ಒಂದು ಮಧ್ಯಾಹ್ನ ಅಶೋಕ್ ತಾಂಗ್ಡೆ ಸುಮ್ಮನೆ ಕುಳಿತು ತನ್ನ ಫೋನ್ ಸ್ಕ್ರಾಲ್ ಮಾಡುತ್ತಿರುವ ವೇಳೆ ಅವರಿಗೊಂದು ವಾಟ್ಸಾಪ್ ನೋಟಿಫಿಕೇಷನ್ ಬಂತು. ಅದೊಂದು ಡಿಜಿಟಿಟಲ್ ಮದುವೆ ಕಾಗದವಾಗಿತ್ತು. ಅದರಲ್ಲಿದ್ದ ಸಣ್ಣ ವಯಸ್ಸಿನ ಮದುವೆ ಹೆಣ್ಣು ಮತ್ತು ಗಂಡು ಇಬ್ಬರೂ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಪರಸ್ಪರ ನೋಡುತ್ತಿದ್ದರು. ಕಾಗದದಲ್ಲಿ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರವೂ ಇತ್ತು.
ಆದರೆ ಆ ಮದುವೆ ಕಾಗದ ತಾಂಗ್ಡೆಯವರನ್ನು ಮದುವೆಗೆ ಆಹ್ವಾನಿಸಿ ಕಳುಹಿಸಿದ್ದಾಗಿರಲಿಲ್ಲ.
ಅವರಿಗೆ ಆ ಆಹ್ವಾನ ಪತ್ರಿಕೆಯನ್ನು ಪಶ್ಚಿಮ ಭಾರತದ ಆ ಜಿಲ್ಲೆಯ ಮಾಹಿತಿದಾರರೊಬ್ಬರು ಕಳುಹಿಸಿದ್ದರು. ಮುದವೆ ಕಾಗದದ ಜೊತೆಗೆ ಅವರು ಜನ್ಮ ಪ್ರಮಾಣಪತ್ರವನ್ನು ಸಹ ಕಳುಹಿಸಿದ್ದರು. ಅದರ ಪ್ರಕಾರ ಹುಡುಗಿಯ ವಯಸ್ಸು 17. ಕಾನೂನಿನ ದೃಷ್ಟಿಯಲ್ಲಿ ಅವಳು ಅಪ್ರಾಪ್ತೆ.
ಆಹ್ವಾನ ಪತ್ರಿಕೆ ಓದುತ್ತಿದ್ದಂತೆ 58 ವರ್ಷದ ತಾಂಗ್ಡೆಯವರಿಗೆ ಮದುವೆಗೆ ಇನ್ನು ಒಂದು ಗಂಟೆಯಷ್ಟೇ ಬಾಕಿಯಿದೆ ಎನ್ನುವುದು ತಿಳಿಯಿತು. ಅವರು ಕೂಡಲೇ ತನ್ನ ಜೊತೆಗಾರ ತತ್ವಶೀಲ್ ಕಾಂಬ್ಳೆ ಅವರಿಗೆ ಫೋನ್ ಮಾಡಿದರು. ನಂತರ ಕೂಡಲೇ ಕಾರಿನಲ್ಲಿ ಇಬ್ಬರೂ ಹೊರಟರು.
“ಮದುವೆ ನಡೆಯುವ ಸ್ಥಳ ನಮ್ಮ ಬೀಡ್ ನಗರದಿಂದ ಸುಮಾರು ಅರ್ಧ ಗಂಟೆಯಷ್ಟು ದೂರದಲ್ಲಿತ್ತು” ಎಂದು ಜೂನ್ 2023ರ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. “ನಾವು ಹೆಚ್ಚು ಸಮಯ ವ್ಯರ್ಥವಾಗದಂತೆ ತಡೆಯಲು ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಮತ್ತು ಗ್ರಾಮ ಸೇವಕರಿಗೆ ಮದುವೆ ಕಾಗದವನ್ನು ವಾಟ್ಸಾಪ್ ಮೂಲಕ ಕಳುಹಿಸಿದೆವು.”
ತಾಂಗ್ಡೆ ಮತ್ತು ಕಾಂಬ್ಳೆ ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿದ್ದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕರ್ತರಾಗಿ (ವಿಷಲ್ ಬ್ಲೋವರ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಹೋರಾಟದ ಹಾದಿಗೆ ಸಹಾಯವಾಗಿ ಅವರ ಹಿಂದೆ ವ್ಯಾಪಕ ಶ್ರೇಣಿಯ ಮಾಹಿತಿದಾರರ ದಂಡಿದೆ; ವಧುವಿನ ಮೇಲೆ ಒಲವು ಹೊಂದಿರುವ ಹಳ್ಳಿಯ ಹುಡುಗನಿಂದ ಹಿಡಿದು ಶಾಲಾ ಶಿಕ್ಷಕ ಅಥವಾ ಸಾಮಾಜಿಕ ಕಾರ್ಯಕರ್ತರವರೆಗೆ, ಬಾಲ್ಯ ವಿವಾಹವು ಅಪರಾಧ ಎನ್ನುವ ಅರಿವಿರುವ ಎಲ್ಲರೂ ಇವರ ಪಾಲಿಗೆ ಮಾಹಿತಿದಾರರು. ಅವರು ತಮ್ಮ ಈ ಪ್ರಯಾಣದಲ್ಲಿ ಜಿಲ್ಲೆಯಾದ್ಯಂತ 2,000ಕ್ಕೂ ಹೆಚ್ಚು ಮಾಹಿತಿದಾರರ ಜಾಲವನ್ನು ಬೆಳೆಸಿಕೊಂಡಿದ್ದಾರೆ. ಈ ಮಾಹಿತಿದಾರರೇ ಇವರಿಗೆ ಮದುವೆಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತಾರೆ.












