ಕೈಯಿಂದ ಎಳೆಯುವ ರಿಕ್ಷಾಗಳು ಹೋಗುವಷ್ಟು ಕಿರಿದಾಗಿರುವ ಉತ್ತರ ಕೋಲ್ಕತ್ತಾದ ಕುಮೋರ್ತುಲಿಯ ರಸ್ತೆಗಳಲ್ಲಿ ನಾವು ವಿಗ್ರಹಗಳನ್ನು ತಯಾರಿಸುವ ಕುಂಬಾರರನ್ನು ನೋಡಬಹುದು. ಇಲ್ಲಿಂದಲೇ ಪ್ರತೀ ವರ್ಷ ಇಡೀ ಕೋಲ್ಕತ್ತಾಕ್ಕೆ ದುರ್ಗಾ ದೇವಿ ಮತ್ತು ಇತರ ದೇವತೆಗಳ ವಿಗ್ರಹಗಳು ಹೋಗುತ್ತವೆ.
ಇಲ್ಲಿ ಕಾರ್ತಿಕ್ ಪಾಲ್ ಅವರ ಸ್ವಂತ ವರ್ಕ್‌ಶಾಪ್ ಇದೆ. ಬಿದಿರು ಮತ್ತು ಪ್ಲಾಸ್ಟಿಕ್ ಶೀಟ್‌ಗಳಿಂದ ಮಾಡಿರುವ ಈ ಶೆಡ್‌ಗೆ 'ಬ್ರಜೇಶ್ವರ್ ಅಂಡ್ ಸನ್ಸ್' ಎಂದು ತಮ್ಮ ತಂದೆಯ ಹೆಸರಿಟ್ಟಿದ್ದಾರೆ. ಅವರು ವಿಗ್ರಹವನ್ನು ತಯಾರಿಸುವ ವಿವಿಧ ಹಂತಗಳನ್ನು ಒಳಗೊಂಡ ಸುದೀರ್ಘವಾದ ಪ್ರಕ್ರಿಯೆಯ ಬಗ್ಗೆ ನಮಗೆ ಹೇಳಿದರು. ನದಿಯ ದಡದಿಂದ ತಂದ ಗಂಗೋ ಮಠಿ ಎಂಬ ಮಣ್ಣು ಮತ್ತು ಸೆಣಬಿನ ಕಣಗಳು ಹಾಗೂ ಗಂಗೋ ಮಾಠಿಯ ಮಿಶ್ರಣವಾದ ಪಾಟ್ ಮಾಠಿಯಂತಹ ಮಣ್ಣಿನ ವಿವಿಧ ಮಿಶ್ರಣಗಳನ್ನು ಈ ವಿಗ್ರಹವನ್ನು ಮಾಡುವ ವಿವಿಧ ಹಂತಗಳಲ್ಲಿ ಬಳಸುತ್ತಾರೆ.
ನಾವು ಮಾತನಾಡುತ್ತಿರುವಾಗ ಪಾಲ್ ಅವರು ಒದ್ದೆಯಾದ ಜೇಡಿಮಣ್ಣಿನಿಂದ ಕಾರ್ತಿಕೇಯ ದೇವರ ಮುಖವನ್ನು ಮಾಡುತ್ತಿದ್ದರು. ತಮ್ಮ ಅನುಭವಿ ಕೈಗಳಿಂದ ಆ ಮುಖಕ್ಕೆ ರೂಪವೊಂದನ್ನು ನೀಡುತ್ತಿದ್ದರು. ಅವರು ಬಣ್ಣದ ಕುಂಚ ಮತ್ತು ಚಿಯಾರಿ ಎಂಬ ಬಿದಿರಿನಿಂದ ಮಾಡಿದ ಕೈಯಿಂದ ಪಾಲಿಶ್ ಮಾಡುವ ಕೆತ್ತನೆಯ ಸಲಕರಣೆಯನ್ನು ಬಳಸುತ್ತಾರೆ.
ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ವರ್ಕ್‌ಶಾಪ್‌ನಲ್ಲಿ ಗೋಪಾಲ್ ಪಾಲ್ ಅವರು ಮಣ್ಣಿನ ರಚನೆಗೆ ಚರ್ಮದ ವಿನ್ಯಾಸವನ್ನು ನೀಡುವ ಟವೆಲ್ ತರಹದ ಒಂದು ವಸ್ತುವನ್ನು ಅಂಟಿಸಲು ಅಂಟೊಂದನ್ನು ಸಿದ್ಧಪಡಿಸುತ್ತಿದ್ದರು. ಗೋಪಾಲ್ ಅವರು ಕೋಲ್ಕತ್ತಾದ ಉತ್ತರ ದಿಕ್ಕಿಗಿರುವ 120 ಕಿಲೋಮೀಟರ್ ದೂರದ ನಾಡಿಯಾ ಜಿಲ್ಲೆಯ ಕೃಷ್ಣನಗರದವರು. ಇಲ್ಲಿರುವ ಅನೇಕ ಕೆಲಸಗಾರರು, ಹೆಚ್ಚಿನ ಎಲ್ಲಾ ಪುರುಷರು ಒಂದೇ ಜಿಲ್ಲೆಯಿಂದ ಬಂದವರು. ಅವರಲ್ಲಿ ಹೆಚ್ಚಿನವರು ವರ್ಕ್‌ಶಾಪ್ ಮಾಲೀಕರು ಕೊಟ್ಟಿರುವ ಅದೇ ಪ್ರದೇಶದಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಾರೆ. ತುಂಬಾ ಬೇಡಿಕೆಯಿರುವ ಸೀಸನ್‌ಗೆ ಒಂದು ತಿಂಗಳ ಮುಂಚೆಯೇ ಈ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ. ಅವರು ದಿನಕ್ಕೆ ಎಂಟು ಗಂಟೆಗಳ ಪಾಳಿಯಲ್ಲಿ ದುಡಿಯುತ್ತಾರೆ. ಶರತ್ಕಾಲದಲ್ಲಿ ಬರುವ ಹಬ್ಬಕ್ಕೆ ಮುಂಚೆ ಈ ಕುಶಲಕರ್ಮಿಗಳು ರಾತ್ರಿಯಿಡೀ ಕೆಲಸ ಮಾಡುತ್ತಾರೆ, ತಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲಿಯೇ ಕಳೆಯುತ್ತಾರೆ.
ಕುಮೋರ್ತುಲಿಗೆ ಸುಮಾರು 300 ವರ್ಷಗಳ ಹಿಂದೆ ಕೃಷ್ಣನಗರದಿಂದ ಮೊದಲ ಬಾರಿಗೆ ಕುಂಬಾರರು ವಲಸೆ ಬಂದರು. ಅವರು ಬಾಗ್‌ಬಜಾರ್ ಘಾಟ್‌ಗೆ ಸಮೀಪವೇ ಕೆಲ ತಿಂಗಳುಗಳ ಕಾಲ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕುಮೋರ್ತುಲಿಯಲ್ಲಿ ಬೀಡುಬಿಟ್ಟಿದ್ದರು. ಅಲ್ಲೇ ಇರುವ ನದಿಯಿಂದ ಜೇಡಿಮಣ್ಣನ್ನು ಸುಲಭವಾಗಿ ಸಂಗ್ರಹಿಸಬಹುದು ಎಂಬ ಕಾರಣಕ್ಕೆ ಆರಂಭದಲ್ಲಿ ಅವರು ಅಲ್ಲಿ ನೆಲೆಸಿದ್ದರು. ಇದರ ಜೊತೆಗೆ ಅವರು ಜಮೀನ್ದಾರರ ಮನೆಗಳಲ್ಲಿ ಕೆಲಸ ಕೂಡ ಮಾಡುತ್ತಿದ್ದರು, ದುರ್ಗಾಪೂಜಾ ಹಬ್ಬಕ್ಕಿಂತ ಕೆಲ ವಾರಗಳ ಮೊದಲು ಠಾಕುರ್‌ದಲಾನ್‌ಗಳಲ್ಲಿ (ಜಮೀನ್ದಾರರ ಮನೆಯ ಆವರಣದ ಒಳಗೆ ಧಾರ್ಮಿಕ ಉತ್ಸವಗಳು ನಡೆಯುವ ಸ್ಥಳ) ವಿಗ್ರಹಗಳನ್ನು ತಯಾರಿಸುತ್ತಿದ್ದರು.
ವೀಕ್ಷಿಸಿ: ‘ಕುಮೋರ್ತುಲಿಗೊಂದು ಪಯಣ’ ಫೋಟೋ ಆಲ್ಬಾಂ
ಈ ವೀಡಿಯೊ ಮತ್ತು ವರದಿಯನ್ನು ಸಿಂಚಿತಾ ಮಜಿ ಅವರ 2015-16 ಪರಿ ಫೆಲೋಶಿಪ್‌ನ ಭಾಗವಾಗಿ ಮಾಡಲಾಗಿದೆ.
ಕನ್ನಡ ಅನುವಾದ: ಚರಣ್ ಐವರ್ನಾಡು