5ನೇ ತರಗತಿಯ ತನಕ ಹುಡುಗನಾಗಿಯೇ ಬೆಳೆದ ರಮ್ಯಾ, ನಂತರ ಹುಡುಗಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು.
“[ಮಾಧ್ಯಮಿಕ] ಶಾಲೆಯಲ್ಲಿದ್ದ ಸಂದರ್ಭದಲ್ಲಿ ನಾನು ಶಾರ್ಟ್ಸ್ ತೊಡುತ್ತಿದ್ದ ಕಾರಣ ತೊಡೆಗಳು ಕಾಣುತ್ತಿದ್ದವು. ಇದರಿಂದಾಗಿ ಹುಡುಗರ ನಡುವೆ ನನಗೆ ಮುಜುಗರವೆನ್ನಿಸುತ್ತಿತ್ತು” ಎಂದು ಹೇಳುವ ಅವರು, ಈಗ ತನ್ನ ಮೂವತ್ತನೇ ವಯಸ್ಸಿನಲ್ಲಿ ಕೆಂಪು ಸೀರೆ ಮತ್ತು ಉದ್ದನೆಯ ಕಪ್ಪು ಕೂದಲಿನೊಂದಿಗೆ ತನ್ನ ಹೆಣ್ತನವನ್ನು ಆನಂದಿಸುತ್ತಿದ್ದಾರೆ.
ರಮ್ಯಾ ಚೆಂಗಲ್ಪಟ್ಟು ಜಿಲ್ಲೆಯ ತಿರುಪೊರೂರ್ ಪಟ್ಟಣದಲ್ಲಿ ಸಣ್ಣ ಅಮ್ಮನ್ (ದೇವತೆ) ದೇವಾಲಯವೊಂದನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ತಾಯಿ ವೆಂಗಮ್ಮ ಅವರ ಪಕ್ಕದಲ್ಲಿ ನೆಲದ ಮೇಲೆ ಕುಳಿತಿದ್ದರು. "ಬೆಳೆಯುತ್ತಿರುವಾಗ ಅವಳು [ರಮ್ಯಾ ಅವರತ್ತ ತೋರಿಸುತ್ತಾ] ಚೂಡಿದಾರ್, ದಾವಣಿ, ಮತ್ತು ಕಮ್ಮಲ್ [ಕಿವಿಯೋಲೆ] ಧರಿಸುವದನ್ನು ಇಷ್ಟಪಡುತ್ತಿದ್ದಳು. ಹುಡುಗನಂತೆ ವರ್ತಿಸು ಎಂದು ನಾವು ಹೇಳಲು ಪ್ರಯತ್ನಿಸಿದೆವು. ಆದರೆ ಅವಳ ಆಯ್ಕೆ ಹೀಗಿರುವುದಾಗಿತ್ತು" ಎಂದು ರಮ್ಯಾ ಅವರ 56 ವರ್ಷದ ತಾಯಿ ಹೇಳುತ್ತಾರೆ.
ಆ ಹೊತ್ತಿಗೆ ಕನ್ನಿಯಮ್ಮ ದೇವಸ್ಥಾನ ಮುಚ್ಚಿದ್ದ ಕಾರಣ ಅಲ್ಲೊಂದು ಮೌನವಿತ್ತು. ಇದು ನಮ್ಮ ಮಾತುಕತೆಗೆ ಅಗತ್ಯವಿದ್ದ ಮುಕ್ತತೆಯನ್ನು ಒದಗಿಸಿಕೊಟ್ಟಿತ್ತು. ಈ ತಾಯಿ ಮಗಳ ಜೋಡಿ ಈ ಕನ್ನಿಯಮ್ಮ ದೇವಸ್ಥಾನದ ಪೂಜೆಗಾಗಿ ಒಟ್ಟಿಗೆ ಬರುತ್ತಾರೆ.
ರಮ್ಯಾ ತನ್ನ ಪೋಷಕರ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರು ಇದೇ ಇರುಳರ್ ವಾತಾವರಣದಲ್ಲಿ ಬೆಳೆದರು. ತಮಿಳುನಾಡಿನ ಆರು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಡಿಯಲ್ಲಿ (ಪಿವಿಟಿಜಿ) ಇರುಳರನ್ನು ಸಹ ಪಟ್ಟಿ ಮಾಡಲಾಗಿದೆ. ಅವರ ಪೋಷಕರು, ತಮ್ಮ ಸಮುದಾಯದ ಇತರರಂತೆ, ಹೊಲಗಳಲ್ಲಿ, ನಿರ್ಮಾಣ ಸ್ಥಳಗಳಲ್ಲಿ ಮತ್ತು ಎಂಜಿಎನ್ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಸೈಟುಗಳಲ್ಲಿ ಕೆಲಸ ಮಾಡುವ ದಿನಕ್ಕೆ 250ರಿಂದ 300 ರೂಪಾಯಿಗಳವರೆಗೆ ಕೆಲಸವಿದ್ದಾಗ ದುಡಿಯುತ್ತಿದ್ದರು.
"ಆ ದಿನಗಳಲ್ಲಿ ಜನರಿಗೆ ತಿರುನಂಗೈಯರ (ಟ್ರಾನ್ಸ್ ಮಹಿಳೆಯರಿಗೆ ಬಳಸಲಾಗುವ ತಮಿಳು ಹೆಸರು) ಬಗ್ಗೆ ತಿಳಿದಿರಲಿಲ್ಲ. ಮನೆಯಿಂದ ಹೊರಬಿದ್ದರೆ ಪಟ್ಟಣದ ಜನರು ನನ್ನ ಬೆನ್ನ ಹಿಂದೆ ಮಾತನಾಡುತ್ತಿದ್ದರು” ಎಂದು ರಮ್ಯಾ ಹೇಳುತ್ತಾರೆ, "ಅವರು 'ಅವನು ಹುಡುಗನಂತೆ ಬಟ್ಟೆ ಹಾಕಿದ್ದಾನೆ ಆದರೆ ಹುಡುಗಿಯಂತೆ ಆಡುತ್ತಾನೆ, ಅದು ಗಂಡೋ ಅಥವಾ ಹೆಣ್ಣೋ?' ಎಂದು ಕೇಳುತ್ತಿದ್ದರು ಮತ್ತು ಇದು ನನಗೆ ನೋವುಂಟು ಮಾಡುತ್ತಿತ್ತು.”























