ಮಲಿಯಾಮಾದಲ್ಲಿರುವ ಬೌದ್ಧರ ಈ ಕೇರಿಯಲ್ಲಿ ಶಾಂತವಾದ ಮಧ್ಯಾಹ್ನದ ಹೊತ್ತಿನಲ್ಲಿ ಖುಷಿಯಿಂದ ಜೋರಾಗಿ ಕೇಕೆ ಹಾಕುತ್ತಾ, ಬೊಬ್ಬೆ ಹೊಡೆಯುತ್ತಾ ‘ಮೆರವಣಿಗೆಯೊಂದು’ ಬರುತ್ತದೆ. ಹೌದು, ಇದು ಅಕ್ಟೋಬರ್‌ ತಿಂಗಳು, ಯಾವುದೇ ಪೂಜೆಗಳಿಲ್ಲ, ಪೆಂಡಾಲ್‌ಗಳೂ ಇಲ್ಲ. ದುರ್ಗಾ ಪೂಜೆಗೆ ಶಾಲೆಗಳಿಗೆ ರಜೆ ಇದ್ದರಿಂದ, ಮನೆಯಲ್ಲಿಯೇ ಇರುವ ಎರಡರಿಂದ ಹನ್ನೊಂದು ವರ್ಷದ ವರೆಗಿನ ಎಂಟು-ಹತ್ತು ಮೊನ್ಪಾ ಮಕ್ಕಳು ಮೆರವಣಿಗೆ ಬರುತ್ತಿದ್ದಾರೆ.

ಇಲ್ಲಿಂದ ಸುಮಾರು 7- 10 ಕಿಲೋಮೀಟರ್ ದೂರದ ದಿರಾಂಗ್‌ನಲ್ಲಿ ಎರಡು ಖಾಸಗಿ ಶಾಲೆಗಳೂ, ಒಂದು ಸರ್ಕಾರಿ ಶಾಲೆಯೂ ಇದೆ. ಮಕ್ಕಳು ನಡೆದುಕೊಂಡೇ ಈ ಶಾಲೆಗಳಿಗೆ ಹೋಗುತ್ತಾರೆ. ಎಲ್ಲಾ ಶಾಲೆಗಳಿಗೆ ಹತ್ತು ದಿನಗಳ ವರೆಗೆ ರಜೆ ನೀಡಲಾಗಿದೆ. ಆದರೆ, ಮನೆಯಲ್ಲಿ ಆರಾಮಾಗಿ ದಿನ ಕಳೆಯುವ ಮಕ್ಕಳು ತಮ್ಮ ಆಟದ ಸಮಯವನ್ನು ಮಾತ್ರ ಮರೆತಿಲ್ಲ. ಮಧ್ಯಾಹ್ನದ ಊಟದ ನಂತರ 2 ಗಂಟೆಗೆ ಇವರು ಆಟಕ್ಕೆ ಹೋಗುತ್ತಾರೆ. ಸಮುದ್ರ ಮಟ್ಟದಿಂದ 1,800 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಈ ಹಳ್ಳಿಯಲ್ಲಿ ಇಂಟರ್ನೆಟ್ ಸಂಪರ್ಕ ತೀರ ಕೆಡುತ್ತದೆ. ಆ ಸಮಯದಲ್ಲಿ ಮಕ್ಕಳು ಮೊಬೈಲ್‌ ಫೋನ್‌ಗಳನ್ನು ತಮ್ಮ ಹೆತ್ತವರ ಕೈಗೆ ವಾಪಾಸು ಕೊಟ್ಟು, ಮಂಖಾ ಲಾಯ್ದಾ (ಅಕ್ರೋಟಿನ ಆಟ) ಆಡಲು ಬೀದಿಯಲ್ಲಿ ಸೇರುತ್ತಾರೆ.

ಈ ಹಳ್ಳಿಯ ಸುತ್ತಮುತ್ತಲಿನ ಕಾಡುಗಳಲ್ಲಿ ಹೇರಳವಾದ ಅಕ್ರೋಟುಗಳು (ವಾಲ್‌ನಟ್) ಬೆಳೆಯುತ್ತವೆ. ಅರುಣಾಚಲ ಪ್ರದೇಶವು ಭಾರತದಲ್ಲಿ ಈ ಒಣ ಹಣ್ಣನ್ನು ಉತ್ಪಾದಿಸುವ ನಾಲ್ಕನೇ ಅತಿದೊಡ್ಡ ರಾಜ್ಯ. ಪಶ್ಚಿಮ ಕಾಮೆಂಗ್‌ ಜಿಲ್ಲೆಯ ಈ ಅಕ್ರೋಟುಗಳು ವಿಶೇಷವಾಗಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ.ಆದರೆ ಈ ಹಳ್ಳಿಯಲ್ಲಿ ಯಾರೂ ಅವುಗಳನ್ನು ಬೆಳೆಸುವುದಿಲ್ಲ. ಮಕ್ಕಳಿಗೆ ಅಕ್ರೋಟುಗಳು ಕಾಡಿನಲ್ಲಿ ಸಿಗುತ್ತವೆ. ಸಾಂಪ್ರದಾಯಿಕವಾಗಿ ಮಾಲಿಯಾಮಾದಲ್ಲಿರುವ ಟಿಬೆಟ್‌ ಮೂಲದ ಪಶುಪಾಲಕ ಮತ್ತು ಬೇಟೆಗಾರ ಸಮುದಾಯದ 17 ರಿಂದ 20 ಮೊನ್ಪಾ ಕುಟುಂಬಗಳು ತಮ್ಮ ಮನೆಯ ಬಳಕೆಗಾಗಿ ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತವೆ. "ಊರಿನವರು ಪ್ರತಿ ವಾರ ಗುಂಪು ಗುಂಪಾಗಿ ಕಾಡಿಗೆ ಹೋಗಿ ಅಣಬೆಗಳು, ಬೀಜಗಳು, ಹಣ್ಣುಗಳು, ಕಟ್ಟಿಗೆ ಮತ್ತು ಇತರ ಕಾಡು ಉತ್ಪನ್ನಗಳನ್ನು ತರುತ್ತಾರೆ," ಎಂದು 53 ವರ್ಷ ಪ್ರಾಯದ ರಿಂಚಿನ್ ಜೊಂಬಾ ಹೇಳುತ್ತಾರೆ. ಮಕ್ಕಳು ಪ್ರತಿದಿನ ಮಧ್ಯಾಹ್ನ ಬೀದಿಗಳಿಗೆ ಆಟವಾಡಲು ಬರುವ ಮೊದಲು ಜೇಬುಗಳ ಮತ್ತು ಕೈಗಳ ತುಂಬಾ ಅಕ್ರೋಟುಗಳನ್ನು ತುಂಬಿಕೊಂಡು ಬರುತ್ತಾರೆ.

ವೀಡಿಯೊ ನೋಡಿ: ಮೊನ್ಪಾ ಹಳ್ಳಿಯ ಪುಟ್ಟ ಮಕ್ಕಳ ಆಟಗಳು

ಎಲ್ಲಾ ಆಟಗಾರರೂ ತಮ್ಮಲ್ಲಿರುವ ಆಕ್ರೋಟುಗಳಲ್ಲಿ ಮೂರು ಮೂರನ್ನು ಬೀದಿಯ ಮೇಲೆ ಒಂದೇ ಸಾಲಿನಲ್ಲಿ ಜೋಡಿಸಿ ಇಡುತ್ತಾರೆ. ನಂತರ ಅವರು ತಮ್ಮ ಕೈಯಲ್ಲಿರುವ ಒಂದು ಅಕ್ರೋಟಿನಿಂದ ಆ ಸಾಲಿನಲ್ಲಿರುವ ಅಕ್ರೋಟಿನ ಮೇಲೆ ಗುರಿಯಿಟ್ಟು ಎಸೆಯುತ್ತಾರೆ. ನೀವು ನೇರವಾಗಿ ಎಷ್ಟು ಅಕ್ರೋಟಿನ ಮೇಲೆ ಹೊಡೆಯುತ್ತೀರೋ, ಅಷ್ಟು ಗೆಲ್ಲುತ್ತೀರಿ. ಇದಕ್ಕೆ ಪ್ರತಿಫಲವಾಗಿ ನೀವು ಗೆದ್ದ ಅಕ್ರೋಟುಗಳನ್ನು ಒಡೆದು, ಸಿಪ್ಪೆ ತೆಗೆದು ಅದರ ಬೀಜಗಳನ್ನು ತಿನ್ನಬಹುದು! ಲೆಕ್ಕವಿಲ್ಲದಷ್ಟು ಸುತ್ತುಗಳ ಆಟ ಆಡಿ, ಬೇಕಾದಷ್ಟು ಅಕ್ರೋಟುಗಳನ್ನು ತಿಂದ ಮೇಲೆ ಮಕ್ಕಳು ಥಾ ಖ್ಯಂದಾ ಲೈದಾ (ಹಗ್ಗ ಜಗ್ಗಾಟ) ಆಡಲು ಹೋಗುತ್ತಾರೆ.

ಈ ಆಟದಲ್ಲಿ ಎಳೆದಾಡಲು ಏನಾದರೂ ಬೇಕು, ಅದಕ್ಕಾಗಿ ಅಲ್ಲೇ ಬಿದ್ದಿರುವ ಬಟ್ಟೆಯ ತುಂಡಗಳನ್ನು ಹಗ್ಗವಾಗಿ ಬಳಸುತ್ತಾರೆ. ಇದರಲ್ಲೂ ಮಕ್ಕಳು ತಮ್ಮ ಚುರುಕು ಬುದ್ದಿಯನ್ನು ಚೆನ್ನಾಗಿ ಬಳಸುತ್ತಾರೆ. ತಮ್ಮ ಮನೆಯವರು ದೀರ್ಘಾಯುಷ್ಯ ಸಿಗಲಿ ಎಂದು ವರ್ಷಕ್ಕೊಮ್ಮೆ ಪೂಜೆ ಮಾಡಿ ಮನೆಯ ಮೇಲೆ ಹಾರಿಸುವ ಧ್ವಜಗಳನ್ನೇ ಜೋಡಿಸಿ ಹಗ್ಗ ಮಾಡುತ್ತಾರೆ.

ಪ್ರತೀ ಕೆಲವು ಗಂಟೆಗಳಿಗೊಮ್ಮೆ ಆಟಗಳು ಬದಲಾಗುತ್ತಲೇ ಇರುತ್ತವೆ. ಖೋ-ಖೋ, ಕಬಡ್ಡಿ, ಓಟ ಅಥವಾ ಗುಂಡಿಗಳಿಗೆ ಜಿಗಿಯುವುದು ಇವೆಲ್ಲ ಇವರ ಆಟಗಳು. ಮಕ್ಕಳು ಜೆಸಿಬಿ (ಬುಲ್ಡೋಜರ್) ಆಟಿಕೆಯೊಂದಿಗೂ ಆಟಗಳನ್ನು ಆಡುತ್ತಾರೆ. ಮನರೇಗಾ ಕೆಲಸದಲ್ಲಿ ಇವರ ತಂದೆ-ತಾಯಿಂದಿರು ಮಣ್ಣು ಅಗೆಯುವ ಕೆಲಸ ಮಾಡುವಂತೆ, ಈ ಜೆಸಿಬಿ ಆಟಿಕೆಯನ್ನು ಬಳಸಿ ಮಣ್ಣು ಅಗೆಯುವ ಆಟ ಆಡುತ್ತಾರೆ.

ಕೆಲವು ಮಕ್ಕಳು ಪಕ್ಕದಲ್ಲೇ ಸಣ್ಣ ಚುಗ್ ಬೌದ್ಧಮಠಕ್ಕೆ ಹೋಗಿ ತಮ್ಮ ದಿನವನ್ನು ಮುಗಿಸುತ್ತಾರೆ. ಇನ್ನೂ ಕೆಲವರು ದಿನದ ಕೊನೆಯಲ್ಲಿ ತಮ್ಮ ತಂದೆ-ತಾಯಿಗೆ ಸಹಾಯ ಮಾಡಲು ಹೊಲಗಳಿಗೆ ಹೋಗುತ್ತಾರೆ. ಸಂಜೆಯ ಹೊತ್ತಿಗೆ ದಾರಿಯಲ್ಲಿ ಸಿಗುವ ಮರಗಳಿಂದ ಕಿತ್ತಳೆಯನ್ನು ಅಥವಾ ಪರ್ಸಿಮನ್‌ ಹಣ್ಣುಗಳನ್ನು ಕಿತ್ತು ತಿನ್ನುತ್ತಾ, 'ಮೆರವಣಿಗೆ' ಮತ್ತೆ ಬರುತ್ತದೆ. ಅಲ್ಲಿಗೆ ಆ ದಿನ ಮುಗಿಯುತ್ತದೆ.

ಕನ್ನಡ ಅನುವಾದ:  ಚರಣ್‌ ಐವರ್ನಾಡು

Sinchita Parbat

सिंचिता माजी पारीची व्हिडिओ समन्वयक आहे, ती एक मुक्त छायाचित्रकार आणि बोधपटनिर्माती आहे. सुमन पर्बत कोलकात्याचा ऑनशोअर पाइपलाइन अभियंता आहे, सध्या तो मुंबईत आहे. त्याने दुर्गापूर, पश्चिम बंगालच्या राष्ट्रीय प्रौद्योगिकी संस्थेतून बी टेक पदवी प्राप्त केली आहे. तोदेखील मुक्त छायाचित्रकार आहे.

यांचे इतर लिखाण Sinchita Parbat
Editor : Pratishtha Pandya

प्रतिष्ठा पांड्या पारीमध्ये वरिष्ठ संपादक असून त्या पारीवरील सर्जक लेखन विभागाचं काम पाहतात. त्या पारीभाषासोबत गुजराती भाषेत अनुवाद आणि संपादनाचं कामही करतात. त्या गुजराती आणि इंग्रजी कवयीत्री असून त्यांचं बरंच साहित्य प्रकाशित झालं आहे.

यांचे इतर लिखाण Pratishtha Pandya
Translator : Charan Aivarnad

Charan Aivarnad is a poet and a writer. He can be reached at: [email protected]

यांचे इतर लिखाण Charan Aivarnad