ಅನಿಲ್ ನರ್ಕಂಡೆ ಅವರು ಪ್ರತಿ ಬಾರಿಯಂತೆ ಈ ಮದುವೆಯ ಮಂಟಪವನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಈ ಕಥೆಗೊಂದು ತಿರುವು ಸಿಗುವ ಬಗ್ಗೆ ತಿಳಿದಿರಲಿಲ್ಲ!
ಭಂಡಾರದ ಅಲೆಸೂರು ಗ್ರಾಮದಲ್ಲಿ ಮದುವೆ ಮಂಟಪ ಅಲಂಕಾರ ಮತ್ತು ಮ್ಯೂಸಿಕ್ ಸಿಸ್ಟಂ ಬಾಡಿಗೆ ನೀಡುವ 36 ವರ್ಷದ ಈ ರೈತ, ಪಕ್ಕದ ಹಳ್ಳಿಯೊಂದರ ಮದುವೆಯಲ್ಲಿ ದೊಡ್ಡದಾದ ಹಳದಿ ಶಾಮಿಯಾನವನ್ನು (ಮಾರ್ಕ್ಯೂ) ಹಾಕಿ, ಹತ್ತಾರು ಪ್ಲಾಸ್ಟಿಕ್ ಹೂವುಗಳಿಂದ ಮಂಟಪವನ್ನು ಅಲಂಕರಿಸಿದ್ದರು. ಅತಿಥಿಗಳಿಗಾಗಿ ಕುರ್ಚಿಗಳನ್ನು; ವಧು ಮತ್ತು ವರನಿಗೆ ಗಾಢ-ಕೆಂಪು ಬಣ್ಣದ ವಿಶೇಷ ಸೋಫಾವನ್ನು ಹಾಕಿಸಿದ್ದರು. ಮದುವೆಗೆ ಬೇಕಾದ ಮ್ಯೂಸಿಕ್ ಸಿಸ್ಟಂ ಮತ್ತು ಬೆಳಿಕಿಗಾಗಿ ಡಿಜೆ ಉಪಕರಣಗಳು ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಿದ್ದರು.
ವರನ ಸಾಧಾರಣ ಮಣ್ಣು ಮತ್ತು ಇಟ್ಟಿಗೆಯ ಮನೆಗೆ ಮದುವೆಯ ಕಳೆ ಬಂದಿತ್ತು. ವಧುವಿನ ಕಡೆಯ ದಿಬ್ಬಣ ಮಧ್ಯಪ್ರದೇಶದ ಸಿಯೋನಿಯಿಂದ ಸಾತ್ಪುರ ಬೆಟ್ಟಗಳ ಮೂಲಕ ವರನ ಮನೆಗೆ ಬರುತ್ತಿತ್ತು.
ಮದುವೆಯ ಹಿಂದಿನ ದಿನದಂದು ಈ ಸಾಮಾನುಗಳೆಲ್ಲಾ ದಕ್ಷಿಣಕ್ಕೆ ಹೋಗಿತ್ತು ಎಂದು ಅನಿಲ್ ಹೇಳುತ್ತಾರೆ. ಇವರು ಬೇಸಿಗೆಯ ಮದುವೆಯ ಸೀಸನ್‌ನಲ್ಲಿ ತಮ್ಮ ವ್ಯಾಪಾರ ಹೆಚ್ಚುವುದನ್ನು ಎದುರು ನೋಡುತ್ತಿದ್ದರು. ಅಲ್ಲಿ ನಡೆಯಬೇಕಾಗಿದ್ದ ಮದುವೆಗೆ ಒಂದು ದಿನ ಮೊದಲು, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷ ಪ್ರಾಯದ ವರ ಓಡಿಹೋಗಿದ್ದ.
"ಅವನು ತನ್ನ ತಂದೆ ತಾಯಿಗೆ ಫೋನ್ ಮಾಡಿ ಮದುವೆಯನ್ನು ನಿಲ್ಲಿಸದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳಿದ್ದ. ಅವನಿಗೆ ಬೇರೆ ಯಾರದೋ ಮೇಲೆ ಇಷ್ಟ ಇತ್ತು," ಎಂದು ಅನಿಲ್ ನೆನಪಿಸಿಕೊಳ್ಳುತ್ತಾರೆ.
ಮದುವೆಯನ್ನು ನಿಲ್ಲಿಸುವ ಹೊತ್ತಿಗೆ, ವಧುವಿನ ಕಡೆಯ ದಿಬ್ಬಣ ಆಗಾಗಲೇ ಬಂದಾಗಿತ್ತು. ಮದುವೆ ಸಂಭ್ರಮವಾಗಬೇಕಾಗಿದ್ದ ಆ ಕ್ಷಣ ಹುಡುಗನ ಹೆತ್ತವರಿಗೆ ಮತ್ತು ಇಡೀ ಹಳ್ಳಿಗೆ ದೊಡ್ಡ ಮುಜುಗರವನ್ನು ತಂದಿತ್ತು.
ವರನ ತಂದೆ ಅನಿಲ್ ಅವರಿಗೆ ಡೆಕೋರೇಷನ್ ಕೆಲಸದ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.








