ಊರಿನ ಇತರ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಭಾಗವಹಿಸುವುದನ್ನು ಆನಂದಿಸುತ್ತಿರುವುದು ಮಾತ್ರವಲ್ಲದೆ ಅದರ ಮೂಲಕ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳುತ್ತಾರೆ. "ನಾವು ನಮ್ಮ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಮೊದಲು ನಮ್ಮ ಮಹಿಳೆಯರು ನೀರು ತರಲು ಬಹಳಷ್ಟು ಓಡಾಡಬೇಕಿತ್ತು. ಈಗ ಹಳ್ಳಿಯ ಬೀದಿಯಲ್ಲಿ ನೀರು ಸರಬರಾಜು ಇದೆ, ನಾವು ಪಡಿತರವನ್ನು ಸಂಗ್ರಹಿಸಲು ಬೇರೆ ಹಳ್ಳಿಗೆ ಹೋಗುತ್ತಿದ್ದೆವು, ಆದರೆ ಈಗ ಅದು ನಮಗೆ ಹತ್ತಿರ ಬರುತ್ತಿದೆ " ಎಂದು ಬೆನೆಡಿಕ್ಟ್ ಅಸುರ್ ಹೇಳುತ್ತಾರೆ. "ಅಷ್ಟೇ ಅಲ್ಲ, ನಾವು ನಮ್ಮ ಹಳ್ಳಿಯನ್ನು ಗಣಿಗಾರಿಕೆಯಿಂದ ರಕ್ಷಿಸಿದ್ದೇವೆ."
ಕಾಡಿನಲ್ಲಿ ಬಾಕ್ಸೈಟ್ ಗಣಿಗಾರಿಕೆಗಾಗಿ ಸಮೀಕ್ಷೆ ನಡೆಸುತ್ತಿರುವ ಹೊರಗಿನವರನ್ನು ಕಂಡು, ಎಚ್ಚರಿಕೆಯನ್ನು ಮೊಳಗಿಸಲಾಯಿತು, ನಂತರ ಅನೇಕ ಗ್ರಾಮಸ್ಥರು ಒಟ್ಟುಗೂಡಿ ಅವರನ್ನು ಓಡಿಸಿದೆವು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಮೂಲ ಸೌಕರ್ಯ ಸಮಿತಿ, ಸಾರ್ವಜನಿಕ ಸಂಪತ್ತು ಸಮಿತಿ, ಕೃಷಿ ಸಮಿತಿ, ಆರೋಗ್ಯ ಸಮಿತಿ, ಗ್ರಾಮ ರಕ್ಷಾ ಸಮಿತಿ, ಶಿಕ್ಷಣ ಸಮಿತಿ ಮತ್ತು ಜಾಗೃತ ಸಮಿತಿ - ಗ್ರಾಮಸಭೆ ಸಮಿತಿಯ ಜೊತೆಗೆ ಲುಪುಂಗ್ಪಾಟ್ ಗ್ರಾಮಸ್ಥರು ಏಳು ಸಮಿತಿಗಳನ್ನು ರಚಿಸಿದ್ದಾರೆ.
"ಪ್ರತಿ ಸಮಿತಿಯು ಸಂಬಂಧಿತ ಸಮಸ್ಯೆಗಳು ಮತ್ತು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಚರ್ಚಿಸುತ್ತದೆ. ನಂತರ ಅವರು ತಮ್ಮ ನಿರ್ಧಾರವನ್ನು ಮೂಲಭೂತ ಮೂಲಸೌಕರ್ಯ ಸಮಿತಿಗೆ ಕಳುಹಿಸುತ್ತಾರೆ, ಅದು ಅದನ್ನು ಗ್ರಾಮಾಭಿವೃದ್ಧಿ ಸಮಿತಿಗೆ ಕಳುಹಿಸುತ್ತದೆ " ಎಂದು ಗ್ರಾಮ ಸಭೆಯ ಸದಸ್ಯ ಕ್ರಿಸ್ಟೋಫರ್ ವಿವರಿಸುತ್ತಾರೆ. "ನಾವು ಸ್ಥಳೀಯ ಮಟ್ಟದಲ್ಲಿ ಪ್ರಜಾಸತ್ತಾತ್ಮಕ ಅಭ್ಯಾಸಗಳನ್ನು ಬಲಪಡಿಸಿದರೆ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಬೇರೂರುತ್ತದೆ" ಎಂದು ಅಜೀಂ ಪ್ರೇಮ್ಜಿ ಫೌಂಡೇಶನ್ನ ಸೆಂಟರ್ ಫಾರ್ ಡೆವಲಪ್ಮೆಂಟ್ ಮುಖ್ಯಸ್ಥ ಪ್ರೊಫೆಸರ್ ಅಶೋಕ್ ಸಿರ್ಕಾರ್ ಹೇಳುತ್ತಾರೆ.
ಗ್ರಾಮಸಭೆಯ ಸಮಿತಿಯು ಎಲ್ಲಾ ಗ್ರಾಮಸ್ಥರಿಗೆ ಮುಕ್ತವಾಗಿರುವುದರಿಂದ, ಅವರೆಲ್ಲ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಂತರ ಅದನ್ನು ಗ್ರಾಮದ ಮುಖ್ಯಸ್ಥರು ಮತ್ತು ವಾರ್ಡ್ ಸದಸ್ಯರು ಚೈನ್ಪುರದ ಬ್ಲಾಕ್ ಕಚೇರಿಗೆ ಕೊಂಡೊಯ್ಯುತ್ತಾರೆ.