ಇಂತಹದ್ದೊಂದು ಸೂರ್ಯಾಸ್ತವನ್ನು ನೋಡುವ ಬಯಕೆ ರಂದಾವನಿ ಸುರ್ವಾಸೆಯವರಿಗೆ ಎಂದೂ ಇದ್ದಿರಲಿಲ್ಲ. ತನ್ನ ಒಂದು ಕೋಣೆಯ ಅಡುಗೆ ಮನೆಯ ಹೊರಗೆ ಕುಳಿತ ಅವರು ಮುಖದ ಮೇಲೆ ನೋವಿನ ನಗೆಯನ್ನು ಹೊತ್ತು ಬೀದಿ ದೀಪಗಳ ಬೆಳಕಿಗೆ ದಾರಿ ಮಾಡಿಕೊಡುತ್ತಿದ್ದ ರವಿಕಿರಣಗಳ ಕಡೆಗೆ ಗಮನವನ್ನು ನೆಟ್ಟಿದ್ದರು. “ನನ್ನ ಪತಿ ಇಲ್ಲಿ ಕುಳಿತು ತನ್ನ ನೆಚ್ಚಿನ ಅಭಂಗಗಳನ್ನು ಹಾಡುತ್ತಿದ್ದ ಸ್ಥಳವಿದು” ಎಂದು ಅವರು ಹೇಳಿದರು.
ಪ್ರಭಾಕರ ಸುರವಾಸೆ ವಿಠ್ಠಲ, ಅಭಂಗ ಭಕ್ತಿಗೀತೆಗಳನ್ನು ಹಾಡುತ್ತಾ ಕಾಲ ಕಳೆಯುತ್ತಿದ್ದರು. ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಅಂದಿನಿಂದ, ಪ್ರಭಾಕರ್ ಬೀಡ್ ಜಿಲ್ಲೆಯ ಪಾರ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಪ್ರತಿದಿನ ಸಂಜೆ ಭಜನೆಗಳನ್ನು ಹಾಡಿ ಸುತ್ತಮುತ್ತಲಿನ ಜನರನ್ನು ಸಂತೋಷಪಡಿಸುತ್ತಿದ್ದರು.
ಇದು 9ನೇ ಏಪ್ರಿಲ್ 2021ರವರೆಗೆ ಹೀಗೆ ಮುಂದುವರೆದಿತ್ತು. ಇದರ ನಂತರ ಕೋವಿಡ್-19 ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು.
ಎರಡು ದಿನಗಳ ನಂತರ ಅವರನ್ನು ಇಲ್ಲಿಂದ 25 ಕಿ.ಮೀ ಅಂಬಾಜೋಗಿಯ ಸ್ವಾಮಿ ರಮಾನಂದತೀರ್ಥ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು 10 ದಿನಗಳ ನಂತರ ಉಸಿರಾಟದ ತೊಂದರೆಯಿಂದ ನಿಧನರಾದರು.
ಅವರ ಸಾವು ಇದ್ದಕ್ಕಿದ್ದಂತೆ ಸಂಭವಿಸಿತು. "ನಾನು ಅವರಿಗೆ ಬೆಳಿಗ್ಗೆ 11.30ಕ್ಕೆ ಬಿಸ್ಕತ್ತುಗಳನ್ನು ತಿನ್ನಿಸಿದ್ದೆ" ಎಂದು ಅವರ ಸೋದರಳಿಯ ವೈದ್ಯನಾಥ್ ಸುರ್ವಾಸೆ ಹೇಳುತ್ತಾರೆ. 36 ವರ್ಷದ ವೈದ್ಯನಾಥ್ ಅವರು ಪಾರ್ಳಿಯಲ್ಲಿ ಚೈನೀಸ್ ತಿನಿಸುಗಳ ಗಾಡಿ ನಡೆಸುತ್ತಿದ್ದಾರೆ. “ಅವರು ಜ್ಯೂಸ್ ಕೂಡ ಕೇಳಿದರು. ನಾವು ಹರಟೆ ಹೊಡೆದೆವು. ಎಲ್ಲವೂ ಚೆನ್ನಾಗಿದೆ ಅನ್ನಿಸಿತ್ತು. ಆದರೆ ಮಧ್ಯಾಹ್ನ 1.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.”
ವೈದ್ಯನಾಥ್ ಆ ದಿನವೆಲ್ಲ ವಾರ್ಡಿನಲ್ಲೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ಆಮ್ಲಜನಕ ಪೂರೈಕೆಯಲ್ಲಿನ ಒತ್ತಡ ಇದ್ದಕ್ಕಿದ್ದ ಹಾಗೆ ಇಳಿಮುಖವಾಗತೊಡಗಿತು ಎಂದು ಅವರು ಹೇಳುತ್ತಾರೆ. ಅಲ್ಲಿಯವರೆ ಹರಟೆ ಹೊಡೆಯುತ್ತಾ ಗೆಲುವಿನಿಂದಿದ್ದ ಪ್ರಭಾಕರ್ ಉಸಿರಾಟಕ್ಕೆ ಹೆಣಗತೊಡಗಿದರು. “ನಾನು ಗಡಿಬಡಿಯಿಂದ ವೈದ್ಯರನ್ನು ಕರೆದೆ, ಆದರೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ “ ಎಂದು ವೈದ್ಯನಾಥ್ ಹೇಳುತ್ತಾರೆ. ಸ್ವಲ್ಪ ಹೊತ್ತು ಉಸಿರಾಡಲು ಕಷ್ಟಪಟ್ಟ ಅವರು ನಂತರ ನಿಧನರಾದರು. ನಾನು ಅವರ ಎದೆಯನ್ನು ಒತ್ತುವುದು, ಪಾದಗಳನ್ನು ಉಜ್ಜುವುದನ್ನು ಸಹ ಮಾಡಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ.”









