ಅದನ್ನು ನೋಡುವಾಗ ನಮಗೆ ಅದೊಂದು ಮಿತವ್ಯಯದ ಅವಿಷ್ಕಾರದಂತೆ ಕಾಣುತ್ತದೆ. ಆದರೆ 65 ವರ್ಷದ ನಾರಾಯಣ ದೇಸಾಯಿಯವರ ಪ್ರಕಾರ ಅದು ಕಲೆಯ ʼಸಾವುʼ. ನಾವು ಮಾತನಾಡುತ್ತಿರುವುದು ದೇಸಾಯಿಯವರ ಶಹನಾಯಿ ಕುರಿತು. ಈ ಮಿತವ್ಯಯದ ಅವಿಷ್ಕಾರ ಅಥವಾ ಕಲೆಯ ಸಾವು ಎನ್ನುವುದು ಶಹನಾಯಿಯ ವಿನ್ಯಾಸದಲ್ಲಿನ ಬದಲಾವಣೆಯ ವಿಷಯ. ಇದನ್ನು ಅವರು ಮಾರುಕಟ್ಟೆ ತಮ್ಮೆದುರು ತಂದೊಡ್ಡಿದ ವಾಸ್ತವದೆದುರು ಅವರು ಕಂಡುಕೊಂಡ ದಾರಿಯಾಗಿತ್ತು. ಇದು ಅವರ ಕಲೆಯ ಸಾವು-ಬದುಕಿನ ಪ್ರಶ್ನೆಯಾಗಿತ್ತು.
ಶಹನಾಯಿಯೆನ್ನುವುದು ಒಂದು ಗಾಳಿ ವಾದ್ಯವಾಗಿದ್ದು ಇದನ್ನು ಸ್ಥಳೀಯ ಕಾರ್ಯಕ್ರಮಗಳು ಮತ್ತು ಮದುವೆಗಳಲ್ಲಿ ಊದಲಾಗುತ್ತದೆ.
ಎರಡು ವರ್ಷಗಳ ಹಿಂದಿನವರೆಗೂ ನಾರಾಯಣ ದೇಸಾಯಿಯವರು ತಯಾರಿಸಿದ ಶಹನಾಯಿಯ ತುದಿಯಲ್ಲೊಂದು ಪಿತಲಿ (ಹಿತ್ತಾಳೆ) ಗಂಟೆ ನೇತಾಡುತ್ತಿತ್ತು. ಕೈಯಿಂದ ತಯಾರಿಸಲಾಗುವ ಶಹನಾಯಿಗಳ ತುದಿಯಲ್ಲಿನ ಈ ಗಂಟೆಯನ್ನು ಮರಾಠಿಯಲ್ಲಿ ವಾಟೀ ಎಂದು ಕರೆಯಲಾಗುತ್ತದೆ. ಇದು ಮರದ ಶಹನಾಯಿಗಳ ಸ್ವರಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ತಮ್ಮ ವೃತ್ತಿ ಬದುಕು ಉತ್ತುಂಗದಲ್ಲಿದ್ದ ಕಾಲವಾದ 70ರ ದಶಕದಲ್ಲಿ ದೇಸಾಯಿಯವರ ಬಳಿ ಹತ್ತು-ಹನ್ನೆರಡು ಗಂಟೆಗಳು ಇರುತ್ತಿದ್ದವು. ಅವರು ಅವುಗಳನ್ನುಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಿಂದ ಖರೀದಿಸಿ ತರುತ್ತಿದ್ದರು.
ಅದೇನೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅವರನ್ನು ಈ ಗಂಟೆಗಳನ್ನು ಬಳಸದಂತೆ ಎರಡು ವಿಷಯಗಳು ತಡೆದವು: ಹೆಚ್ಚುತ್ತಿರುವ ಹಿತ್ತಾಳೆಯ ಬೆಲೆ ಮತ್ತು ಉತ್ತಮ ಗುಣಮಟ್ಟದ ಶಹನಾಯಿ ತಯಾರಿಸಲು ತಗಲುವ ವೆಚ್ಚವನ್ನು ನೀಡಲು ತಯಾರಿರದ ಗ್ರಾಹಕರು.
“ಜನರು 300-400 ರೂಪಾಯಿಗಳಿಗೆ ಕೊಡುವಂತೆ ಕೇಳುತ್ತಿದ್ದರು” ಎನ್ನುತ್ತಾರವರು. ಆ ಬೆಲೆಗೆ ಕೊಡುವುದು ನಿಜಕ್ಕೂ ಅಸಾಧ್ಯವಾದ ವಿಚಾರ. ಇಂದಿನ ದಿನಗಳಲ್ಲಿ ಕೇವಲ ಹಿತ್ತಾಳೆ ಗಂಟೆಯೊಂದರ ಬೆಲೆಯೇ ಸುಮಾರು 500 ರೂಪಾಯಿಗಳಷ್ಟಿದೆ. ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡ ನಂತರ ದೇಸಾಯಿಯವರು ಹೊಸ ಉಪಾಯವೊಂದನ್ನು ಕಂಡುಕೊಂಡರು. “ನಾನು ಊರಿನ ಹಬ್ಬದಲ್ಲಿ ಪ್ಲಾಸ್ಟಿಕ್ ಪೀಪಿಗಳನ್ನು ಕೊಂಡು ಅವುಗಳ ತುದಿಯನ್ನು ಕತ್ತರಿಸಿ [ಹಿತ್ತಾಳೆಯ ಗಂಟೆಯ ಬದಲಿಗೆ] ಇವುಗಳನ್ನು [ಗಂಟೆಯ ಆಕಾರದವು] ಶಹನಾಯಿಯ ತುದಿಗೆ ಅಂಟಿಸಲಾರಂಭಿಸಿದೆ”
“ಇದು ಸ್ವರದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಜನರಿಗೆ ಅದರ [ಗುಣಮಟ್ಟ] ಕುರಿತು ಚಿಂತೆಯಿಲ್ಲ” ಎಂದು ಅವರು ವಿಷಾದದಿಂದ ಹೇಳುತ್ತಾರೆ. ಒಂದಷ್ಟು ತಿಳುವಳಿಕೆಯುಳ್ಳ ಗ್ರಾಹಕರ ಬಳಿ ಅವರು ವಾಟಿಯನ್ನು ನೀವೇ ತಂದು ಕೊಡಿ ಎಂದು ಹೇಳುತ್ತಾರೆ. ಈಗ ಅವರು ಬಳಸುತ್ತಿರುವ ಪ್ಲಾಸ್ಟಿಕ್ ಪರ್ಯಾಯವು ಕೇವಲ ಹತ್ತು ರೂಪಾಯಿಗಳಿಗೆ ಸಿಗುತ್ತಿದೆ. ಆದರೆ ತಮ್ಮ ಕೌಶಲದ ವಿಚಾರದಲ್ಲಿ ರಾಜಿಯಾಗಿರುವುದಕ್ಕೆ ಅವರು ಅನುಭವಿಸುತ್ತಿರುವ ನೋವಿಗೆ ಬೆಲ ಕಟ್ಟಲು ಸಾಧ್ಯವಿಲ್ಲ.

























