ನಾಗರಹಾವೊಂದು ಸಾಗುವಾನಿ (ತೇಗ) ಮರದ ಕೊಂಬೆಗೆ ಗಟ್ಟಿಯಾಗಿ ಸುತ್ತಿಕೊಂಡಿತ್ತು. ರಟ್ಟಿ ತೋಲಾ ಗ್ರಾಮದ ಜನರ ಹಲವು ಪ್ರಯತ್ನಗಳ ನಂತರ ಅದು ಅಲ್ಲಿ ಅಲುಗಾಡಲಿಲ್ಲ.
ಐದು ಗಂಟೆಗಳ ವ್ಯರ್ಥ ಪ್ರಯತ್ನದ ನಂತರ ಅಸಹಾಯಕರಾದ ಗ್ರಾಮಸ್ಥರು ಹತ್ತಿರದ ವಾಲ್ಮೀಕಿ ಹುಲಿ ಮೀಸಲು ಪ್ರದೇಶದಲ್ಲಿ ಕಾವಲುಗಾರರಾಗಿದ್ದ ಮುಂದ್ರಿಕಾ ಯಾದವ್ ಅವರ ಮೊರೆಹೋದರು. ಅವರು ಇದುವರೆಗೆ ಹುಲಿಗಳು, ಚಿರತೆಗಳು, ಖಡ್ಗಮೃಗಗಳು ಮತ್ತು ಹಾವುಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿದ್ದಾರೆ.
ಮುಂದ್ರಿಕಾ ಬಂದವರೇ ಹಾವನ್ನು ಕೆಳಗೆ ಇಳಿಸಲು ಪ್ರಯತ್ನಿಸಿದರು, ಮತ್ತು ಅವರು ಅದರಲ್ಲಿ ಯಶಸ್ವಿಯೂ ಆದರು. “ನಾನು ಅದರ ಬಾಯಿಗೆ ಬಿದಿರಿನ ಕಡ್ಡಿಯನ್ನಿಟ್ಟೆ ನಂತರ ಹಗ್ಗವನ್ನು ಬಿಗಿಯಾಗಿಸಿದೆ. ನಂತರ ಅದನ್ನು ಚೀಲದಲ್ಲಿ ಬಂಧಿಸಿ ಕಾಡಿನಲ್ಲಿ ಬಿಟ್ಟೆ” ಎನ್ನುತ್ತಾರೆ ಈ 42 ವರ್ಷದ ವನ್ಯಜೀವಿ ರಕ್ಷಕ. “ಇದಕ್ಕೆ ನನಗೆ ಹಿಡಿದಿದ್ದು ಕೇವಲ 20 – 25 ನಿಮಿಷ.”






