“ಓಶೋಬ್ ವೋಟ್-ಟೋಟ್ ಚ್ಚಾರೋ. ಸಂಧ್ಯಾ ನಾಮರ್ ಆಗೆ ಅನೇಕ್ ಕಾಜ್ ಗೋ… [ವೋಟು-ಗೀಟು ಬಿಡಿ. ಕತ್ತಲಾಗೋ ಮೊದಲು ಮುಗಿಸೋದಕ್ಕೆ ಸಾವಿರ ಕೆಲಸಗಳಿವೆ…]” ಬನ್ನಿ, ವಾಸನೆಯನ್ನು ಸಹಿಸಲು ಸಾಧ್ಯವಾದರೆ ಇಲ್ಲಿ ನಮ್ಮೊಂದಿಗೆ ಕುಳಿತುಕೊಳ್ಳಿ" ಎಂದು ಮಾಲತಿ ಮಾಲ್ ತನ್ನ ಪಕ್ಕದ ನೆಲದ ಮೇಲಿನ ಜಾಗವನ್ನು ತೋರಿಸುತ್ತಾ ಹೇಳಿದರು. ಬಿಸಿಲು ಮತ್ತು ಧೂಳಿನ ಕುರಿತು ತಲೆ ಕೆಡಿಸಿಕೊಳ್ಳದೆ ದೊಡ್ಡ ಈರುಳ್ಳಿ ರಾಶಿಯ ಸುತ್ತ ಕೆಲಸ ಮಾಡುತ್ತಿದ್ದ ಮಹಿಳೆಯರ ಗುಂಪಿನೊಡನೆ ಸೇರಿಕೊಳ್ಳುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ಸುಮಾರು ಒಂದು ವಾರದಿಂದ ಚುನಾವಣೆಗಳ ಕುರಿತು ಪ್ರಶ್ನಿಸುತ್ತಾ ಈ ಹಳ್ಳಿಯ ಮಹಿಳೆಯರ ಸುತ್ತ ಸುತ್ತುತ್ತಿದ್ದೆ.
ಅದು ಎಪ್ರಿಲ್ ತಿಂಗಳ ಆರಂಭಿಕ ದಿನಗಳು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಈ ಭಾಗದಲ್ಲಿ ಬಿಸಿಲು ಪ್ರತಿದಿನ 41 ಡಿಗ್ರಿಯವರೆಗೆ ತಲುಪುತ್ತಿತ್ತು. ನಾನು ಇದ್ದ ಮಾಲ್ ಪಹಾಡಿಯಾ ಗುಡಿಸಲಿನಲ್ಲಿ ಸಂಜೆ 5 ಗಂಟೆಯಾದರೂ ಸುಡುವ ಬಿಸಿಲಿನ ಅನುಭವವಾಗುತ್ತಿತ್ತು. ಈ ಪ್ರದೇಶದಲ್ಲಿನ ಮರಗಳ ಒಂದು ಎಲೆಯೂ ಅಲುಗಾಡುತ್ತಿರಲಿಲ್ಲ. ತಾಜಾ ಈರುಳ್ಳಿಯ ಗಾಢ ಕಟು ವಾಸನೆಯಷ್ಟೇ ಗಾಳಿಯಲ್ಲಿ ತೇಲುತ್ತಿತ್ತು.
ಈ ಮಹಿಳೆಯರು ತಮ್ಮ ಮನೆಗಳಿಂದ ಕೇವಲ 50 ಮೀಟರ್ ದೂರದಲ್ಲಿರುವ ತೆರದ ಸ್ಥಳದಲ್ಲಿ ರಾಶಿ ಹಾಕಲಾಗಿದ್ದ ಈರುಳ್ಳಿ ಗುಡ್ಡೆಯ ಸುತ್ತಲೂ ಅರ್ಧ ವೃತ್ತಾಕಾರದಲ್ಲಿ ಕುಳಿತಿದ್ದರು. ಅವರು ಅಲ್ಲಿ ಕುಡುಗೋಲಿನಿಂದ ಈರುಳ್ಳಿಯನ್ನು ಅದರ ಗಿಡದಿಂದ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದರು. ಮಧ್ಯಾಹ್ನದ ಬಿರುಬಿಸಿಲು ಮತ್ತು ಈರುಳ್ಳಿಯಿಂದ ಚಿಮ್ಮುತ್ತಿದ್ದ ಆವಿಯ ರಸದಿಂದಾಗಿ ಅವರ ಮುಖವು ಕಠಿಣ ಶ್ರಮವಷ್ಟೇ ತರಬಹುದಾದ ಹೊಳಪೊಂದರಲ್ಲಿ ಹೊಳೆಯುತ್ತಿತ್ತು.
“ಇದು ನಮ್ಮ ದೇಶ್ [ಊರು] ಅಲ್ಲ. ಕಳೆದ ಏಳೆಂಟು ವರ್ಷಗಳಿಂದ ನಾವು ಇಲ್ಲಿಗೆ ಬರುತ್ತಿದ್ದೇವೆ” ಎಂದು ಮಾಲತಿ (60) ಹೇಳುತ್ತಾರೆ. ಅವರು ಮತ್ತು ಗುಂಪಿನಲ್ಲಿದ್ದ ಇತರ ಮಹಿಳೆಯರು ಮಾಲ್ ಪಹಾಡಿ ಆದಿವಾಸಿ ಸಮುದಾಯಕ್ಕೆ ಸೇರಿದವರು. ಈ ರಾಜ್ಯದಲ್ಲಿ ಅವರನ್ನು ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ. ಮತ್ತು ಇದು ಇಲ್ಲಿನ ಅತ್ಯಂತ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ ಒಂದು.
“ನಮ್ಮ ಊರು ಗೋವಾಸ್ ಕಾಳಿಕಾಪುರ. ಅಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ. ಮುರ್ಷಿದಾಬಾದ್ ಜಿಲ್ಲೆಯ ರಾಣಿನಗರ 1 ಬ್ಲಾಕ್ ಗೋವಾದ 30ಕ್ಕೂ ಹೆಚ್ಚು ಕುಟುಂಬಗಳು ಈಗ ಬಿಶುಪುರ್‌ಕುರ್ ಗ್ರಾಮದ ಅಂಚಿನಲ್ಲಿ ತಾತ್ಕಾಲಿಕ ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿತ್ತಾ ಸ್ಥಳೀಯ ಹೊಲಗಳಲ್ಲಿ ಕೆಲಸ ಮಾಡುತ್ತಿವೆ.
“ನಮ್ಮ ಊರು ಗೋವಾಸ್ ಕಾಳಿಕಾಪುರ. ಅಲ್ಲಿ ಯಾವುದೇ ಕೆಲಸ ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ. ಮುರ್ಷಿದಾಬಾದ್ ಜಿಲ್ಲೆಯ ರಾಣಿನಗರ 1 ಬ್ಲಾಕ್ ಗೋವಾದ 30ಕ್ಕೂ ಹೆಚ್ಚು ಕುಟುಂಬಗಳು ಈಗ ಬಿಶುಪುರ್‌ಕುರ್ ಗ್ರಾಮದ ಅಂಚಿನಲ್ಲಿ ತಾತ್ಕಾಲಿಕ ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿತ್ತಾ ಸ್ಥಳೀಯ ಹೊಲಗಳಲ್ಲಿ ಕೆಲಸ ಮಾಡುತ್ತಿವೆ.




























