ರಾಮ್ ಅವತಾರ್ ಕುಶ್ವಾಹ ಅಹರ್ವಾನಿಯ ಮಣ್ಣು ರಸ್ತೆಗೆ ಪ್ರವೇಶಿಸುತ್ತಿದ್ದಂತೆ, ತನ್ನ ಮೋಟಾರ್ ಸೈಕಲ್ ಬ್ಯಾಲೆನ್ಸ್ ಮಾಡುವ ಸಲುವಾಗಿ ನಿಧಾನಗೊಳಿಸುತ್ತಾರೆ. ಹಾಗೇ ನಿಧಾನವಾಗಿ ಕಲ್ಲು ಮಣ್ಣಿನಿಂದ ಕೂಡಿದ ದಾರಿಯಲ್ಲಿ ಮುಂದೆ ಬಂದು ಊರಿನ ಮಧ್ಯದಲ್ಲಿ ತನ್ನ 150cc ಬೈಕಿನ ಇಂಜಿನ್ ಆಫ್ ಮಾಡುತ್ತಾರೆ.
ಇದಾಗಿ ಐದೇ ನಿಮಿಷದಲ್ಲಿ ಸಣ್ಣಪುಟ್ಟ ಮಕ್ಕಳು, ಮಾಧ್ಯಮಿಕ ಶಾಲೆಯ ಮಕ್ಕಳು ಹಾಗೂ ಹದಿ ಹರೆಯದ ಮಕ್ಕಳು ಸದ್ದು ಮಾಡುತ್ತಾ ಅವರ ಸುತ್ತ ನೆರೆಯುತ್ತಾರೆ. ಸಹಾರಿಯ ಆದಿವಾಸಿ ಸಮುದಾಯದ ಮಕ್ಕಳ ಗುಂಪು ತಮ್ಮ ಕೈಯಲ್ಲಿ ಪಾವಲಿ ಮತ್ತು 10 ರೂಪಾಯಿಯ ನೋಟುಗಳನ್ನು ಹಿಡಿದು ತಮ್ಮತಮ್ಮಲ್ಲೇ ಮಾತನಾಡುತ್ತಾ ತಾಳ್ಮೆಯಿಂದ ಕಾಯುತ್ತಿದ್ದಾರೆ. ಅವರು ಅಲ್ಲಿ ಚೌಮೀನ್ ಖರೀದಿಸುವ ಸಲುವಾಗಿ ನಿಂತಿದ್ದಾರೆ. ಅದೊಂದು ಕರಿದ ನೂಡಲ್ಸ್ ಮತ್ತು ತರಕಾರಿಯ ಮಿಶ್ರಣದ ತಿಂಡಿ.
ಈ ಹಸಿದ ಮಕ್ಕಳು ಸದ್ಯದಲ್ಲೇ ತಮ್ಮ ತಾಳ್ಮೆ ಮರೆತು ತನ್ನ ಸುತ್ತ ನೆರೆಯಲಿದ್ದಾರೆ ಎನ್ನುವುದರ ಅರಿವಿರುವ ವ್ಯಾಪಾರಿ, ಕೂಡಲೇ ತನ್ನ ಮೋಟಾರ್ ಸೈಕಲ್ ಮೇಲಿನ ವಸ್ತುಗಳನ್ನು ಒಂದೊಂದಾಗಿ ಬಿಚ್ವತೊಡಗುತ್ತಾರೆ. ಎರಡು ಪ್ಲಾಸ್ಟಿಕ್ ಬಾಟಲ್ ಹೊರತೆಗೆದು, “ಇದರಲ್ಲಿ ಒಂದು ಚಿಲ್ಲಿಸಾಸ್, ಇನ್ನೊಂದು ಸೋಯಾಸಾಸ್” ಎಂದು ಅವರು ವಿವರಿಸಿದರು. ಉಳಿದ ವಸ್ತುಗಳೆಂದರೆ ಎಲೆಕೋಸು, ಸಿಪ್ಪೆ ತೆಗೆದ ಈರುಳ್ಳಿ ಮತ್ತು ಹಸಿರು ಕ್ಯಾಪ್ಸಿಕಮ್. ಮತ್ತು ಬೇಯಿಸಿದ ನೂಡಲ್ಸ್. “ನಾನು ಈ ಸಾಮಾಗ್ರಿಗಳನ್ನು ವಿಜಯಪುರ [ಪಟ್ಟಣ]ದಲ್ಲಿ ಖರೀದಿಸುತ್ತೇನೆ.”
ಆಗ ಸುಮಾರು ಸಂಜೆಯ 6 ಗಂಟೆಯಾಗಿತ್ತು. ಇದು ರಾಮ್ ಅವತಾರ್ ಇಂದು ಭೇಟಿ ನೀಡುತ್ತಿರುವ ನಾಲ್ಕನೇ ಊರು. ಅವರು ನಿಯಮಿತವಾಗಿ ಭೇಟಿ ನೀಡುವ ಇತರ ಕುಗ್ರಾಮಗಳು ಮತ್ತು ಗ್ರಾಮಗಳಾದ ಲಾದರ್, ಪಾಂಡ್ರಿ, ಖಜುರಿ ಕಲಾನ್, ಸಿಲ್ಪಾರಾ, ಪರೋಂಡ್ - ಇವೆಲ್ಲವೂ ವಿಜಯಪುರ ತಹಸಿಲ್ ಗೋಪಾಲ್ಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಸುಟೈಪುರದಲ್ಲಿರುವ ಅವರ ಮನೆಯಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಈ ಕುಗ್ರಾಮಗಳು ಮತ್ತು ಸಣ್ಣ ಹಳ್ಳಿಗಳಲ್ಲಿ ಸಿಗುವ ಇತರ ಸಿದ್ಧ ತಿಂಡಿಗಳೆಂದರೆ ಪ್ಯಾಕೇಜ್ ಮಾಡಿದ ಚಿಪ್ಸ್ ಮತ್ತು ಬಿಸ್ಕತ್ತುಗಳು ಮಾತ್ರ.
ಅವರು ವಾರಕ್ಕೆ ಕನಿಷ್ಠ 2-3 ಬಾರಿ ಸುಮಾರು 500 ಜನರಿರುವ ಆದಿವಾಸಿ ಪ್ರಾಬಲ್ಯದ ಕುಗ್ರಾಮವಾದ ಅಹರ್ವಾನಿಗೆ ಬರುತ್ತಾರೆ. ಅಹರ್ವಾನಿ ಇತ್ತೀಚಿನ ನೆಲೆ - ಇದರ ನಿವಾಸಿಗಳು 1999ರಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಗೊಂಡವರು ಮತ್ತು ಇದನ್ನು ಸಿಂಹಗಳಿಗೆಂದು ಮೀಸಲಿಡಲಾದ ಇನ್ನೊಂದು ಅರಣ್ಯವಾಗಿತ್ತು. ಓದಿ: ಕುನೋ: ಚೀತಾಗಳು ಒಳಗೆ, ಆದಿವಾಸಿಗಳು ಹೊರಗೆ . ಆದರೆ ಇಲ್ಲಿಗೆ ಯಾವುದೇ ಸಿಂಹಗಳು ಬರಲಿಲ್ಲ. ಬದಲಿಗೆ ಆಫ್ರಿಕಾದಿಂದ ಚಿರತೆಗಳನ್ನು ತರಿಸಿ 2022ಎ ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿ ಬಿಡಲಾಯಿತು.
ಸುತ್ತಲೂ ನಿಂತಿದ್ದ ಹೆಚ್ಚಿನ ಮಕ್ಕಳು ಅಹರ್ವಾನಿಯಲ್ಲಿರುವ ಸ್ಥಳೀಯ ಸರ್ಕಾರಿ ಶಾಲೆಗೆ ಹೋಗುತ್ತಿರುವುದಾಗಿ ಹೇಳಿದರು, ಆದರೆ ಗ್ರಾಮದ ನಿವಾಸಿ ಕೇದಾರ್ ಆದಿವಾಸಿ, ಮಕ್ಕಳು ದಾಖಲಾಗಿದ್ದರೂ, ಅವರು ಹೆಚ್ಚು ಕಲಿಯುವುದಿಲ್ಲ ಎಂದು ಹೇಳುತ್ತಾರೆ. "ಶಿಕ್ಷಕರು ಶಾಲೆಗೆ ನಿಯಮಿತವಾಗಿ ಬರುವುದಿಲ್ಲ. ಬಂದರೂ ಸರಿಯಾಗಿ ಕಲಿಸುವುದಿಲ್ಲ"
23 ವರ್ಷದ ಕೇದಾರ್ ಅಗರ ಗ್ರಾಮದಲ್ಲಿ ಸ್ಥಳಾಂತರಗೊಂಡ ಸಮುದಾಯದ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿರುವ ಲಾಭರಹಿತ ಸಂಸ್ಥೆಯಾದ ಆದರ್ಶಶಿಲಾ ಶಿಕ್ಷಾ ಸಮಿತಿಯಲ್ಲಿ ಶಿಕ್ಷಕರಾಗಿದ್ದರು. "ವಿದ್ಯಾರ್ಥಿಗಳು ಇಲ್ಲಿ ಮಾಧ್ಯಮಿಕ ಶಾಲೆಯಿಂದ ಉತ್ತೀರ್ಣರಾದಾಗ, ಓದುವುದು ಮತ್ತು ಬರೆಯುವುದು ಮುಂತಾದ ಮೂಲಭೂತ ಶಿಕ್ಷಣದ ಕೊರತೆಯಿಂದಾಗಿ ಅವರು ಇತರ ಶಾಲೆಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ" ಎಂದು ಅವರು 2022ರಲ್ಲಿ ಪರಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಸಹರಿಯಾ ಆದಿವಾಸಿಗಳು ಮಧ್ಯಪ್ರದೇಶದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪಾಗಿ (ಪಿವಿಟಿಜಿ) ಗುರುತಿಸಿಕೊಂಡಿದೆ ಮತ್ತು ಶೇಕಡಾ 42ರಷ್ಟು ಸಾಕ್ಷರತೆಯನ್ನು ಹೊಂದಿದ್ದಾರೆ ಎಂದು ಇಂಡಿಯನ್ ಸ್ಟಾಟಿಸ್ಟಿಕಲ್ ಪ್ರೊಫೈಲ್ ಆಫ್ ಶೆಡ್ಯೂಲ್ ಟ್ರೈಬ್ಸ್ ಇನ್ ಇಂಡಿಯಾ ಎನ್ನುವ ಈ 2013ರ ವರದಿಯು ಹೇಳುತ್ತದೆ.
ಮಕ್ಕಳು ಗಲಿಬಿಲಿ ಹೆಚ್ಚಿಸುತ್ತಿದ್ದಂತೆ ರಾಮ್ ಅವತಾರ್ ನಮ್ಮೊಡನೆ ಮಾತು ನಿಲ್ಲಿಸಿ ತಮ್ಮ ತಿಂಡಿ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರು ಸೀಮೆಎಣ್ಣೆ ಸ್ಟೌ ಹಚ್ಚಿ ಅದರ ಮೇಲೊಂದು ಇಂಚು ಅಗಲದ ಪ್ಯಾನ್ ಇರಿಸಿ ಅದಕ್ಕೆ ಎಣ್ಣೆ ಹಾಕಿದರು. ನಂತರ ಅವರ ಬಳಿಯಿದ್ದ ಪೆಟ್ಟಿಗೆಯೊಂದರಿಂದ ನೂಡಲ್ಸ್ ತೆಗೆದು ಎಣ್ಣೆಗೆ ಹಾಕಿದರು.
ಈರುಳ್ಳಿ ಮತ್ತು ಎಲೆಕೋಸನ್ನು ತನ್ನ ಬೈಕಿನ ಮೇಲೆಯೇ ಇಟ್ಟುಕೊಂಡು ಕತ್ತರಿಸಿದರು. ಅವುಗಳನ್ನು ಬಾಣಲೆಯಲ್ಲಿ ಹಾಕಿದ ತಕ್ಷಣ ಅದರ ಕರಿದ ಪರಿಮಳ ವಾತಾವರಣದಲ್ಲಿ ಹರಡತೊಡಗಿತು.
ಒಂದರ್ಥದಲ್ಲಿ ರಾಮ್ ಅವತಾರ್ ಯೂಟ್ಯೂಬ್ ಬಾಣಸಿಗ. ಅವರು ಈ ಮೊದಲು ತರಕಾರಿ ವ್ಯಾಪಾರ ಮಾಡುತ್ತಿದ್ದರು. “ಆದರೆ ಅದು ಬಹಳ ನಿಧಾನಗತಿಯ ವ್ಯಾಪಾರ. ಒಮ್ಮೆ ಫೋನಿನಲ್ಲಿ ಚೌಮೀನ್ ತಯಾರಿಸುವ ವಿಡಿಯೋ ನೋಡಿದೆ. ನಂತರ ಇದನ್ನೇ ಯಾಕೆ ಪ್ರಯತ್ನಿಸಬಾರದು ಎನ್ನಿಸಿ ಈ ವ್ಯಾಪಾರ ಶುರು ಮಾಡಿದೆ” ಎನ್ನುತ್ತಾರೆ ಅವರು.
2022ರಲ್ಲಿ ಪರಿ ಅವರನ್ನು ಭೇಟಿಯಾದಾಗ, ಅವರು ಒಂದು ಸಣ್ಣ ಬಟ್ಟಲು ಚೌ ಮೇನ್ ಅನ್ನು 10 ರೂ.ಗೆ ಮಾರುತ್ತಿದ್ದರು. "ದಿನಕ್ಕೆ ಸರಿಸುಮಾರು 700-800 ರೂಪಾಯಿಗಳ ವ್ಯಾಪಾರವಾಗುತ್ತದೆ." ಇದರಲ್ಲಿ 200-300 ರೂ.ಗಳನ್ನು ಉಳಿಸಬಹುದು ಎಂದು ಅವರು ಅಂದಾಜಿಸುತ್ತಾರೆ. 700 ಗ್ರಾಂ ನೂಡಲ್ಸ್ ಪ್ಯಾಕ್ ಬೆಲೆ 35 ರೂ.ಗಳಾಗಿದ್ದು, ದಿನಕ್ಕೆ ಐದು ಪ್ಯಾಕೆಟ್ ಬಳಸುತ್ತಾರೆ. ಇತರ ದೊಡ್ಡ ದೈನಂದಿನ ವೆಚ್ಚಗಳೆಂದರೆ ಸ್ಟೌ ಉರಿಸಲು ಬೇಕಾಗುವ ಸೀಮೆಎಣ್ಣೆ, ಅಡುಗೆ ಎಣ್ಣೆ ಮತ್ತು ಅವರ ಬೈಕಿಗೆ ಪೆಟ್ರೋಲ್.
“ನಮ್ಮ ಬಳಿ ಬಿಘಾ ಭೂಮಿಯಿದೆ. ಆದರೆ ಅದರಿಂದ ನಮಗೆ ಏನೂ ಸಿಗುವುದಿಲ್ಲ” ಎಂದು ಅವರು ಹೇಳಿದರು. ಅವರು ತನ್ನ ಅಣ್ಣ ತಮ್ಮಂದಿರೊಡನೆ ಸೇರಿ ಬೇಸಾಯ ಮಾಡುತ್ತಾರೆ. ಹೊಲದಲ್ಲಿ ಬೆಳೆಯುವ ಗೋಧಿ, ಸಜ್ಜೆ ಮತ್ತು ಸಾಸಿವೆ ಮನೆ ಬಳಕೆಗಷ್ಟೇ ಸಾಕಾಗುತ್ತದೆ. ರಾಮ್ ರೀನಾ ಎನ್ನುವವರೊಡನೆ ಮದುವೆಯಾಗಿರುವ ಅವರಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಮಕ್ಕಳಿದ್ದಾರೆ, ಅವರಲ್ಲಿ ಮೂವರು ಹೆಣ್ಣು ಮತ್ತು ಒಬ್ಬ ಗಂಡು.
ಏಳು ವರ್ಷಗಳ ಹಿಂದೆ ಅವರು ಟಿವಿಎಸ್ ಮೋಟಾರ್‌ಬೈಕ್ ಖರೀದಿಸಿದರು. ನಾಲ್ಕು ವರ್ಷಗಳ ನಂತರ ಅದನ್ನು ಮೊಬೈಲ್ ಕಿಚನ್ ಆಗಿ ಪರಿವರ್ತಿಸಿದರು. ಅವರ ಬೈಕಿನ ಬದಿಗಳಲ್ಲಿ ಚೀಲಗಳನ್ನು ನೇತು ಹಾಕಲಾಗಿತ್ತು. ಇಂದು ಅವರು ತಯಾರಿಸುವ ಆಹಾರಕ್ಕೆ ಬಹುತೇಕ ಮಕ್ಕಳೇ ಗ್ರಾಹಕರು. ಮತ್ತು ಅವರು ತಮ್ಮ ಈ ಗ್ರಾಹಕರನ್ನು ರಲುಪುವ ಸಲುವಾಗಿ ದಿನಕ್ಕೆ 100 ಕಿಲೋಮೀಟರುಗಳಷ್ಟು ದೂರವನ್ನು ಸುತ್ತಾಡುತ್ತಾರೆ. “ಈ ಕೆಲಸ ನನಗೆ ಇಷ್ಟ. ನನ್ನಿಂದ ಸಾಧ್ಯವಿರುವಷ್ಟು ದಿನ ಇದನ್ನೇ ಮಾಡುತ್ತೇನೆ” ಎಂದು ಅವರು ನಗುತ್ತಾ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು