2024ರ ಫೆಬ್ರವರಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ಶಂಭು ಮತ್ತು ಖನೌರಿ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಶೆಲ್ ಮತ್ತು ಲಾಠಿಚಾರ್ಜ್ ರೀತಿಯ ಕೇಂದ್ರ ಸರ್ಕಾರದ ದಮನಕಾರಿ ಕ್ರಮಗಳನ್ನು ಕೈಗೊಂಡ ಬಗ್ಗೆ ರೈತರು ಆಕ್ರೋಶಿತರಾಗಿದ್ದಾರೆ. ಓದಿ: ‘ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆʼ
ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಸರ್ಕಾರ ವಿಧಿಸಿರುವ ರಸ್ತೆ ತಡೆ ಮತ್ತು ವಿವಿಧ ನಿರ್ಬಂಧಗಳಿಗೆ ಪ್ರತಿಕ್ರಿಯಿಸಿದ ಭಾಷಣಕಾರರೊಬ್ಬರು ಬಲವಾದ ಕರೆ ನೀಡಿದರು: “ದಿಲ್ಲಿ ಹಮಾರಾ ಹೈ,. ದೇಶ್ ಪರ್ ವಹೀ ರಾಜ್ ಕರೇಗಾ, ಜೋ ಕಿಸಾನ್ ಮಜ್ದೂರ್ ಕಾ ಬಾತ್ ಕರೇಗಾ [ದೆಹಲಿ ನಮ್ಮದು. ರೈತರು ಮತ್ತು ಕಾರ್ಮಿಕರ ಬಗ್ಗೆ ಮಾತನಾಡುವವರು ಮಾತ್ರವೇ ದೇಶವನ್ನು ಆಳಲು ಸಾಧ್ಯ!]
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ ಮತ್ತು ಉತ್ತರಾಖಂಡದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿರುವ ಕೋಮುವಾದಿ, ಸರ್ವಾಧಿಕಾರಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ರಾಕೇಶ್ ಟಿಕಾಯತ್ ತಮ್ಮ ಭಾಷಣದಲ್ಲಿ, “ಜನವರಿ 22, 2021ರ ನಂತರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಮಾತನಾಡಿಲ್ಲ. ಮಾತುಕತೆ ನಡೆಯದೇ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ?” ಎಂದು ಕೇಳಿದರು. ಟಿಕಾಯತ್ ಅವರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ರಾಷ್ಟ್ರೀಯ ವಕ್ತಾರ ಮತ್ತು ಯುನೈಟೆಡ್ ಕಿಸಾನ್ ಮೋರ್ಚಾದ ನಾಯಕ.
ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ಪ್ರಧಾನ ಕಾರ್ಯದರ್ಶಿ ಡಾ.ವಿಜು ಕೃಷ್ಣನ್ ಮಾತನಾಡಿ, “2020-21ನೇ ಸಾಲಿನಲ್ಲಿ ರೈತ ಚಳವಳಿಯ ಕೊನೆಯ ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ಎಂಎಸ್‌ಪಿ [ಕನಿಷ್ಠ ಬೆಂಬಲ ಬೆಲೆ] ನೀಡುವುದಾಗಿ ಭರವಸೆ ನೀಡಿತ್ತು. ಕಾನೂನುಬದ್ಧವಾಗಿ C2 + 50 ಪ್ರತಿಶತಕ್ಕೆ ನಿಗದಿಪಡಿಸಲಾಗಿತ್ತು. ಆ ಭರವಸೆ ಜಾರಿಯಾಗಿಲ್ಲ. "ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದರು, ಆದರೆ ಅದು ಇನ್ನೂ ಈಡೇರಿಲ್ಲ." ಓದಿರಿ: ರೈತ ಆಂದೋಲನದ ಸಂಪೂರ್ಣ ವರದಿ
ವೇದಿಕೆಯಲ್ಲಿದ್ದ ಕೃಷ್ಣನ್ ಮಾತನಾಡಿ, ವರ್ಷವಿಡೀ ನಡೆದ ಅಂದಿನ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ 736 ರೈತರ ಕುರಿತು ಪ್ರಸ್ತಾಪಿಸಿದರು, ಅವರ ಕುಟುಂಬಗಳಿಗೆ ಪರಿಹಾರ ನೀಡುವ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಧರಣಿ ನಿರತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುವ ಭರವಸೆ ಇನ್ನೂ ಈಡೇರಿಲ್ಲ ಎಂದರು. ಮಹಾಪಂಚಾಯತ್ ವೇಳೆ ಪರಿ ಜತೆ ಮಾತನಾಡಿದ ಅವರು, ‘ಭರವಸೆಯಂತೆ ವಿದ್ಯುತ್ ಕಾಯ್ದೆಯಲ್ಲಿ ಮಾಡಿರುವ ತಿದ್ದುಪಡಿಗಳನ್ನೂ ಹಿಂಪಡೆಯಬೇಕು, ಅದೂ ಆಗಿಲ್ಲ” ಎಂದು ಹೇಳಿದರು.