"ಮಿರ್ಚಿ, ಲೆಹ್ಸುನ್, ಅದ್ರಕ್... ಸೋರೆಕಾಯಿ, ಕರೇಲ ಎಲೆಗಳು... ಬೆಲ್ಲ."
ಇದು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹಾಗಲಕಾಯಿ ಹಾಕಿ ಮಾಡುವ ಅಡುಗೆಯ ಮಾಹಿತಿಯಲ್ಲ. ಸಾವಯವ ಕೃಷಿಕರಾದ ಗುಲಾಬ್ ರಾಣಿ ತನ್ನ ಹೊಲಕ್ಕೆ ಬಳಸುವ ಪ್ರಬಲ ರಸಗೊಬ್ಬರ ಮತ್ತು ಕೀಟನಾಶಕಗಳ ಮಾಹಿತಿ. ಪನ್ನಾ ಹುಲಿ ಮೀಸಲು ಪ್ರದೇಶದ ಅಂಚಿನಲ್ಲಿರುವ ಚುಂಗುನಾ ಗ್ರಾಮದಲ್ಲಿ ಅವರು ಈ ವಸ್ತುಗಳನ್ನು ಬಳಸಿ ಕೃಷಿ ಮಾಡುತ್ತಾರೆ.
53 ವರ್ಷದ ಅವರು ತಾನೂ ಈ ಪಟ್ಟಿಯನ್ನು ಮೊದಲ ಸಲ ಕೇಳಿದಾಗ ನಕ್ಕಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ಇದನ್ನೆಲ್ಲ ಎಲ್ಲಿಂದು ತರುವುದು? ಇದು ನನ್ನಲ್ಲಿ ಮೊದಲು ಮೂಡಿದ ಪ್ರಶ್ನೆ. ಕಡೆಗೆ ನೆನಪಾಯಿತು ಹಾಗಲ, ಸೋರೆ ಹಿತ್ತಲಿನಲ್ಲಿ ಬೆಳೆಯುತ್ತದೆ….” ಬೆಲ್ಲದಂತಹ ವಸ್ತುಗಳನ್ನು ಅವರು ಮಾರುಕಟ್ಟೆಯಿಂದ ಖರೀದಿಸಿದರು.
ಅವರು ಏನು ಮಾಡುತ್ತಿದ್ದಾರೆನ್ನು ಕುತೂಹಲದೊಂದಿಗೆ ನೋಡುತ್ತಿದ್ದ ನೆರೆಹೊರೆಯ ಜನರಿಂದ ಅವರಿಗೆ ಯಾವುದೇ ಸಹಾಯ ದೊರೆಯಲಿಲ್ಲ. ಹಾಗೆಂದು ಗುಲಾಬ್ ರಾಣಿಯವರು ಜನರು ಏನು ಯೋಚಿಸುತ್ತಿರಬಹುದು ಎನ್ನುವ ಕುರಿತಾಗಿ ತಲೆ ಕೆಡಿಸಿಕೊಂಡವರೂ ಅಲ್ಲ. ಈ ಸರಿಸುಮಾರು 500 ಜನರಿರುವ ಊರಿನಲ್ಲಿ ಸಾವಯವ ಕೃಷಿಯತ್ತ ಮುಖ ಮಾಡಿದವರಲ್ಲಿ ಅವರೇ ಮೊದಲಿಗರು ಎನ್ನುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.
“ನಾವು ಮಾರುಕಟ್ಟೆಯಿಂದ ಖರೀದಿಸುವ ಆಹಾರ ಪದಾರ್ಥಗಳಲ್ಲಿ ಔಷಧಿಗಳನ್ನು ಬಳಸಲಾಗುತ್ತದೆ ಮತ್ತು ಅವುಗಳಿಗೆ ಹಲವು ಬಗೆಯ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಹೀಗಿರುವಾಗ ನಾವು ಅವುಗಳನ್ನು ಏಕೆ ಬಳಸಬೇಕು ಎಂದು ಯೋಚಿಸತೊಡಗಿದೆವು” ಎಂದು ಅವರು ನಾಲ್ಕು ವರ್ಷಗಳ ಕೆಳಗೆ ತಮ್ಮ ಮನೆಯಲ್ಲಿ ಆರಂಭವಾದ ಸಾವಯವ ಕೃಷಿ ಕುರಿತ ಮಾತುಗಳನ್ನು ನೆನಪಿಸಿಕೊಂಡರು.
“ನಮ್ಮ ಕುಟುಂಬವು ಸಾವಯವ ಆಹಾರ ಸೇವನೆಯ ಕುರಿತು ಯೋಚಿಸತೊಡಗಿತು. ನಾವು ಜೈವಿಕ (ಸಾವಯವಾಗಿ ಬೆಳೆದ) ಬೆಳೆದ ಆಹಾರವನ್ನು ಸೇವಿಸಿದರೆ ಅದರಿಂದ ಆರೋಗ್ಯವೂ ಸುಧಾರಿಸುತ್ತದೆ. ಜೈವಿಕ ಗೊಬ್ಬರದಿಂದ ನಮ್ಮ ಸ್ವಾಸ್ಥ್ಯ ಉತ್ತಮಗೊಂಡರೆ ಕೀಟಗಳದ್ದ ಅಸ್ವಸ್ಥವಾಗುತ್ತದೆ” ಎಂದು ಅವರು ಹಾಸ್ಯದೊಂದಿಗೆ ನಗುತ್ತಾ ಹೇಳಿದರು.
ಪ್ರಸ್ತುತ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಡಿ ಮೂರನೇ ವರ್ಷದ ಬೆಳೆ ಬೆಳೆಯುತ್ತಿದ್ದಾರೆ. ಅವರು ಮತ್ತು ಅವರ ಪತಿ ಉಜಿಯಾನ್ ಸಿಂಗ್ ಸೇರಿ ತಮ್ಮ ಹೊಲದಲ್ಲಿ ಖಾರಿಫ್ ಬೆಳೆಗಳಾದ ಭತ್ತ, ಮೆಕ್ಕೆಜೋಳ, ತೊಗರಿ, ಎಳ್ಳು ಮತ್ತು ರಾಬಿ ಗೋಧಿ, ಕಡಲೆ, ಸಾಸಿವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ವರ್ಷವಿಡೀ ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ, ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಬೆಂಡೆಕಾಯಿ, ಸೊಪ್ಪು, ಸೋರೆಕಾಯಿ, ಕರೋಂಡಾ, ಬೀನ್ಸ್ ಮೊದಲಾದ ಹಲವು ತರಕಾರಿಗಳನ್ನು ಸಹ ಬೆಳೆಯಲಾಗುತ್ತದೆ. “ನಾವು ಮಾರುಕಟ್ಟೆಯಿಂದ ಹೆಚ್ಚೇನೂ ಖರೀದಿಸುವುದಿಲ್ಲ” ಎಂದು ಅವರು ಸಂಭ್ರಮದಿಂದ ಹೇಳುತ್ತಾರೆ.
ಚುಂಗುನಾ ಗ್ರಾಮವಿರುವುದು ಪೂರ್ವ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದ ಅಂಚಿನಲ್ಲಿ. ಇಲ್ಲಿ ಬಹುಪಾಲು ರಾಜಗೊಂಡ್ ಆದಿವಾಸಿ ಸಮುದಾಯಕ್ಕೆ ಸೇರಿದ ಕುಟುಂಬಗಳೇ ಇವೆ, ಅವರು ವಾರ್ಷಿಕ ಮಳೆ ಮತ್ತು ಹತ್ತಿರದ ಕಾಲುವೆಯನ್ನು ಅವಲಂಬಿಸಿ ತಮಗಿರುವ ಸಣ್ಣ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಜೊತೆಗೆ ಇಲ್ಲಿನ ಅನೇಕರು ಹಂಗಾಮಿ ಕೆಲಸ ಹುಡುಕಿಕೊಂಡು ಹತ್ತಿರದ ನಗರಗಳಾದ ಕಟ್ನಿ ಮತ್ತು ಉತ್ತರದಲ್ಲಿರುವ ಹತ್ತಿರದ ಉತ್ತರ ಪ್ರದೇಶದ ಸ್ಥಳಗಳಿಗೆ ವಲಸೆ ಹೋಗುತ್ತಾರೆ.
“ಮೊದಲಿಗೆ ನಾವು ಕೇವಲ ಒಂದಿಬ್ಬರು ರೈತರಷ್ಟೇ ಸಾವಯ ಪದ್ಧತಿ ಆಳವಡಿಸಿಕೊಂಡಿದ್ದೆವು. ನಂತರ 8-9 ರೈತರು ನಮ್ಮೊಂದಿಗೆ ಸೇರಿಕೊಂಡರು” ಎನ್ನುತ್ತಾರೆ ಗುಲಾಬ್ ರಾಣಿ. ಪ್ರಸ್ತುತ ಅವರ ಊರಿನ 200 ಎಕರೆ ಭೂಮಿಯಲ್ಲಿ ಬಹುತೇಕ ಸಾಯವ ಕೃಷಿ ಪದ್ಧತಿಯಡಿಯಲ್ಲೇ ಬೇಸಾಯ ಮಾಡಲಾಗುತ್ತಿದೆ.
ಸಾಮಾಜಿಕ ಕಾರ್ಯಕರ್ತ ಶರದ್ ಯಾದವ್ ಹೇಳುವಂತೆ, "[ಚುಂಗುನಾದಲ್ಲಿ] ವಲಸೆ ಕಡಿಮೆಯಾಗಿದೆ, ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಅವಲಂಬನೆ ಇಂಧನ ಹಾಗೂ ಉರುವಲಿಗೆ ಸೀಮಿತಗೊಂಡಿದೆ." ಶರದ್ ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ (ಪಿಎಸ್ಐ) ಸಂಸ್ಥೆಯಲ್ಲಿ ಕ್ಲಸ್ಟರ್ ಸಂಯೋಜಕರಾಗಿದ್ದು ಅವರು ಸ್ವತಃ ರೈತರಾಗಿ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ.
ಗುಲಾಬ್ ರಾಣಿಯವರ ನೇರ ನಡವಳಿಕೆ ಮತ್ತು ಪ್ರಶ್ನಿಸುವ ಮನೋಭಾವ ಅವರನ್ನು ಪ್ರಭಾವಶಾಲಿಯಾಗಿ ಎದ್ದು ಕಾಣುವಂತೆ ಮಾಡಿತು ಎಂದು ಪಿಎಸ್ಐ ಸಿಬ್ಬಂದಿ ಹೇಳುತ್ತಾರೆ. ಸಂಸ್ಥೆ ಸೂಚಿಸಿದ ವಿಧಾನಗಳನ್ನು ಬಳಸಿಕೊಂಡು ಜೋಳದ ಬೆಳೆಯನ್ನು ಪ್ರಯತ್ನಿಸಿದ ಮೊದಲ ರೈತ ಮಹಿಳೆ ಗುಲಾಬ್ ರಾಣಿ. ಅವರು ಯಶಸ್ವಿಯಾಗಿದ್ದನ್ನು ಕಂಡು ನಂತರ ಊರಿನ ಇತರರೂ ಅವರನ್ನು ಅನುಸರಿಸಿದರು.
*****
“ಈ ಮೊದಲು ಯೂರಿಯಾ ಮತ್ತು ಡಿಎಪಿ ರೀತಿಯ ರಸಗೊಬ್ಬರಗಳು ಮತ್ತು ಕೀಟನಾಶಕಗಳಿಗಾಗಿ ತಿಂಗಳಿಗೆ 5,000 ರೂಪಾಯಿಗಳವರೆಗೆ ಖರ್ಚು ಮಾಡುತ್ತಿದ್ದೆವು” ಎಂದು ಉಜಿಯಾನ್ ಸಿಂಗ್ ಹೇಳುತ್ತಾರೆ. ಆಗ ಅವರ ಭೂಮಿ ಪೂರ್ತಿಯಾಗಿ ರಾಸಾಯನಿಕಗಳ ಮೇಲೆ ಅಥವಾ ಸ್ಥಳೀಯವಾಗಿ 'ಚಿಡ್ಕಾ ಖೇತಿ' (ಸಿಂಪಡಣೆ ಕೃಷಿ) ಎಂದು ಕರೆಯಲ್ಪಡುವ ಪದ್ಧತಿಯ ಮೇಲೆ ಅವಲಂಬಿತವಾಗಿತ್ತು ಎಂದು ಶರದ್ ಹೇಳುತ್ತಾರೆ.
“ಈಗ ನಾವೇ ಮಟ್ಕಾ ಖಾಡ್ (ಮಣ್ಣಿನ ಮಡಕೆ ಗೊಬ್ಬರ) ತಯಾರಿಸುತ್ತೇವೆ" ಎಂದು ಗುಲಾಬ್ ರಾಣಿ ಹಿತ್ತಲಲ್ಲಿರುವ ದೊಡ್ಡ ಮಣ್ಣಿನ ಮಡಕೆಯನ್ನು ತೋರಿಸುತ್ತಾ ಹೇಳುತ್ತಾರೆ. “ಇರುವ ಮನೆಗಲಸಗಳ ನಡುವೆ ನಾನು ಇದಕ್ಕೆಲ್ಲ ಸಮಯ ಹೊಂದಿಸಿಕೊಳ್ಳಬೇಕು” ಎಂದು ಅವರು ಹೇಳುತ್ತಾರೆ. ಕೃಷಿ ಭೂಮಿಯ ಹೊರತಾಗಿ ಕುಟುಂಬವು 10 ಜಾನುವಾರುಗಳನ್ನೂ ಹೊಂದಿದೆ. ಇವುಗಳಿಂದ ಸಿಗುವ ಹಾಲನ್ನು ಅವರು ಮಾರುವುದಿಲ್ಲ. ಅದನ್ನು ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ವಿವಾಹಿತ ಮಗನಿರುವ ತಮ್ಮ ಕುಟುಂಬದ ಬಳಕೆಗೆ ಇಟ್ಟುಕೊಳ್ಳುತ್ತಾರೆ.
ಮೆಣಸಿನಕಾಯಿ, ಶುಂಠಿ ಮತ್ತು ಹಸುವಿನ ಮೂತ್ರದ ಜೊತೆಗೆ ಕರೇಲಾ, ಸೋರೆ ಮತ್ತು ಬೇವಿನ ಎಲೆಗಳು ಬೇಕಾಗುತ್ತವೆ. “ಮೊದಲು ಇವುಗಳನ್ನು ಒಂದು ಗಂಟೆ ಕುದಿಸಬೇಕು. ನಂತರ ಅದನ್ನು 2.5ರಿಂದ 3 ದಿನಗಳ ಕಾಲ ಹಾಗೇ ಇಡಬೇಕು. ಹಾಗೆಂದು ಆಗಲೇ ಬಳಸಬೇಕೆಂದಿಲ್ಲ. ಎಷ್ಟು ದಿನಗಳ ತನಕ ಬೇಕಿದ್ದರೂ ಅದನ್ನು ಮಡಕೆಯಲ್ಲಿ ಇರಿಸಬಹುದು. “ಕೆಲವರು ಇದನ್ನು 15 ದಿನಗಳವರೆಗೆ ಇಡುತ್ತಾರೆ. ಹೀಗೆ ಮಾಡಿದರೆ ಅದು ಚೆನ್ನಾಗಿ ಹುದುಗುತ್ತದೆ” ಎಂದು ಈ ಸಾವಯವ ರೈತ ಮಹಿಳೆ ಹೇಳುತ್ತಾರೆ.
ಅವರು ಒಂದು ಬಾರಿಗೆ ಐದರಿಂದ ಹತ್ತು ಲೀಟರಿನಷ್ಟು ಈ ಮಿಶ್ರಣವನ್ನು ತಯಾರಿಸುತ್ತಾರೆ. “ಒಂದು ಎಕರೆಗೆ ಒಂದು ಲೀಟರ್ ದ್ರಾವಣ ಸಾಕಾಗುತ್ತದೆ. ಇದನ್ನು 10 ಲೀಟರ್ ನೀರಿನೊಂದಿಗೆ ಬೆರೆಸಬೇಕು. ಅಳತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಇದು ಹೂವುಗಳನ್ನು ಕೊಲ್ಲುವುದರ ಜೊತೆಗೆ ಬೆಳೆಯನ್ನೂ ನಾಶ ಮಾಡುತ್ತದೆ.” ಎಂದು ಅವರು ಎಚ್ಚರಿಸುತ್ತಾರೆ. ಆರಂಭದಲ್ಲಿ ನೆರೆಹೊರೆಯವರು ಪ್ರಯೋಗದ ಸಲುವಾಗಿ ಇವರಿಂದಲೇ ಒಂದು ಬಾಟಲಿ ದ್ರಾವಣ ಪಡೆಯುತ್ತಿದ್ದರು.
"ವರ್ಷವಿಡೀ ನಮಗೆ ಸಾಕಾಗುವಷ್ಟು ಆಹಾರ ಸಿಗುತ್ತದೆ. ನಾವು ವಾರ್ಷಿಕವಾಗಿ ಸುಮಾರು 15,000 ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ" ಎಂದು ಉಜಿಯಾನ್ ಸಿಂಗ್ ಹೇಳುತ್ತಾರೆ. ಮಧ್ಯ ಭಾರತದ ಇತರ ರೈತರಂತೆ ಇವರೂ ನಿರಂತರ ಕಾಡುಪ್ರಾಣಿಗಳ ಹಾವಳಿಯನ್ನು ಎದುರಿಸುತ್ತಾರೆ. ಅವುಗಳಿಂದ ಬೆಳೆ ನಾಶ ಇಲ್ಲಿ ಸರ್ವೇಸಾಮಾನ್ಯ. “ಸರ್ಕಾರ ಹೊಸ ಕಾನೂನು ಮಾಡಿರುವುದರಿಂದಾಗಿ ನಾವು ಅವುಗಳನ್ನು ಹಿಡಿಯುವುದು ಅಥವಾ ಕೊಲ್ಲುವುದು ಮಾಡುವಂತಿಲ್ಲ. ನೀಲ್‌ಗಾಯ್ ಗೋಧಿ ಮತ್ತು ಜೋಳವನ್ನು ತಿನ್ನುವುದರ ಜೊತೆಗೆ ಬೆಳೆಯನ್ನೂ ಪೂರ್ತಿಯಾಗಿ ನಾಶ ಮಾಡುತ್ತವೆ” ಎಂದು ಅವರು ಪರಿಗೆ ತಿಳಿಸಿದರು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಕಾಡು ಹಂದಿಗಳನ್ನು ಕೊಲ್ಲುವುದನ್ನು ನಿಷೇಧಿಸುತ್ತದೆ.
ಇಲ್ಲಿ ಹತ್ತಿರದ ಹೊಳೆಯಿಂದ ನೀರೆತ್ತುವ ಸಲುವಾಗಿ ಸೋಲಾರ್ ಪಂಪುಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಅನೇಕ ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯಲು ಸಾಧ್ಯವಾಗಿದೆ” ಎಂದು ಅವರು ತಮ್ಮ ಹೊಲದ ಕೊನೆಯಲ್ಲಿರುವ ಸೌರ ಫಲಕಗಳನ್ನು ತೋರಿಸುತ್ತಾ ಹೇಳುತ್ತಾರೆ.
ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ (ಪಿಎಸ್ಐ) ತಂತ್ರಜ್ಞಾನ ಸೇವಾ ಕೇಂದ್ರವನ್ನು (ಟಿಆರ್‌ಸಿ) ಸ್ಥಾಪಿಸಿದೆ, ಇದು ಬಿಲ್ಪುರ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನ 40 ಗ್ರಾಮಗಳಿಗೆ ಸೇವೆ ಸಲ್ಲಿಸುತ್ತದೆ. “ಟಿಆರ್‌ಸಿ ಸುಮಾರು 15 ವಿಧದ ಅಕ್ಕಿ ಮತ್ತು 11 ರೀತಿಯ ಗೋಧಿ ತಳಿಗಳನ್ನು ಸಂಗ್ರಹಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಸಾಂಪ್ರಸಾಯಿಕ ತಳಿಗಳಾಗಿದ್ದು ಕಡಿಮೆ ಮಳೆ, ತೀವ್ರ ಚಳಿಯ ವಾತಾವರಣದಲ್ಲೂ ಬೆಳೆಯುತ್ತವೆ. ಇವುಗಳಿಗೆ ಕೀಟ ಬಾಧೆ ಮತ್ತು ಕಳೆಯ ಕಾಟವೂ ಕಡಿಮೆ” ಎಂದು ಟಿ ಆರ್ ಸಿ ಸಂಸ್ಥೆಯ ನಿರ್ವಾಹಕರಾದ ರಾಜಿಂದರ್ ಸಿಂಗ್ ಹೇಳುತ್ತಾರೆ.
"ನಾವು ನಮ್ಮ ರೈತ ಸದಸ್ಯರಿಗೆ ಎರಡು ಕಿಲೋಗಳಷ್ಟು ಬೀಜಗಳನ್ನು ನೀಡುತ್ತೇವೆ ಮತ್ತು ಅವರು ಕೊಯ್ಲು ಮಾಡಿದಾಗ ಅದಕ್ಕಿಂತ ದುಪ್ಪಟ್ಟು ಬೀಜವನ್ನು ನಮಗೆ ಮರಳಿಸಬೇಕು” ಎಂದು ಅವರು ಹೇಳುತ್ತಾರೆ. ಅವರು ನಮಗೆ ಹತ್ತಿರದಲ್ಲೇ ಒಂದು ಎಕರೆ ಜಾಗದಲ್ಲಿ ಅಕ್ಕಪಕ್ಕದಲ್ಲೇ ನಾಲ್ಕು ವಿಭಿನ್ನ ಪ್ರಭೇದಗಳನ್ನು ನಾಟಿ ಮಾಡಿರುವುದನ್ನು ತೋರಿಸಿದರು. ಅವುಗಳ ಕೊಯ್ಲಿನ ಸಮಯದ ಕುರಿತಾಗಿಯೂ ನಮಗೆ ತಿಳಿಸಿದರು.
ಈ ಪ್ರದೇಶದ ರೈತರು ಇದೀಗ ತರಕಾರಿಗಳ ಮಾರಾಟವನ್ನು ಸಾಮೂಹಿಕವಾಗಿ ಪ್ರಯತ್ನಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆಯುವುದರ ಜೊತೆಗೆ ಅವರು ತಮ್ಮ ಬೆಳೆಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲೂ ಇದ್ದಾರೆ.
ನಾವು ಹೊರಡಲು ಸಿದ್ಧವಾಗುತ್ತಿದ್ದ ಹಾಗೆ, ಗುಲಾಬ್ ರಾಣಿಯವರು ಊರಿನ ಇತರ ಮಹಿಳೆಯರೊಂದಿಗೆ ಹೊರಟರು. ಅವರೆಲ್ಲರೂ ತಮ್ಮ ದಿನದ ಉಪವಾಸ ಮುಗಿಸುವ ಮೊದಲು ನದಿಯಲ್ಲಿ ಸ್ನಾನ ಹಾಗೂ ಹಲ್ ಛಟ್ ಪೂಜೆಯನ್ನು ಮಾಡುವ ಸಲುವಾಗಿ ಹೊರಟಿದ್ದರು. ಈ ಪೂಜೆಯನ್ನು ಹಿಂದೂ ಕ್ಯಾಲೆಂಡರಿನ ಐದನೇ ತಿಂಗಳಾದ ಭಾದೊನ್ ಮಾಸದಲ್ಲಿ ಮಾಡಲಾಗುತ್ತದೆ. ಇದನ್ನು ತಮ್ಮ ಮಕ್ಕಳ ಒಳಿತಿಗಾಗಿ ಆಚರಿಸಲಾಗುತ್ತದೆ. “ನಾವು ಮಹುವಾವನ್ನು ಮಜ್ಜಿಗೆಯಲ್ಲಿ ಬೇಯಿಸಿ ತಯಾರಿಸಿದ ತಿನಿಸಿನೊಂದಿಗೆ ನಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತೇವೆ” ಎಂದು ಗುಲಾಬ್ ರಾಣಿ ವಿವರಿಸಿದರು. ಅದರ ಜೊತೆಗೆ ಅವರು ತಮ್ಮ ಮನೆಯಲ್ಲೇ ಸಾವಯವ ಪದ್ಧತಿಯಲ್ಲಿ ಬೆಳೆದ ಕಡಲೆಯನ್ನೂ ಹುರಿದು ತಿನ್ನಲಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು