ಡಿಸೆಂಬರ್ 7, 2023 ರಂದು, ನಮ್ಮ ಸಹ ಅನುವಾದಕ, ಕವಿ, ಬರಹಗಾರ, ಶೈಕ್ಷಣಿಕ, ಅಂಕಣಕಾರ ಮತ್ತು ಪ್ಯಾಲೆಸ್ಟೈನ್ ಕಾರ್ಯಕರ್ತ ಗಾಜಾದಲ್ಲಿ ನಡೆಯುತ್ತಿರುವ ನರಮೇಧದಲ್ಲಿ ಬಾಂಬ್ ದಾಳಿಗೆ ಬಲಿಯಾದರು. ಆದರೆ ಅವರ ದನಿಯನ್ನು ಮೌನಗೊಳಿಸಿದ ದಿನದಂದೇ ಅವರು ಬರೆದ ಕವಿತೆಯೊಂದು ಜಗತ್ತಿನಾದ್ಯಂತ ಹತ್ತು ಹಲವು ಭಾಷೆಗಳಲ್ಲಿ ಪ್ರತಿಧ್ವನಿಸಿತು.
ಇಂತಹ ಜಗತ್ತಿನಲ್ಲಿ, ಇಂತಹ ದುರಿತ ಕಾಲದಲ್ಲಿ ನಾವು ಪರಿಯ ಈ ವೇದಿಕೆಯಲ್ಲಿ ಭಾಷೆಗಳ ಜಗತ್ತಿನಲ್ಲಿ ನಾವು ಮಾಡುತ್ತಿರುವ ಕೆಲಸಗಳ ಹಿನ್ನೋಟವೊಂದನ್ನು ನೋಡುವ ಪ್ರಯತ್ನವೇ ಈ ಲೇಖನ! ಮೊದಲಿಗೆ ರೆಫಾತ್ ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮ ಭಾಷಾ ಜಗತ್ತಿನ ಕಡೆಗೆ ಹೊರಳುತ್ತೇವೆ.
ನಮ್ಮ ಹೋರಾಟವನ್ನು ಹೊರಜಗತ್ತಿಗೆ ತಲುಪಿಸಲು ಇರುವ ಏಕೈಕ ಸಶಕ್ತ ಆಯುಧವೆಂದರೆ ಅದು ಭಾಷೆ. ಪದಗಳು ನಮ್ಮ ಅತ್ಯಮೂಲ್ಯ ನಿಧಿಯಾಗಿದ್ದು, ನಮ್ಮಲ್ಲಿ ಅರಿವು ಮೂಡಿಸಿಕೊಳ್ಳಲು ಮತ್ತು ಇತರರಿಗೆ ಅರಿವು ನೀಡಲು ನಾವು ಇದನ್ನು ಬಳಸಿಕೊಳ್ಳಬೇಕಿದೆ. ಮತ್ತು ಈ ಪದಗಳನ್ನು ಸಾಧ್ಯವಿರುವಷ್ಟು ಭಾಷೆಗಳಲ್ಲಿ ತಲುಪಿಸಬೇಕು. ಜನರ ಹೃದಯ ಮತ್ತು ಮನಸ್ಸನ್ನು ತನ್ನಿಂದ ಸಾಧ್ಯವಿರುವಷ್ಟು ಸ್ಪರ್ಶಿಸುವ ಭಾಷೆಯನ್ನು ನಾನು ನಂಬುತ್ತೇನೆ ... ಅನುವಾವೆನ್ನುವುದು ಮಾನವ ಜಗತ್ತು ಕಂಡುಕೊಂಡು ಒಂದು ಸಾಧ್ಯತೆ. ಅನುವಾದವು ಜನರ ನಡುವಿನ ಅಡೆತಡೆಗಳನ್ನು ಮುರಿಯುತ್ತದೆ ಮತ್ತು ಅವರ ನಡುವೆ ಸೇತುವೆಯೊಂದನ್ನು ನಿರ್ಮಿಸುತ್ತದೆ ಮತ್ತು ತಿಳುವಳಿಕೆಯನ್ನು ಸೃಷ್ಟಿಸುತ್ತದೆ. ಆದರೆ ಅದೇ ಸಮಯಕ್ಕೆ "ಕೆಟ್ಟ" ಅನುವಾದಗಳು ತಪ್ಪು ತಿಳುವಳಿಕೆಗಳನ್ನು ಸಹ ಸೃಷ್ಟಿಸಬಲ್ಲವು.
ಜನರನ್ನು ಒಟ್ಟುಗೂಡಿಸುವ ಮತ್ತು ಹೊಸ ಅರಿವನ್ನು ಮೂಡಿಸುವಲ್ಲಿ ಅನುವಾದಕ್ಕಿರುವ ಸಾಮರ್ಥ್ಯದ ಮೇಲಿನ ನಂಬಿಕೆಯೇ ಪರಿಭಾಷಾ ವಿಭಾಗದ ಕೆಲಸಗಳ ಹೃದಯಭಾಗ.
ಮತ್ತು ಈ ವರ್ಷ ಎಂದರೆ 2023ನೇ ಇಸವಿ ನಮ್ಮ ಮಟ್ಟಿಗೆ ಬಹಳ ಮಹತ್ವಪೂರ್ಣ ವರ್ಷವಾಗಿತ್ತು.
ನಾವು ನಮ್ಮ ಭಾಷಾ ಕುಟುಂಬಕ್ಕೆ ಛತ್ತೀಸಗಢಿ ಮತ್ತು ಭೋಜಪುರಿ ಭಾಷೆಗಳನ್ನು ಸೇರಿಸಿಕೊಂಡೆವು. ಈಗ ಪರಿ ಪ್ರಕಟಿಸುತ್ತಿರುವ 14 ಭಾಷೆಗಳ ಪಟ್ಟಿಯಲ್ಲಿ ಇವೆರಡು ಭಾಷೆಗಳೂ ಸೇರಿಕೊಂಡಿವೆ.
ಇದರೊಂದಿಗೆ ನಮಗೆ ಇನ್ನೂ ಒಂದು ಕಾರಣಕ್ಕಾಗಿ ಈ ವರ್ಷ ಬಹಳ ಮಹತ್ವವೆನ್ನಿಸುತ್ತದೆ. ಅದಕ್ಕೆ ಕಾರಣ ಪರಿಭಾಷಾ ಎನ್ನುವ ಹೆಸರು ಸಹ ಈ ವರ್ಷ ಮುನ್ನೆಲೆಗೆ ಬಂತು. ನಾವು ಈ ಹೆಸರಿನಡಿ ಇಂಗ್ಲಿಷ್ ಬರಹಗಳನ್ನು ಅನುವಾದಿಸುವುದರ ಜೊತೆಜೊತೆಗೆ ನಾವು ಮಾಡುವ ಕೆಲಸವು ಪರಿಯನ್ನು ಬಹು ಭಾಷಾ ವೇದಿಕೆಯನ್ನಾಗಿಸಿದೆ. ಇದು ಎಲ್ಲರನ್ನೂ ಒಳಗೊಳ್ಳುವ ನಮ್ಮ ಗ್ರಾಮೀಣ ಪತ್ರಿಕೋದ್ಯಮದ ಹಾದಿಯಲ್ಲಿ ದೊಡ್ಡ ಮೈಲಿಗಲ್ಲು.
ನಾವು ಜನಸಾಮಾನ್ಯರ ಬದುಕಿನಲ್ಲಿ ಮಾತು ಮತ್ತು ಭಾಷೆಗಿರುವ ಸ್ಥಾನ ಎಂತಹದ್ದು ಎನ್ನುವುದರ ಅನ್ವೇಷಣೆಯನ್ನು ಈಗಲೂ ಮುಂದುವರೆಸಿದ್ದೇವೆ. ನಾವು ಇದನ್ನು ಅನುವಾದ ಮತ್ತು ಭಾಷೆಗಳ ಸುತ್ತಲಿನ ನಮ್ಮ ವರದಿಗಳು ಮತ್ತು ಮಾತುಕತೆಗಳ ಮೂಲಕ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಪರಿಯ ಒಟ್ಟಾರೆ ಕೆಲಸದಲ್ಲಿ ನಮ್ಮ ಸ್ಥಾನವಿದು.
ಪರಿಯೊಳಗಿನ ವಿವಿಧ ತಂಡಗಳ ನಡುವಿನ ಉತ್ತಮ ವ್ಯವಸ್ಥೆ ಮತ್ತು ಸಮನ್ವಯವು ನಮಗೆ ವರದಿ, ಲೇಖನಗಳನ್ನು ನಮ್ಮ ಭಾಷೆಯಲ್ಲಿ ಸರಿಯಾಗಿ ಮತ್ತು ನಿಖರವಾಗಿ ಅನುವಾದಿಸಲು ಸಹಾಯ ಮಾಡುತ್ತದೆ. ಇದು ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಪ್ರತಿವಾರ ಹಲವಾರು ವರದಿಗಳನ್ನು ನಮ್ಮ ನಮ್ಮ ಭಾಷೆಗಳಲ್ಲಿ ಪ್ರಕಟಿಸಲು ಸಹಾಯ ಮಾಡುತ್ತದೆ. ಸ್ಥಳೀಯ ಭಾಷೆಗಳಲ್ಲಿನ ಪದಗಳನ್ನು ಸರಿಯಾಗಿ ಅರಿತುಕೊಳ್ಳಲು ಆಡಿಯೋ ಫೈಲ್‌ಗಳು, ಫೋಟೊಗಳ ಶೀರ್ಷಿಕೆಗಳನ್ನು ಅರ್ಥ ಮಾಡಿಕೊಳ್ಳಲು ವರದಿಯೊಂದಿಗೆ ಫೋಟೊಗಳಿರುವ ವರದಿ ಪಿಡಿಎಫ್ ರೂಪದ ಹಸ್ತಪ್ರತಿಗಳು ನಮ್ಮ ಅನುವಾದಕ್ಕೆ ಮತ್ತು ಅದರಲ್ಲಿನ ಭಾಷಾ ಬಳಕೆಗೆ ಹೊಸ ಆಯಾಮವನ್ನು ಕಲ್ಪಿಸುತ್ತವೆ. ಪರಿಭಾಷಾ ತಂಡದ ಮುಖ್ಯ ಉದ್ದೇಶವೆಂದರೆ ಹೊಸ ಭಾಷೆಯಲ್ಲಿ ಮೂಲ ಲೇಖನವನ್ನು ಅದರ ಪೂರ್ಣ ಜೀವದೊಂದಿಗೆ ತರುವುದು, ಮತ್ತು ಎರಡು ಭಾಷೆಗಳ ನಡುವಿನ ಅನುವಾದದಲ್ಲಿ ಬರಹ ಸಾರ ಕಳೇದು ಹೋಗದಂತೆ ನೋಡಿಕೊಳ್ಳುವುದು. ಇದಕ್ಕಾಗಿ ನಾವು ನಮ್ಮ ಡೆಸ್ಕಿನೆದುರು ಕುಳಿತು ಹಲವು ಬಾರಿ ಅಳಿಸಿ ಬರೆಯುತ್ತೇವೆ, ಕರಡು ತಿದ್ದುತ್ತೇವೆ.
ಪರಿಭಾಷಾ ವಿಭಾಗವು ಜನ ಬಳಕೆಯಲ್ಲಿರುವ ಇಂಗ್ಲಿಷ್ ಪದಗಳನ್ನು ನಿಖರವಾಗಿ ಅನುವಾದಿಸುವ ಮೂಲಕ ಅದರ ಸೊಗಡನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಕಿರುಚಿತ್ರಗಳ ಸಬ್ ಟೈಟಲ್ಲುಗಳನ್ನು ನೋಡುವುದು, ಅಥವಾ ಲೇಖನದಲ್ಲಿ ಸ್ಥಳೀಯ ಪದಗಳು/ಉಲ್ಲೇಖಗಳನ್ನು ಪರಿಶೀಲಿಸುವುದು, ಸ್ಥಳೀಯ ಜನರ ಧ್ವನಿಯಲ್ಲಿರುವ ಇಂಗ್ಲೀಷ್ ಭಾಷೆಯಲ್ಲಿನ ಸೊಗಡನ್ನು ಅದು ಇರುವಂತೆಯೇ ಉಳಿಸಿಕೊಂಡು ಭಾಷಾ ವೈಶಿಷ್ಟ್ಯಕ್ಕೆ ಅಧಿಕೃತತೆ ಕೊಡುವ ಪ್ರಯತ್ನವನ್ನು ಸಹ ನಾವು ಮಾಡುತ್ತೇವೆ.
ಉತ್ತಮ ಮತ್ತು ಸಮಯೋಚಿತ ಅನುವಾದಗಳು, ಸ್ಥಳ ಭಾಷೆಗೆ ಆದ್ಯತೆ ಮತ್ತು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಲಭ್ಯವಿರುವ ಡಿಜಿಟಲ್ ವಿಷಯದ ಓದುಗರ ಸಂಖ್ಯೆಯ ಹೆಚ್ಚಳವು ನಮ್ಮ ಅನುವಾದಿತ ಕಥೆಗಳಿಗೆ ವೇಗವನ್ನು ನೀಡಿದೆ ಮತ್ತು ವಾಸ್ತವಿಕ ಪರಿಣಾಮ ಬೀರಿದೆ.
ಸ್ಮಿತಾ ಖಟೋರ್ ಅವರ ಮಹಿಳಾ ಬೀಡಿ ಕಾರ್ಮಿಕರ ಆರೋಗ್ಯದ ಕುರಿತಾ ವರದಿಯ ಬಾಂಗ್ಲಾ ಆವೃತ್ತಿ: ঔদাসীন্যের ধোঁয়াশায় মহিলা বিড়ি শ্রমিকদের স্বাস্থ্য , ಇದರ ಪರಿಣಾಮವಾಗಿ ಕಾರ್ಮಿಕರ ವೇತನದಲ್ಲಿ ಹೆಚ್ಚಳವಾಯಿತು. ಅಂತೆಯೇ ಪ್ರೀತಿ ಡೇವಿಡ್ ವರದಿ ಮಾಡಿದ ಜೊತೆಗೆ ಊರ್ಜಾ ಅವರ ವೀಡಿಯೊ ಹೊಂದಿದ್ದ Jaisalmer: gone with the windmills ಎನ್ನುವ ವರದಿಯ ಪ್ರಭಾತ್ ಮಿಲಿಂದ್ ಅವರ जैसलमेर : पवनचक्कियों की बलि चढ़ते ओरण ಹಿಂದಿ ಅನುವಾದವನ್ನು ಸ್ಥಳೀಯರು ಪ್ರತಿಭಟನೆಯಲ್ಲಿ ಬಳಸಿಕೊಂಡರು ಇದು ಸರ್ಕಾರವು ಡೇಗ್ರೆ ಎನ್ನುವಲ್ಲಿನ ಸಾರ್ವಜನಿಕ ಭೂಮಿಯನ್ನು (ಒರಾಣ್) ಮತ್ತೆ ಜನರಿಗೇ ಮರಳಿಸಲು ಕಾರಣವಾಯಿತು. ಇವು ನಮ್ಮ ಕೆಲಸದ ಪರಿಣಾಮದ ಕೆಲವು ಉದಾಹರಣೆಗಳು ಮಾತ್ರ.
ಪರಿಯಲ್ಲಿ ಪ್ರಕಟಗೊಂಡ ಅನೇಕ ಅನುವಾದಿತ ಲೇಖನಗಳು ಪ್ರಾದೇಶಿಕ ಸುದ್ದಿ ತಾಣಗಳು ಮತ್ತು ಪತ್ರಿಕೆಗಳಾದ ಭೂಮಿಕಾ, ಮಾತೃಕಾ, ಗಣಶಕ್ತಿ, ದೇಶ್ ಹಿತೈಷಿ, ಪ್ರಜಾವಾಣಿ ಮುಂತಾದವು ಮರುಪ್ರಕಟಿಸಿವೆ. ಮಹಿಳೆಯರ ಬದುಕಿನ ಪ್ರಶ್ನೆಗಳಿಗೆ ಮೀಸಲಾಗಿರುವ ಮರಾಠಿ ಪತ್ರಿಕೆ ಮಿಲೂನ್ ಸರ್ಯಾಜನಿ ಪರಿ ಕುರಿತು ಪರಿಚಯಾತ್ಮಕ ಲೇಖನವೊಂದನ್ನು ಪ್ರಕಟಿಸಿದೆ. ಇದರೊಂದಿಗೆ ಈ ಪತ್ರಿಕೆಯು ಮುಂಬರುವ ದಿನಗಳಲ್ಲಿ ಪರಿ ವರದಿಗಳ ಮರಾಠಿ ಅವತರಣಿಕೆಯನ್ನು ಪ್ರಕಟಿಸಲಿದೆ.
ಪರಿಭಾಷಾ ವಿಭಾಗವು ತನ್ನ ನಿರಂತರತೆ ಮತ್ತು ಸೂಕ್ಷ್ಮತೆಯನ್ನು ಒಳಗೊಂಡ ಕೆಲಸದ ಶೈಲಿಯಿಂದಾಗಿ ಅನುವಾದ ಕ್ಷೇತ್ರದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗಳಿಸಿಕೊಂಡಿದೆ. ಇದು ವಿವಿಧ ಭಾಷೆಗಳನ್ನು ಬಳಸಿಕೊಂಡು ಹೊಸ ಸ್ಪೇಸ್ ರಚಿಸುವಲ್ಲಿ ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳಿಗೆ ಒಳನೋಟಗಳನ್ನು ಮತ್ತು ಬೆಂಬಲವನ್ನು ನೀಡಿದೆ.
ʼ ಪರಿ ಅನುವಾದ ʼ ದಿಂದ ʼ ಪರಿಭಾಷಾ ʼ ತನಕ
ಈ ವರ್ಷ ನಾವು ಭಾರತೀಯ ಭಾಷೆಗಳಲ್ಲಿ ಮೂಲ ಬರಹವನ್ನು ಬರೆಯಲು ಮತ್ತು ಅವುಗಳನ್ನೇ ಮುಖ್ಯ ಬರಹವನ್ನಾಗಿ ಪ್ರಕಟಿಸಲು ಪ್ರಾರಂಭಿಸಿದ್ದೇವೆ. ಇಂಗ್ಲಿಷ್ ಭಾಷೆಯಲ್ಲಿ ವರದಿಯನ್ನು ಸಂಪಾದಿಸುವ ಮೊದಲು ಮೂಲ ಭಾಷೆಯಲ್ಲಿ ಪ್ರಾಥಮಿಕ ಸಂಪಾದನೆಯನ್ನನು ಮಾಡುತ್ತಿದ್ದೇವೆ. ಭಾರತೀಯ ಭಾಷೆಗಳಲ್ಲಿ ಪ್ರಕಟವಾದ ವರದಿಗಳನ್ನು ಅದೇ ಭಾಷೆಯಲ್ಲಿ ಸಂಪಾದಿಸಿ ನಂತರ ಅದರ ಅಂತಿಮ ಆವೃತ್ತಿಯನ್ನು ಇಂಗ್ಲಿಷಿಗೆ ಅನುವಾದಿಸುವ ಸಾಮರ್ಥ್ಯವವನ್ನು ಹೊಂದುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಈ ನಿಟ್ಟಿನಲ್ಲಿ ಕೆಲವು ದ್ವಿಭಾಷಾ ಪರಿಣತ ಸಂಪಾದಕರು ಎರಡೂ ಭಾಷೆಗಳಲ್ಲಿ ಕೆಲಸ ಮಾಡುವ ಮೂಲಕ ಈಗಾಗಲೇ ಇದನ್ನು ಒಂದು ಮಟ್ಟಿಗೆ ಸಾಧ್ಯಗೊಳಿಸಲಾಗಿದೆ.
ಅನೇಕ ವರದಿಗಾರರು ತಮ್ಮ ಕಥೆಗಳು/ಸೃಜನಶೀಲ ಬರಹಗಳು ಅಥವಾ ಕಿರುಚಿತ್ರಗಳನ್ನು ಪರಿಯಲ್ಲಿ ಪ್ರಕಟಿಸುವ ಸಲುವಾಗಿ ಪರಿಭಾಷಾ ತಂಡದೊಂದಿಗೆ ಕೆಲಸ ಮಾಡಿದರು: ಜಿತೇಂದ್ರ ವಾಸವ, ಜಿತೇಂದ್ರ ಮೈದ್, ಉಮೇಶ್ ಸೋಲಂಕಿ, ಉಮೇಶ್ ರೇ, ವಾಜೇಸಿನ್ಹ ಪಾರ್ಗಿ, ಕೇಶವ್ ವಾಘ್ಮರೆ, ಜಯಸಿಂಗ್ ಚವಾಣ್, ತರ್ಪಣ್ ಸರ್ಕಾರ್, ಹಿಮಾದ್ರಿ ಮುಖರ್ಜಿ, ಸಯಾನ್ ಸರ್ಕಾರ್, ಲಬಾನಿ ಜಂಗಿ, ರಾಹುಲ್ ಸಿಂಗ್, ಶಿಶಿರ್ ಅಗರ್ವಾಲ್, ಪ್ರಕಾಶ್ ರಾನ್ಸಿಂಗ್, ಸವಿಕಾ ಅಬ್ಬಾಸ್, ವಹೀದುರ್ ರಹಮಾನ್, ಅರ್ಷ್ದೀಪ್ ಅರ್ಶಿ.
ಪರಿ ಎಜುಕೇಶನ್ ತಂಡವು ಪರಿಭಾಷಾ ಸಹಯೋಗದೊಂದಿಗೆ ಭಾರತೀಯ ಭಾಷೆಗಳಲ್ಲಿಯೂ ವಿದ್ಯಾರ್ಥಿಗಳು ಬರೆದ ಕಥೆಗಳನ್ನು ಪ್ರಕಟಿಸುತ್ತಿದೆ . ಇಂಗ್ಲಿಷ್ ಭಾಷೆಯ ಹಿನ್ನೆಲೆಯಿಲ್ಲದ ಯುವ ವರದಿಗಾರರು ತಮ್ಮ ಆಯ್ಕೆಯ ಭಾಷೆಯಲ್ಲಿ ಬರೆಯುತ್ತಿದ್ದಾರೆ, ಇದರೊಂದಿಗೆ ಅವರು ಪರಿಯೊಂದಿಗೆ ಕೈಜೋಡಿಸಿ ವರದಿ ಮಾಡುವ ಮತ್ತು ದಾಖಲೀಕರಣದ ಕೌಶಲಗಳನ್ನು ಕಲಿಯುವ ಭರವಸೆಯನ್ನು ನೀಡಿದ್ದಾರೆ. ಈ ಬರಹಗಳ ಅನುವಾದಗಳು ಅವರ ಬರಹಗಳನ್ನು ದೊಡ್ಡ ಸಂಖ್ಯೆಯ ಓದುಗರನ್ನು ತಲುಪುವಂತೆ ಮಾಡಿವೆ.
ಪರಿಭಾಷಾ ವಿಭಾಗದ ಒಡಿಯಾ ತಂಡವು ಪರಿಯಲ್ಲಿ ಆದಿವಾಸಿ ಮಕ್ಕಳು ಬಿಡಿಸಿದ ವರ್ಣಚಿತ್ರಗಳ ವಿಶಿಷ್ಟ ಸಂಗ್ರಹವನ್ನು ಅನುವಾದಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಈ ಯೋಜನೆಯನ್ನು ಒಡಿಯಾ ಭಾಷೆಯಲ್ಲಿ ವರದಿ ಮಾಡಲಾಗಿದೆ.
ಮಹಾರಾಷ್ಟ್ರದ ಬೀಸುಕಲ್ಲಿನ ಪದಗಳು ಮತ್ತು ಗುಜರಾತಿನ ಕಚ್ಛೀ ಹಾಡುಗಳಂತಹ ಪದ ಭಂಡಾರಗಳನ್ನು ಸಂಗ್ರಹಿಸುವಲ್ಲಿ ದೃಢ ನೆಲೆಯೊಂದನ್ನು ಗಳಿಸಿದೆ. ಇದರೊಂದಿಗೆ ಸುದ್ದಿತಾಣಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಅನೇಕ ಗುಂಪುಗಳು ಪ್ರಾದೇಶಿಕ ಭಾಷೆಗಳ ವಿಷಯದಲ್ಲಿ ಕೊಡುಗೆ ನೀಡಲು ಮತ್ತು ಸಹಯೋಗವನ್ನು ಬಯಸಿ ಪರಿಯನ್ನು ಸಂಪರ್ಕಿಸಿವೆ.
ಪರಿಯನ್ನು ಜನ ಭಾಷೆಯ ದಾಖಲೀಕರಣ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಪರಿಭಾಷಾ ಬದ್ಧವಾಗಿ ನಿಂತಿದೆ. ಮತ್ತು ಮುಂದಿನ ದಿನಗಳಲ್ಲಿ ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳನ್ನು ನೀವು ನೋಡಲಿದ್ದೀರಿ.
ಮುಖ್ಯಚಿತ್ರ ವಿನ್ಯಾಸ: ರಿಕ್ಕಿನ್ ಸಂಕ್ಲೇಚಾ
ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು [email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.
ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್ ಕ್ಲಿಕ್ ಮಾಡಿ.
ಅನುವಾದ: ಶಂಕರ. ಎನ್. ಕೆಂಚನೂರು