ತುಳಸಿಯವರನ್ನು ಒಂಬತ್ತು ವರ್ಷದ ಪುಟ್ಟ ಅಂಜಲಿಯ ಅಮ್ಮ ಎಂದೇ ಗುರುತಿಸಲಾಗುತ್ತದೆ. ತನ್ನ ಮಗಳ ಬಗ್ಗೆ ಹೇಳುತ್ತಾ ಈ ಸಂತೃಪ್ತ ತಾಯಿ ತನ್ನ ತುರುಬನ್ನು ಕಟ್ಟಿಕೊಂಡರು. ಗುಲಾಬಿ ಬಣ್ಣದ ಸೀರೆಯನ್ನು ಅಚ್ಚುಕಟ್ಟಾಗಿ ಉಟ್ಟುಕೊಂಡಿದ್ದ ತುಳಸಿ ಓರ್ವ ಟ್ರಾನ್ಸ್ ಮಹಿಳೆ ಮತ್ತು ಒಬ್ಬ ಮಗಳ ಹೆಮ್ಮೆಯ ತಾಯಿ.
ತುಳಸಿ ತನ್ನ ಹರೆಯದ ದಿನಗಳಲ್ಲಿ ತನ್ನನ್ನು ತಾನು ʼಕಾರ್ತಿಕ(ಗ)ʼ ಎಂದು ಗುರುತಿಸಿಕೊಳ್ಳುತ್ತಿದ್ದರು. ಆದರೆ ಅಧಿಕಾರಿಯೊಬ್ಬರು ಪಡಿತರ ಚೀಟಿಯಲ್ಲಿ ಅವರ ಹೆಸರನ್ನು ಬರೆಯುವ ಸಂದರ್ಭದಲ್ಲಿ ಮಾಡಿದ ತಪ್ಪಿನಿಂದಾಗಿ ಅವರಿಗೆ ʼತುಳಸಿʼ ಎನ್ನುವ ಲಿಂಗ ನಿರ್ದಿಷ್ಟವಾದ ಹೆಸರು ಬಂತು. ಅವರು ಎರಡೂ ಹೆಸರನ್ನು ಒಪ್ಪಿಕೊಂಡಿದ್ದು ಎರಡರಲ್ಲಿ ಯಾವ ಹೆಸರಿನಿಂದ ಕರೆದರೂ ಓಗೊಡುತ್ತಾರೆ.
ಅವರು ತಮ್ಮ ಮಗಳು ಅಂಜಲಿಯೊಂದಿಗೆ ತಮಿಳುನಾಡಿನ ತಿರುಪೊರೂರ್ ತಾಲ್ಲೂಕಿನ ಇರುಳ ಕುಗ್ರಾಮವಾದ ದರ್ಗಾಸ್ ಎನ್ನುವಲ್ಲಿ ಸಣ್ಣ ಗುಡಿಸಲೊಂದರಲ್ಲಿ ಬದುಕುತ್ತಿದ್ದಾರೆ. ಅಂಜಲಿ ಮಗುವಾಗಿರುವಾಗಲೇ ತುಳಸಿಯ ಹೆಂಡತಿ ಬಿಟ್ಟು ಹೋಗಿದ್ದರು. ಹೀಗಾಗಿ ತುಳಸಲಿ ಮಗುವನ್ನು ಒಬ್ಬರೇ ಪಾಲನೆ ಮಾಡಿದರು. ದಂಪತಿಗಳಿಗೆ ಮೊದಲು ಹುಟ್ಟಿದ ಮಗನೂ ಇದ್ದ. ಆದರೆ ಅವನು 2016ರಲ್ಲಿ ಬೀಸಿದ ಚಂಡಮಾರುತಕ್ಕೆ ಬಲಿಯಾದ. ಆಗ ಅವನಿಗೆ ಒಂಬತ್ತು ವರ್ಷ.
ಈಗ ನಲವತ್ತರ ಆಸುಪಾಸಿನಲ್ಲಿರುವ ತುಳಸಿ ಹಲವಾರು ವರ್ಷಗಳಿಂದ ತಿರುನಂಗೈ (ಟ್ರಾನ್ಸ್ ಮಹಿಳೆ ಪದದ ತಮಿಳು ರೂಪ) ಗುಂಪಿನ ಭಾಗವಾಗಿದ್ದಾರೆ. ತನ್ನ ತೊಡೆಯ ಮೇಲೆ ಕುಳಿತಿರುವ ಅಂಜಲಿಯನ್ನು ಪ್ರೀತಿಯಿಂದ ನೋಡುತ್ತಾ ಅವರು ಮುಂದುವರಿಸುತ್ತಾರೆ, "ಆಗೆಲ್ಲ ನಾನು ಅವಳನ್ನು ಕೈಯಲ್ಲಿ ಹಾಲಿನ ಬಾಟಲಿ ಹಿಡಿದು ನಮ್ಮ [ತಿರುನಂಗೈ] ಸಭೆಗಳಿಗೆ ಕರೆದೊಯ್ಯುತ್ತಿದ್ದೆ."


















