ಒಂದು ನಿಯಮಿತ ಗಾತ್ರದ ಪಶ್ಮಿನಾ ಶಾಲಿಗೆ ಬೇಕಾಗುವಷ್ಟು ದಾರವನ್ನು ನೇಯಲು ಫಹ್ಮೀದಾ ಬಾನೊ ಅವರಿಗೆ ಒಂದು ತಿಂಗಳಷ್ಟು ಸಮಯ ಬೇಕಾಗುತ್ತದೆ. ಜೇಡರ ಬಲೆಯ ಎಳೆಯಂತಹ ಚಾಂಗ್ತಂಗಿ ಮೇಕೆಯ ಉಣ್ಣೆಯನ್ನು ಬೇರ್ಪಡಿಸಿ ನೇಯುವುದು ಬಹಳ ಪ್ರಯಾಸಕರ ಮತ್ತು ಸೂಕ್ಷ್ಮ ಕೆಲಸವಾಗಿದೆ. 50 ವರ್ಷ ವಯಸ್ಸಿನ ಈ ಸೂಕ್ಷ್ಮ ಕುಶಲಕರ್ಮಿ ತಾನು ತಿಂಗಳಿಗೆ 1,000 ರೂಪಾಯಿ ದುಡಿಯುವ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ. “ದಿನವಿಡೀ ನಿರಂತರವಾಗಿ ದುಡಿದರೆ ದಿನವೊಂದಕ್ಕೆ 60 ರೂಪಾಯಿಗಳಷ್ಟನ್ನು ಗಳಿಸಬಹುದು” ಎಂದು ಅವರು ಹೇಳುತ್ತಾರೆ.

ಈ ಮೊತ್ತವು ಸೂಜಿ ಕಸೂತಿ ಕೆಲಸ ಮತ್ತು ನೇಯ್ದ ಮಾದರಿಗಳ ಜಟಿಲತೆಯನ್ನು ಅವಲಂಬಿಸಿ 8,000 ರೂ.ಗಳಿಂದ 1,00,000 ರೂ.ಗಳವರೆಗೆ ಬೆಲೆಬಾಳುವ ಶಾಲು ಮಾರಾಟವಾಗುವ ಬೆಲೆಯ ಅತ್ಯಲ್ಪ ಭಾಗವಾಗಿದೆ.

ಸಾಂಪ್ರದಾಯಿಕವಾಗಿ, ಪಶ್ಮಿನಾ ದಾರದ ನೂಲುವ ಕೆಲಸವನ್ನು ಮಹಿಳೆಯರು ಮನೆಕೆಲಸಗಳ ನಡುವೆ ಮಾಡುತ್ತಿದ್ದರು. ಫಹ್ಮೀದಾ ಅವರಂತಹ ಕುಶಲಕರ್ಮಿಗಳಿಗೆ ಸಿಗುತ್ತಿರುವ ಕಡಿಮೆ ವೇತನದ ಕಾರಣಕ್ಕೆ ಹೊಸಬರು ಈ ರಂಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಶ್ರೀನಗರದ ನಿವಾಸಿ ಫಿರ್ದೌಸಾ ಮದುವೆಗೆ ಮೊದಲು ಉಣ್ಣೆ ನೇಯುವ ಕೆಲಸ ಮಾಡುತ್ತಿದ್ದರು. ನಂತರ ಕುಟುಂಬ ಮತ್ತು ಮನೆಯ ಕೆಲಸಗಳಲ್ಲಿ ಅವರು ಕಳೇದು ಹೋದರು. ತನ್ನ ಯೌವನದ ದಿನಗಳನ್ನು ನೆನಪಿಸಿಕೊಳ್ಳುತ್ತಾ, “ಕುಟುಂಭದ ಹಿರಿಯರು ಕೆಲಸಕ್ಕೆ ಬಾರದ ಮಾತಿನಲ್ಲಿ ತೊಡಗುವ ಬದಲು ನಮ್ಮ ಮನಸ್ಸನ್ನು ಕೆಲಸದಲ್ಲಿ ಮಗ್ನವಾಗಿಸುವ ಇಂತಹ ಕೆಲಸಗಳಲ್ಲಿ ತೊಡಗಲು ಒತ್ತಾಯಿಸುತ್ತಿದ್ದರು” ಎಂದು ಅವರು ಹೇಳುತ್ತಾರೆ. ಅವರ ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು ತಮ್ಮ ಶಿಕ್ಷಣ ಮತ್ತು ಮನೆಕೆಲಸಗಳ ನಡುವೆ ಸಮಯ ಸಿಗದ ಕಾರಣ ನೂಲುವ ಕೆಲಸ ಮಾಡುತ್ತಿಲ್ಲ, ಜೊತೆಗೆ ಇದರಲ್ಲಿ ಅಷ್ಟು ಸಂಪಾದನೆಯೂ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣ.

ನೂಲುವುದು ಕಾಶ್ಮೀರಿ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಹೇಳುತ್ತಾ ಫಿರ್ದೌಸಾ, ಸ್ಥಳೀಯ ಖಾದ್ಯ, ನದ್ರು (ಕಮಲದ ದಂಟು) ಮತ್ತು ನೂಲುವಿಕೆಯ ನಡುವಿನ ಸಂಬಂಧವನ್ನು ಉಲ್ಲೇಖಿಸುತ್ತಾರೆ: "ಹಿಂದೆ ಮಹಿಳೆಯರು ಕಮಲದ ದಂಟಿನ ನಾರಿನಷ್ಟೇ ಉತ್ತಮವಾದ ದಾರವನ್ನು ನೇಯಲು ಪರಸ್ಪರ ಸ್ಪರ್ಧಿಸುತ್ತಿದ್ದರು." ಎಂದರು

Fahmeeda Bano usually takes a month to spin enough thread for a regular-sized pashmina shawl
PHOTO • Muzamil Bhat

ಸಾಮಾನ್ಯ ಗಾತ್ರದ ಪಶ್ಮಿನಾ ಶಾಲಿಗೆ ಸಾಕಾಗುವಷ್ಟು ದಾರವನ್ನು ನೂಲಲು ಫಹ್ಮೀದಾ ಬಾನೊ ಸಾಮಾನ್ಯವಾಗಿ ಒಂದು ತಿಂಗಳು ತೆಗೆದುಕೊಳ್ಳುತ್ತಾರೆ

Fahmeeda's mother-in-law, Khatija combines two threads together to make it more durable
PHOTO • Muzamil Bhat

ಫಹ್ಮೀದಾ ಅವರ ಅತ್ತೆ, ಖತೀಜಾ ನೂಲು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಎರಡು ಎಳೆಗಳನ್ನು ಒಟ್ಟಿಗೆ ಸಂಯೋಜಿಸುತ್ತಾರೆ

ಪಶ್ಮಿನಾ ಸಾಲು ನೇಯುವ ಕೆಲಸಕ್ಕೆ ನೂಲುವ ಕೆಲಸಕ್ಕಿಂತಲೂ ಹೆಚ್ಚು ಸಂಬಳ ಸಿಗುತ್ತದೆ ಮತ್ತು ಈ ಕೆಲಸವನ್ನು ಹೆಚ್ಚಿನ ಸಂಬಳ ಸಿಗುವ ಇತರ ಕೆಲಸಗಳನ್ನು ಮಾಡುವ ಪುರುಷರು ಮಾಡುತ್ತಾರೆ. ಇಂದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ, ಕೌಶಲರಹಿತ ಕಾರ್ಮಿಕರಿಗೆ ದಿನಕ್ಕೆ 311 ರೂ., ಅರೆ-ನುರಿತ ಕಾರ್ಮಿಕರಿಗೆ 400 ರೂ., ನುರಿತ ಕಾರ್ಮಿಕರಿಗೆ 480 ರೂ.ಗಳಷ್ಟು ವೇತನ ನಿರೀಕ್ಷಿಸಬಹುದು ಎಂದು ವೇತನದ ಕುರಿತಾದ 2022ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಂದು ಸಾಮಾನ್ಯ ಗಾತ್ರದ ಶಾಲು 140 ಗ್ರಾಂ ಪಶ್ಮಿನಾ ಉಣ್ಣೆಯನ್ನು ಹೊಂದಿರುತ್ತದೆ. ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಚಾಂಗ್ತಂಗಿ ಮೇಕೆಯ (ಕ್ಯಾಪ್ರಾ ಹಿರೆಕಸ್) 10 ಗ್ರಾಂ ಕಚ್ಚಾ ಪಶ್ಮಿನಾ ಉಣ್ಣೆಯನ್ನು ನೂಲುವ ಕೆಲಸ ಪೂರ್ಣಗೊಳಿಸಲು ಫಹ್ಮೀದಾರಿಗೆ ಸಾಮಾನ್ಯವಾಗಿ ಎರಡು ದಿನ ಬೇಕಾಗುತ್ತದೆ.

ಫಹ್ಮೀದಾ ತನ್ನ ಅತ್ತೆ ಖತೀಜಾ ಅವರಿಂದ ಈ ಪಶ್ಮಿನಾ ನೂಲುವ ಕಲೆಯನ್ನು ಕಲಿತರು. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಾದ ಶ್ರೀನಗರದ ಕೊಹಿ-ಮಾರನ್‌ ಎನ್ನುವಲ್ಲಿ ಈ ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ಒಂದೇ ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಖತೀಜಾ ತನ್ನ ಮನೆಯ 10×10 ಅಡಿ ಕೋಣೆಯಲ್ಲಿ ತನ್ನ ಯಿಂಡರ್ (ಚರಕ) ನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಕೋಣೆಯನ್ನು ಅಡುಗೆಮನೆಯಾಗಿ ಬಳಸಲಾಗುತ್ತದೆ ಮತ್ತು ಇನ್ನೊಂದು ಪಶ್ಮಿನಾ ನೇಯ್ಗೆ ಕೆಲಸದ ಕೋಣೆ, ಅಲ್ಲಿ ಕುಟುಂಬದ ಪುರುಷ ಸದಸ್ಯರು ಕೆಲಸ ಮಾಡುತ್ತಾರೆ; ಉಳಿದವು ಮಲಗುವ ಕೋಣೆಗಳಾಗಿವೆ.

ಈ 70 ವರ್ಷದ ಅನುಭವಿ ನೂಲು ಕೆಲಸಗಾರ್ತಿ ಕೆಲವು ದಿನಗಳ ಹಿಂದೆ 10 ಗ್ರಾಂ ಪಶ್ಮಿನಾ ಉಣ್ಣೆಯನ್ನು ಖರೀದಿಸಿದ್ದರು. ಆದರೆ ದೃಷ್ಟಿಹೀನತೆಯಿಂದ ಬಳಲುತ್ತಿರುವ ಕಾರಣ ಅವರಿನ್ನೂ ಅದನ್ನು ನೂಲಾಗಿ ಸಂಸ್ಕರಿಸಿರಲಿಲ್ಲ. 10 ವರ್ಷಗಳ ಹಿಂದೆ ಅವರು ತಮ್ಮ ಕಣ್ಣಿನ ಪೊರೆ ತೆಗೆಸಿಕೊಂಡಿದ್ದರು. ಆದರೆ ಈಗಲೂ ಸೂಕ್ಷ್ಮ ನೂಲುವಿಕೆಯ ಮೇಲೆ ದೃಷ್ಟಿ ಕೇಂದ್ರೀಕರಿಸಲು ಕಷ್ಟಪಡುತ್ತಾರೆ.

ಫಹ್ಮೀದಾ, ಖತೀಜಾ ಅವರಂತಹ ನೂಲು ಕೆಲಸಗಾರರು ಮೊದಲು ಪಶ್ಮಿನಾ ಉಣ್ಣೆಯನ್ನು 'ಕಾರ್ಡಿಂಗ್' ಮೂಲಕ ಸ್ವಚ್ಛಗೊಳಿಸುತ್ತಾರೆ - ಎಲ್ಲಾ ಉಣ್ಣೆ ನಾರುಗಳು ಒಂದೇ ದಿಕ್ಕಿನಲ್ಲಿ ಜೋಡಿಸಲ್ಪಟ್ಟಿವೆಯೆ ಎಂದು ಖಚಿತಪಡಿಸಿಕೊಳ್ಳಲು ಮರದ ಬಾಚಣಿಗೆಯ ಮೂಲಕ ಅದನ್ನು ಬಾಚುತ್ತಾರೆ. ನಂತರ ಅದನ್ನು ಅವರು ತಿರುಚಿದ ಹುಲ್ಲಿನಿಂದ ಮಾಡಲ್ಪಟ್ಟ ಕದಿರುಗಂಬಕ್ಕೆ ಸುತ್ತಲಾಗುತ್ತದೆ.

Left: Wool is pulled through a wooden comb to ensure the fibres are untangled and aligned.
PHOTO • Muzamil Bhat
Right: It is then spun on a spindle made of dried grass stems
PHOTO • Muzamil Bhat

ಎಡಕ್ಕೆ: ಉಣ್ಣೆಯನ್ನು ಮರದ ಬಾಚಣಿಗೆಯ ಮೂಲಕ ಎಳೆಯಲಾಗುತ್ತದೆ, ಇದರಿಂದ ನಾರುಗಳು ಬಿಡಿಸಿಕೊಳ್ಳುವುದಿಲ್ಲ ಮತ್ತು ಒಂದೆಡೆ ಇರುತ್ತವೆ. ಬಲ: ನಂತರ ಇದನ್ನು ಒಣಗಿದ ಹುಲ್ಲಿನ ಕಾಂಡಗಳಿಂದ ಮಾಡಿದ ಕದಿರುಗಂಬದ ಮೇಲೆ ಸುತ್ತಲಾಗುತ್ತದೆ

ದಾರವನ್ನು ತಯಾರಿಸುವುದು ಸೂಕ್ಷ್ಮ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ. “ದಾರವನ್ನು ಗಟ್ಟಿಯಾಗಿಸುವ ಸಲುವಾಗಿ ಎರಡು ದಾರಗಳನ್ನು ಸೇರಿಸಿ ಒಂದು ದಾರವನ್ನಾಗಿ ಮಾಡಲಾಗುತ್ತದೆ. ಸ್ಪಿಂಡಲ್‌ (ಕದಿರುಗಂಬ) ಬಳಸಿ ಎರಡು ಎಳೆಗಳನ್ನು ಒಟ್ಟಿಗೆ ಹೆಣೆಯಲಾಗುತ್ತದೆ” ಎಂದು ಖಾಲಿದಾ ಬೇಗಂ ಹೇಳುತ್ತಾರೆ. ಶ್ರೀನಗರದ ಸಫಾ ಕಡಲ್ ಪ್ರದೇಶದ ನುರಿತ ಕುಶಲಕರ್ಮಿಯಾದ ಅವರು 25 ವರ್ಷಗಳಿಂದ ಪಶ್ಮಿನಾ ಉಣ್ಣೆಯನ್ನು ನೇಯುತ್ತಿದ್ದಾರೆ.

"ನಾನು ಒಂದು ಪುರಿಯಲ್ಲಿ [10 ಗ್ರಾಂ ಪಶ್ಮಿನಾ] 140-160 ಗಂಟುಳನ್ನು ತಯಾರಿಸಬಲ್ಲೆ" ಎಂದು ಅವರು ಹೇಳುತ್ತಾರೆ. ಇದನ್ನು ಮಾಡಲು ಬೇಕಾದ ಸಮಯ ಮತ್ತು ಕೌಶಲದ ಹೊರತಾಗಿಯೂ, ಖಾಲಿದಾ ಬೇಗಂ ಒಂದು ಗಂಟು ಉಣ್ಣೆಗೆ ಕೇವಲ ಒಂದು ರೂಪಾಯಿ ಸಂಪಾದಿಸುತ್ತಾರೆ.

ಪಶ್ಮಿನಾ ನೂಲಿನ ಬೆಲೆ ದಾರದ ಗಾತ್ರವನ್ನು ಅವಲಂಬಿಸಿರುತ್ತದೆ - ದಾರವು ತೆಳ್ಳಗಿದ್ದಷ್ಟೂ ಅದು ಹೆಚ್ಚು ಮೌಲ್ಯಯುತವಾಗಿರುತ್ತದೆ. ತೆಳುವಾದ ದಾರವು ಹೆಚ್ಚು ಗಂಟುಗಳನ್ನು ಹೊಂದಿರುತ್ತದೆ, ದಪ್ಪವಾದ ದಾರವು ಕಡಿಮೆ ಗಂಟುಗಳನ್ನು ಹೊಂದಿರುತ್ತದೆ.

"ಪ್ರತಿ ಗಂಟುಗಳಲ್ಲಿ, 8-11 ಇಂಚು ಉದ್ದ ಅಥವಾ 8 ಬೆರಳುಗಳಿಗೆ ಸಮನಾದ 9-11 ಪಶ್ಮಿನಾ ಎಳೆಗಳಿರುತ್ತವೆ. ಗಂಟು ಮಾಡಲು ಮಹಿಳೆಯರು ದಾರದ ಗಾತ್ರವನ್ನು ಅಳೆಯುವುದು ಹೀಗೆ" ಎಂದು ಇಂತಿಜಾರ್ ಅಹ್ಮದ್ ಬಾಬಾ ಹೇಳುತ್ತಾರೆ. 55 ವರ್ಷದ ಅವರು ಬಾಲ್ಯದಿಂದಲೂ ಪಶ್ಮಿನಾ ವ್ಯಾಪಾರದಲ್ಲಿ ತೊಡಗಿದ್ದಾರೆ. ವ್ಯಾಪಾರಿಯನ್ನು ಅವಲಂಬಿಸಿ ಪ್ರತಿ ಗಂಟು ಕರಕುಶಲ ಕರ್ಮಿಯನ್ನು ಅವಲಂಬಿಸಿ 1 ರಿಂದ 1.50 ರೂ.ಗಳವರೆಗೆ ಸಂಪಾದಿಸಿ ಕೊಡುತ್ತದೆ.

"ಒಬ್ಬ ಮಹಿಳೆ ಕೇವಲ 10 ಗ್ರಾಂ ಪಶ್ಮಿನಾ ಉಣ್ಣೆಯನ್ನು [ದಾರದಲ್ಲಿ] ನೇಯಬಹುದು, ಏಕೆಂದರೆ ನಮಗೆ ಇತರ ಮನೆಕೆಲಸಗಳೂ ಇರುತ್ತವೆ. ದಿನಕ್ಕೆ ಒಂದು ಪುರಿಯನ್ನು ಪೂರ್ಣಗೊಳಿಸುವುದು ಅಸಾಧ್ಯ" ಎಂದು ರುಕ್ಸಾನಾ ಬಾನು ಹೇಳುತ್ತಾರೆ, ಅವರಿಗೆ ಪ್ರತಿ ಗಂಟಿಗೆ 1.50 ರೂ. ಸಿಗುತ್ತದೆ.

Left: 'I don’t think people will be doing hand-spinning of pashmina in the future,' says Ruksana
PHOTO • Muzamil Bhat
Right:  Knots in a pashmina hand-spun thread
PHOTO • Muzamil Bhat

ಎಡ: 'ಭವಿಷ್ಯದಲ್ಲಿ ಜನರು ಪಶ್ಮಿನಾ ದಾರವನ್ನು ಕೈಯಿಂದ ನೂಲುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ' ಎಂದು ರುಕ್ಸಾನಾ ಹೇಳುತ್ತಾರೆ. ಬಲ: ಪಶ್ಮಿನಾ ಕೈಯಿಂದ ನೇಯ್ದ ದಾರದ ಗಂಟುಗಳು

ಈ ಕೆಲಸದಿಂದ ದಿನಕ್ಕೆ 20 ರೂಪಾಯಿಗಳನ್ನು ಗಳಿಸಬಹುದು ಎಂದು 40 ವರ್ಷದ ರುಕ್ಸಾನಾ ಹೇಳುತ್ತಾರೆ. ಅವರು ತಮ್ಮ ಪತಿ, ಮಗಳು ಮತ್ತು ವಿಧವೆ ಅತ್ತಿಗೆಯೊಂದಿಗೆ ನವಾ ಕಡಲ್ ಎನ್ನುವಲ್ಲಿನ ಅರಂಪೋರಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. "ನಾನು ಮೂರು ದಿನಗಳವರೆಗೆ 10 ಗ್ರಾಂ ಪಶ್ಮಿನಾವನ್ನು ನೇಯ್ಗೆ ಮಾಡಿ 120 ರೂಪಾಯಿಗಳನ್ನು ಸಂಪಾದಿಸಿದ್ದೇನೆ ಮತ್ತು ಚಹಾ ಮತ್ತು ಊಟದ ವಿರಾಮವನ್ನಷ್ಟೇ ಪಡೆದು ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಕೆಲಸ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ. 10 ಗ್ರಾಂ ಉಣ್ಣೆಯನ್ನು ಪೂರ್ಣಗೊಳಿಸಲು ಆಕೆಗೆ 5-6 ದಿನಗಳು ಬೇಕಾಗುತ್ತದೆ.

ಈಗೀಗ ಪಶ್ಮಿನಾ ನೇಯ್ಗೆಯಿಂದ ಸಾಕಷ್ಟು ಹಣ ಸಿಗುವುದಿಲ್ಲ ಎಂದು ಖತೀಜಾ ಹೇಳುತ್ತಾರೆ. “ಈಗೀಗ ನಾನು ದಿನಗಟ್ಟಲೆ ದುಡಿದರೂ ಏನೂ ಸಂಪಾದನೆಯಾಗುವುದಿಲ್ಲ” ಎಂದು ಅವರು ಹೇಳುತ್ತಾರೆ. “ಐವತ್ತು ವರ್ಷಗಳ ಹಿಂದೆ ದಿನಕ್ಕೆ 30ರಿಂದ 50 ರೂಪಾಯಿಗಳನ್ನು ಸಂಪಾದಿಸುವುದು ಸರಿಯಿತ್ತು" ಎಂದು ಅವರು ಹಿಂದಿನ ಕಾಲವನ್ನು ನೆನಪಿಸಿಕೊಳ್ಳುತ್ತಾರೆ.

*****

ಶಾಲು ಖರೀದಿದಾರರು ಹೆಚ್ಚಿನ ಹಣ ನೀಡಲು ತಯಾರಿಲ್ಲದಿರುವುದೇ ಕೈಯಿಂದ ನೂಲಲಾಗುವ ಪಶ್ಮಿನಾ ನೂಲು ಕಾರ್ಮಿಕರಿಗೆ ಹೆಚ್ಚು ವೇತನ ಸಿಗುತ್ತಿಲ್ಲ. ಪಶ್ಮಿನಾ ವ್ಯಾಪಾರಿ ನೂರ್-ಉಲ್-ಹುದಾ ಹೇಳುತ್ತಾರೆ, "ಗ್ರಾಹಕರಿಗೆ ಯಂತ್ರದಿಂದ ನೇಯ್ದ ಪಶ್ಮಿನಾ ಶಾಲು 5,000 ರೂ.ಗಳಿಗೆ ಸಿಗುವಾಗ ಅವರು 8,000-9,000 ರೂ.ಗಳಿಗೆ ಏಕೆ ಖರೀದಿಸುತ್ತಾರೆ, ಅವರು ಏಕೆ ಹೆಚ್ಚು ಪಾವತಿಸುತ್ತಾರೆ?"

"ಕೈಯಿಂದ ನೇಯ್ದ ದಾರಗಳನ್ನು ಬಳಸುವ ಪಶ್ಮಿನಾ ಶಾಲುಗಳನ್ನು ಖರೀದಿಸುವವರು ಬಹಳ ಕಡಿಮೆ. 100 ಗ್ರಾಹಕರಲ್ಲಿ ಇಬ್ಬರು ಮಾತ್ರ ಅಧಿಕೃತ ಕೈಯಿಂದ ನೇಯ್ದ ಪಶ್ಮಿನಾ ಶಾಲು ಕೇಳುತ್ತಾರೆ ಎಂದು ನಾನು ಹೇಳುತ್ತೇನೆ" ಎಂದು ಶ್ರೀನಗರದ ಬಾದಮ್ವಾರಿ ಪ್ರದೇಶದ ಚಿನಾರ್ ಕರಕುಶಲತೆಯ ಪಶ್ಮಿನಾ ಶೋರೂಮ್ ಮಾಲೀಕ 50 ವರ್ಷದ ನೂರ್-ಉಲ್-ಹುದಾ ಹೇಳುತ್ತಾರೆ.

ಕಾಶ್ಮೀರ ಪಶ್ಮಿನಾ 2005ರಿಂದ ಗ್ಲೋಬಲ್‌ ಇಂಡಿಕೇಷನ್ಸ್ (ಜಿಐ) ಟ್ಯಾಗ್ ಹೊಂದಿದೆ. ಕೈಯಿಂದ ನೇಯ್ದ ಮತ್ತು ಯಂತ್ರದಿಂದ ನೇಯ್ದ ನೂಲು ಎರಡನ್ನೂ ಬಳಸಿಕೊಂಡು ಅಂತಿಮ ನೇಯ್ಗೆ ಹೊಂದಿದ ಶಾಲುಗಳು ಜಿಐ ಟ್ಯಾಗಿಗೆ ಅರ್ಹವಾಗಿವೆ ಎಂದು ನೋಂದಾಯಿತ ಕುಶಲಕರ್ಮಿಗಳ ಸಂಘವು ಹೊರತಂದ ಗುಣಮಟ್ಟದ ಕೈಪಿಡಿ ಹೇಳುತ್ತದೆ ಮತ್ತು ಸರ್ಕಾರಿ ವೆಬ್ಸೈಟಿನಲ್ಲಿ ಉಲ್ಲೇಖಿಸಲಾಗಿದೆ.

Combined threads must be twisted again on a spinning wheel so that they don't get separated
PHOTO • Muzamil Bhat

ಸಂಯೋಜಿಸಿದ ದಾರಗಳನ್ನು ಮತ್ತೆ ಚರಕದಲ್ಲಿ ಹೆಣೆಯಬೇಕು ಆಗ ಅವು ಬೇರ್ಪಡುವುದಿಲ್ಲ

Khatija getting the spinning wheel ready to combine the threads
PHOTO • Muzamil Bhat

ದಾರಗಳನ್ನು ಸಂಯೋಜಿಸಲು ಚರಕವನ್ನು ಸಿದ್ಧಗೊಳಿಸುತ್ತಿರುವ ಖತೀಜಾ

ಅಬ್ದುಲ್ ಮನನ್ ಬಾಬಾ ನಗರದಲ್ಲಿ ಶತಮಾನಗಳಷ್ಟು ಹಳೆಯದಾದ ಪಶ್ಮಿನಾ ವ್ಯವಹಾರವನ್ನು ನಡೆಸುತ್ತಿದ್ದಾರೆ ಮತ್ತು ಸುಮಾರು 250 ಜಿಐ ಮುದ್ರಿತ ಸರಕುಗಳನ್ನು ಹೊಂದಿದ್ದಾರೆ. ಶಾಲಿನ ಮೇಲಿನ ರಬ್ಬರ್ ಸ್ಟಾಂಪ್ ಅದು ಶುದ್ಧ ಮತ್ತು ಕೈಯಿಂದ ಮಾಡಲ್ಪಟ್ಟಿದೆ ಎಂದು ಖಾತರಿಪಡಿಸುತ್ತದೆ. ಆದರೆ ನೇಕಾರರು ಯಂತ್ರದಿಂದ ತಯಾರಿಸಿದ ನೂಲನ್ನು ಬಯಸುತ್ತಾರೆ ಎಂದು ಅವರು ಒತ್ತಿ ಹೇಳುತ್ತಾರೆ. " ಅದರ ಸೂಕ್ಷ್ಮ ಸ್ವಭಾವದ ಕಾರಣಕ್ಕಾಗಿ ನೇಕಾರರು ಕೈಯಿಂದ ನೇಯ್ದ ದಾರದಿಂದ ಪಶ್ಮಿನಾ ಶಾಲನ್ನು ನೇಯಲು ಸಿದ್ಧರಿಲ್ಲ. ಯಂತ್ರದಿಂದ ನೇಯ್ದ ಎಳೆಯು ಸಮಾನ ದಾರವನ್ನು ಹೊಂದಿರುತ್ತದೆ ಮತ್ತು ಅವರಿಗೆ ನೇಯ್ಗೆ ಮಾಡಲು ಸುಲಭವಾಗಿರುತ್ತದೆ."

ಚಿಲ್ಲರೆ ವ್ಯಾಪಾರಿಗಳು ಆಗಾಗ್ಗೆ ಕೈಯಿಂದ ನೇಯ್ದ ದಾರಕ್ಕೆ ಯಂತ್ರದಿಂದ ನೇಯ್ದ ದಾರವನ್ನು ಬದಲಾಯಿಸುತ್ತಾರೆ. "ನಮಗೆ 1,000 ಪಶ್ಮಿನಾ ಶಾಲುಗಳ ಆರ್ಡರ್ ಸಿಕ್ಕರೆ. 10 ಗ್ರಾಂ ಪಶ್ಮಿನಾವನ್ನು ನೂಲಲು ಕನಿಷ್ಠ 3-5 ದಿನಗಳು ಬೇಕಾಗುವುದರಿಂದ ಅದನ್ನು ಪೂರೈಸಲು ನಮಗೆ ಹೇಗೆ ಸಾಧ್ಯ? ಎಂದು ಮನನ್ ಕೇಳುತ್ತಾನೆ.

ಮನನ್ ಅವರ ತಂದೆ, 60 ವರ್ಷದ ಅಬ್ದುಲ್ ಹಮೀದ್ ಬಾಬಾ, ಕೈಯಿಂದ ನೇಯ್ದ ಪಶ್ಮಿನಾ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳುತ್ತಾರೆ. 600 ವರ್ಷಗಳ ಹಿಂದೆ ಕಾಶ್ಮೀರಕ್ಕೆ ಈ ಕಲೆಯನ್ನು ತಂದ ಸೂಫಿ ಸಂತ ಹಜರತ್ ಮಿರ್ ಸೈಯದ್ ಅಲಿ ಹಮ್ದಾನಿ ಅವರು ನೂಲುವ ಕಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎನ್ನುವುದು ಅವರ ನಂಬುಗೆ.

ತನ್ನ ಅಜ್ಜನ ಕಾಲದಲ್ಲಿ ಜನರು ಕಚ್ಚಾ ಪಶ್ಮಿನಾ ಉಣ್ಣೆಯನ್ನು ಖರೀದಿಸಲು ಕುದುರೆಗಳ ಮೇಲೆ ನೆರೆಯ ಲಡಾಖಿಗೆ ಹೋಗುತ್ತಿದ್ದರು ಎಂದು ಹಮೀದ್ ನೆನಪಿಸಿಕೊಳ್ಳುತ್ತಾರೆ. "ಆಗ ಎಲ್ಲವೂ ಪರಿಶುದ್ಧವಾಗಿತ್ತು, ನಮಗಾಗಿ 400-500 ಮಹಿಳೆಯರು ಪಶ್ಮಿನಾ ಉಣ್ಣೆಯನ್ನು ನೇಯುತ್ತಿದ್ದರು, ಆದರೆ ಈಗ ಕೇವಲ 40 ಮಹಿಳೆಯರಿದ್ದಾರೆ ಮತ್ತು ಅವರು ಕೂಡಾ ಸಂಪಾದಿಸಲೇಬೇಕಾದ ಅನಿವಾರ್ಯತೆಗಾಗಿ ಮಾಡುತ್ತಿದ್ದಾರೆ."

ಅನುವಾದ: ಶಂಕರ. ಎನ್. ಕೆಂಚನೂರು

Muzamil Bhat

Muzamil Bhat is a Srinagar-based freelance photojournalist and filmmaker, and was a PARI Fellow in 2022.

यांचे इतर लिखाण Muzamil Bhat
Editor : Punam Thakur

Punam Thakur is a Delhi-based freelance journalist with experience in reporting and editing.

यांचे इतर लिखाण Punam Thakur
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru