ದೇವಿಯ ಮೇಲೆ ಬಿತ್ತು. ಬಲ: ಟೆಂಪು ಫಸಲು ಸಾಗಿಸುವ ಗಾಡಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ದಿನಕ್ಕೆ 400 ರೂ.ಗಳನ್ನು ಸಂಪಾದಿಸುತ್ತಿದ್ದರು

2023ರ ಜನವರಿಯಲ್ಲಿ ಪರಿ ಈ ಮುಸಹರ್ ಟೋಲಿ (ಕುಗ್ರಾಮ)ಕ್ಕೆ ಭೇಟಿ ನೀಡಿದಾಗ, ಗುಣಾ ದೇವಿಯನ್ನು ಹೊರತುಪಡಿಸಿ, ಹತ್ತಿರದ ಪ್ರದೇಶಗಳ ಮಹಿಳೆಯರು, ಪುರುಷರು ಮತ್ತು ಮಕ್ಕಳು ಚಳಿಗಾಲದ ಬಿಸಿಲು ಕಾಯುತ್ತಾ ತಮ್ಮ ಮನೆಗಳ ಹೊರಗೆ ಕುಳಿತಿದ್ದರು. ಈ ಕೊಳೆಗೇರಿಯಲ್ಲಿ ಕಸದ ರಾಶಿಯಿಂದಾಗಿ ಎಲ್ಲೆಡೆ ವಾಸನೆ ತುಂಬಿಕೊಂಡಿತ್ತು.

ಕೆನಾರಿ ಗ್ರಾಮದ ಒಟ್ಟು ಜನಸಂಖ್ಯೆ 2,981 (ಜನಗಣತಿ 2011). ಈ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಅವರಲ್ಲಿ ಬಿಹಾರದಲ್ಲಿ ಮಹಾದಲಿತರು ಎಂದು ಪಟ್ಟಿ ಮಾಡಲಾಗಿರುವ ಮುಸಹರ್ ಜನರೂ ಸೇರಿದ್ದಾರೆ ಮತ್ತು ಇವರು ರಾಜ್ಯದ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದಾರೆ - ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದ ಸಮುದಾಯವಿದು.

ಅವರಿಗೆ ಕೋರ್ಟು, ಕಚೇರಿಗಳ ಅರಿವಿಲ್ಲ, ಇದರಿಂದಾಗಿ ಅವರು ಸಮಸ್ಯೆ ಎದುರಿಸುತ್ತಾರೆ. ಪಾಟ್ನಾ ಮೂಲದ ಹಿಂದಿ ನಿಯತಕಾಲಿಕ ಸಬಾಲ್ಟರ್ನ್ ಸಂಪಾದಕ ಮಹೇಂದ್ರ ಸುಮನ್, "ಈ ಹಿಂದೆ ನಿಷೇಧ ಕಾನೂನಿನ ಅಡಿಯಲ್ಲಿ ಶಿಕ್ಷೆಗೊಳಗಾದ ಇಬ್ಬರು ಆರೋಪಿ ಸಹೋದರರು ಮುಸಹರ್ ಸಮುದಾಯಕ್ಕೆ ಸೇರಿದವರು ಎಂಬುದು ಕಾಕತಾಳೀಯವಲ್ಲ. ಈ ಸಮುದಾಯದ ಕುರಿತು ನಕಾರಾತ್ಮಕ ಚಿತ್ರಣಗಳನ್ನು ಸೃಷ್ಟಿಸಲಾಗಿದೆ, ಮತ್ತು ಸಮುದಾಯವು ಅದೇ ಕಾರಣಗಳಿಗಾಗಿ ದಾಳಿಗೆ ಒಳಗಾಗಿದೆ.” ಎನ್ನುತ್ತಾರೆ.

ಸುಮನ್ ಉಲ್ಲೇಖಿಸುವ ಮುಸಹರ್ ಅಣ್ಣತಮ್ಮಂದಿರೆಂದರೆ ಪೇಂಟರ್ ಮತ್ತು ಮಸ್ತಾನ್ ಮಾಂಝಿ, ಇವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ನಿಷೇಧ ಕಾನೂನಿನ ಅಡಿಯಲ್ಲಿ ಶಿಕ್ಷೆಗೊಳಗಾದವರಲ್ಲಿ ಅವರು ಮೊದಲಿಗರು. 2017ರ ಮೇ ತಿಂಗಳಲ್ಲಿ ಅವರನ್ನು ಬಂಧಿಸಲಾಗಿದ್ದು, 40 ದಿನಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಮುದಾಯಕ್ಕೆ ಅಂಟಿಕೊಂಡಿರುವ ಸಾಮಾಜಿಕ ಕಳಂಕಗಳಿಂದಾಗಿ ಅವರು ನಿಷೇಧದ ಪ್ರಕರಣಗಳಲ್ಲಿ ಸುಲಭವಾಗಿ ಗುರಿಯಾಗುತ್ತಾರೆ. ದಶಕಗಳಿಂದ ಮುಸಹರ್ ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸುಮನ್, "ಮುಸಹರ್‌ ಸಮುದಾಯದ ಜನರನ್ನು ಬಂಧಿಸಿದರೆ, ಯಾವುದೇ ನಾಗರಿಕ ಸಮಾಜ ಗುಂಪು ಅಥವಾ ಸಾಮಾಜಿಕ ಸಂಘಟನೆಗಳು ಅವರ ಬಂಧನದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯುವುದಿಲ್ಲ ಎಂದು ಅವರಿಗೆ [ಪೊಲೀಸರಿಗೆ] ತಿಳಿದಿದೆ" ಎಂದು ಹೇಳುತ್ತಾರೆ.

ಟೆಂಪು ಪ್ರಕರಣದಲ್ಲಿ, ದಾಳಿಯಲ್ಲಿ ಕಂಡುಬಂದಿದೆ ಎಂದು ಹೇಳಲಾದ ಮದ್ಯವನ್ನು ಅವರ ಮನೆಯ ಹೊರಗಿನಿಂದ ವಶಪಡಿಸಿಕೊಳ್ಳಲಾಗಿದ್ದರೂ, ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ.

Left: Advocate Ram Vinay Kumar fought the case of Tempu Manjhi. He said that the seizure list prepared in Tempu Manjhi’s case carried the signatures of two independent witnesses, but their testimonies were not produced.
PHOTO • Umesh Kumar Ray
Right: The Supreme Court has reprimanded the Bihar government many times due to the increased pressure of cases on the courts because of the prohibition law
PHOTO • Umesh Kumar Ray

ಎಡ: ವಕೀಲ ರಾಮ್ ವಿನಯ್ ಕುಮಾರ್ ಅವರು ಟೆಂಪು ಮಾಂಝಿ ಪ್ರಕರಣದಲ್ಲಿ ವಾದಿಸಿದ್ದರು. ಟೆಂಪು ಮಾಂಝಿ ಪ್ರಕರಣದಲ್ಲಿ ಮಾಡಲಾದ ವಶಪಡಿಸಿಕೊಂಡ ವಸ್ತುಗಳ ಪಟ್ಟಿಯಲ್ಲಿ ಇಬ್ಬರು ಸ್ವತಂತ್ರ ಸಾಕ್ಷಿಗಳ ಸಹಿ ಇತ್ತು, ಆದರೆ ಅವರ ಸಾಕ್ಷ್ಯವನ್ನು ದಾಖಲಿಸಲಾಗಿಲ್ಲ ಎಂದು ಅವರು ಹೇಳುತ್ತಾರೆ. ಬಲ: ಮದ್ಯ ನಿಷೇಧ ಪ್ರಕರಣಗಳಿಂದಾಗಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ಹೆಚ್ಚಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರವನ್ನು ಹಲವಾರು ಬಾರಿ ತರಾಟೆಗೆ ತೆಗೆದುಕೊಂಡಿದೆ

ಜೆಹಾನಾಬಾದ್ ನ್ಯಾಯಾಲಯದ ವಕೀಲ ರಾಮ್ ವಿನಯ್ ಕುಮಾರ್ ಅವರು ಟೆಂಪು ಮಾಂಝಿ ಅವರ ಪ್ರಕರಣವನ್ನು ವಾದಿಸಿದರು. ಈ ಪ್ರಕರಣದಲ್ಲಿ ಪೊಲೀಸರ ಕಾರ್ಯ ವಿಧಾನದ ಬಗ್ಗೆ ಮಾತನಾಡಿದ ಅವರು, "ಟೆಂಪು ಮಾಂಝಿ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ವಸ್ತುಗಳ ಪಟ್ಟಿಯಲ್ಲಿ ಇಬ್ಬರು ಸ್ವತಂತ್ರ ಸಾಕ್ಷಿಗಳ ಸಹಿ ಇತ್ತು, ಆದರೆ ಅವರ ಸಾಕ್ಷ್ಯವನ್ನು ದಾಖಲಿಸಲಾಗಿಲ್ಲ. ದಾಳಿ ತಂಡದ ಭಾಗವಾಗಿದ್ದ ಪೊಲೀಸರು ಮಾತ್ರ ಸಾಕ್ಷಿಗಳಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ.

50ರ ಹರೆಯದ ರಾಮ್ ವಿನಯ್ ಕುಮಾರ್ ಕಳೆದ 24 ವರ್ಷಗಳಿಂದ ಜೆಹಾನಾಬಾದ್ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ. "ಪ್ರತಿವಾದಿ ಸಾಕ್ಷಿಯನ್ನು [ಡಿಫೆನ್ಸ್ ಸಾಕ್ಷಿ] ನ್ಯಾಯಾಲಯಕ್ಕೆ ಕರೆತರಲು ಅವರ ಕುಟುಂಬ ಸದಸ್ಯರ ಬಳಿ ಕೇಳುವಂತೆ ನಾವು ಟೆಂಪು ಮಾಂಝಿಗೆ ಹೇಳಿದ್ದೆವು. ಆದಾಗ್ಯೂ, ಅವರ ಕುಟುಂಬವು ನಮ್ಮನ್ನು ಸಂಪರ್ಕಿಸಲಿಲ್ಲ, ಹೀಗಾಗಿ ಆರೋಪಿಗಳ ಪರವಾಗಿ ನಾವು ಏನನ್ನೂ ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ.”‌ ಎಂದು ಅವರು ಹೇಳುತ್ತಾರೆ.

ಮುಸಹರ್ ಸಮುದಾಯಕ್ಕೆ ಸೇರಿದ ರಾಮ್ ವೃಕ್ಷ್ ಮಾಂಝಿ (ಹೆಸರು ಬದಲಾಯಿಸಲಾಗಿದೆ) ಕೂಡ ಸ್ವತಂತ್ರ ಸಾಕ್ಷಿಗಳು ಹಾಜರಾಗದ ಕಾರಣ ದೊಡ್ಡ ಕಾನೂನು ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಜೆಹಾನಾಬಾದ್ನ ಘೋಸಿ ಬ್ಲಾಕ್‌ನ ಕಾಂತಾ ಗ್ರಾಮದ ಟೋಲಾ ಸೇವಕನಾಗಿ ಕೆಲಸ ಮಾಡುವ ರಾಮ್ ವೃಕ್ಷ್, ಮುಸಹರ್ ಟೋಲಿಯ ಮಹಾದಲಿತ ಮಕ್ಕಳನ್ನು ಗ್ರಾಮದ ಶಾಲೆಗೆ ಕರೆದೊಯ್ಯುತ್ತಿದ್ದರು.

ಮೆಟ್ರಿಕ್ಯುಲೇಷನ್ ಪದವೀಧರರಾದ 45 ವರ್ಷದ ರಾಮ್ ವೃಕ್ಷ್ ಅವರು ರಾಜ್ಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಟೋಲಾ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಟೋಲಾದ ಚಿಕ್ಕ ಮಕ್ಕಳನ್ನು ಅವರ ಮನೆಗಳಿಂದ ಗ್ರಾಮದ ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುವ ಮತ್ತು ಅಲ್ಲಿ ಕಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.

ರಾಮ್‌ ವೃಕ್ಷ್‌ ಅವರನ್ನು ಅವರು ಅಂದು ಶಾಲೆಯ ಬಳಿಯ ಜನ ನಿಭಿಡ ಜಂಕ್ಷನ್ನಿನಲ್ಲಿ ಬಂಧಿಸಲಾಯಿತು. “ಇದ್ದಕ್ಕಿದ್ದಂತೆ ಸುಮಾರು ಹತ್ತು-ಹನ್ನೆರಡು ಪೊಲೀಸರು ಎದುರು ಬಂದು ನಿಂತರು, ಅವರಲ್ಲಿ ಒಬ್ಬ ನನ್ನ ಅಂಗಿಯ ಕಾಲರ್‌ ಹಿಡಿದು ವಶಕ್ಕೆ ಪಡೆದುಕೊಂಡ” ಎಂದು ಅವರು 2019ರ ಮಾರ್ಚ್‌ ತಿಂಗಳ 29ನೇ ತಾರೀಖಿನಂದ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಬಿಳಿ ಪ್ಲಾಸ್ಟಿಕ್ ಗ್ಯಾಲನ್ ಪಾತ್ರೆಯನ್ನು ತೋರಿಸಿದ ಪೊಲೀಸರು, ಅವರ ಮನೆಯಿಂದ ಆರು ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. (ಪೊಲೀಸರು ತಮ್ಮ ಮನೆಗೆ ಬಂದಿರಲೇ ಇಲ್ಲ ಎಂದು ಕುಟುಂಬ ಹೇಳುತ್ತದೆ.)

ನಂತರ, ಅವರನ್ನು ಶಕುರಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಮತ್ತು ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು.

ರಾಮ್‌ ವೃಕ್ಷ್‌ ತನ್ನ ಬಂಧನಕ್ಕೆ ಆ ದಿನ ನಡೆದ ಇನ್ನೊಂದು ಘಟನೆ ಕಾರಣವಿರಬಹುದು ಎನ್ನುತ್ತಾರೆ. ಅವರ ಪ್ರಕಾರ, ಆ ದಿನ ಪೊಲೀಸರು ದಾರಿಗಡ್ಡವಾಗಿ ನಿಂತಿದ್ದರು. ನಾನು ದಾರಿ ಬಿಡುವಂತೆ ಹೇಳಿದೆ. ಅದಕ್ಕಾಗಿ ಅವರನ್ನು, "ಪೊಲೀಸರು ನನ್ನನ್ನು ನಿಂದಿಸಿದರು ಮತ್ತು ಥಳಿಸಿದರು" ಮತ್ತು ಘಟನೆಯ ಅರ್ಧ ಗಂಟೆಯ ನಂತರ ಅವರನ್ನು ಬಂಧಿಸಲಾಯಿತು.

Left: Ramvriksha Manjhi, 45, is working as a tola sevak in his village
PHOTO • Umesh Kumar Ray
Right: Ramvriksha says that he never made liquor in his house. He claimed that during the raid, he had asked the police to make way for him to go to school, on which the police got infuriated and took this action.
PHOTO • Umesh Kumar Ray

ಎಡ : 45 ವರ್ಷದ ರಾಮ್ ವೃಕ್ಷ್ ಮಾಂಝಿ ಕಾಂತಾ ಗ್ರಾಮದಲ್ಲಿ ಟೋಲಾ ಸೇವಕನಾಗಿ ಕೆಲಸ ಮಾಡುತ್ತಿದ್ದಾರೆ . ಬಲ : ರಾಮ್ ವೃಕ್ಷ್ ಅವರು ತಮ್ಮ ಮನೆಯಲ್ಲಿ ತಾನು ಎಂದೂ ಮದ್ಯ ತಯಾರಿಸಿಲ್ಲ ಎನ್ನುತ್ತಾರೆ . ಶಾಲೆಗೆ ಹೋಗುವಾಗ ಪೊಲೀಸರ ಬಳಿ ದಾರಿ ಬಿಡುವಂತೆ ಕೇಳಿದ್ದಕ್ಕೆ ತನ್ನ ಮೇಲೆ ಕೇಸ್‌ ಹಾಕಲಾಗಿದೆ ಎನ್ನುತ್ತಾರೆ ಅವರು

ರಾಮ್ ವೃಕ್ಷ್ ಅವರನ್ನು ಪೊಲೀಸರು ಹಿಡಿದಾಗ, ಜಂಕ್ಷನ್ನಿನಲ್ಲಿ ಜನರ ಗುಂಪು ಇತ್ತು. "ನಾನು ಸಿಕ್ಕಿಬಿದ್ದಾಗ ಭಾರಿ ಜನಸಂದಣಿ ಇತ್ತು, ಆದರೆ ಪೊಲೀಸರು ಯಾರನ್ನೂ ಸಾಕ್ಷಿಯನ್ನಾಗಿ ಮಾಡಲಿಲ್ಲ, ಅಥವಾ ಜಪ್ತಿ ಪಟ್ಟಿಗೆ ಸಹಿ ಹಾಕುವಂತೆ ಯಾವುದೇ ಸ್ವತಂತ್ರ ವ್ಯಕ್ತಿಯ ಬಳಿ ಕೇಳಲಿಲ್ಲ” ಎಂದು ಅವರು ಹೇಳುತ್ತಾರೆ.

ವಕೀಲ ಜಿತೇಂದ್ರ ಕುಮಾರ್ ಹೇಳುತ್ತಾರೆ, "ಸ್ವತಂತ್ರ ಸಾಕ್ಷಿಗಳು ಅಗತ್ಯ, ಏಕೆಂದರೆ ಪೊಲೀಸರು ಸಾಕ್ಷಿಗಳಾದರೆ ಪಕ್ಷಪಾತದ ಹೇಳಿಕೆಗಳನ್ನು ನೀಡುವ ಸಾಧ್ಯತೆಯಿದೆ." ಜಿತೇಂದ್ರ ಅವರು ಜೆಹಾನಾಬಾದ್ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುತ್ತಾರೆ ಮತ್ತು ನಿಷೇಧಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳನ್ನು ಪ್ರತಿನಿಧಿಸಿದ್ದಾರೆ.

ನಿಷೇಧದ ಪ್ರಕರಣಗಳಲ್ಲಿ, ದಾಳಿ ತಂಡದಲ್ಲಿ ಭಾಗಿಯಾಗಿರುವ ಪೊಲೀಸರನ್ನು ಮಾತ್ರ ದಾಳಿಯ ಸಮಯದಲ್ಲಿ ಸಾಕ್ಷಿಗಳನ್ನಾಗಿ ಮಾಡಲಾಗುತ್ತದೆ ಎಂದು ಜಿತೇಂದ್ರ ಹೇಳುತ್ತಾರೆ. ಅವರು ಅದನ್ನು ನ್ಯಾಯದ ತತ್ವಕ್ಕೆ ವಿರುದ್ಧವೆಂದು ಪರಿಗಣಿಸುತ್ತಾರೆ.

ನಿಷೇಧದ ಅನೇಕ ಪ್ರಕರಣಗಳಲ್ಲಿ, ದಾಳಿಯ ಸಮಯದಲ್ಲಿ ನೂರಾರು ಜನರ ಗುಂಪು ಇರುವುದು ಕಂಡುಬಂದಿದೆ. ಜಿತೇಂದ್ರ ಅವರ ಪ್ರಕಾರ, "ಇದರ ಹೊರತಾಗಿಯೂ, ರೇಡ್‌ ಪಾರ್ಟಿ (ದಾಳಿ ಮಾಡುವ ಪೊಲೀಸ್ ತಂಡದ) ಸದಸ್ಯರನ್ನು ಮಾತ್ರ ಸಾಕ್ಷಿಗಳನ್ನಾಗಿ ಮಾಡಲಾಗುತ್ತದೆ. ಇದು ಬಂಧಿತ ವ್ಯಕ್ತಿಗೆ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವ ಅವಕಾಶವನ್ನು ಕಡಿಮೆ ಮಾಡುತ್ತದೆ.”

"ದಾಳಿಯ ಸಮಯದಲ್ಲಿ ಜಪ್ತಿ ಪ್ರಕ್ರಿಯೆಯನ್ನು ವೀಡಿಯೊಗ್ರಾಫ್ ಮಾಡಬೇಕು ಎಂದು ನಾವು ಮೌಖಿಕವಾಗಿ ನ್ಯಾಯಾಲಯವನ್ನು ಕೋರಿದ್ದೇವೆ,” ಆದರೆ “ನಮ್ಮ ಮಾತುಗಳಿಗೆ ಆದ್ಯತೆ ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ಬಿಹಾರದ ನಿಷೇಧ ಕಾನೂನು ಏಪ್ರಿಲ್ 2016 ರಿಂದ ಜಾರಿಯಲ್ಲಿದೆ. ಪ್ರತಿ ಜಿಲ್ಲೆಯಲ್ಲೂ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಪ್ರತ್ಯೇಕ ಅಬಕಾರಿ ನ್ಯಾಯಾಲಯವಿದೆ, ಈ ಮೂಲಕ ತ್ವರಿತಗತಿಯಲ್ಲಿ ವಿಚಾರಣೆ ನಡೆಸಬಹುದು ಎನ್ನುವುದು ಇದರ ಹಿಂದಿನ ಯೋಚನೆ.

ಮದ್ಯಪಾನ ಸಂಬಂಧಿ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಹಾಗೂ ಶೀಘ್ರ ತನಿಖೆಗೆ ಒತ್ತಡವಿರುವ ಕಾರಣ ಪೊಲೀಸರು ಈ ಪ್ರಕರಣಗಳ ತನಿಖೆಯಲ್ಲಿ ನಿಯಮಗಳನ್ನು ನಿರ್ಲಕ್ಷಿಸುತ್ತಾರೆ ಎಂದು ವಕೀಲರು ಮತ್ತು ಸಂತ್ರಸ್ತರು ಒಮ್ಮತದಿಂದ ಹೇಳುತ್ತಾರೆ.

Left: Jitendra says that when the police arrive on the scene at a raid, bystanders throng the area. Despite that, members of the raid party [raiding squad composed of police-people] are made witnesses. This greatly reduces the chances of the accused to prove their innocence.
PHOTO • Umesh Kumar Ray
Right: Sanjeev Kumar says that due to the prohibition law, there has been a huge increase in the number of cases in the Jehanabad court
PHOTO • Umesh Kumar Ray

ಎಡ: ಪೊಲೀಸರು ದಾಳಿ ನಡೆಸಲು ಘಟನಾ ಸ್ಥಳಕ್ಕೆ ಬಂದಾಗ, ಆ ಪ್ರದೇಶದಲ್ಲಿ ಜನ ಜಮಾಯಿ ಸಿರು ತ್ತಾರೆ ಎಂದು ಜಿತೇಂದ್ರ ಹೇಳುತ್ತಾರೆ. ಅದರ ಹೊರತಾಗಿಯೂ, ದಾಳಿ ತಂಡದ ಸದಸ್ಯರನ್ನು [ಪೊಲೀಸ್-ಜನರನ್ನು ಒಳಗೊಂಡ ದಾಳಿ ದಳ] ಸಾಕ್ಷಿಗಳನ್ನಾಗಿ ಮಾಡಲಾಗುತ್ತದೆ. ಇದು ಆರೋಪಿಗಳು ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸುವ ಸಾಧ್ಯತೆಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ಬಲ: ನಿಷೇಧ ಕಾನೂನಿನಿಂದಾಗಿ, ಜೆಹಾನಾಬಾದ್ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಸಂಜೀವ್ ಕುಮಾರ್ ಹೇಳುತ್ತಾರೆ

ನ್ಯಾಯಾಲಯದ ಕಲಾಪಗಳ ಬಗ್ಗೆ ವರದಿ ಮಾಡುವ ಲೈವ್ ಲಾ ವೆಬ್ಸೈಟ್ ನ 2023ರ ಜನವರಿ 24ರ ವರದಿಯ ಪ್ರಕಾರ , ಮೇ 11, 2022ರವರೆಗೆ, ನಿಷೇಧ ಕಾಯ್ದೆಯಡಿ ಒಟ್ಟು 3,78,186 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 1,16,103 ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಪ್ರಾರಂಭಿಸಿದ್ದರೂ, 2022ರ ಮೇ 11ರ ತನಕ  ಕೇವಲ 473 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ.

ಮಾರ್ಚ್ 2022ರಲ್ಲಿ, ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನ್ಯಾಯಾಲಯಗಳು ನಿಷೇಧಕ್ಕೆ ಸಂಬಂಧಿಸಿದ ಜಾಮೀನು ನೀಡಬಹುದಾದ ಪ್ರಕರಣಗಳಿಂದ ತುಂಬಿವೆ, ಇದು ಇತರ ಪ್ರಕರಣಗಳ ವಿಚಾರಣೆಯ ಪ್ರಕ್ರಿಯೆಯನ್ನು ಅತ್ಯಂತ ನಿಧಾನಗೊಳಿಸಿದೆ ಎಂದು ರಮಣ ಹೇಳಿದ್ದಾರೆ.

ಜೆಹಾನಾಬಾದ್ ನ್ಯಾಯಾಲಯದಲ್ಲಿ ವಕೀಲರಾಗಿರುವ ವಕೀಲ ಸಂಜೀವ್ ಕುಮಾರ್, "ಸರ್ಕಾರವು ಹೇರಳವಾದ ಸಂಪನ್ಮೂಲಗಳನ್ನು ಅಬಕಾರಿ ಪ್ರಕರಣಗಳಿಗೆ ವ್ಯಯ ಮಾಡುತ್ತಿದೆ ಮತ್ತು ಇತರ ಪ್ರಕರಣಗಳಿಗೆ ಆದ್ಯತೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ" ಎಂದು ಹೇಳುತ್ತಾರೆ.

*****

ರಾಮ್ ವೃಕ್ಷ್ ಮಾಂಝಿ ಅವರಿಗೆ ಜೆಹಾನಾಬಾದ್ ನ್ಯಾಯಾಲಯವು 22 ದಿನಗಳ ನಂತರ ಜಾಮೀನು ನೀಡಿತು, ಆದರೆ ಅಂದಿನಿಂದ ಅವರು ಪದೇ ಪದೇ ನ್ಯಾಯಾಲಯಕ್ಕೆ ಭೇಟಿ ನೀಡಬೇಕಾಯಿತು. ತಿಂಗಳಿಗೆ ಕೇವಲ 11,000 ರೂ.ಗಳ ಸಂಬಳವನ್ನು ಪಡೆಯುವ ರಾಮ್ ವೃಕ್ಷ, ಇಲ್ಲಿಯವರೆಗೆ ಸುಮಾರು 60,000 ರೂ.ಗಳನ್ನು ನ್ಯಾಯಾಲಯದಲ್ಲಿ ಖರ್ಚು ಮಾಡಿದ್ದಾರೆ ಮತ್ತು ಅವರ ಮುಂದಿನ ವಿಚಾರಣೆಯನ್ನು ಆಗಸ್ಟ್‌ ತಿಂಗಳಿನಲ್ಲಿ ನಿಗದಿಪಡಿಸಲಾಗಿದೆ. "ಈ ಪ್ರಕರಣವು ನಾಲ್ಕು ವರ್ಷಗಳಿಂದ ಬಾಕಿ ಉಳಿದಿದೆ. ಖರ್ಚು ಕೂಡ ಹೆಚ್ಚಾಗಿದೆ.” ಎನ್ನುತ್ತಾರವರು.

ಅವರಿಗೆ 7ರಿಂದ 20 ವರ್ಷದೊಳಗಿನ ನಾಲ್ವರು ಮಕ್ಕಳಿದ್ದಾರೆ - ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಹಿರಿಯ ಮಗಳಿಗೆ 20 ವರ್ಷ ವಯಸ್ಸಾಗಿದ್ದು, ಕೇಸಿನ ಕಾರಣದಿಂದಾಗಿ ಮಗಳಿಗೆ ಮದುವೆ ಮಾಡಲು ಸಹ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ರಾಮ ವೃಕ್ಷ ಹೇಳುತ್ತಾರೆ, "ನನಗೆ ಶಾಲೆಗೆ ಹೋಗಬೇಕು ಅಥವಾ ಮಕ್ಕಳಿಗೆ ಕಲಿಸಬೇಕು ಅನ್ನಿಸುವುದಿಲ್ಲ. ಆತಂಕದಿಂದಾಗಿ, ಐದು ಗಂಟೆಗಳ ಬದಲು ಕೇವಲ ಎರಡು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡಲು ಸಾಧ್ಯವಾಗುತ್ತಿದೆ.”

ಗುಣಾ ದೇವಿ ನ್ಯಾಯಾಲಯದಲ್ಲಿ ಮುನ್ಷಿಗೆ 25,000 ರೂ.ಗಳನ್ನು ನೀಡಿದ್ದರು. ತನ್ನ ಮುಂದೆ ಇರಿಸಲಾದ ಯಾವುದೇ ಕಾಗದಪತ್ರಗಳನ್ನು ಓದಲು ಸಾಧ್ಯವಾಗದ ಅವರು, "ನಾವು ಒಂದೆರಡು ಬಾರಿ ನ್ಯಾಯಾಲಯಕ್ಕೆ ಹೋಗಿ ಅಲ್ಲಿನ ಮುನ್ಷಿಯನ್ನು ಭೇಟಿಯಾದೆವು, ಆದರೆ ಒಮ್ಮೆಯೂ ವಕೀಲರನ್ನು ಭೇಟಿಯಾಗಲಿಲ್ಲ" ಎಂದು ಹೇಳುತ್ತಾರೆ.

Left: Guna Devi says that her husband Tempu Manjhi has been implicated by the police in a made-up case.
PHOTO • Umesh Kumar Ray
Right: After his father was sentenced to five years of imprisonment, 15-year-old Rajkumar had to work as a labourer to feed the family
PHOTO • Umesh Kumar Ray

ಎಡ : ತನ್ನ ಪತಿ ಟೆಂಪು ಮಾಂಝಿ ಅವರನ್ನು ಪೊಲೀಸರು ಸುಳ್ಳು ಆರೋಪದಲ್ಲಿ ಸಿಲುಕಿಸಿದ್ದಾರೆ ಎಂದು ಗುಣಾ ದೇವಿ ಹೇಳುತ್ತಾರೆ . ಬಲ : ತಂದೆಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ , 15 ವರ್ಷದ ರಾಜಕುಮಾರ ಕುಟುಂಬವನ್ನು ಪೋಷಿ ಸುವ ಸಲುವಾಗಿ ಕಾರ್ಮಿಕ ನಾಗಿ ದುಡಿಯಬೇಕಾಯಿತು

ಟೆಂಪು ಜೈಲಿಗೆ ಹೋದ ನಂತರ, ಈ ಭೂರಹಿತ ಕುಟುಂಬಕ್ಕೆ ಮನೆ ನಡೆಸುವುದು ಕಷ್ಟಕರವಾಗಿದೆ. ಸ್ವಂತ ಭೂಮಿಯಿಲ್ಲದ ಗುಣಾ ದೇವಿ ಬಿತ್ತನೆ ಮತ್ತು ಕೊಯ್ಲು ಸಂದರ್ಭಗಳಲ್ಲಿ ಮಾತ್ರ ಕೃಷಿ ಕೆಲಸವನ್ನು ಪಡೆಯುತ್ತಾರೆ. ಅವರ ನಾಲ್ವರು ಮಕ್ಕಳು - ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು - 10 ರಿಂದ 15 ವರ್ಷದೊಳಗಿನವರು.

"ಬಾವಾ ತಾನಿ-ಮಣಿ ಕಮಾ ಹೈ [ಮಗ ಒಂದಷ್ಟು ಸಂಪಾದಿಸುತ್ತಾನೆ]" ಎಂದು ಅವರು ಮಗಹಿಯಲ್ಲಿ ತಮ್ಮ 15 ವರ್ಷದ ಮಗ ರಾಜ್ಕುಮಾರನನ್ನು ತೋರಿಸುತ್ತಾ ಹೇಳುತ್ತಾರೆ. ಈ ಕೆಲಸಕ್ಕೆ ಅವನಿಗೆ ದಿನಕ್ಕೆ 300 ರೂಪಾಯಿ ಕೂಲಿ ದೊರೆಯುತ್ತದೆ. ಅವನು ಅಪ್ರಾಪ್ತ ವಯಸ್ಕನಾಗಿರುವ ಕಾರಣ ಅವನಿಗೆ ಕೆಲಸ ಸಿಗುವುದು ಕೂಡಾ ಕಷ್ಟ.

ಏತನ್ಮಧ್ಯೆ, ಪೊಲೀಸರು ಗುಣಾ ದೇವಿಯನ್ನು ಇನ್ನೊಂದು ನಿಷೇಧ ಸಂಬಂಧಿತ ಪ್ರಕರಣದಲ್ಲಿ ಆರೋಪಿಯನ್ನಾಗಿಸಿದ್ದಾರೆ ಮತ್ತು ಅವರನ್ನು 'ತಲೆಮರೆಸಿಕೊಂಡಿದ್ದಾರೆ' ಎಂದು ಗುರುತಿಸಿದ್ದಾರೆ.

"ಬಂಧನಕ್ಕೊಳಗಾಗುವುದನ್ನು ತಪ್ಪಿಸಲು, ನಾನು ನನ್ನ ಮಕ್ಕಳೊಂದಿಗೆ ರಾತ್ರಿ ಕಳೆಯಲು ಸಂಬಂಧಿಕರ ಮನೆಗೆ ಹೋಗುತ್ತೇನೆ. ಅವರು ನನ್ನನ್ನೂ ಹಿಡಿದರೆ, ನನ್ನ ನಾಲ್ಕು ಮಕ್ಕಳ ಗತಿ ಏನು?

ಕೆಲವು ಸ್ಥಳಗಳು ಮತ್ತು ಜನರ ಹೆಸರುಗಳನ್ನು ಬದಲಾಯಿಸಲಾಗಿದೆ.

ಈ ವರದಿಗೆ ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನಿಸ್ಟ್ ಸ್ಮರಣಾರ್ಥ ಫೆಲೋಶಿಪ್ ಸಹಾಯ ಪಡೆಯಲಾಗಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Umesh Kumar Ray

Umesh Kumar Ray is a PARI Fellow (2022). A freelance journalist, he is based in Bihar and covers marginalised communities.

यांचे इतर लिखाण Umesh Kumar Ray
Editor : Devesh

देवेश एक कवी, पत्रकार, चित्रकर्ते आणि अनुवादक आहेत. ते पारीमध्ये हिंदी मजकूर आणि अनुवादांचं संपादन करतात.

यांचे इतर लिखाण Devesh
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

यांचे इतर लिखाण Shankar N Kenchanuru