ಅರತ್ತೊಂಡಿ ಗ್ರಾಮದ ಕಿರಿದಾದ ಗಲ್ಲಿಗಳ ತುಂಬಾ ಸಿಹಿಯಾದ ಕಾಯಿ ಅಮಲೇರಿಸುವ ಘಮಲು ಹರಡಿದೆ.
ಪ್ರತಿ ಮನೆಯ ಮುಂದಿನ ಅಂಗಳದಲ್ಲಿ ಹಳದಿ, ಹಸಿರು ಮತ್ತು ಕಂದು ಬಣ್ಣದ ಮಹುವಾ ಹೂವುಗಳು ಬಿದಿರಿನ ಚಾಪೆಗಳು, ಮೆತ್ತನೆಯ ರಗ್ಗುಗಳು ಮತ್ತು ಮಣ್ಣಿನ ನೆಲದ ಮೇಲೆ ಒಣಗುತ್ತಿವೆ. ಇತ್ತೀಚಿಗಷ್ಟೇ ಕಿತ್ತು ತಂದಿರುವ ಹಳದಿ ಮತ್ತು ಹಸಿರು ಬಣ್ಣದ ಹೂವುಗಳು ಬಿಸಿಲಿಗೆ ಒಣಗಿ ಗಟ್ಟಿಯಾದ ಕಂದು ಬಣ್ಣದ ಹೂವುಗಳಾಗಿ ಬದಲಾಗಿವೆ.
ಚುನಾವಣೆ ಒಂದು ಕಡೆಯಲ್ಲಿದ್ದರೆ, ಮಹಾರಾಷ್ಟ್ರದ ಗೊಂಡಿಯಾದಲ್ಲಿ ಮಹುವಾ ಸೀಸನ್ ಶುರುವಾಗಿದೆ.
"ಏಪ್ರಿಲ್ನಲ್ಲಿ ಮಹುವಾ, ಮೇ ತಿಂಗಳಿನಲ್ಲಿ ಟೆಂಡು ಎಲೆಗಳು ನಮ್ಮಲ್ಲಿರುತ್ತವೆ," ಎಂದು ಸಾರ್ಥಿಕಾ ಕೈಲಾಶ್ ಆಡೆ ನಗುತ್ತಾ ಹೇಳುತ್ತಾರೆ. 35 ವರ್ಷ ವಯಸ್ಸಿನ ಇವರು ಪ್ರತಿದಿನ ಬೆಳಿಗ್ಗೆ, ಮನ ಮತ್ತು ಗೊಂಡ ಬುಡಕಟ್ಟು ಜನಾಂಗದ ಇತರ ಜನರೊಂದಿಗೆ ಸುತ್ತಮುತ್ತಲಿನ ಕಾಡುಗಳಿಗೆ ಹೋಗಿ 4-5 ಗಂಟೆಗಳ ಕಾಲ ಎತ್ತರದ ಮಹುವಾ ಮರಗಳಿಂದ ಉದುರುವ ಮೃದುವಾದ ಹೂವುಗಳನ್ನು ಸಂಗ್ರಹಿಸುತ್ತಾರೆ. ಅವುಗಳ ಎಲೆಗಳು ಈಗ ಕೆಂಪು ಬಣ್ಣದಲ್ಲಿವೆ. ಮಧ್ಯಾಹ್ನದ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇದೆ, ಬಿಸಿಲಿನ ಉರಿ ಹೆಚ್ಚಾಗುತ್ತಿದೆ.
ಪ್ರತಿ ಮಹುವಾ ಮರ ಸರಾಸರಿ 4-6 ಕಿಲೋಗ್ರಾಂಗಳಷ್ಟು ಹೂವುಗಳನ್ನು ಕೊಡುತ್ತದೆ. ಅರತ್ತೊಂಡಿ ಗ್ರಾಮದ ಜನರು (ಸ್ಥಳೀಯರ ಬಾಯಲ್ಲಿ ಅರಕ್ತೊಂಡಿ) ಬಿದಿರಿನ ಡಬ್ಬಿಗಳಲ್ಲಿ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಲು ಮನೆಗೆ ತರುತ್ತಾರೆ. ಒಂದು ಕಿಲೋ ಒಣಗಿದ ಮಹುವಾಗೆ 35-40 ರುಪಾಯಿ ಸಿಗುತ್ತದೆ. ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 5-7 ಕಿಲೋ ಮಹುವಾಗಳನ್ನು ಸಂಗ್ರಹಿಸಬಹುದು.
















