ಕೃಷ್ಣಾಜಿ ಭರಿತ್ ಎನ್ನುವ ಈ ಊರಿನಲ್ಲಿ ಕೆಲಸ ಬಾರದ ಕೈಗಳೇ ಇಲ್ಲ.
ಇಲ್ಲಿ ಪ್ರತಿದಿನ ಮಧಾಹ್ನ ಮತ್ತು ರಾತ್ರಿಯ ಊಟದ ಸಮಯಕ್ಕಿಂತ ಗಂಟೆಗಳ ಮುನ್ನ, ದೂರ ದೂರದಿಂದ ಬರುವ ರೈಲುಗಳು ಜಲಗಾಂವ್ ರೈಲು ನಿಲ್ದಾಣ ತಲುಪುವ ಮೊದಲೇ, ಸುಮಾರು 300 ಕಿಲೋಗ್ರಾಂಗಳಷ್ಟು ಬದನೆ ಅಥವಾ ಬಿಳಿಬದನೆ ಭರಿತ್ ಬೇಯಿಸಿ ಬಡಿಸಲಾಗುತ್ತದೆ, ಪ್ಯಾಕ್ ಮಾಡಿ ಬೇಕಾದವರಿಗೆ ಕಳುಹಿಸಲಾಗುತ್ತದೆ. ಇದು ಜಲ್‌ಗಾಂವ್ ನಗರದ ಹಳೆಯ ಬಿ ಜೆ ಮಾರ್ಕೆಟ್ ಪ್ರದೇಶದಲ್ಲಿರುವ ಒಂದು ಸಣ್ಣ ಹೊಟೇಲು. ಕೈಗಾರಿಕೋದ್ಯಮಿಗಳು, ಕಾರ್ಮಿಕರು, ಭಾವೀ ಸಂಸದರಿಂದ ಹಿಡಿದು ದಣಿದಿರುವ ಪಕ್ಷದ ಕಾರ್ಯಕರ್ತರವರೆಗೆ ಎಲ್ಲರೂ ಇದರ ಗ್ರಾಹಕರು.
ಬಿಡುವಿಲ್ಲದ ವಾರದ ದಿನದ ಸಂಜೆ ಹೊತ್ತು ರಾತ್ರಿಯ ಊಟಕ್ಕೆ ತಯಾರಿ ನಡೆಯುತ್ತಿದೆ. ಕೃಷ್ಣಾಜಿ ಭರಿತ್‌ನೊಳಗೆ ಶುಚಿಗೊಳಿಸುವ, ಕತ್ತರಿಸುವ, ಅರೆಯುವ, ಸಿಪ್ಪೆಸುಲಿಯುವ, ಹುರಿಯುವ, ಬೇಯಿಸುವ, ಬೆರೆಸುವ, ಬಡಿಸುವ ಮತ್ತು ಪ್ಯಾಕ್ ಮಾಡುವ ಕೆಲಸಗಳು ನಡೆಯುತ್ತಿವೆ. ಹಳೆಯ ಸಿಂಗಲ್-ಸ್ಕ್ರೀನ್ ಸಿನೇಮಾ ನೋಡಲು ಬಾಕ್ಸ್ ಆಫೀಸಿನ ಹೊರಗೆ ಜನ ನಿಂತಿರುವಂತೆ, ಹೋಟೇಲಿನ ಹೊರಗೆ ಇರುವ ಸ್ಟೀಲಿನ ಮೂರು ಬೇಲಿಗಳ ಉದ್ದಕ್ಕೂ ಜನರು ಸಾಲಾಗಿ ನಿಂತಿದ್ದಾರೆ.
ಇಲ್ಲಿನ ಮುಖ್ಯ ಪಾತ್ರಗಳೆಂದರೆ 14 ಮಂದಿ ಮಹಿಳೆಯರು.









