“ಹಮೇ ಪತಾ ಹಿ ನಹೀ ಹುಮಾರಾ ಬೇಟಾ ಏಕ್‌ದಮ್ ಕೈಸೆ ಮಾರಾ, ಕಂಪನಿ ನೆ ಹಮೇ ಬತಾಯಾ ಭಿ ನಹೀ [ನಮ್ಮ ಮಗ ಅಚಾನಕಾಗಿ ಹೇಗೆ ಸತ್ತ ಎಂಬುದೇ ನಮಗೆ ತಿಳಿದಿಲ್ಲ. ಈ ಬಗ್ಗೆ ಕಂಪನಿಯೂ ನಮಗೆ ಏನೂ ಹೇಳಲಿಲ್ಲ],” ಎಂದು ನೀಲಂ ಯಾದವ್ ಹೇಳುತ್ತಾರೆ.
ಸೋನಿಪತ್‌ನ ರಾಯ್ ಪಟ್ಟಣದ ಮನೆಯ ಒಳಗೆ ನಿಂತುಕೊಂಡಿರುವ 33 ವರ್ಷ ಪ್ರಾಯದ ಇವರು ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕಷ್ಟಪಡುತ್ತಿದ್ದರು. ಸುಮಾರು ಆರು ತಿಂಗಳ ಹಿಂದೆ ಇವರ ಬಾವನ ಮಗ ಸ್ಥಳೀಯ ಪುಡ್ ಫ್ಯಾಕ್ಟರಿಯೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. 27 ವರ್ಷ ಪ್ರಾಯದ ಇವರು ಆ ಫ್ಯಾಕ್ಟರಿಯ ಎಸಿ ರಿಪೇರಿ ಯೂನಿಟ್‌ನಲ್ಲಿ ಕೆಲಸ ಮಾಡುತ್ತಿದ್ದರು. 2007 ರಲ್ಲಿ ತಮ್ಮ ಮದುವೆಯಾದ ಮೇಲೆ ನೀಲಂ ಯಾದವ್‌ರವರೇ ಇವರನ್ನು ಬೆಳೆಸಿದ್ದರು.
ಜೂನ್ 29, 2023, ಕಡುಬಿಸಿಲಿನ ಆ ದಿನ ನೀಲಂ ಅವರ ನೆನಪಿನಲ್ಲಿ ಇನ್ನೂ ಹಾಗೆಯೇ ಇದೆ. ಅವರ ಇಬ್ಬರ ಹೆಣ್ಣು ಮಕ್ಕಳು, ಮಗ ಹಾಗೂ ಮಾವ ಶೋಭನಾಥ್ ಆಗಷ್ಟೇ ಮಧ್ಯಾಹ್ನದ ಊಟ ಮುಗಿಸಿದ್ದರು. ಸಾಮಾನ್ಯವಾಗಿ ನೀಲಂ ಮಧ್ಯಾಹ್ನದ ಊಟಕ್ಕೆ ದಾಲ್ ಬಾತ್ (ಬೇಳೆ ಸಾರು ಮತ್ತು ಅನ್ನ) ಮಾಡುತ್ತಾರೆ. ಊಟದ ನಂತರ ಶೋಭನಾಥ್ ಸ್ವಲ್ಪ ನಿದ್ದೆ ಮಾಡೋಣವೆಂದು ಸಿದ್ಧವಾಗುತ್ತಿದ್ದರೆ, ನೀಲಂ ಅಡುಗೆಮನೆ ಶುಚಿಗೊಳಿಸುತ್ತಿದ್ದರು.
ಗಂಟೆ ಸುಮಾರು ಒಂದು ಆಗಿರಬಹುದು, ಡೋರ್ ಬೆಲ್ ರಿಂಗ್ ಆಯ್ತು. ನೀಲಂ ತಮ್ಮ ಕೈಗಳನ್ನು ತೊಳೆದು, ದುಪ್ಪಟದಿಂದ ಒರಸಿಕೊಂಡು ಯಾರು ಬಂದಿದ್ದಾರೆ ಎಂದು ನೋಡಲು ಬಾಗಿಲ ಬಳಿ ಬಂದರು. ಇಬ್ಬರು ನೀಲಿ ಯೂನಿಫಾರ್ಮ್ ಧರಿಸಿದ ವ್ಯಕ್ತಿಗಳು ಬೈಕ್ ಕೀಗಳ ಜೊತೆಗೆ ಆಟವಾಡುತ್ತಾ ನಿಂತಿದ್ದರು. ಅವರನ್ನು ನೋಡಿಯೇ ಅವರು ರಾಮ್ ಕಮಲ್ ಕೆಲಸ ಮಾಡುವ ಕಂಪನಿಯವರು ಎಂಬುದು ನೀಲಂ ಅವರಿಗೆ ತಿಳಿಯಿತು. ಅವರಲ್ಲಿ ಒಬ್ಬ, “ರಾಮ್‌ಗೆ ಕರೆಂಟ್ ಶಾಕ್ ಹೊಡೆದಿದೆ. ಸಿವಿಲ್ ಆಸ್ಪತ್ರೆಗೆ ಈಗಲೇ ಬನ್ನಿ,” ಎಂದ.
“ಅವನು ಹೇಗಿದ್ದಾನೆ. ಏನೂ ಆಗಿಲ್ಲ ತಾನೇ ಎಂದು ಕೇಳುತ್ತಲೇ ಇದ್ದೆ. ಅವರು ಇಲ್ಲ ಎಂದು ಹೇಳಿದರು,” ಎಂದು ಹೇಳುವಾಗ ನೀಲಂ ಅವರ ಗಂಟಲು ಕಟ್ಟಿತು. ಆಗ ಅವರು ಮತ್ತು ಶೋಭನಾಥ್‌ರವರು ಪಬ್ಲಿಕ್ ಟ್ರಾನ್ಸ್‌ಫೋರ್ಟ್‌ಗೆ ಕಾಯದೆ, ಆ ಇಬ್ಬರಿಗೆ ಅವರ ಬೈಕಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡರು. ಆಸ್ಪತ್ರಗೆ ತಲುಪಲು ಸುಮಾರು ಇಪ್ಪತ್ತು ನಿಮಿಷ ಬೇಕಾಯ್ತು.











