ನಾನು ನನ್ನನ್ನು ಓರ್ವ ಚಿತ್ರ ಕಲಾವಿದೆಯಾಗಿ ನೋಡುವುದಿಲ್ಲ. ನನ್ನ ಬಳಿ ಚಿತ್ರ ಕಲಾವಿದರಿಗೆ ಇರಬೇಕಾದ ಗುಣಗಳಿಲ್ಲ. ಆದರೆ ನನ್ನೊಳಗೆ ಹೇಳಲೇಬೇಕಾದ ಕತೆಗಳಿವೆ. ನಾನು ಬ್ರಷ್ ಬಳಸಿ ಆ ಕತೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ನನ್ನ ಚಿತ್ರಗಳು ಪರಿಪೂರ್ಣ ಎಂದು ನಾನು ಹೇಳುವುದಿಲ್ಲ. ನಾನು ಈಗ ಕಳೆದ ಎರಡು ಮೂರು ವರ್ಷಗಳಿಂದ ಇತರ ಕಲಾವಿದರ ಕೆಲಸಗಳನ್ನು ಗಮನಿಸಲು ಆರಂಭಿಸಿದ್ದೇನೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದರ ಹೊರತು ನನಗೆ ಕಲೆಯ ಕುರಿತು ಅಷ್ಟೇನು ತಿಳಿದಿಲ್ಲ. ನಾನು ಕತೆ ಹೇಳುವ ಸಲುವಾಗಿ ಚಿತ್ರ ಬಿಡಿಸಲಾರಂಭಿಸಿದೆ. ಕಥೆಯೊಂದನ್ನು ಚಿತ್ರದ ಮೂಲಕ ವ್ಯಕ್ತಪಡಿಸಲು ಸಾಧ್ಯವಾದಾಗ ನನಗೆ ಖುಷಿಯಾಗುತ್ತದೆ. ಚಿತ್ರ ಬಿಡಿಸುವಾಗ ನಾನು ಒಂದು ಕತೆ ಹೇಳುತ್ತಿರುವೆ ಎನ್ನುವ ಭಾವನೆಯಲ್ಲೇ ಬಿಡಿಸುತ್ತೇನೆ."
ಲಾಬನಿಯವರು ಓರ್ವ ಕಲಾವಿದೆ. ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ದುಬುಲಿಯಾ ಎನ್ನುವ ಸಣ್ಣ ಹಳ್ಳಿಯವರು. ಈ ಊರು ಹಿಂದೆ ಸೈನಿಕರ ನೆಲೆಯಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಇಲ್ಲಿ ಏರ್ ಫೀಲ್ಡ್ ಕೂಡಾ ಇತ್ತು. ಬ್ರಿಟಿಷರು ಇಲ್ಲಿ ಕ್ಯಾಂಪ್ ನಿರ್ಮಿಸಿದ ಸಮಯದಲ್ಲಿ ಬಹುತೇಕ ಮುಸ್ಲಿಮ್ ಜನರು ತಮ್ಮ ನೆಲೆ ಕಳೆದುಕೊಂಡರು. ಮುಂದೆ ದೇಶ ಇಬ್ಭಾಗವಾದ ಸಂದರ್ಭದಲ್ಲಿ ಕೆಲವರು ದೇಶದ ಇನ್ನೊಂದು ಗಡಿಗೆ ಹೋದರು. “ಆದರೆ ನಾವು ಹೋಗಲಿಲ್ಲ” ಎನ್ನುತ್ತಾರೆ ಲಾಬನಿ “ನಮ್ಮ ಹಿರಿಯರು ಇಲ್ಲಿಂದ ಹೋಗಲು ಬಯಸಿರಲಿಲ್ಲ. ಅವರನ್ನು ಇಲ್ಲಿಯೇ ಮಣ್ಣು ಮಾಡಲಾಗಿದೆ. ನಾವು ಇಲ್ಲಿಯೇ ಬದುಕಿ ಸಾಯಲು ಬಯಸುತ್ತೇವೆ.” ಈ ನೆಲದೊಂದಿಗಿನ ಸಂಬಂಧ ಮತ್ತು ಅದರ ಹೆಸರಿನಲ್ಲಿ ನಡೆಯುತ್ತಿರುವ ಈ ಎಲ್ಲಾ ಘಟನೆಗಳು ಈ ಕಲಾವಿದೆಯ ಸಂವೇದನೆಯನ್ನು ಬಾಲ್ಯದಿಂದಲೇ ನಿರೂಪಿಸಿವೆ.
ಅವರಿಗೆ ಚಿತ್ರ ಬಿಡಿಸಲು ಬೆಂಬಲ ದೊರಕಿದ್ದು ಅವರ ತಂದೆಯಿಂದ. ಅವರು ತನ್ನ ಶಾಲೆಗೆ ಹೋಗುತ್ತಿದ್ದ ಮಗಳನ್ನು ಕೆಲವು ವರ್ಷಗಳ ಕಾಲ ಟ್ಯೂಷನ್ ಕ್ಲಾಸಿಗೆ ಕರೆದೊಯ್ಯುತ್ತಿದ್ದರು. ಲಾಬನಿಯವರ ತಂದೆ ತನ್ನ ಹತ್ತು ಮಂದಿ ಒಡಹುಟ್ಟಿದವರ ನಡುವೆ ಬೆಳೆದವರು. ಅವರಲ್ಲಿ ಶಾಲೆಗೆ ಹೋದವರೆಂದರೆ ಅವರೊಬ್ಬರೇ. ಮತ್ತು ಅವರು ಶಾಲೆ ಮೆಟ್ಟಿಲು ಹತ್ತಿದ ಕುಟುಂಬದ ಮೊದಲ ತಲೆಮಾರು. ಮುಂದೆ ವಕೀಲರಾದ ಅವರು ಸಮಾಜದ ಅಂಚಿನಲ್ಲಿದ್ದ ರೈತರು ಮತ್ತು ಕಾರ್ಮಿಕರೊಂದಿಗೆ ದುಡಿಯುತ್ತಾ, ಅವರಿಗಾಗಿ ಸಹಕಾರಿ ಸಂಘಗಳನ್ನು ರಚಿಸಿದ್ದರು. ಆದರೆ ಅಷ್ಟೇನೂ ಸಂಪಾದನೆ ಇರಲಿಲ್ಲ. “ಸಿಕ್ಕಿದ ಹಣದಲ್ಲೇ ಅವರು ನನಗೆ ಪುಸ್ತಕ ತರುತ್ತಿದ್ದರು” ಎನ್ನುತ್ತಾರೆ ಲಾಬನಿ. ಮಾಸ್ಕೋ ಪ್ರೆಸ್, ರಾದುಗ ಪ್ರೆಸ್ ಪ್ರಕಟಣೆಯ ಹತ್ತು ಹಲವು ಮಕ್ಕಳ ಪುಸ್ತಕಗಳು ಆಗ ಸಿಗುತ್ತಿದ್ದವು. ಬಾಂಗ್ಲಾ ಅನುವಾದದ ಮೂಲಕ ಅವುಗಳನ್ನು ನಾವು ಓದುತ್ತಿದ್ದೆವು. ಆ ಪುಸ್ತಕಗಳಲ್ಲಿ ಇರುತ್ತಿದ್ದ ಚಿತ್ರಗಳು ನನ್ನನ್ನು ಸೆಳೆಯುತ್ತಿದ್ದವು. ಬಹುಶಃ ಇಲ್ಲಿಂದ ಚಿತ್ರಗಳ ಕುರಿತಾದ ನನ್ನ ಆಸಕ್ತಿ ಆರಂಭವಾಯಿತು.“
ಅವರ ತಂದೆ ಕರೆದುಕೊಂಡು ಹೋಗುತ್ತಿದ್ದ ಬಾಲ್ಯದ ಟ್ಯೂಷನ್ ಕ್ಲಾಸ್ ಬಹಳ ಸಮಯ ನಡೆಯಲಿಲ್ಲ. ಆದರೆ ಚಿತ್ರಕಲೆ ಕುರಿತಾದ ಲಾಬನಿಯವರ ಪ್ರೇಮ ಎದೆಯೊಳಗೆ ಉಳಿದೇ ಇತ್ತು. 2016ರಲ್ಲಿ ಭಾಷೆಯೆನ್ನುವುದು ಅವರನ್ನು ಅಕ್ಷರಶಃ ದೂರವಿಟ್ಟುಬಿಟ್ಟಿತು. ಆಗ ಮತ್ತೆ ಅವರ ಒಳಗಿದ್ದ ಕಲಾವಿದೆ ಎದ್ದು ನಿಂತಳು. ಆ ಸಮಯದಲ್ಲಿ ದೇಶ ಸಾಮೂಹಿಕ ಹಲ್ಲೆ ಮತ್ತು ಹತ್ಯೆಗಳಿಗೆ ಸಾಕ್ಷಿಯಾಗುತ್ತಿತ್ತು. ಇಂತಹ ಹಿಂಸೆಯ ಕುರಿತಂತೆ ಸರ್ಕಾರದ ಉದಾಸೀನತೆ ಹಾಗೂ ಹಿಂಸೆಗೆ ಸಂಬಂಧಿಸಿದ ವಿಷಯಗಳ ಬಹುಸಂಖ್ಯಾತರ ನಿರಾಕರಣೆ ಎದ್ದು ಕಾಣುತ್ತಿತ್ತು. ಲಾಬನಿ ಆಗಷ್ಟೇ ಕೋಲ್ಕತ್ತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ತಮ್ಮ ಎಮ್.ಫಿಲ್ ಮುಗಿಸಿದ್ದರು. ದೇಶದಲ್ಲಿ ನಡೆಯುತ್ತಿದ್ದ ಘಟನೆಗಳಿಂದ ಬಹಳ ವಿಚಲಿತರಾಗಿದ್ದರು, ಆದರೆ ಅದರ ಕುರಿತು ಬರೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ.
“ಬಹಳ ಕಿರಿಕಿರಿಯನ್ನು ಅನುಭವಿಸುತ್ತಿದ್ದೆ ಆ ಸಮಯದಲ್ಲಿ. ನನಗೆ ಬರವಣಿಗೆ ಬಹಳ ಇಷ್ಟದ ಕೆಲಸವಾಗಿತ್ತು. ಜೊತೆಗೆ ಈಗಾಗಲೇ ನನ್ನ ಹಲವು ಲೇಖನಗಳು ಬಂಗಾಳಿ ಭಾಷೆಯಲ್ಲಿ ಪ್ರಕಟವಾಗಿದ್ದವು ಸಹ. ಆದರೆ ಇದ್ದಕ್ಕಿದ್ದಂತೆ ಭಾಷೆ ಏಕೋ ಅಸಮರ್ಪಕ ಎನ್ನಿಸತೊಡಗಿತು. ಇದನ್ನೆಲ್ಲಾ ಬಿಟ್ಟು ದೂರ ಓಡಿಹೋಗಬೇಕು ಎನ್ನಿಸುತ್ತಿತ್ತು. ಇದೇ ಸಮಯದಲ್ಲಿ ನನಗೆ ಬಣ್ಣಗಳ ಕಡೆ ಮತ್ತೆ ಮನಸ್ಸು ಮೂಡಿದ್ದು. ಸಿಕ್ಕ ಸಿಕ್ಕ ಸಣ್ಣ ಪುಟ್ಟ ಕಾಗದಗಳ ಮೇಲೆಲ್ಲ ಸಮುದ್ರ ಮತ್ತು ಅದರ ಉಬ್ಬರವಿಳಿತಗಳನ್ನು ಮತ್ತೆ ಮತ್ತೆ ಚಿತ್ರಿಸುತ್ತಿದ್ದೆ. ಆಗ ನಾನು ಚಿತ್ರಗಳಿಗೆ ವಾಟರ್ ಕಲರ್ ಬಳಸುತ್ತಿದ್ದೆ. ಆ ಸಮಯದಲ್ಲಿ [2016-17] ನಾನು ಒಂದರ ಹಿಂದೆ ಒಂದರಂತೆ ಸಮುದ್ರದ ಚಿತ್ರಗಳನ್ನು ಬಿಡಿಸುತ್ತಿದ್ದೆ. ಚಿತ್ರಕಲೆ ಎನ್ನುವುದು ನನಗೆ ಈ ಗದ್ದಲದ ಜಗತ್ತಿನಿಂದ ಬಿಡುಗಡೆ ನೀಡುವ ತಾಣವಾಗಿತ್ತು.”
ಇಂದಿಗೂ ಲಾಬನಿ ಚಿತ್ರಕಲೆ ಕಲಿಕೆಗಾಗಿ ಯಾವುದೇ ಗುರುಗಳ ಮೊರೆ ಹೋಗಿಲ್ಲ. ಅವರದು ಅಭಿಜಾತ ಪ್ರತಿಭೆ.




























