“ಮತದಾನದ ದಿನದಂದು ಇಲ್ಲಿ ಹಬ್ಬದ ವಾತಾವರಣವಿರುತ್ತದೆ” ಎಂದು ಮರ್ಜಿನಾ ಖಾತುನ್ ಹೇಳುತ್ತಾರೆ. ಅವರು ರಜಾಯಿ ನೇಯ್ಗೆ ಮಾಡಲು ಇಟ್ಟುಕೊಂಡಿದ್ದ ಬಟ್ಟೆಯ ತುಂಡುಗಳನ್ನು ವಿಂಗಡಿಸುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದರು. “ಕೆಲಸದ ಸಲುವಾಗಿ ಹೊರ ರಾಜ್ಯಗಳಿಗೆ ಹೋದ ಜನರು ಈ ಸಂದರ್ಭದಲ್ಲಿ ಮತ ಚಲಾಯಿಸಲೆಂದು ಊರಿಗೆ ಮರಳುತ್ತಾರೆ.”
ಅವರು ವಾಸವಿರುವ ರೂಪಾಕುಚಿ ಗ್ರಾಮವು ಧುಬ್ರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ, ಅಲ್ಲಿ ಮೇ 7, 2024ರಂದು ಮತದಾನ ನಡೆಯಿತು.
ಆದರೆ 48 ವರ್ಷದ ಮರ್ಜಿನಾ ಅಂದು ಮತ ಚಲಾಯಿಸಲಿಲ್ಲ. "ನಾನು ಆ ದಿನವನ್ನು ನಿರ್ಲಕ್ಷಿಸುತ್ತೇನೆ. ಜನರಿಂದ ತಪ್ಪಿಸಿಕೊಳ್ಳಲು ಸಲುವಾಗಿ ಮನೆಯೊಳಗೆ ಅಡಗಿಕೊಳ್ಳುತ್ತೇನೆ."
ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ಸಾಧ್ಯವಾಗದ ಈ ವರ್ಗದ ಮತದಾರರನ್ನು ಅನುಮಾನಸ್ಪದ ಮತದಾರರು (ಡಿ-ವೋಟರ್/ಡೌಟ್‌ಫುಲ್ ವೋಟರ್ಸ್) ಎಂದು ಪಟ್ಟಿ ಮಾಡಲಾಗಿದೆ. ಅಂತಹ 99,942 ಜನರಲ್ಲಿ ಮರ್ಜಿನಾ ಕೂಡಾ ಒಬ್ಬರು. ಮತದಾರರ ಪಟ್ಟಿಯಲ್ಲಿನ ಅನುಮಾನಾಸ್ಪದ ಮತದಾರರಲ್ಲಿ ಹೆಚ್ಚಿನವರು ಅಸ್ಸಾಂನ ಬಂಗಾಳಿ ಮಾತನಾಡುವ ಹಿಂದೂಗಳು ಮತ್ತು ಮುಸ್ಲಿಮರು.
ಡಿ-ಮತದಾರರನ್ನು ಹೊಂದಿರುವ ಏಕೈಕ ಭಾರತೀಯ ರಾಜ್ಯವಾದ ಅಸ್ಸಾಮಿನಲ್ಲಿ, ಬಾಂಗ್ಲಾದೇಶಿ ಅಕ್ರಮ ವಲಸೆ ಚುನಾವಣಾ ರಾಜಕೀಯದಲ್ಲಿ ಪ್ರಮುಖ ವಿಷಯ. ಭಾರತದ ಚುನಾವಣಾ ಆಯೋಗವು 1997ರಲ್ಲಿ ಡಿ-ವೋಟರ್ ವ್ಯವಸ್ಥೆಯನ್ನು ಪರಿಚಯಿಸಿತು, ಅದೇ ವರ್ಷ ಮರ್ಜಿನಾ ಅವರು ಮತದಾರರ ಪಟ್ಟಿಯಲ್ಲಿ ಸೇರಿಸಲು ಗಣತಿದಾರರಿಗೆ ತಮ್ಮ ಹೆಸರನ್ನು ನೀಡಿದರು. "ಆ ಕಾಲದಲ್ಲಿ, ಶಾಲಾ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಜನರ ಹೆಸರನ್ನು ಸೇರಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದರು. ನಾನು ನನ್ನ ಹೆಸರನ್ನೂ ಕೊಟ್ಟೆ" ಎಂದು ಮರ್ಜಿನಾ ಹೇಳುತ್ತಾರೆ. "ಆದರೆ ಮುಂದಿನ ಚುನಾವಣೆಯಲ್ಲಿ ನಾನು ಮತ ಚಲಾಯಿಸಲು ಹೋದಾಗ, ನನಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ. ನಾನು ಡಿ-ವೋಟರ್ ಎಂದು ಅವರು ಹೇಳಿದರು.”





