"ಹಸಿವು ಸೇರಿದಂತೆ ಹಲವು ವಿಷಯಗಳನ್ನು ಮದ್ಯದಿಂದ ಮರೆಯುವುದು ಸುಲಭ" ಎಂದು ಸಿಂಗ್ದುಯಿ ಗ್ರಾಮದ ನಿವಾಸಿ ರಬೀಂದ್ರ ಭುಯಿಯಾ ಹೇಳುತ್ತಾರೆ.
ಐವತ್ತರ ಹರೆಯದಲ್ಲಿರುವ ಭುಯಿಯಾ ಸಬರ್ (ಶಬೊರ್) ಆದಿವಾಸಿ (ಪಶ್ಚಿಮ ಬಂಗಾಳದಲ್ಲಿ ಸಾವರ್ ಎಂದು ಪಟ್ಟಿ ಮಾಡಲಾಗಿದೆ). ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದ, ಸಬರ್ ಸಮುದಾಯದ ಜನರು ಭಾರತದ ಪೂರ್ವ ಭಾಗಗಳಲ್ಲಿ ವಾಸಿಸುತ್ತಾರೆ ಮತ್ತು ಸಾವೋರಾ, ಸೋರಾ, ಶಬರ್ ಮತ್ತು ಸೂರಿಸ್ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುತ್ತಾರೆ. ಲೋಧಾ ಸಾವರ್ ಎನ್ನುವ ಹೆಸರು (ಅವಿಭಜಿತ) ಪಶ್ಚಿಮ ಮೇದಿನಿಪುರದಲ್ಲಿ ಪ್ರಧಾನವಾಗಿದೆ, ಮತ್ತು ಖಾರಿಯಾ ಸಾವರ್ ಸಮುದಾಯದವರು ಹೆಚ್ಚಾಗಿ ಪುರುಲಿಯಾ, ಬಂಕುರಾ ಮತ್ತು ಪಶ್ಚಿಮ ಮೇದಿನಿಪುರದಲ್ಲಿ (ಅವಿಭಜಿತ) ವಾಸಿಸುತ್ತಿದ್ದಾರೆ.
ಮಹಾಶ್ವೇತಾ ದೇವಿಯವರ ದಿ ಬುಕ್ ಆಫ್ ದಿ ಹಂಟರ್ (ಮೊದಲು ಬಂಗಾಳಿ ಭಾಷೆಯಲ್ಲಿ ಬ್ಯಾಡ್ಖಂಡಾ ಎನ್ನುವ ಹೆಸರಿನಲ್ಲಿ 1994ರಲ್ಲಿ ಪ್ರಕಟವಾಯಿತು), ಈ ಸಮುದಾಯ ತೀವ್ರ ಬಡತನದಲ್ಲಿರುವುದನ್ನು ಮತ್ತು ಸಮಾಜದ ಅಂಚಿನಲ್ಲಿರುವುದನ್ನು ಚಿತ್ರಿಸುತ್ತದೆ. ಈಗ ದಶಕಗಳ ನಂತರವೂ, ಹೆಚ್ಚಿನ ಬದಲಾವಣೆಯಾಗಿಲ್ಲ ಮತ್ತು ಪಶ್ಚಿಮ ಬಂಗಾಳದ ಆದಿವಾಸಿಗಳ ಕುರಿತಾದ ಲಿವಿಂಗ್ ವರ್ಲ್ಡ್ ಎಂಬ 2020ರ ವರದಿಯು ಹೇಳುವಂತೆ, "ಸಮೀಕ್ಷೆ ನಡೆಸಲಾದ 67 ಪ್ರತಿಶತದಷ್ಟು ಹಳ್ಳಿಗಳು ಹಸಿವಿನಿಂದ ಬಳಲುತ್ತಿವೆ."
ಬ್ರಿಟಿಷ್ ಸರ್ಕಾರವು ಈ ಸಮುದಾಯವನ್ನು18ನೇ ಶತಮಾನದ ಉತ್ತರಾರ್ಧದಿಂದ 1952ರವರೆಗೆ 'ಕ್ರಿಮಿನಲ್ ಬುಡಕಟ್ಟುʼ ಎನ್ನುವ ಹಣೆಪಟ್ಟಿಯಡಿ ಇರಿಸಿತ್ತು. ಸಾಂಪ್ರದಾಯಿಕವಾಗಿ ಬೇಟೆಗಾರರಾಗಿರುವ ಇವರು ಹಣ್ಣುಗಳು, ಎಲೆಗಳು ಮತ್ತು ಬೇರುಗಳನ್ನು ಸಂಗ್ರಹಿಸುವಲ್ಲಿ ಮತ್ತು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವಲ್ಲಿ ನಿಪುಣರಾಗಿದ್ದಾರೆ. ಸ್ವಾತಂತ್ರ್ಯದ ನಂತರ, ಕೆಲವರಿಗೆ ಕೃಷಿ ಮಾಡಲು ಭೂಮಿಯನ್ನು ನೀಡಲಾಯಿತು. ಆದರೆ ಅದರಲ್ಲಿ ಹೆಚ್ಚಿನವು ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯಾಗಿದ್ದವು. ಹೀಗಾಗಿ ಅವರು ವಲಸೆ ಕಾರ್ಮಿಕರಾಗಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಮುದಾಯವನ್ನು ಡಿನೋಟಿಫೈ ಮಾಡಲಾಗಿದೆಯಾದರೂ ಅವರ ಮೇಲಿನ ಹಳೆಯ ಕಳಂಕ ತೊಲಗಿಲ್ಲ. ಮತ್ತು ಅವರು ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಕರುಣೆಯಲ್ಲಿ ಬದುಕುತ್ತಿದ್ದಾರೆ, ಅವರು ಈ ಜನರ ಚಲನವಲನದ ಮೇಲೆ ನಿರ್ಬಂಧಗಳನ್ನು ಹೇರುತ್ತಾರೆ.
ಕಡಿಮೆ ಗಳಿಕೆಯ ಅವಕಾಶಗಳೊಂದಿಗೆ, ಪಶ್ಚಿಮ ಮೇದಿನಿಪುರ ಮತ್ತು ಜಾರ್ಗ್ರಾಮ್ ಜಿಲ್ಲೆಗಳ ಸಬರ್ ಸಮುದಾಯದಲ್ಲಿ ಹಸಿವು ಸ್ಪಷ್ಟವಾಗಿ ಗೋಚರಿಸುತ್ತದೆ. ಭುಯಿಯಾ ಅವರಂತಹ ಅನೇಕರು ತಮ್ಮ ಹಸಿವನ್ನು ಮದ್ಯದಿಂದ ನೀಗಿಸುತ್ತಾರೆ ಅಥವಾ “ದಿನಕ್ಕೆ ಮೂರು ಬಾರಿ ಪಾಂತಾ ಭಾತ್ (ನೀರಿನಲ್ಲಿ ನೆನೆಸಿದ ಅನ್ನ) ತಿನ್ನುತ್ತೇವೆ” ಎನ್ನುತ್ತಾರೆ ಬಂಕಿಮ್ ಮಲ್ಲಿಕ್. ತಪೋಬನ್ ಗ್ರಾಮದ 55 ವರ್ಷದ ನಿವಾಸಿಯಾದ ಮಲ್ಲಿಕ್, ಮನೆಯ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ ಐದು ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಒದಗಿಸುವ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಉಲ್ಲೇಖಿಸುತ್ತಿದ್ದಾರೆ. ಅವರು ತನ್ನ ಮುರುಕಲು ಮನೆಯ ಮುಂದೆ ಕುಳಿತು ಪಾಂತಾ ಭಾತ್ ತಿನ್ನುತ್ತಿದ್ದರು.























