“ನನಗೆ ಸಿಕ್ಸ್ ಪ್ಯಾಕ್ ಆಬ್ಸ್ ತಾನಾಗಿಯೇ ಬಂದಿದೆ, ನಾನು ಒಂದು ದಿನವೂ ವ್ಯಾಯಾಮ ಮಾಡಿದವನಲ್ಲ. ಮತ್ತೆ ಶಹಬಾಜ್‌ನ ಬೈಸೆಪ್ಸ್ ನೋಡಿ” ಎನ್ನುತ್ತಾ ತನ್ನ ಸಹೋದ್ಯೋಗಿಯ ಕಡೆ ಕೈ ತೋರಿಸುತ್ತಾ ಯುವಕ ಅದಿಲ್ ನಕ್ಕರು.
ಮೊಹಮ್ಮದ್ ಆದಿಲ್ ಮತ್ತು ಶಬಾಜ್ ಅನ್ಸಾರಿ ಮೀರತ್ ನಗರದ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಇವರಿಬ್ಬರು ವಾರವಿಡೀ ವ್ಯಾಯಾಮ ಶಾಲೆಗೆ ಹೋಗುವವರಿಗಿಂತಲೂ ಹೆಚ್ಚಿನ ಭಾರವನ್ನು ಎತ್ತುತ್ತಾರೆ. ಆದರೆ ಭಾರ ಎತ್ತುವುದರ ಹಿಂದಿನ ಗುರಿ ಫಿಟ್ನೆಸ್ ಅಲ್ಲ. ಅದು ಅವರ ಪಾಡಿಗೆ ಹೊಟ್ಟೆಪಾಡು. ಉತ್ತರ ಪ್ರದೇಶದ ಮೀರಟ್ ನಗರದ ಮುಸ್ಲಿಂ ಕುಟುಂಬಗಳ ಯುವಕರಿಗೆ ಲಭ್ಯವಿರುವ ಪ್ರಮುಖ ಜೀವನೋಪಾಯವಿದು. ಹಾಗೆ ನೋಡಿದರೆ ಪಶ್ಚಿಮ ಉತ್ತರ ಪ್ರದೇಶದ ಈ ಇಡೀ ಜಿಲ್ಲೆಯೇ ಕ್ರೀಡಾ ಸರಕುಗಳ ಉತ್ಪಾದನೆಯ ಕೇಂದ್ರವಾಗಿದೆ.
"ಕೆಲವು ದಿನಗಳ ಹಿಂದೆ, ಹುಡುಗರು ತಮ್ಮ ಬೈಸೆಪ್ಸ್ ಮತ್ತು ಆಬ್ಸ್ [ಕಿಬ್ಬೊಟ್ಟೆಯ ಸ್ನಾಯುಗಳನ್ನು] ಹೋಲಿಸಲು ಫೋಟೋಶೂಟ್ ಮಾಡುತ್ತಿದ್ದರು" ಎಂದು ಮೊಹಮ್ಮದ್ ಸಾಕಿಬ್ ಹೇಳುತ್ತಾರೆ. ಉದ್ಯಮಿಯಾಗಿರುವ 30 ವರ್ಷದ ಸಾಕಿಬ್, ಮೀರಟ್ ನಗರದ ಕ್ರೀಡಾ ಸರಕುಗಳ ಮಾರುಕಟ್ಟೆಯ ಕೇಂದ್ರವಾಗಿರುವ ಸೂರಜ್ ಕುಂಡ್ ರಸ್ತೆಯಲ್ಲಿರುವ ತನ್ನ ಕುಟುಂಬದ ಬಾಡಿಗೆ ಜಿಮ್ ಉಪಕರಣಗಳ ಶೋರೂಂನಲ್ಲಿ ಕೌಂಟರ್ ಹಿಂದೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು.
"ಗೃಹಿಣಿಯರು ಬಳಸುವ ಸರಳ ಡಂಬಲ್ ಉಪಕರಣಗಳಿಂದ ಹಿಡಿದು ಕ್ರೀಡಾ ವೃತ್ತಿಪರರು ಬಳಸುವ ಸಂಕೀರ್ಣ ಸಂಯೋಜನೆಯ ಉಪಕರಣಗಳ ತನಕ, ಪ್ರತಿಯೊಬ್ಬರೂ ಇಂದು ಜಿಮ್ ಮತ್ತು ಫಿಟ್ನೆಸ್ ಉಪಕರಣಗಳನ್ನು ಬಯಸುತ್ತಾರೆ" ಎಂದು ಅವರು ಹೇಳುತ್ತಾರೆ.
ನಾವು ಒಳಗೆ ಕುಳಿತು ಮಾತನಾಡುತ್ತಿದ್ದರೆ, ಹೊರಗೆ ಹಲವಾರು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು (ಸ್ಥಳೀಯವಾಗಿ ಮಿನಿ ಮೆಟ್ರೋ ಎಂದು ಕರೆಯಲ್ಪಡುತ್ತವೆ) ಕಬ್ಬಿಣದ ದಪ್ಪನೆಯ ರಾಡ್‌ಗಳು ಮತ್ತು ಪೈಪುಗಳನ್ನು ಹೇರಿಕೊಂಡು ಜನ ನಿಭಿಡ ರಸ್ತೆಗೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಕೆಲವು ಹೋಮ್ ಜಿಮ್ ಮತ್ತು ಕಬ್ಬಿಣದ ಬಾರ್‌ಗಳನ್ನು ಸಹ ಹೊತ್ತಿದ್ದವು. “ಜಿಮ್ ಯಂತ್ರಗಳನ್ನು ಮೊದಲಿಗೆ ಬೇರೆ ಬೇರೆ ಭಾಗಗಳಾಗಿ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಜೋಡಿಸಲಾಗುತ್ತದೆ” ಎಂದು ಶೋ ರೂಮ್ ಗಾಜಿನ ಬಾಗಿಲಿನ ಮೂಲಕ ಕಬ್ಬಿಣದ ಸರಕುಗಳ ಸಂಚಾರವನ್ನು ನೋಡುತ್ತಾ ಸಾಕಿಬ್ ವಿವರಿಸುತ್ತಾರೆ.
ಕಬ್ಬಿಣದ ಕೆಲಸಗಳಿಗೆ ಮೀರಟ್ ಮೊದಲಿನಿಂದಲೂ ಪ್ರಖ್ಯಾತಿಯನ್ನು ಪಡೆದಿದೆ. "ನಗರವು ಕೈಂಚಿ [ಕತ್ತರಿ] ಉದ್ಯಮಕ್ಕೆ ವಿಶ್ವಪ್ರಸಿದ್ಧವಾಗಿದೆ" ಎಂದು ಸಾಕಿಬ್ ಪರಿಗೆ ತಿಳಿಸಿದರು. 2013ರಲ್ಲಿ, ಸುಮಾರು ಮೂರು ಶತಮಾನಗಳಷ್ಟು ಹಳೆಯದಾದ ಮೀರಟ್ ನಗರದ ಕತ್ತರಿ ಉದ್ಯಮವು ಭೌಗೋಳಿಕ ಸೂಚಕಗಳ (ಜಿಐ) ಗುರುತನ್ನು ತನ್ನದಾಗಿಸಿಕೊಂಡಿದೆ.
ಮೀರಟ್ ನಗರದ ಜಿಮ್ ಉಪಕರಣಗಳ ಉತ್ಪಾದನೆಯ ಇತಿಹಾಸ ಇತ್ತೀಚಿನ ದಿನಗಳದ್ದಾದರೂ ಅದು 1990 ಆರಂಭಿಕ ದಿನಗಳಿಂದಲೂ ಇಲ್ಲಿ ನೆಲೆಯೂರಿದೆ. "ಪಂಜಾಬಿ ಉದ್ಯಮಿಗಳು ಮತ್ತು ಇತರ ಕೆಲವು ಸುಸ್ಥಾಪಿತ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಕ್ರೀಡಾ ಸರಕುಗಳ ಉದ್ಯಮದಲ್ಲಿ ಮುಂಚೂಣಿಯಲ್ಲಿವೆ" ಎಂದು ಸಾಕಿಬ್ ಹೇಳುತ್ತಾರೆ. “ಅನುಭವಿ ಕಬ್ಬಿಣದ ಕೆಲಸಗಾರರು ಇಲ್ಲಿ ಮೊದಲಿನಿಂದಲೂ ಲಭ್ಯವಿದ್ದರು ಜೊತೆಗೆ ಉಪಕರಣಗಳನ್ನು ತಯಾರಿಸಲು ಬೇಕಾಗುವ ನವೀಕರಿಸಿದ ಕಬ್ಬಿಣದ ಕೊಳವೆಗಳು, ರಾಡ್‌ಗಳು ಮತ್ತು ಹಾಳೆಗಳಂತಹ ಕಚ್ಚಾ ವಸ್ತುಗಳು ನಗರದ ಲೋಹಾ ಮಂಡಿಯಲ್ಲಿ [ಸಗಟು ಕಚ್ಚಾ ವಸ್ತುಗಳ ಮಾರುಕಟ್ಟೆ] ಸುಲಭವಾಗಿ ಲಭ್ಯವಿವೆ."
ಹೆಚ್ಚಿನ ಕಮ್ಮಾರರು ಮತ್ತು ಕಬ್ಬಿಣದ ಕಾಸ್ಟಿಂಗ್ ಕಾರ್ಮಿಕರು (ಲೋಹೆ ಕಿ ಧಲಾಯಿ ಕರ್ನೆ ವಾಲೆ) ಮುಸ್ಲಿಮರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದವರು. "ಕುಟುಂಬದ ಹಿರಿಯ ಗಂಡು ಮಗ ಚಿಕ್ಕ ವಯಸ್ಸಿನಲ್ಲಿಯೇ ತರಬೇತಿ ಪಡೆಯುತ್ತಾನೆ" ಎಂದು ಸಾಕಿಬ್ ಹೇಳುತ್ತಾರೆ. "ಸೈಫಿ/ಲೋಹರ್ (ಇತರ ಹಿಂದುಳಿದ ವರ್ಗ) ಉಪಜಾತಿಯ ಸದಸ್ಯರು ಈ ಉದ್ಯೋಗದಲ್ಲಿ ಹೆಚ್ಚು ಕೌಶಲ ಹೊಂದಿದ್ದಾರೆಂದು ನಂಬಲಾಗಿದೆ" ಎಂದು ಅವರು ಹೇಳುತ್ತಾರೆ. ಸಾಕಿಬ್ ಅವರ ಕುಟುಂಬವು ಮುಸ್ಲಿಂ ಉಪಜಾತಿಯಾದ ನೇಕಾರರ ವೃತ್ತಿ ಮಾಡುವ ಅನ್ಸಾರಿ ಸಮುದಾಯಕ್ಕೆ ಸೇರಿದ್ದು, ಇದನ್ನು ರಾಜ್ಯದಲ್ಲಿ ಒಬಿಸಿ ಎಂದು ಪಟ್ಟಿ ಮಾಡಲಾಗಿದೆ.
"ಇಸ್ಲಾಮಾಬಾದ್, ಜಾಕಿರ್ ಹುಸೇನ್ ಕಾಲೋನಿ, ಲಿಸಾದಿ ಗೇಟ್ ಮತ್ತು ಜೈದಿ ಫಾರ್ಮ್ ರೀತಿಯ ಮುಸ್ಲಿಂ ಬಹುಸಂಖ್ಯಾತ ಏರಿಯಾಗಳಲ್ಲಿ ಹೆಚ್ಚು ಘಟಕಗಳಿವೆ" ಎಂದು ಸಾಕಿಬ್ ಹೇಳುತ್ತಾರೆ. ಮೀರಟ್ ಜಿಲ್ಲೆಯು ಸುಮಾರು 34 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ - ಇದು ರಾಜ್ಯದಲ್ಲಿ ಏಳನೇ ಅತಿ ಹೆಚ್ಚು (ಜನಗಣತಿ 2011).
ಇಲ್ಲಿನ ಕಬ್ಬಿಣದ ಕೆಲಸಗಾರರಲ್ಲಿ ಹೆಚ್ಚು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಇರುವುದು ಮೀರಟ್ ನಗರದಲ್ಲಿ ಮಾತ್ರವಲ್ಲ. ಭಾರತದ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ಕುರಿತ 2006ರ ವರದಿಯ ಪ್ರಕಾರ ( ಸಾಚಾರ್ ಸಮಿತಿ ವರದಿ ), ಫ್ಯಾಬ್ರಿಕೇಟೆಡ್ ಲೋಹದ ಉತ್ಪನ್ನಗಳು ಮೂರು ಉತ್ಪಾದನಾ ವಿಭಾಗಗಳಲ್ಲಿ ಸೇರಿದ್ದು, ಇದರಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದ ಕಾರ್ಮಿಕರು ಮುಸ್ಲಿಮರು.
ಸಾಕಿಬ್ ಮತ್ತು ಅವರ ಸಹೋದರರಾದ ಮೊಹಮ್ಮದ್ ನಜೀಮ್ ಮತ್ತು ಮೊಹಮ್ಮದ್ ಅಸಿಮ್ ಇಬ್ಬರೂ ಮೂವತ್ತರ ಹರೆಯದ ಮಧ್ಯದಲ್ಲಿದ್ದರು, ಅವರು ನಗರದ ಕಬ್ಬಿಣದ ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ಈ ಕೆಲಸ ಪ್ರಾರಂಭಿಸಿದರು. 2000ರ ದಶಕದ ಆರಂಭದಲ್ಲಿ ಅವರ ತಂದೆಯ ಸಗಟು ಬಟ್ಟೆ ವ್ಯವಹಾರವು ಭಾರಿ ನಷ್ಟವನ್ನು ಅನುಭವಿಸಿದ ಸಂದರ್ಭದಲ್ಲಿ ಅವರು ಚಿಕ್ಕ ಹುಡುಗರಾಗಿದ್ದರು, ಮನೆಯ ಪರಿಸ್ಥಿತಿಯಿಂದಾಗಿ ಅವರು ಕೆಲಸಕ್ಕೆ ಸೇರಬೇಕಾಯಿತು.
ಅಸಿಮ್ ಅಹ್ಮದ್ ನಗರ ಪ್ರದೇಶದ ಮನೆಯಲ್ಲಿ ಡಂಬಲ್ ಪ್ಲೇಟುಗಳನ್ನು ತಯಾರಿಸಲು ಪ್ರಾರಂಭಿಸಿದರೆ, ನಜೀಮ್ ಆಟೋ ಬಿಡಿಭಾಗಗಳ ಉತ್ಪಾದನಾ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು. ಸಾಕಿಬ್ ಅನುಭವಿ ಕಾರಿಗಾರ್ ಫಕ್ರುದ್ದೀನ್ ಅಲಿ ಸೈಫಿಯವರ ಬಳಿ ಲೋಹದ ಫ್ಯಾಬ್ರಿಕೇಷನ್ ಕಾರ್ಖಾನಾದಲ್ಲಿ (ಕಾರ್ಖಾನೆ) ಕೆಲಸ ಕಲಿಯುವ ಸಲುವಾಗಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. "ಲೋಹಗಳನ್ನು ಕತ್ತರಿಸುವುದು, ಬಾಗಿಸುವುದು, ವೆಲ್ಡಿಂಗ್ ಮಾಡುವುದು ಮತ್ತು ಜೋಡಿಸುವ ಮೂಲಕ ಜಿಮ್ ಉಪಕರಣಗಳು, ಜೂಲ್ [ರಿಂಗುಗಳು] ಮತ್ತು ಜಾಲಿ [ಜಾಲರಿ] ಗೇಟುಗಳಂತಹ ವಿವಿಧ ರೀತಿಯ ರಚನೆಗಳನ್ನು ಹೇಗೆ ತಯಾರಿಸುವುದು ಎಂದು ಅವರು ನನಗೆ ಕಲಿಸಿದರು" ಎಂದು ಸಾಕಿಬ್ ಹೇಳುತ್ತಾರೆ.
ಪ್ರಸ್ತುತ ಅಣ್ಣ ತಮ್ಮಂದಿರು ಸೇರಿ ನಗರದಲ್ಲಿನ ತಮ್ಮ ಶೋರೂಮಿನಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಟಟಿನಾ ಸಾನಿ ಗ್ರಾಮದಲ್ಲಿ ತಮ್ಮದೇ ಆದ ಫಿಟ್ನೆಸ್ ಮತ್ತು ಜಿಮ್ ಉಪಕರಣಗಳ ತಯಾರಿಕೆ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ಮೀರಟ್ ಕಬ್ಬಿಣದ ಕಲಾಕೃತಿಗಳ ತಯಾರಿಕೆಯ ಕೇಂದ್ರವಾಗಿದೆ - ಉಪಕರಣಗಳು, ಕತ್ತರಿ ಮತ್ತು ಕಬ್ಬಿಣದ ಪೀಠೋಪಕರಣಗಳು ಜಿಲ್ಲೆಯಿಂದ ರಫ್ತು ಮಾಡುವ ಪ್ರಮುಖ ವಸ್ತುಗಳಲ್ಲಿ ಸೇರಿವೆ (ಜನಗಣತಿ 2011).
“ಮೀರತ್ ನಗರದಲ್ಲಿ ನನಗಿಂತಲೂ ಅನುಭವಸ್ಥ ಕಬ್ಬಿಣ ಕೆಲಸಗಾರರಿದ್ದಾರೆ. ಒಂದೇ ವ್ಯತ್ಯಾಸವೆಂದರೆ ನಾನು ಕೆಲಸಗಾರನಾಗಿದ್ದವನು ಮಾಲಿಕನಾದೆ. ಅವರಲ್ಲಿ ಬಹುತೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗಿಲ್ಲ” ಎನ್ನುತ್ತಾರೆ ಸಾಕಿಬ್.
ಅವರಿಗೆ ಇದೆಲ್ಲವೂ ಸಾಧ್ಯವಾಗಿದ್ದು ಅವರ ಅಣ್ಣಂದಿರ ಸಹಾಯದಿಂದ. ಅವರ ಅಣ್ಣಂದಿರು ಸಾಕಿಬ್ ಅವರಿಗೆ ಮಾಸ್ಟರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಎಂಸಿಎ) ಮಾಡಲು ಬೆನ್ನೆಲುಬಾಗಿ ನಿಂತಿದ್ದರು. “ನನ್ನ ಅಣ್ಣಂದಿರು ಮೊದಲಿಗೆ ಹಿಂಜರಿಯುತ್ತಿದ್ದರು, ಆದರೆ ಜೊತೆಗೆ ನಾನು ಎಂಸಿಎ ಓದಿನ ಮೂಲಕ ಗಳಿಸಿದ ಜ್ಞಾನವು ಸ್ಥಾಪಿತ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳ ಉದ್ಯಮದಲ್ಲಿ ನಮ್ಮ ಸ್ವಂತ ವ್ಯವಹಾರವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎನ್ನುವ ವಿಶ್ವಾಸವನ್ನೂ ಹೊಂದಿದ್ದರು" ಎಂದು ಸಾಕಿಬ್ ಹೇಳುತ್ತಾರೆ.
*****
"ಜಿಮ್ ಉಪಕರಣಗಳಿಗಾಗಿ, ಲೋಹವನ್ನು ಕತ್ತರಿಸುವುದು, ವೆಲ್ಡ್ ಮಾಡುವುದು, ಬಫ್ ಮಾಡುವುದು, ಫಿನಿಷಿಂಗ್ ಕೆಲಸ, ಪೇಂಟ್ ಮಾಡುವುದು, ಪೌಡರ್ ಕೋಟಿಂಗ್ ಮಾಡುವುದನ್ನು ಮುಗಿಸಿದ ನಂತರ ಅವುಗಳನ್ನು ಪ್ಯಾಕ್ ಮಾಡಲಾಗುತ್ತದೆ. ಈ ಸಣ್ಣ ಬಿಡಿ ಭಾಗಗಳನ್ನು ನಂತರ ಜೋಡಿಸಿ ಅದನ್ನು ಪೂರ್ಣ ಪ್ರಮಾಣದ ಉಪಕರಣವನ್ನಾಗಿ ಮಾಡಲಾಗುತ್ತದೆ. “ಹವಾನಿಯಂತ್ರಿತ ಜಿಮ್‌ಗಳಲ್ಲಿ ಅಲಂಕೃತ ಉಪಕರಣಗಳನ್ನು ನೋಡಿ ತಿಳಿದಿರುವ ಜನಸಾಮಾನ್ಯರಿಗೆ ಇಲ್ಲಿ ಯಾವ ಉಪಕರಣವನ್ನು ತಯಾರಿಸಲಾಗುತ್ತಿದೆಯೆನ್ನುವುದು ತಿಳಿಯುವುದಿಲ್ಲ.”
ಅವರು ವಿವರಿಸುತ್ತಿರುವ ಜಿಮ್‌ಗಳು ನಾವು ಮಾತನಾಡುತ್ತಿದ್ದ ಕಾರ್ಖಾನೆಯಿಂದ ಬಹಳ ದೂರದಲ್ಲಿವೆ. ಮೂರು ಗೋಡೆಗಳು ಮತ್ತು ತಗಡಿನ ಛಾವಣಿಯನ್ನು ಹೊಂದಿರುವ ರಚನೆಯಲ್ಲಿ ನೆಲೆಗೊಂಡಿರುವ ಟಟಿನಾ ಸಾನಿಯಲ್ಲಿರುವ ಕಾರ್ಖಾನೆಯನ್ನು ಮೂರು ಕೆಲಸದ ವಲಯಗಳಾಗಿ ವಿಂಗಡಿಸಲಾಗಿದೆ - ಫ್ಯಾಬ್ರಿಕೇಷನ್ ಪ್ರದೇಶ, ಪೇಂಟಿಂಗ್ ಪ್ರದೇಶ ಮತ್ತು ಪ್ಯಾಕಿಂಗ್ ಪ್ರದೇಶ. ಗೋಡೆಯ ಮೇಲ್ಭಾಗದ ತೆರೆದ ಪ್ರದೇಶವು ಒಳಗೆ ಒಂದಷ್ಟು ಗಾಳಿಯಾಡಲು ಅನುವು ಮಾಡಿಕೊಡುತ್ತದೆ. ಇಲ್ಲಿ ಬೇಸಗೆಯ ತಿಂಗಳುಗಳಲ್ಲಿ ತಾಪಮಾನ 40 ಡಿಗ್ರಿಯ ಸುತ್ತ ಮುತ್ತ ಇರುತ್ತದೆ. ಕೆಲವೊಮ್ಮೆ 45 ಡಿಗ್ರಿಗಳಿಗೂ ಏರುತ್ತದೆ.
ಅಂಗಡಿಯ ಒಳಗೆ ನಡೆದಾಡುವಾಗ ನಾವು ಎಲ್ಲಿ ಹೆಜ್ಜೆಯಿಡುತ್ತಿದ್ದೇವೆ ಎನ್ನುವುದರ ಕುರಿತು ಗಮನವಿಟ್ಟು ನೋಡಬೇಕು.
ಏಕೆಂದರೆ ಶೋರೂಮಿನ ನೆಲದ ಮೇಲೆ 15 ಅಡಿ ಉದ್ದದ ಕಬ್ಬಿಣದ ಸರಳುಗಳು ಮತ್ತು ಪೈಪ್ ಗಳು, 400 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕದ ಘನ ಕಬ್ಬಿಣದ ಕೊಳವೆಯಾಕಾರದ ಉದ್ದ, ತೂಕದ ಪ್ಲೇಟುಗಳನ್ನು ಕತ್ತರಿಸಲು ಬಳಸುವ ದಪ್ಪ ಮತ್ತು ಚಪ್ಪಟೆ ಲೋಹದ ಹಾಳೆಗಳು, ವಿದ್ಯುತ್ ಚಾಲಿತ ದೊಡ್ಡ ಯಂತ್ರಗಳು ಮತ್ತು ಉತ್ಪಾದನೆಯ ವಿವಿಧ ಹಂತಗಳಲ್ಲಿ ಜಿಮ್ ಉಪಕರಣಗಳು ಎಲ್ಲೆಂದರಲ್ಲಿ ಇರುತ್ತವೆ. ಇವುಗಳ ನಡುವೆ ಗುರುತು ಮಾಡದ ಕಿಕ್ಕಿರಿದ ದಾರಿಯಿರುತ್ತದೆ. ಆ ದಾರಿಯನ್ನು ತಪ್ಪಿಸಿದಿರಿ ಎಂದಾದರೆ ನಿಮ್ಮ ಕಾಲಿನ ಮೇಲೆ ಚೂಪಾದ ವಸ್ತು ಬಿದ್ದು ಅದರ ತುದಿಯಿಂದ ಕಾಲಿಗೆ ಗಾಯವಾಗಬಹುದು ಅಥವಾ ಕೆಲವೊಮ್ಮೆ ಮೂಳೆ ಕೂಡಾ ಮುರಿಯಬಹುದು.
ಈ ಎಲ್ಲ ಭಾರವಾದ, ಇದ್ದಲ್ಲಿಂದ ಕದಲದ ಕಂದು, ಬೂದು ಮತ್ತು ಕಪ್ಪು ವಸ್ತುಗಳ ನಡುವೆ ವರ್ಣರಂಜಿತ ಟೀ ಶರ್ಟುಗಳನ್ನು ತೊಟ್ಟ ಕಾರ್ಮಿಕರು ಈ ವಸ್ತುಗಳಿಗೆ ವೆಲ್ಡಿಂಗ್ ಮಾಡತೊಡಗಿದಾಗ ಶೂರೂಮಿನಲ್ಲಿ ಬೆಳಕು ಮತ್ತು ಚಲನೆ ಕಂಡುಬರುತ್ತದೆ.
ಇಲ್ಲಿ ಕೆಲಸ ಮಾಡುವವರಲ್ಲಿ ಮೊಹಮ್ಮದ್ ಆಸಿಫ್ ಮಾತ್ರ ಟಟಿನಾ ಸಾನಿಯವರು. ಉಳಿದವರು ಮೀರಟ್ ನಗರ ಮತ್ತು ಅದರ ಸುತ್ತಮುತ್ತಲಿನ ಊರುಗಳಿಂದ ಬರುತ್ತಾರೆ. "ನಾನು ಎರಡೂವರೆ ತಿಂಗಳಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೆ ಇದು ನನ್ನ ಮೊದಲ ಕೆಲಸವಲ್ಲ. ಇದಕ್ಕೂ ಮೊದಲು ನಾನು ಮತ್ತೊಂದು ಜಿಮ್ ಯಂತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ" ಎಂದು ಕಬ್ಬಿಣದ ಪೈಪ್ ಕತ್ತರಿಸುವದರಲ್ಲಿ ತಜ್ಞರಾಗಿರುವ 18 ವರ್ಷದ ಆಸಿಫ್ ಹೇಳುತ್ತಾರೆ. 15 ಅಡಿ ಉದ್ದದ ಪೈಪುಗಳನ್ನು ರಾಶಿಯಿಂದ ಹೊರತೆಗೆದು, ಅವುಗಳನ್ನು ಪೈಪ್ ಕತ್ತರಿಸುವ ಯಂತ್ರದ ಮೇಲೆ ಒಂದೊಂದಾಗಿ ಇಡುವ ಮೊದಲು ಅವುಗಳನ್ನು ತನ್ನ ಎಡಭಾಗದ ಖಾಲಿ ನೆಲದ ಉದ್ದಕ್ಕೂ ತಳ್ಳುತ್ತಾರೆ. ಜಿಮ್ ಉಪಕರಣಗಳ ತಯಾರಿಕೆಯ ಉದ್ದ ಮತ್ತು ವಿನ್ಯಾಸದ ಅವಶ್ಯಕತೆಗಳ ಆಧಾರದ ಮೇಲೆ ಕತ್ತರಿಸಬೇಕಾದ ಭಾಗಗಳನ್ನು ಗುರುತಿಸಲು ಅವರು ಇಂಚಿನ ಟೇಪ್ ಬಳಸುತ್ತಾರೆ.
“ನಮ್ಮ ತಂದೆ ಬೇರೆಯವರ ಆಟೋ ಒಂದನ್ನು ಬಾಡಿಗೆಗೆ ಓಡಿಸುತ್ತಾರೆ. ಅವರ ಸಂಪಾದನೆ ಮನೆ ನಡೆಸಲು ಸಾಕಾಗುವುದಿಲ್ಲ. ಹೀಗಾಗಿ ನಾನು ಸಾಧ್ಯವಿರುವಷ್ಟು ಬೇಗ ಕೆಲಸ ಹುಡುಕಿಕೊಳ್ಳಬೇಕಾಯಿತು” ಎನ್ನುವ ಆಸಿಫ್ ಈ ಕೆಲಸದ ಮೂಲಕ ತಿಂಗಳಿಗೆ 6,500 ರೂ.ಗಳ ವೇತನವನ್ನು ಗಳಿಸುತ್ತಾರೆ.
ಕಾರ್ಖಾನೆಯ ಇನ್ನೊಂದು ಭಾಗದಲ್ಲಿ ಮೊಹಮ್ಮದ್ ನೌಷಾದ್ ಬ್ಯಾಂಡ್ ಸಾ ಗರಗಸ ಯಂತ್ರ ಬಳಸಿ ಘನ ಕೊಳವೆಯಾಕಾರಾದ ಕಬ್ಬಿಣವೊಂದನ್ನು ತುಂಡುಗಳಾಗಿ ಕತ್ತರಿಸುತ್ತಾರೆ. 32 ವರ್ಷ ಪ್ರಾಯದ ಅವರೂ ಇಲ್ಲಿ ಲೇಥ್ ಮಷೀನ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಕಾರ್ಖಾನೆಯಲ್ಲಿ ಆಸಿಮ್ ಅವರೊಂದಿಗೆ 2006ರಿಂದ ದುಡಿಯುತ್ತಿದ್ದಾರೆ. “ಇವುಗಳನ್ನು ವಿವಿಧ ರೀತಿಯ ಭಾರ ಎತ್ತುವ ಜಿಮ್ ಉಪಕರಣಗಳಿಗೆ ಜೋಡಿಸಲಾಗುತ್ತದೆ” ಎಂದು ನೌಷಾದ್ ಹೇಳುತ್ತಾರೆ. ಅವರು ಕೆಲಸ ಮಾಡುವ ಸ್ಥಳದಲ್ಲಿ ವೃತ್ತಾಕಾರದ ಕಬ್ಬಿಣದ ತುಂಡುಗಳನ್ನು ಅವುಗಳ ಭಾರಕ್ಕೆ ಅನುಗುಣವಾಗಿ ಒಂದರ ಮೇಲೊಂದರಂತೆ ಜೋಡಿಸಿ ಇಡಲಾಗಿತ್ತು. ನೌಷಾದ್ ತನ್ನ ಕೆಲಸದ ಮೂಲಕ ತಿಂಗಳಿಗೆ 16,000 ರೂಪಾಯಿ ಸಂಪಾದಿಸುತ್ತಾರೆ.
ನೌಷಾದ್ ಅವರ ಕೆಲಸದ ಸ್ಥಳದ ಎಡಭಾಗದಲ್ಲಿ ಮೊಹಮ್ಮದ್ ಆಸಿಫ್ ಸೈಫಿ (42) ಮತ್ತು ಅಮೀರ್ ಅನ್ಸಾರಿ (27) ಕುಳಿತಿದ್ದಾರೆ, ಅವರು ಎಂಟು ಸ್ಟೇಷನ್‌ಗಳ ಮಲ್ಟಿ-ಜಿಮ್ ಒಂದನ್ನು ಜೋಡಿಸುತ್ತಿದ್ದಾರೆ, ಇದು ಕುಪ್ವಾರಾ (ಜಮ್ಮು ಮತ್ತು ಕಾಶ್ಮೀರ) ದಲ್ಲಿರುವ ಸೇನಾ ಶಿಬಿರಕ್ಕೆ ತಲುಪಿಸಬೇಕಾದ ರವಾನೆಯ ಭಾಗವಾಗಿದೆ.
ಈ ಕಂಪನಿಯ ಗ್ರಾಹಕರಲ್ಲಿ ಶ್ರೀನಗರ ಮತ್ತು ಕತ್ರಾ (ಜೆ &ಕೆ), ಅಂಬಾಲಾ (ಹರಿಯಾಣ), ಬಿಕಾನೇರ್ (ರಾಜಸ್ಥಾನ) ಮತ್ತು ಶಿಲ್ಲಾಂಗ್ (ಮೇಘಾಲಯ) ನಲ್ಲಿರುವ ಭಾರತೀಯ ಸೇನಾ ಸಂಸ್ಥೆಗಳು ಸೇರಿವೆ ಮತ್ತು "ಖಾಸಗಿ ಜಿಮ್ ಸೆಟಪ್‌ಗಳ ಪಟ್ಟಿಯು ಮಣಿಪುರದಿಂದ ಕೇರಳದವರೆಗೆ ಇದೆ. ನಾವು ನೇಪಾಳ ಮತ್ತು ಭೂತಾನ್ ದೇಶಗಳಿಗೂ ರಫ್ತು ಮಾಡುತ್ತೇವೆ" ಎಂದು ಸಾಕಿಬ್ ಹೇಳುತ್ತಾರೆ.
ಇಬ್ಬರೂ ಆರ್ಕ್ ವೆಲ್ಡಿಂಗ್ ತಜ್ಞರಾಗಿದ್ದು, ಇವರು ಸಣ್ಣ ಭಾಗಗಳನ್ನು ತಯಾರಿಸುವ ಮತ್ತು ದೊಡ್ಡ ಉಪಕರಣಗಳನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಬೇಡಿಕೆಗಳು ಮತ್ತು ಅವರು ತಯಾರಿಸಬಹುದಾದ ಯಂತ್ರಗಳ ಸಂಖ್ಯೆಯನ್ನು ಅವಲಂಬಿಸಿ ಅವರು ತಿಂಗಳಿಗೆ ಸರಿಸುಮಾರು 50-60,000 ರೂ.ಗಳನ್ನು ಗಳಿಸುತ್ತಾರೆ.
"ಆರ್ಕ್ ವೆಲ್ಡಿಂಗ್ ಯಂತ್ರವು ಮುಂಭಾಗದಲ್ಲಿ ತೆಳುವಾದ ಎಲೆಕ್ಟ್ರೋಡ್ ಹೊಂದಿದ್ದು, ಅದು ದಪ್ಪ ಕಬ್ಬಿಣವನ್ನು ಭೇದಿಸಿ ಕರಗಿಸುತ್ತದೆ" ಎಂದು ಅಮೀರ್ ವಿವರಿಸುತ್ತಾರೆ, ಮತ್ತು "ಎರಡು ಲೋಹದ ತುಂಡುಗಳನ್ನು ಸೇರಿಸುವ ಪ್ರಕ್ರಿಯೆಯಲ್ಲಿ, ಎಲೆಕ್ಟ್ರೋಡ್ ಅನ್ನು ನಡುಗಿಸದೆ ಕೈಯಿಂದ ನಿರ್ವಹಿಸಬೇಕಾಗುತ್ತದೆ, ಇದು ಕಲಿಯಲು ಮತ್ತು ಕರಗತ ಮಾಡಿಕೊಳ್ಳಲು ಕಷ್ಟಕರವಾದ ಕೌಶಲ."
"ಅಮೀರ್ ಮತ್ತು ಆಸಿಫ್ ಠೇಕಾ [ಗುತ್ತಿಗೆ] ಆಧಾರದಲ್ಲಿ ಕೆಲಸ ಮಾಡುತ್ತಾರೆ" ಎಂದು ಸಾಕಿಬ್ ತಮ್ಮ ವೇತನ ರಚನೆಯನ್ನು ವಿವರಿಸುತ್ತಾರೆ, "ಕಡಿಮೆ ಕೌಶಲಗಳ ಅಗತ್ಯವಿರುವ ಕೆಲಸಗಳಂತಲ್ಲದೆ ಹೆಚ್ಚಿನ ಕೌಶಲದ ಅಗತ್ಯವಿರುವ ಕೆಲಸಗಳನ್ನು ಠೇಕಾ ಆಧಾರದಲ್ಲಿ ಮಾಡಿಸಲಾಗುತ್ತದೆ. ತಜ್ಞರಿಗೆ ಹೆಚ್ಚಿನ ಬೇಡಿಕೆಯಿದೆ ಮತ್ತು ಉತ್ತಮ ವೇತನಕ್ಕಾಗಿ ಚೌಕಾಸಿ ಮಾಡುವ ಶಕ್ತಿಯನ್ನು ಈ ಕೆಲಸ ಹೊಂದಿದೆ" ಎಂದು ಅವರು ಹೇಳುತ್ತಾರೆ.
ಕರೆಂಟ್ ಕೈಕೊಟ್ಟ ಕಾರಣ ಅಂಗಡಿಯೊಳಗೆ ಒಮ್ಮೆಲೇ ಕತ್ತಲಾವರಿಸಿತು. ಕಾರ್ಖಾನೆಯ ಜನರೇಟರ್ ಆನ್ ಆಗುವ ತನಕ ಒಂದಷ್ಟು ಹೊತ್ತು ಕೆಲಸ ನಿಂತಿತ್ತು. ಕಾರ್ಖಾನೆಯ ಯಂತ್ರಗಳ ಸದ್ದಿನ ನಡುವೆ ಜನರೇಟರ್ ಕೂಡಾ ಸದ್ದು ಮಾಡುತ್ತಿದ್ದ ಕಾರಣ ಅಲ್ಲಿ ಕೆಲಸ ಮಾಡುತ್ತಿದ್ದವರು ಈಗ ಎತ್ತರದ ದನಿಯಲ್ಲಿ ಕಿರುಚುವಂತೆ ಮಾತನಾಡಬೇಕಿತ್ತು.
ಮುಂದಿನ ಕೆಲಸದ ಸ್ಥಳದಲ್ಲಿ 21 ವರ್ಷದ ಇಬಾದ್ ಸಲ್ಮಾನಿ, ಮೆಟಲ್ ಇನರ್ಟ್ ಗ್ಯಾಸ್ (ಎಂಐಜಿ) ವೆಲ್ಡರ್ ಬಳಸಿ ಜಿಮ್ ಉಪಕರಣಗಳ ಭಾಗಗಳ ಕೀಲುಗಳನ್ನು ಬಲಪಡಿಸುತ್ತಿದ್ದಾರೆ. "ತೆಳು ಮತ್ತು ದಪ್ಪ ತುಂಡುಗಳನ್ನು ವೆಲ್ಡಿಂಗ್ ಮಾಡಲು ಅದಕ್ಕೆ ಎಷ್ಟು ತಾಪಮಾನ ಬೇಕೆನ್ನುವುದು ನಿಮಗೆ ತಿಳಿದಿರಬೇಕಾಗುತ್ತದೆ. ಇಲ್ಲವಾದರೆ ಕಬ್ಬಿಣ ಕರಗಿ ಹೋಗುತ್ತದೆ” ಎನ್ನುವ ಇಬಾದ್ ತಿಂಗಳಿಗೆ 10,000 ರೂ.ಗಳನ್ನು ಸಂಪಾದಿಸುತ್ತಾರೆ.
ಲೋಹದ ತುಂಡಿನ ಮೇಲೆ ಬಾಗಿಕೊಂಡು ಕೆಲಸ ಮಾಡುವ ಇಬಾದ್ ಈ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಕಿಡಿಗಳಿಂದ ತನ್ನ ಕಣ್ಣುಗಳು ಮತ್ತು ತೋಳುಗಳನ್ನು ರಕ್ಷಿಸಿಕೊಳ್ಳಲು ಕೈ ಕವಚವನ್ನು ಬಳಸುತ್ತಾರೆ. "ನಮ್ಮಲ್ಲಿ ಎಲ್ಲಾ ರಕ್ಷಣಾ ಸಾಧನಗಳಿವೆ. ಕೆಲಸದಲ್ಲಿ ಯಾವುದು ಸುರಕ್ಷಿತ, ಅಸುರಕ್ಷಿತ, ಅನುಕೂಲಕರ ಮತ್ತು ಅನಾನುಕೂಲಕರ ಎಂಬುದರ ಬಗ್ಗೆ ತಮ್ಮದೇ ಆದ ಮೌಲ್ಯಮಾಪನದ ಪ್ರಕಾರ ಕಾರ್ಮಿಕರು ಅವುಗಳನ್ನು ಬಳಸುತ್ತಾರೆ" ಎಂದು ಸಾಕಿಬ್ ಹೇಳುತ್ತಾರೆ.
"ಆಗಾಗ ನಮ್ಮ ಬೆರಳುಗಳು ಸುಟ್ಟುಹೋಗುತ್ತವೆ; ಕಬ್ಬಿಣದ ಪೈಪುಗಳು ನಮ್ಮ ಕಾಲುಗಳ ಮೇಲೆ ಬೀಳುತ್ತವೆ. ಗಾಯಗಳಂತೂ ಸಾಮಾನ್ಯ. ನಾವು ಬಾಲ್ಯದಿಂದಲೂ ಇದಕ್ಕೆ ಒಗ್ಗಿಕೊಂಡಿದ್ದೇವೆ. ಈ ಕೆಲಸವನ್ನು ಬಿಡಲು ನಮಗೆ ಬೇರೆ ಆಯ್ಕೆ ಲಭ್ಯವಿಲ್ಲ." ಎಂದು ಆಸಿಫ್ ಸೈಫಿ ಹೇಳುತ್ತಾರೆ.
ಕಾರ್ಖಾನೆಯ ಹಿರಿಯ ಕಾರಿಗಾರ್ ಬಾಬು ಖಾನ್ (60) ವೆಲ್ಡಿಂಗ್ ಕಿಡಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ತನ್ನ ಮುಂಗೈಗಳಿಗೆ ಹತ್ತಿ ಬಟ್ಟೆಯ ತುಂಡುಗಳನ್ನು ಸುತ್ತಿಕೊಂಡಿದ್ದಾರೆ. ಅದರ ಜೊತೆಗೆ ತನ್ನ ಸೊಂಟದ ಮತ್ತು ಎದೆಯ ಭಾಗಕ್ಕೂ ದೊಡ್ಡ ಬಟ್ಟೆಯ ತುಂಡೊಂದನ್ನು ಕಟ್ಟಿಕೊಂಡಿದ್ದಾರೆ. “ಮೊದಲು ಯುವಕನಾಗಿದ್ದ ಸಮಯದಲ್ಲಿ ಇನ್ನೊಂದು ಕಾರ್ಖಾನೆಯಲ್ಲಿ ಕಬ್ಬಿಣದ ರಾಡುಗಳನ್ನು ವೆಲ್ಡಿಂಗ್ ಮಾಡುವ ಕೆಲಸ ಮಾಡುತ್ತಿದ್ದೆ. ಆದರೆ ಈಗ ಬಫಿಂಗ್ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.
"ಬಫಿಂಗ್ ಎನ್ನುವುದು ಕತ್ತರಿಸುವ ಮತ್ತು ವೆಲ್ಡಿಂಗ್ ಮಾಡುವ ಪ್ರಕ್ರಿಯೆಗಳಲ್ಲಿ ಲೋಹದ ಮೇಲ್ಮೈಯಲ್ಲಿ ಉಂಟಾಗುವ ಉಬ್ಬುಗಳನ್ನು ತೆಗೆದುಹಾಕುವ ಕೊನೆಯ ತಾಂತ್ರಿಕ ಪ್ರಕ್ರಿಯೆಯಾಗಿದೆ" ಎಂದು ಸಾಕಿಬ್ ವಿವರಿಸುತ್ತಾರೆ. ಬಾಬು ತಿಂಗಳಿಗೆ 10,000 ರೂ.ಗಳ ವೇತನವನ್ನು ಗಳಿಸುತ್ತಾರೆ.
ಮೇಲ್ಮೈಗಳನ್ನು ನಯಗೊಳಿಸಿದ ನಂತರ, 45 ವರ್ಷದ ಶಕೀರ್ ಅನ್ಸಾರಿ, ಉಪಕರಣದ ಭಾಗಗಳ ಕೀಲುಗಳನ್ನು ಮುಚ್ಚಲು ಬಾಡಿ ಫಿಲ್ಲರ್ ಪುಟ್ಟಿಯನ್ನು ಹಚ್ಚುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ರೆಗ್ಮಲ್ (ಸ್ಯಾಂಡ್ ಪೇಪರ್) ಬಳಸಿ ಮೃದುಗೊಳಿಸುತ್ತಾರೆ. ಶಕೀರ್ ಸಾಕಿಬ್ ಅವರ ಸೋದರ ಮಾವನಾಗಿದ್ದು, ಆರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಠೇಕಾ ಆಧಾರದಲ್ಲಿ ಕೆಲಸ ಮಾಡುತ್ತಾರೆ ಮತ್ತು ತಿಂಗಳಿಗೆ 50,000 ರೂ.ಗಳವರೆಗೆ ಸಂಪಾದಿಸುತ್ತಾರೆ. "ಡೀಸೆಲ್ ಚಾಲಿತ ಆಟೋಗಳಿಗೆ ಕಬ್ಬಿಣದ ನಾಜಲ್ಗಳನ್ನು ತಯಾರಿಸುವ ನನ್ನ ಸ್ವಂತ ಉತ್ಪಾದನಾ ವ್ಯವಹಾರವನ್ನು ಹೊಂದಿದ್ದೆ. ಆದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಆಟೋಗಳು ಮಾರುಕಟ್ಟೆಗೆ ಬಂದ ನಂತರ, ನನ್ನ ವ್ಯವಹಾರವು ಸಂಪೂರ್ಣವಾಗಿ ಕುಸಿಯಿತು" ಎಂದು ಅವರು ಹೇಳುತ್ತಾರೆ.
ಉಪಕರಣದ ಮೇಲೆ ಪ್ರೈಮರ್ ಮತ್ತು ಪೇಂಟ್ ಹಚ್ಚುವ ಕೆಲಸವನ್ನು ಶಕೀರ್ ಮುಗಿಸಿದ ನಂತರ, ಅದು ಯಾಂತ್ರಿಕವಾಗಿ ಪೌಡರ್ ಕೋಟಿಂಗ್ ಪ್ರಕ್ರಿಯೆಗೆ ಒಳಗಾಗುತ್ತದೆ, "ಇದು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಉಪಕರಣಗಳನ್ನು ತುಕ್ಕು ಮುಕ್ತವಾಗಿಸುತ್ತದೆ" ಎಂದು ಸಾಕಿಬ್ ವಿವರಿಸುತ್ತಾರೆ.
ಹೊಸದಾಗಿ ರಚಿಸಲಾದ ಎಲ್ಲಾ ಸಲಕರಣೆಗಳ ಭಾಗಗಳನ್ನು ಗೇಟ್ ಬಳಿಯಿರುವ ಪ್ರದೇಶದಲ್ಲಿ ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗುತ್ತದೆ, ಅಲ್ಲಿಂದ ಅವುಗಳನ್ನು ಸಾಗಣೆಗಾಗಿ ಲಾರಿಗಳಿಗೆ ಲೋಡ್ ಮಾಡಲಾಗುತ್ತದೆ. ಪ್ಯಾಕರುಗಳು ಮತ್ತು ಫಿಟ್ಟರುಗಳಾದ ಮೊಹಮ್ಮದ್ ಆದಿಲ್, ಸಮೀರ್ ಅಬ್ಬಾಸಿ, ಮೊಹ್ಸಿನ್ ಖುರೇಷಿ ಮತ್ತು ಶಹಬಾಜ್ ಅನ್ಸಾರಿ ಅವರ ತಂಡವು 17-18 ವರ್ಷದೊಳಗಿನವರಾಗಿದ್ದು, ಅವರು ತಿಂಗಳಿಗೆ 6,500 ರೂ.ಗಳನ್ನು ಗಳಿಸುತ್ತಾರೆ.
ಅಷ್ಟು ಹೊತ್ತಿಗೆ ಕುಪ್ವಾರದಲ್ಲಿನ ಸೇನಾ ಜಿಮ್‌ಗೆ ಸೇರಿದ ಲಾರಿ ಬಂದು ನಿಂತಿತ್ತು. ಅವರೆಲ್ಲ ಲಾರಿಗೆ ವಸ್ತುಗಳನ್ನು ಲೋಡ್ ಮಾಡಲಾರಂಭಿಸಿದರು.
“ಬೇಡಿಕೆಯನ್ನು ಎಲ್ಲಿಗೆ ಪೂರೈಸಲಾಗುತ್ತದೆಯೋ ಅಲ್ಲಿಗೆ ನಾವು ರೈಲಿನಲ್ಲಿ ಹೋಗಿ ಉಪಕರಣಗಳನ್ನು ಜೋಡಿಸಿ ಕೊಟ್ಟು ಬರುತ್ತೇವೆ ಈ ಕೆಲಸದಿಂದಾಗಿ, ನಾವು ಬೆಟ್ಟಗಳು, ಸಾಗರಗಳು ಮತ್ತು ಮರುಭೂಮಿಯನ್ನು ನೋಡಲು ಸಾಧ್ಯವಾಯಿತು." ಎಂದು ಸಮೀರ್ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು