ಮೊದಲಿಗೆ…
ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) 2014ರಿಂದ ನಿರೂಪಿಸುತ್ತಿರುವ ಭಾರತದ ವೈವಿಧ್ಯತೆಯ ಕುರಿತಾದ ಮಹಾಕಾವ್ಯದಂತಹ ಕತೆಗಳು ಭಾರತೀಯ ಭಾಷೆಗಳಲ್ಲಿ ಮೂಡಿಬರುವ ಮೂಲಕ ವೈವಿಧ್ಯತೆಗೆ ಅರ್ಥ ತರುತ್ತವೆ. ಭಾರತದಲ್ಲಿ ಗ್ರಾಮೀಣ ಪ್ರದೇಶದ 833 ಮಿಲಿಯನ್ ಜನರು 86 ವಿಭಿನ್ನ ಲಿಪಿಗಳನ್ನು ಬಳಸಿಕೊಂಡು 700 ಕ್ಕೂ ಹೆಚ್ಚು ವಿವಿಧ ಭಾಷೆಗಳಲ್ಲಿ ಮಾತನಾಡುತ್ತಾರೆ. ಯಾವುದೇ ಲಿಪಿಯಿಲ್ಲದ ಭಾಷೆಗಳು ಸೇರಿದಂತೆ ಈ ಭಾಷೆಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಹೃದಯಭಾಗದಲ್ಲಿವೆ. ಈ ಭಾರತೀಯ ಭಾಷೆಗಳಿಲ್ಲದ ಆರ್ಕೈವ್ ಒಂದನ್ನು ರೂಪಿಸುವುದು ಬಿಡಿ, ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಪರಿ ಕತೆಗಳ ಪ್ರಯಾಣದಲ್ಲಿ ಈ ಅನುವಾದಗಳು ಬಹಳ ಮುಖ್ಯವಾದ ಭೂಮಿಕೆಯನ್ನು ವಹಿಸುತ್ತವೆ.
“ಈ ಆರ್ಕೈವ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿ ಅಗ್ರಣಿಯಾಗಿ ಕೆಲಸ ಮಾಡುತ್ತಿದೆ. ಇದು ಅನುವಾದವನ್ನು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡುತ್ತದೆ" ಎಂದು ಸ್ಮಿತಾ ಖಟೋರ್ ಹೇಳುತ್ತಾರೆ. ಜ್ಞಾನದ ಉತ್ಪಾದನೆ ಮತ್ತು ಪ್ರಸಾರವು ಇಂಗ್ಲಿಷ್ ಶಿಕ್ಷಣ ಪಡೆದ, ಇಂಗ್ಲಿಷ್ ಮಾತನಾಡುವ ವರ್ಗಗಳ ಸವಲತ್ತುಗಳಾಗಿಯೇ ಉಳಿಯದಂತೆ ಇದು ನೋಡಿಕೊಳ್ಳುತ್ತದೆ. ಇದು ಬಹುಪಾಲು ಗ್ರಾಮೀಣರು ಇಂಗ್ಲಿಷ್ ಭಾಷೆಯಿಂದ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಬದುಕುತ್ತಿರುವ ಸಂಧರ್ಭದಲ್ಲಿ ಬಹಳ ಮುಖ್ಯವೆನ್ನಿಸುತ್ತದೆ.”
ನಮ್ಮ ಭಾಷಾ ಸಂಪಾದಕರು ಮತ್ತು ಅನುವಾದಕರ ತಂಡವು ಆಗಾಗ ಪದಗಳ ಸಾಂಸ್ಕೃತಿಕ ಸಂದರ್ಭ, ನುಡಿಗಟ್ಟುಗಳ ಸೂಕ್ತತೆ ಇತ್ಯಾದಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಮೊನ್ನೆ ಅಂತಹದ್ದೇ ಒಂದು ದಿನ..
ಸ್ಮಿತಾ: ತೆಲಂಗಾಣದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕುರುಂಪುರಿ ಪಂಚಾಯತ್‌ನ ವಲಸೆ ಕಾರ್ಮಿಕರು ತಮ್ಮನು ನೋಡಿ ಖುಷಿಪಟ್ಟ ಬಗ್ಗೆ ಪುರುಷೋತ್ತಮ್ ಠಾಕೂರ್ ಅವರು ವರದಿಯೊಂದರಲ್ಲಿ ಬರೆದಿದ್ದು ನೆನಪಿದೆಯ? ಅವರಲ್ಲೊಬ್ಬ ವ್ಯಕ್ತಿ, ʼಬಹಳ ದಿನಗಳ ನಂತರ ಇವತ್ತು ಒಬ್ಬ ಒಡಿಯಾ ಭಾಷೆ ಮಾತನಾಡುವ ವ್ಯಕ್ತಿಯನ್ನು ಭೇಟಿಯಾದೆ. ನಿಮ್ಮನ್ನು ಕಂಡು ಬಹಳ ಖುಷಿಯಾಯ್ತು!ʼ ಎಂದಿದ್ದರು.”
ಮಹಾರಾಷ್ಟ್ರದ ಜ್ಯೋತಿ ಶಿನೋಲಿ ರಘು ಎಂಬ ವಲಸೆ ಕಾರ್ಮಿಕರ ಮಗುವಿನ ಬಗ್ಗೆ ಬರೆದ ಒಂದು ಲೇಖನದಲ್ಲಿ, ಶಿಕ್ಷಕರು ಮತ್ತು ಸ್ನೇಹಿತರು ತನಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುವ ಹೊಸ ಶಾಲೆಗೆ ಒಗ್ಗಿಕೊಳ್ಳುವುದು ಅವನ ಪಾಲಿಗೆ ದೊಡ್ಡ ಸವಾಲಾಗಿತ್ತು. ಅದೇ ಕತೆಯಲ್ಲಿ ಆ ಹುಡುಗನ ತಾಯಿ ಗಾಯತ್ರಿ ಹೇಳುವಂತೆ “ಕೇವಲ ಮೂರು ವಾರಗಳ ಕಾಲ ಚೈನ್ನೈನ ಶಾಲೆಯೊಂದಕ್ಕೆ ಹೋದ ಅವನು ಒಂದು ದಿನ ಅಳುತ್ತಾ ಮರಳಿದ್ದ. ಅಲ್ಲಿ ಅವನಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಜೊತೆಗೆ ಅಲ್ಲಿರುವವರು ತನ್ನೊಡನೆ ಒರಟಾಗಿ ನಡೆದುಕೊಳ್ಳುತ್ತಾರೆನ್ನುವ ಭಾವನೆ ಅವನಲ್ಲಿ ಮೂಡಿತ್ತು.”
ಗ್ರಾಮೀಣ ಭಾರತದ ಜನರಿಗೆ ಭಾಷಾ ಅಸ್ಮಿತೆ ನಿರ್ಣಾಯಕವಾದುದು, ವಿಶೇಷವಾಗಿ ಅವರು ಜೀವನೋಪಾಯವನ್ನು ಹುಡುಕಿಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಬೇಕಾಗಿ ಬಂದಾಗ.









