ಸುಧೀರ್ ಕೋಸ್ರೆ ಮಂಚದ ಮೇಲೆ ವಿಚಿತ್ರವಾಗಿ ಕುಳಿತುಕೊಂಡು ಅವರ ಬಲ ಪಾದದಲ್ಲಿರುವ ಆಳವಾದ ಗಾಯ, ಬಲ ತೊಡೆಯಲ್ಲಿ ಆಗಿರುವ ಸುಮಾರು ಐದು ಸೆಂಟಿಮೀಟರ್ ಉದ್ದದ ಕಟ್, ಬಲ ಮುಂದೋಳಿನ ಕೆಳಗೆ ಉದ್ದವಾದ ಹೊಲಿಗೆ ಹಾಕಬೇಕಿರುವ ಭಯಾನಕ ಗಾಯ ಮತ್ತು ಅವರ ದೇಹದಾದ್ಯಂತ ಆಗಿರುವ ಏಟುಗಳನ್ನು ತೋರಿಸುತ್ತಾರೆ.
ಮಂದ ಬೆಳಕಿನ ಗಾರೆ ಹಾಕದ ಗೋಡೆಯ ಎರಡು ಕೋಣೆಗಳ ಮನೆಯ ಕೋಣೆಯೊಂದರಲ್ಲಿ ಒಳಗೊಳಗೆ ನಡುಗುತ್ತಾ, ಸಾಕಷ್ಟು ನೋವನ್ನು ಅನುಭವಿಸುತ್ತಾ ಅವರು ಕುಳಿತುಕೊಂಡಿದ್ದರು. ಅವರ ಪಕ್ಕದಲ್ಲಿಯೇ ಅವರ ಹೆಂಡತಿ, ತಾಯಿ ಮತ್ತು ಸಹೋದರ ಕೂಡ ಇದ್ದರು. ಹೊರಗೆ ತಡವಾಗಿಯಾದರೂ ಕಿರಿಕಿರಿಯುಂಟು ಮಾಡುತ್ತಾ ಕೊನೆಗೂ ಜಡಿಮಳೆ ಸುರಿಯುತ್ತಿತ್ತು.
ಜುಲೈ 2, 2023ರ ಸಂಜೆ, ಲೋಹರ್-ಗಡಿ (ಗಡಿ ಲೋಹರ್ ಎಂದೂ ಕರೆಯಲ್ಪಡುತ್ತದೆ ಮತ್ತು ರಾಜ್ಯದಲ್ಲಿ ಇತರ ಹಿಂದುಳಿದ ಜಾತಿಯಡಿ ಪಟ್ಟಿ ಮಾಡಲಾಗಿದೆ) ಸಮುದಾಯಕ್ಕೆ ಸೇರಿದ ಭೂರಹಿತ ಕಾರ್ಮಿಕ ಸುಧೀರ್ ಅವರು ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ ಎದುರಾದ ಭಾರಿ ಮತ್ತು ಕ್ರೂರ ಕಾಡುಹಂದಿಯ ದಾಳಿಯಿಂದ ಬದುಕುಳಿದರು. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ 30 ವರ್ಷದ ತೆಳ್ಳಗಿನ ಆದರೆ ಬಲಶಾಲಿಯಾದ ಕೃಷಿ ಕಾರ್ಮಿಕ, ಅದೃಷ್ಟವಶಾತ್ ತನ್ನ ಮುಖ ಮತ್ತು ಎದೆಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತಾರೆ.
ಜುಲೈ 8ರ ಸಂಜೆ ಚಂದ್ರಾಪುರ ಜಿಲ್ಲೆಯ ಸಾವೊಲಿ ತೆಹಸಿಲ್‌ನಲ್ಲಿರುವ ಅರಣ್ಯದ ಪಕ್ಕದಲ್ಲಿರುವ, ಅಷ್ಟೇನು ಆಸಕ್ತಿದಾಯಕವಲ್ಲದ ಅವರ ಗ್ರಾಮವಾದ ಕವಾತಿಯಲ್ಲಿ ಪರಿ ಅವರನ್ನು ಭೇಟಿಮಾಡಿತ್ತು. ಅವರು ಆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.
ಜಮೀನಿನಲ್ಲಿ ಟ್ರಾಕ್ಟರ್ ಓಡಿಸುವ ಸಹ ಕಾರ್ಮಿಕನೊಬ್ಬ ಇವರ ಬೊಬ್ಬೆ ಕೇಳಿ ಸಹಾಯಕ್ಕಾಗಿ ಓಡಿ ಬಂದು, ತನ್ನ ಸುರಕ್ಷತೆಯನ್ನೂ ಮರೆತು ಹಂದಿಯ ಮೇಲೆ ಕಲ್ಲುಗಳನ್ನು ಎಸೆದದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಬಹುಶಃ ಅದು ಹೆಣ್ಣು ಹಂದಿಯಾಗಿರಬೇಕು, ಸುಧೀರ್ ಬಿದ್ದಾಗ ಅದು ತನ್ನ ಕೋರೆಗಳಿಂದ ಅವರ ಮೇಲೆ ದಾಳಿ ಮಾಡಿತ್ತು. ಅವರ ಕಣ್ಣುಗಳು ಭಯಭೀತಗೊಂಡು ಮೋಡ ಕವಿದ ಆಕಾಶದತ್ತ ನೋಡಿದ್ದವು. "ಅದು ಹಿಂದೆ ಹೆಜ್ಜೆಗಳನ್ನಿಟ್ಟು ನನ್ನ ಮೇಲೆರಗಿತು. ನಂತರ ತನ್ನ ಉದ್ದನೆಯ ದಂತಗಳಿಂದ ತಿವಿಯಿತು,” ಎಂದು ಸುಧೀರ್ ಹೇಳುತ್ತಾರೆ. ಅವರ ಪತ್ನಿ ದರ್ಶನಾ ಅದನ್ನು ನಂಬಲು ಅಸಾಧ್ಯವೆಂಬಂತೆ ಗೊಣಗಿದರು. ಅವರಿಗೆ ತನ್ನ ಪತಿ ಸಾವನ್ನು ಮುಟ್ಟಿಬಂದದ್ದು ತಿಳಿದಿತ್ತು.
ಹಂದಿಯು ಅವರನ್ನು ತೀವ್ರವಾಗಿ ಗಾಯಗೊಳಿಸಿ ಪಕ್ಕದ ಪೊದೆಯೊಳಗೆ ನುಗ್ಗಿ ತಪ್ಪಿಸಿಕೊಂಡಿತು.
ಅಂದು ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಸುಧೀರ್ ಕೆಲಸ ಮಾಡುತ್ತಿದ್ದ ಜಮೀನು ಒದ್ದೆಯಾಗಿತ್ತು. ಹದಿನೈದು ದಿನ ತಡವಾಗಿಯಾದರೂ ಬಿತ್ತನೆ ಕಾರ್ಯ ಆರಂಭವಾಗಿತ್ತು. ಅರಣ್ಯ ಪ್ರದೇಶದ ಗಡಿಗೆ ರೇಖೆಗಳನ್ನು ಹಾಕುವುದು ಸುಧೀರ್ ಅವರ ಕೆಲಸ. ಅದಕ್ಕಾಗಿ ಅವರಿಗೆ ದಿನಕ್ಕೆ 400 ರುಪಾಯಿ ಸಂಬಳ ನೀಡಲಾಗುತ್ತದೆ. ಜೀವನೋಪಾಯಕ್ಕಾಗಿ ಅವರು ಮಾಡುವ ಅನೇಕ ಕೆಲಸಗಳಲ್ಲಿ ಇದೂ ಒಂದು. ಆ ಪ್ರದೇಶದಲ್ಲಿನ ಇತರ ಭೂರಹಿತ ಜನರಂತೆ ದೂರದ ಸ್ಥಳಗಳಿಗೆ ವಲಸೆ ಹೋಗುವುದಕ್ಕಿಂತ ಈ ಕೆಲಸವೇ ಉತ್ತಮ ಎಂದು ಕೆಲಸಕ್ಕಾಗಿ ಕಾಯುತ್ತಾರೆ.
ಆ ರಾತ್ರಿ ಸಾವೋಲಿ ಸರ್ಕಾರಿ ಗ್ರಾಮೀಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ, ಸುಧೀರ್ ಅವರನ್ನು 30 ಕಿಲೋಮೀಟರ್ ದೂರದಲ್ಲಿರುವ ಗಡ್‌ಚಿರೋಲಿ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರ ಗಾಯಗಳಿಗೆ ಹೊಲಿಗೆ ಹಾಕಲಾಯಿತು. ಚೇತರಿಸಿಕೊಳ್ಳಲು ಆರು ದಿನಗಳವರೆಗೆ ಅಲ್ಲೇ ಉಳಿಸಿಕೊಳ್ಳಲಾಗಿತ್ತು.
ಕವತಿ ಚಂದ್ರಾಪುರ ಜಿಲ್ಲೆಯಲ್ಲಿದ್ದರೂ, ಗಡ್ಚಿರೋಲಿ ನಗರವು ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಚಂದ್ರಾಪುರ ನಗರಕ್ಕಿಂತ ಕವತಿಗೆ ಹತ್ತಿರವಿದೆ. ರಬೀಪುರ ಲಸಿಕೆ ಸೇರಿದಂತೆ, ರೇಬಿಸ್ ಹಾಗೂ ಇತರ ಚಿಕಿತ್ಸೆಗಳಿಗಾಗಿ ಅವರು ಸಾವೋಲಿಯಲ್ಲಿರುವ ಕಾಟೇಜ್ (ಸರ್ಕಾರಿ) ಆಸ್ಪತ್ರೆಗೆ ಹೋಗಬೇಕು.
ಕಾಡು ಹಂದಿಯ ದಾಳಿಗೆ ಒಳಗಾದ ಸುಧೀರ್ ಅವರ ಅನುಭವವು ಕೃಷಿಯಲ್ಲಿ ಎದುರಾಗುವ ಅಪಾಯಗಳ ಬಗ್ಗೆ ಹೊಸ ಅರಿವನ್ನು ಕೊಡುತ್ತದೆ. ಬೆಲೆ ಏರಿಕೆ, ಹವಾಮಾನ ವೈಪರೀತ್ಯಗಳು ಮತ್ತು ಇತರ ಹಲವಾರು ಸಮಸ್ಯೆಗಳು ಕೃಷಿಯನ್ನು ಅತ್ಯಂತ ಅಪಾಯಕಾರಿ ಉದ್ಯೋಗವನ್ನಾಗಿ ಮಾಡಿದೆ. ವಾಸ್ತವವಾಗಿ, ಚಂದ್ರಾಪುರ ಸೇರಿದಂತೆ, ಭಾರತದ ಸಂರಕ್ಷಿತ ಮತ್ತು ಸಂರಕ್ಷಿತವಲ್ಲದ ಅರಣ್ಯಗಳ ಸುತ್ತಲಿನ ಅನೇಕ ಪ್ರದೇಶಗಳಲ್ಲಿ ಉಳುಮೆ ರಕ್ತಸಿಕ್ತ ಜೀವನೋಪಾಯವಾಗಿದೆ.
ಕಾಡು ಪ್ರಾಣಿಗಳು ಬೆಳೆಗಳನ್ನು ಧ್ವಂಸ ಮಾಡುವುದರಿಂದ ರೈತರು ರಾತ್ರಿಯಿಡೀ ನಿದ್ದೆಬಿಟ್ಟು ಜಾಗರಣೆ ಕೂರಬೇಕು. ಆದಾಯದ ಏಕೈಕ ಮೂಲವಾಗಿರುವ ತಮ್ಮ ಬೆಳೆಗಳನ್ನು ರಕ್ಷಿಸಲು ವಿಲಕ್ಷಣ ದಾರಿಗಳನ್ನು ಕಂಡುಕೊಳ್ಳುವಂತೆ ಆಗಿದೆ. ಇದನ್ನು ಓದಿರಿ: ‘ಇದೊಂದು ಹೊಸ ರೀತಿಯ ಬರ’
ಆಗಸ್ಟ್ 2022ರ ಮೊದಲು ಮತ್ತು ನಂತರ, ಈ ವರದಿಗಾರರು ಹುಲಿ, ಚಿರತೆ ಮತ್ತು ಇತರ ಕಾಡು ಪ್ರಾಣಿಗಳ ದಾಳಿಯಿಂದ ಘೋರವಾಗಿ ಗಾಯಗೊಂಡು ಬದುಕುಳಿದ ಸುಧೀರ್ ಅವರಂತಹ ಪುರುಷರು ಮತ್ತು ಮಹಿಳಾ ಕೃಷಿಕರನ್ನು ಭೇಟಿಯಾಗಿ ಸಂದರ್ಶನ ನಡೆಸಿದ್ದಾರೆ. ಇವರೆಲ್ಲಾ ಚಂದ್ರಾಪುರ ಜಿಲ್ಲೆಯ ಸಂರಕ್ಷಿತ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (ಟಿಎಟಿಆರ್) ಸುತ್ತ ಮುಲ್, ಸಾವೊಲಿ, ಸಿಂಧೇವಾಹಿ, ಬ್ರಹ್ಮಪುರಿ, ಭದ್ರಾವತಿ, ವರೋರಾ, ಚಿಮುರ್ - ಅರಣ್ಯ ತಹಸಿಲ್‌ಗಳಲ್ಲಿ ವಾಸಿಸುವವರು ಮತ್ತು ಕೆಲಸ ಮಾಡುವವರು. ಕಾಡುಪ್ರಾಣಿ-ಮನುಷ್ಯ ನಡುವಿನ ಸಂಘರ್ಷ, ಅದರಲ್ಲೂ ಹುಲಿಗಳ ಜೊತೆಗಿನ ಕಾದಾಟ ಕಳೆದ ಎರಡು ದಶಕಗಳಿಂದ ಇಲ್ಲಿ ಸುದ್ದಿಯಲ್ಲಿದೆ.
ಕಳೆದ ವರ್ಷ ಚಂದ್ರಾಪುರ ಜಿಲ್ಲೆಯೊಂದರಲ್ಲೇ 53 ಜನರು ಹುಲಿ ದಾಳಿಯಿಂದಾಗಿ ಸಾವನ್ನಪ್ಪಿದ್ದಾರೆ, ಅವರಲ್ಲಿ 30 ಜನರು ಸಾವೊಲಿ ಮತ್ತು ಸಿಂಧೇವಾಹಿ ಬೆಲ್ಟ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪರಿ ವರದಿಗಾರರು ಸಂಗ್ರಹಿಸಿದ ಜಿಲ್ಲಾ ಅರಣ್ಯ ಡೇಟಾ ತೋರಿಸುತ್ತದೆ. ಆ ಅಂಕಿ-ಅಂಶ ಮನುಷ್ಯ-ಹುಲಿ ಸಂಘರ್ಷದ ಕೇಂದ್ರಬಿಂದುವಾಗಿದೆ.
ಗಾಯ, ಸಾವುನೋವುಗಳ ಮಾತ್ರವಲ್ಲ, ವಿಚಿತ್ರ ತೆರನಾದ ಭಯ ಟಿಎಟಿಆರ್‌ನ ಈ ಹಳ್ಳಿಗಳನ್ನು ಬಫರ್ ವಲಯದಲ್ಲಿ ಮತ್ತು ಅದರ ಹೊರಗೂ ಆಳುತ್ತಿದೆ. ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮಗಳು ಈಗಾಗಲೇ ಎದ್ದು ಕಾಣುತ್ತಿವೆ. ರೈತರು ಪ್ರಾಣಿಗಳ ಭಯ ಮತ್ತು ಕಾಡು ಹಂದಿಗಳು, ಜಿಂಕೆಗಳು ಅಥವಾ ನೀಲ್ಗಯ್‌ಗಳು ಕೊಯ್ಲು ಮಾಡಲು ಬಿಡುವುದಿಲ್ಲ ಎಂಬ ಹತಾಶೆಯ ನಡುವೆಯೂ ರಾಬಿಯನ್ನು (ಚಳಿಗಾಲದ ಬೆಳೆ) ರಕ್ಷಿಸುತ್ತಿದ್ದಾರೆ.
ಸುಧೀರ್ ಜೀವಂತವಾಗಿರುವುದೇ ಅವರ ಅದೃಷ್ಟ. ಅವರ ಮೇಲೆ ದಾಳಿ ಮಾಡಿದ್ದು ಕಾಡುಹಂದಿಯೇ ಹೊರತು ಹುಲಿ ಅಲ್ಲ. ಇದನ್ನು ಓದಿ: ಖೊಲ್ದೋಡಾ: ಮಚಾನ್ ಮೇಲೊಂದು ಇರುಳು
*****
2022ರ ಆಗಸ್ಟ್‌ನಲ್ಲಿ ಮಳೆಗಾಲದ ಒಂದು ಮಧ್ಯಾಹ್ನ, 20 ವರ್ಷದ ಪ್ರಾಯದ ಭಾವಿಕ್ ಜರ್ಕರ್ ಇತರ ಕಾರ್ಮಿಕರೊಂದಿಗೆ ಗದ್ದೆಯಲ್ಲಿ ಭತ್ತ ನಾಟಿ ಮಾಡುವಾಗ ಅವರಿಗೆ ಅವರ ತಂದೆಯ ಸ್ನೇಹಿತ ವಸಂತ ಪಿಪರ್ಖೆಡೆಯವರಿಂದ ಕರೆ ಬಂದಿತು.
ಪಿಪರ್ಖೆಡೆಯವರು ಭಾವಿಕ್‌ಗೆ ಕರೆಮಾಡಿ ಅವರ ತಂದೆ ಭಕ್ತದಾರವರ ಮೇಲೆ ಹುಲಿ ದಾಳಿ ಮಾಡಿದ್ದನ್ನು ತಿಳಿಸಿದರು. ದಾಳಿಯಲ್ಲಿ ಸಾವನ್ನಪ್ಪಿದ ಭಕ್ತದಾ ಅವರ ದೇಹವನ್ನು ಕಾಡು ಬೆಕ್ಕು ಕಾಡಿಗೆ ಎಳೆಕೊಂಡು ಹೋಗಿತ್ತು.
45 ವರ್ಷದ ಭಕ್ತದಾ ಮತ್ತು ಅವರ ಮೂವರು ಸ್ನೇಹಿತರು ಕಾಡಿನ ಅಂಚಿನಲ್ಲಿರುವ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ, ಹುಲಿಯೊಂದು ಇದ್ದಕ್ಕಿದ್ದಂತೆ ಎಲ್ಲಿಂದಲೋ ಚಿಗಿದು ನೆಲದ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಅವರ ಮೇಲೆ ದಾಳಿ ಮಾಡಿತು. ಬಹುಶಃ ಮನುಷ್ಯನನ್ನು ಬೇಟೆಯೆಂದು ತಪ್ಪಾಗಿ ಭಾವಿಸಿದ ಈ ಹುಲಿ ಹಿಂದಿನಿಂದ ಬಂದು ಭಕ್ತದಾರವರ ಕುತ್ತಿಗೆಯನ್ನು ಹಿಡಿಯಿತು.
"ಹುಲಿಯು ನಮ್ಮ ಸ್ನೇಹಿತನನ್ನು ಪೊದೆಗಳಿಗೆ ಎಳೆದುಕೊಂಡು ಹೋಗುತ್ತಿರುವುದನ್ನು ನೋಡುವುದನ್ನು ಬಿಟ್ಟು ನಾವು ಬೇರೇನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ಪಿಪರ್ಖೆಡೆ ಹೇಳುತ್ತಾರೆ. ಈ ಘಟನೆಯಲ್ಲಿ ತಮ್ಮ ಅಸಹಾಯಕತೆಯನ್ನು ಅಪರಾಧವೆಂಬಂತೆ ಭಾವಿಸುತ್ತಿದ್ದಾರೆ.
"ನಾವು ಸಾಕಷ್ಟು ಶಬ್ದ ಮಾಡಿದೆವು. ಆದರೆ ದೊಡ್ಡ ಹುಲಿ ಅದಾಗಲೇ ಭಕ್ತದಾರನ್ನು ಹಿಡಿದಿತ್ತು," ಎಂದು ಘಟನೆ ನಡೆದ ಸ್ಥಳದಲ್ಲಿದ್ದ ಇನ್ನೋರ್ವ ಕಾರ್ಮಿಕ ಸಂಜಯ್ ರಾವುತ್ ಹೇಳುತ್ತಾರೆ.
ಈ ಇಬ್ಬರಲ್ಲಿ ಯಾರಿಗಾದರೂ ಈ ಸ್ಥಿತಿ ಬರುವ ಸಾಧ್ಯತೆ ಇತ್ತು ಎಂದು ಇಬ್ಬರೂ ಸ್ನೇಹಿತರು ಹೇಳುತ್ತಾರೆ.
ಹುಲಿ ಈ ಪ್ರದೇಶದಲ್ಲಿ ಬೀಡುಬಿಟ್ಟಿತ್ತು, ಆದರೆ ಇವರಿಗೆ ತಮ್ಮ ಹೊಲದಲ್ಲಿ ಇದನ್ನು ಎದುರಿಸಬೇಕಾಗುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಭಕ್ತದಾ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ಮೊದಲ ವ್ಯಕ್ತಿ. ಇದಕ್ಕಿಂತ ಹಿಂದೆ, ಗ್ರಾಮಸ್ಥರು ತಮ್ಮ ದನ ಮತ್ತು ಕುರಿಗಳನ್ನು ಕಳೆದುಕೊಂಡಿದ್ದರು. ಕಳೆದ ಎರಡು ದಶಕಗಳಲ್ಲಿ ಸಾವೊಲಿ ಮತ್ತು ಇತರ ಸುತ್ತಮುತ್ತಲಿನ ತಹಸಿಲ್‌ಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ.
"ನಾನೊಮ್ಮೆ ಮರಗಟ್ಟಿ ಹೋಗಿದ್ದೆ" ಎಂದು ಹಳ್ಳಿಯಿಂದ ಬಹಳ ದೂರದಲ್ಲಿರುವ ಹೀರಾಪುರ್ ಗ್ರಾಮದ ತನ್ನ ಮನೆಯಲ್ಲಿ ವರ್ಷದ ತಮ್ಮ ಸಹೋದರಿ ರಾಗಿಣಿಯ ಜೊತೆಗೆ ಕುಳಿತುಕೊಂಡು ಭಾವಿಕ್ ಸುಧೀರ್ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಈ ಘಟನೆ ಅವರ ಇಡೀ ಕುಟುಂಬಕ್ಕೇ ಆಘಾತವನ್ನು ತಂದಿತ್ತು. ಅದು ಅವರ ಮನೆಯ ಮೇಲೆ ಕವಿದ ಕರಿಛಾಯೆಯಾಗಿತ್ತು. ತನ್ನ ತಂದೆಯು ದುರಂತ ಅಂತ್ಯವನ್ನು ನೆನೆಸಿಕೊಂಡು ಇಂದಿಗೂ ಅವರು ಭಯಭೀತರಾಗುತ್ತಾರೆ.
ಈಗ ಈ ಅಣ್ಣ-ತಂಗಿ ಮನೆಯ ಜವಬ್ದಾರಿಯನ್ನು ಹೊತ್ತಿದ್ದಾರೆ. ಪರಿ ತಂಡ ಅವರ ಮನೆಗೆ ಭೇಟಿ ನೀಡಿದಾಗ ಅವರ ತಾಯಿ ಲತಾಬಾಯಿ ಮನೆಯಲ್ಲಿರಲಿಲ್ಲ. "ಅವರು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ" ಎಂದು ರಾಗಿಣಿ ಹೇಳುತ್ತಾರೆ. "ಹುಲಿ ದಾಳಿಯಿಂದ ನನ್ನ ತಂದೆ ತೀರಿಕೊಂಡಿರುವುದನ್ನು ಅರ್ಥಮಾಡಿಕೊಳ್ಳುವುದಕ್ಕೂ ನನಗೆ ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ.
ಇಡೀ ಗ್ರಾಮದಲ್ಲಿ ಒಂದು ತೆರನಾದ ಭಯ ಆವರಿಸಿದೆ ಮತ್ತು "ಯಾರೊಬ್ಬರೂ ಒಬ್ಬಂಟಿಯಾಗಿ ಎಲ್ಲಿಗೂ ಹೋಗುವುದಿಲ್ಲ" ಎಂದು ರೈತರು ಹೇಳುತ್ತಾರೆ.
*****
ಎತ್ತರದ ತೇಗ ಮತ್ತು ಬಿದಿರಿನ ಮರಗಳನ್ನೂ ಹೊಂದಿರುವ ಭತ್ತದ ಗದ್ದೆಗಳು ಚೌಕ ಮತ್ತು ಆಯತಾಕಾರದ ಪೆಟ್ಟಿಗೆಗಳಂತೆ ಕಾಣುತ್ತವೆ. ಏಕೆಂದರೆ ಭತ್ತ ಬೆಳೆಯಲು ಗದ್ದೆ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಚಂದ್ರಾಪುರ ಜಿಲ್ಲೆಯ ಅತ್ಯಂತ ಹೆಚ್ಚು ಜೀವವೈವಿಧ್ಯಯನ್ನು ಹೊಂದಿರುವ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ.
ಸಾವೊಲಿ ಮತ್ತು ಸಿಂಧೇವಾಹಿ ತಡೋಬಾ ಅರಣ್ಯಗಳ ದಕ್ಷಿಣ ಭಾಗದಲ್ಲಿವೆ. ಇಲ್ಲಿ ಹುಲಿ ಸಂರಕ್ಷಣೆಯ ಚಟುವಟಿಕೆಗಳು ನಡೆಯುತ್ತವೆ. 2023ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಿಡುಗಡೆ ಮಾಡಿದ 2022ರ ಟೈಗರ್ ಕೋ-ಪ್ರೆಡೇಟರ್ಸ್ ವರದಿಯಲ್ಲಿ ಉಲ್ಲೇಖಿಸಿದಂತೆ ಟಿಎಟಿಆರ್‌ನಲ್ಲಿ ಹುಲಿಗಳ ಸಂಖ್ಯೆಯು 2018ರಲ್ಲಿ ಇದ್ದ 97 ಸಂಖ್ಯೆಯಿಂದ ಈ ವರ್ಷ 112ಕ್ಕೆ ಏರಿದೆ.
ಅನೇಕವು ಸಂರಕ್ಷಿತ ಪ್ರದೇಶಗಳ (ಪಿಎ) ಮಾನವ ವಾಸಸ್ಥಳಿಂದ ಬೇರೆಯಾಗಿ ಹೊಗಿರುವ ಸ್ಥಳೀಯ ಕಾಡುಗಳಲ್ಲಿವೆ. ಆದ್ದರಿಂದ, ಸಂರಕ್ಷಿತ ಪ್ರದೇಶಗಳಿಂದ ಹೊರಬಂದು ದಟ್ಟವಾದ ಜನವಸತಿಗಳ ನಡುವೆ ತಿರುಗಾಡುವ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಹುಲಿಗಳ ದಾಳಿಗಳು ಬಫರ್ ವಲಯ ಮತ್ತು ಸುತ್ತಮುತ್ತಲಿನ ಕಾಡುಗಳು ಹಾಗೂ ಗದ್ದೆಗಳಲ್ಲಿ ಹೆಚ್ಚಾಗಿವೆ. ಕೆಲವು ಹುಲಿಗಳು ಮೀಸಲು ಪ್ರದೇಶದಿಂದ ಹೊರಬರುತ್ತಿರುವುದು ಕಾಣುತ್ತದೆ.
ಹೆಚ್ಚಿನ ದಾಳಿಗಳು ಬಫರ್ ವಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಂರಕ್ಷಿತ ಪ್ರದೇಶಗಳ ಹೊರಗೆ ನಡೆಯುತ್ತಿವೆ. ಟಿಎಟಿಆರ್‌ನಲ್ಲಿ ಮಾಡಿರುವ 2013ರ ಅಧ್ಯಯನ ದ ಪ್ರಕಾರ, ಅರಣ್ಯದಲ್ಲಿ ಹೆಚ್ಚಿನ ದಾಳಿಗಳು ಸಂಭವಿಸಿವೆ. ನಂತರ ಕೃಷಿ ಭೂಮಿಗಳು ಮತ್ತು ದಟ್ಟ ಅರಣ್ಯ ಮತ್ತು ಮೀಸಲು, ಬಫರ್ ವಲಯ ಮತ್ತು ವಿಭಜಿತ ಅರಣ್ಯಗಳನ್ನು ಹೊಂದಿರುವ ಈಶಾನ್ಯ ಕಾರಿಡಾರ್‌ನ ಉದ್ದಕ್ಕೂ ನಡೆದಿದೆ.
ಮಾನವ-ಹುಲಿ ಸಂಘರ್ಷವು ಸಂರಕ್ಷಣಾ ಪ್ರಕ್ರಿಯೆಯ ದೋಷದಿಂದ ನಡೆದ ದುಷ್ಪರಿಣಾಮವಾಗಿದೆ. ಇತ್ತೀಚೆಗೆ ಮುಂಬೈಯಲ್ಲಿ ಮುಕ್ತಾಯಗೊಂಡ ಜುಲೈ 2023ರ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ವಿಧಾನಸಭೆಗೆ ಉತ್ತರಿಸುತ್ತಾ 'ಹುಲಿಗಳ ಸ್ಥಳಾಂತರ' ಪ್ರಯೋಗದ ಭಾಗವಾಗಿ ಸರ್ಕಾರವು ಎರಡು ಹುಲಿಗಳನ್ನು ಗೊಂಡಿಯಾದ ನಾಗ್ಜಿರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಾಗಿಸಿದೆ ಮತ್ತು ಹೆಚ್ಚಿನ ಹುಲಿಗಳನ್ನು ಅವುಗಳಿಗೆ ಸ್ಥಳಾವಕಾಶವಿರುವ ಕಾಡುಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು.
ಅದೇ ಉತ್ತರದಲ್ಲಿ, ಹುಲಿ ದಾಳಿಯಲ್ಲಿ ಸಂಭವಿಸಿದ ಸಾವು-ನೋವು, ಬೆಳೆ ನಷ್ಟ ಮತ್ತು ಜಾನುವಾರುಗಳ ಸಾವಿನಿಂದ ನೊಂದ ಸಂತ್ರಸ್ತರಿಗೆ ಸರ್ಕಾರವು ಪರಿಹಾರವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದರು. ಸರ್ಕಾರವು ಮನುಷ್ಯರ ಮರಣದ ಸಂದರ್ಭದಲ್ಲಿ ಪರಿಹಾರ ಧನವನ್ನು 20 ಲಕ್ಷ ರುಪಾಯಿಯಿಂದ 25 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಬೆಳೆ ಹಾನಿ ಮತ್ತು ಜಾನುವಾರುಗಳ ಸಾವಿನ ಪರಿಹಾರದ ಮೊತ್ತವನ್ನು ಹೆಚ್ಚಿಸಿಲ್ಲ. ಗರಿಷ್ಟ ಬೆಳೆ ನಷ್ಟಕ್ಕೆ 25,000 ರುಪಾಯಿ ಮತ್ತು ಜಾನುವಾರು ಸಾವಿಗೆ 50,000 ರುಪಾಯಿ ನಿಗದಿಪಡಿಸಲಾಗಿದೆ.
ಈ ಬಿಕ್ಕಟ್ಟಿಗೆ ಕೊನೆಯೇ ಇಲ್ಲವೆಂದು ತೋರುತ್ತದೆ.
"ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಕಳೆದ ಎರಡು ದಶಕಗಳಲ್ಲಿ ಮನುಷ್ಯರ ಮೇಲೆ ನರಭಕ್ಷಕ ಹುಲಿಗಳ ದಾಳಿಗಳು ತೀವ್ರವಾಗಿ ಹೆಚ್ಚಿವೆ" ಎಂದು ಟಿಎಟಿಆರ್ (ಬಫರ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಮೀಸಲು ಪ್ರದೇಶದ ಹೊರಗೆ) ನಡೆಸಿದ ಸಮಗ್ರ ಅಧ್ಯಯನವು ತಿಳಿಸುತ್ತದೆ.
2005-11ರಲ್ಲಿ ನಡೆಸಿದ ಅಧ್ಯಯನವು "ಜನರು ಮತ್ತು ಭಯಾನಕ ನರಭಕ್ಷ ಹುಲಿಗಳ ನಡುವಿನ ಸಂಘರ್ಷಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಶಿಫಾರಸ್ಸು ಮಾಡಲು ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಸುತ್ತಮುತ್ತಲಿನ ಜನರ ಮೇಲೆ ಹುಲಿಗಳು ಮತ್ತು ಚಿರತೆಗಳ ದಾಳಿಯ ಮಾನವ-ಪ್ರಕೃತಿ ಗುಣಲಕ್ಷಣಗಳ ಪರಿಶೀಲನೆ ನಡೆಸಿದೆ." ಒಟ್ಟು 132 ದಾಳಿಗಳಲ್ಲಿ ಹುಲಿಗಳು ಮತ್ತು ಚಿರತೆಗಳು ಕ್ರಮವಾಗಿ 78% ಮತ್ತು 22% ಪ್ರಕರಣಗಳಿಗೆ ಕಾರಣವಾಗಿವೆ.
"ಹೆಚ್ಚಿನ ಬಲಿಪಶುಗಳು ಸಣ್ಣ ಸಣ್ಣ ಕಾಡು ಉತ್ಪನ್ನಗಳನ್ನು ಸಂಗ್ರಹಿಸುವರು” ಎಂದು ಅಧ್ಯಯನವು ತಿಳಿಸಿದೆ. ಕಾಡು ಮತ್ತು ಹಳ್ಳಿಗಳಿಂದ ದೂರ ಇರುವವರ ಮೇಲಿನ ದಾಳಿಯ ಸಂಭವನೀಯತೆ ಕಡಿಮೆ. ಟಿಎಟಿಆರ್ ಬಳಿ ಮಾನವ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಮತ್ತು ಮಾನವ ಮರಣ ಹಾಗೂ ಇತರ ಸಂಘರ್ಷಗಳನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು ಎಂದು ಅಧ್ಯಯನವು ತಿಳಿಸಿದೆ. ಅಲ್ಲದೇ, ಪರ್ಯಾಯ ಇಂಧನ ಮೂಲಗಳನ್ನು (ಉದಾಹರಣೆಗೆ ಜೈವಿಕ ಅನಿಲ ಮತ್ತು ಸೌರ) ಹೆಚ್ಚು ಒದಗಿಸಿದರೆ ಸಂರಕ್ಷಿತ ಪ್ರದೇಶಗಳಲ್ಲಿ ಮರಗಳನ್ನು ಕೊಯ್ದು ಕಟ್ಟಿಗೆ ಸಂಗ್ರಹಿಸುವುದನ್ನು ಕಡಿಮೆ ಮಾಡಬಹುದು.
ಮಾನವ ಪ್ರಾಬಲ್ಯದ ಭೂಪ್ರದೇಶಗಳಲ್ಲಿ ಬೇಟೆ ಕಡಿಮೆಯಿರುವುದು ಈ ಭಕ್ಷಕ ಪ್ರಾಣಿಗಳು ಸಂಘರ್ಷದಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಡೆದ ಘಟನೆಗಳಲ್ಲಿ ಜನರು ಕೆಲಸದಲ್ಲಿದ್ದಾಗ, ಕಾಡಿನಲ್ಲಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಅಥವಾ ಜಾನುವಾರುಗಳನ್ನು ಮೇಯಿಸುವಾಗ ಮಾತ್ರ ಹುಲಿ ದಾಳಿಗಳು ಹೆಚ್ಚಾಗಿ ಸಂಭವಿಸಿವೆ. ಕಾಡು ಪ್ರಾಣಿಗಳು, ವಿಶೇಷವಾಗಿ ಸಸ್ಯಹಾರಿಗಳು, ಬೆಳೆಗಳನ್ನು ತಿನ್ನುವುದು ಚಂದ್ರಾಪುರ ಜಿಲ್ಲೆಯ ಬಹುತೇಕ ಪ್ರದೇಶಗಳ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ ಟಿಎಟಿಆರ್‌ಗೆ ಸಮೀಪವಿರುವ ಪ್ರದೇಶಗಳಲ್ಲಿ, ಜಮೀನುಗಳು ಅಥವಾ ಅರಣ್ಯದ ಅಂಚಿನಲ್ಲಿ ಹುಲಿ ಮತ್ತು ಚಿರತೆ ದಾಳಿಗಳು ಆತಂಕಕಾರಿ ಹೆಚ್ಚಾಗಿವೆ.
ಪ್ರದೇಶದಾದ್ಯಂತ ಪ್ರಯಾಣಿಸುವುದರಿಂದ ಕಾಡು ಪ್ರಾಣಿಗಳು ಮತ್ತು ಹುಲಿಗಳ ದಾಳಿಯು ಜನರ ಪ್ರಮುಖ ಕಾಳಜಿಯ ವಿಚಾರವಾಗಿದೆ. ಪುಣೆ ಮೂಲದ ವನ್ಯಜೀವಿ ಜೀವಶಾಸ್ತ್ರಜ್ಞ ಡಾ. ಮಿಲಿಂದ್ ವಾಟ್ವೆ ಹೇಳುವಂತೆ, ದೀರ್ಘಾವಧಿಯಲ್ಲಿ ಈ ಸಮಸ್ಯೆಯು ಭಾರತದ ಸಂರಕ್ಷಣಾ ಅಗತ್ಯತೆಗಳ ಮೇಲೂ ಪರಿಣಾಮಗಳನ್ನು ಬೀರುತ್ತವೆ. ಸ್ಥಳೀಯರು ವನ್ಯಜೀವಿಗಳ ವಿರುದ್ಧ ತಿರುಗಿ ಬಿದ್ದರೆ, ಸಂರಕ್ಷಿತ ಅರಣ್ಯದ ಹೊರಗೆ ಕಾಡು ಪ್ರಾಣಿಗಳು ಹೇಗೆ ಸುರಕ್ಷಿತವಾಗಿರುತ್ತವೆ!
ಪ್ರಸ್ತುತ ಬಿಕ್ಕಟ್ಟು ಒಂದು ಹುಲಿಯಿಂದ ಉಂಟಾಗುವುದಿಲ್ಲ; ಅನೇಕ ಹುಲಿಗಳು ಆಕಸ್ಮಿಕವಾಗಿ ಮನುಷ್ಯರನ್ನು ಬೇಟೆಗಳೆಂದು ತಪ್ಪಾಗಿ ಭಾವಿಸಿ ಅವರ ಮೇಲೆ ದಾಳಿ ಮಾಡುತ್ತವೆ. ಇಂತಹ ದಾಳಿಗಳಲ್ಲಿ ತಮ್ಮ ಸದಸ್ಯರನ್ನು ಕಳೆದುಕೊಳ್ಳುವ ಕುಟುಂಬಗಳು ಮತ್ತು ಘಟನೆಗಳಿಗೆ ಸಾಕ್ಷಿಯಾದವರು ಕೊನೆಯೇ ಇಲ್ಲದ ಆಘಾತಗಳೊಂದಿಗೆ ಬದುಕುತ್ತಾರೆ.
ಚಾಂಡ್ಲಿಯ ಪ್ರಶಾಂತ್ ಯೆಲಟ್ಟಿವಾರ್‌ರವರದ್ದು ಬಿಕೆ ಹೀರಾಪುರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಸಾವೊಲಿ ತೆಹಸಿಲ್‌ನಲ್ಲಿರುವ ಗ್ರಾಮದ ಅಂತಹ ಒಂದು ಕುಟುಂಬ. ಡಿಸೆಂಬರ್ 15, 2022 ರಂದು, ಅವರ ಪತ್ನಿ ಸ್ವರೂಪಾ ಹುಲಿಗೆ ಬಲಿಯಾದರು. ಹಳ್ಳಿಯ ಇತರ ಐದು ಮಹಿಳೆಯರು ಹುಲಿ ಅವರ ಮೇಲೆ ದಾಳಿಮಾಡಿ ದೇಹವನ್ನು ಕಾಡಿಗೆ ಎಳೆದುಕೊಂಡು ಹೋಗುವುದನ್ನು ಗಾಬರಿಯಿಂದ ನೋಡುತ್ತಿದ್ದರು. ಇದು ಡಿಸೆಂಬರ್ 15, 2022 ರಂದು ಸುಮಾರು 11 ಗಂಟೆಗೆ ಸಂಭವಿಸಿದ ದುರ್ಘಟನೆ.
2023, ಯೆಲಟ್ಟಿವಾರ್ ನಮ್ಮೊಂದಿಗೆ ಮಾತನಾಡುತ್ತಾ, "ಅವಳು ಹೋಗಿ ಆರು ತಿಂಗಳಾಗಿದೆ. ಏನಾಯಿತು ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ," ಎಂದು ಹೇಳುತ್ತಾರೆ.
ಕೃಷಿ ಕಾರ್ಮಿಕರಾಗಿರುವ ಯೆಲಟ್ಟಿವಾರರು ಕೇವಲ ಒಂದು ಎಕರೆ ಜಮೀನನ್ನು ಹೊಂದಿದ್ದಾರೆ. ಈ ಘಟನೆ ಸಂಭವಿಸಿದಾಗ ಸ್ವರೂಪಾ ಮತ್ತು ಇತರ ಮಹಿಳೆಯರು ಗ್ರಾಮದವರೊಬ್ಬರ ಜಮೀನಿನಲ್ಲಿ ಹತ್ತಿ ಕೀಳುವ ಕೆಲಸದಲ್ಲಿ ನಿರತರಾಗಿದ್ದರು. ಮುಖ್ಯವಾಗಿ ಭತ್ತದ ಬೆಲ್ಟ್‌ಗೆ ಹತ್ತಿ ಬೆಳೆ ಹೊಸದು. ಗ್ರಾಮದ ಹತ್ತಿರದ ಜಮೀನಿನಲ್ಲಿದ್ದ ಸ್ವರೂಪಾ ಮೇಲೆ ಹುಲಿ ಜಿಗಿದು ಅರ್ಧ ಕಿ.ಮೀ ದೂರದಲ್ಲಿದ್ದ ಕಾಡಿಗೆ ಎಳೆದುಕೊಂಡು ಹೋಗಿತ್ತು. ಘೋರ ಘಟನೆಯ ಒಂದೆರಡು ಗಂಟೆಗಳ ನಂತರ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳು ಮತ್ತು ಗಾರ್ಡ್‌ಗಳ ನೆರವಿನಿಂದ ಅವರ ಕೊಳೆತ ಮತ್ತು ಭಯಾನಕ ಸ್ಥಿತಿಯಲ್ಲಿದ್ದ ದೇಹವನ್ನು ಹೊರತೆಗೆಯಲಾಯಿತು. ಈ ಪ್ರದೇಶದಲ್ಲಿ ಹುಲಿಗಳಿಂದ ಸತ್ತವರ ದೊಡ್ಡ ಪಟ್ಟಿಗೆ ಸೇರಿ ಹೋದರು.
ಆ ದಿನ ಆಕೆಯ ಶವವನ್ನು ಹೊರತೆಗೆಯಲು ಹೋದ ಹಳ್ಳಿಗಳ ನಡುವೆ, "ನಾವು ಹುಲಿಯನ್ನು ಹೆದರಿಸಲು, ಥಾಲಿಗಳನ್ನು ಮತ್ತು ಡ್ರಮ್‌ಗಳನ್ನು ಬಾರಿಸಿ ಸಾಕಷ್ಟು ಶಬ್ದ ಸೃಷ್ಟಿಸಬೇಕಾಗಿತ್ತು" ಎಂದು ವಿಸ್ತಾರಿ ಅಲ್ಲುರ್ವಾರ್ ಹೇಳುತ್ತಾರೆ.
"ನಾವು ಎಲ್ಲವನ್ನೂ ಗಾಬರಿಯಿಂದ ನೋಡಿದ್ದೆವು" ಎಂದು ಯೆಲ್ಲಟಿವಾರ್‌ಗಳ ಆರು ಎಕರೆ ಭೂಮಿಯ ಕೃಷಿ ಕಾರ್ಮಿಕ ಸೂರ್ಯಕಾಂತ್ ಮಾರುತಿ ಪಡೆವಾರ್ ಹೇಳುತ್ತಾರೆ. ಬೀಳುವುದು? "ಗ್ರಾಮದಲ್ಲಿ ಒಂದು ರೀತಿಯ ಸುಪ್ತ ಭಯವಿದೆ" ಎಂದು ಅವರು ಹೇಳುತ್ತಾರೆ.
ಕೋಪವೇ ಮೇಲುಗೈ ಸಾಧಿಸಿತು. ಅರಣ್ಯ ಇಲಾಖೆಯು ಈ ನರಭಕ್ಷಕ ಹುಲಿಗಳನ್ನು ಸೆರೆಹಿಡಿಯಬೇಕು ಅಥವಾ ತಟಸ್ಥಗೊಳಿಸಬೇಕು. ಅವುಗಳಿಗೆ ಪರಿಹಾರ ಮಾರ್ಗವನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ಸ್ವಲ್ಪ ಕಾಲದ ನಂತರ ಪ್ರತಿಭಟನೆಗಳೂ ನಿಂತುಹೋದವು.
ಪತ್ನಿ ಸ್ವರೂಪಾ ಅವರ ಸಾವಿನ ನಂತರ ಕೆಲಸಕ್ಕೆ ಮರಳುವ ಧೈರ್ಯವನ್ನೂ ಅವರ ಪತಿ ಹೊಂದಿಲ್ಲ. ಹುಲಿಯೊಂದು ಈಗಲೂ ಈ ಗ್ರಾಮದ ಆವರಣದಲ್ಲಿ ಆಗಾಗ ಅಡ್ಡಾಡುತ್ತದೆ ಎನ್ನುತ್ತಾರೆ ಅವರು.
"ನಾವು ಒಂದು ವಾರದ ಹಿಂದೆ ನನ್ನ ಹೊಲದಲ್ಲಿ ಹುಲಿಯನ್ನು ನೋಡಿದ್ದೆವು" ಎಂದು ಏಳು ಎಕರೆ ಭೂಮಿಯನ್ನು ಹೊಂದಿರು 49 ವರ್ಷ ಪ್ರಾಯದ ರೈತ ದಿಡ್ಡಿ ಜಗ್ಲು ಬದ್ದಂವಾರ್ ಹೇಳುತ್ತಾರೆ "ನಾವು ಯಾವುದೇ ಕೆಲಸ ಇದ್ದರೂ ಹೊಲದ ಕಡೆಗೆ ಹೋಗಿಲ್ಲ" ಎಂದು ಅವರು ಹೇಳುತ್ತಾರೆ. ಉತ್ತಮ ಮಳೆ ಆರಂಭವಾದ ಜುಲೈ ಆರಂಭದಲ್ಲಿ ಬಿತ್ತನೆ ಪ್ರಾರಂಭಿಸಿದ್ದರು. "ಈ ಘಟನೆಯ ನಂತರ, ಯಾರೂ ರಾಬಿ ಬೆಳೆಗಳನ್ನು ಬೆಳೆಯಲೇ ಇಲ್ಲ," ಎಂದು ಅವರು ಹೇಳುತ್ತಾರೆ.
ಪ್ರಶಾಂತ್ ತನ್ನ ಪತ್ನಿಯ ಸಾವಿನ ಪರಿಹಾರವಾಗಿ 20 ಲಕ್ಷ ರುಪಾಯಿ ಪಡೆದ್ದರು. ಆದರೆ ಅದರಿಂದ ಅವರ ಹೆಂಡತಿ ಮತ್ತೆ ಬರುವುದಿಲ್ಲ ಎಂದು ಅವರು ಹೇಳುತ್ತಾರೆ. ಸ್ವರೂಪಾ ಒಬ್ಬ ಮಗ ಮತ್ತು ಮಗಳನ್ನು ಕೂಡಾ ಅಗಲಿದ್ದಾರೆ.
*****
2023 ಏನೂ 2022ಕ್ಕಿಂತ ಭಿನ್ನವಾಗಿಲ್ಲ ಎಂಬಂತೆ ಚಂದ್ರಾಪುರ ಜಿಲ್ಲೆಯ ವಿಸ್ತಾರವಾದ ಟಿಎಟಿಆರ್ ಪ್ರದೇಶದಾದ್ಯಂತ ಹುಲಿ ದಾಳಿಗಳು, ಕಾಡು ಪ್ರಾಣಿಗಳ ಕಾಟ ಇನ್ನೂ ಮುಂದುವರೆದಿದೆ.
ಒಂದು ತಿಂಗಳ ಹಿಂದೆ (ಆಗಸ್ಟ್ 25, 2023), ಬುಡಕಟ್ಟು ರೈತ ಮಹಿಳೆ ಲಕ್ಷ್ಮೀಬಾಯಿ ಕನ್ನಕೆ ಹುಲಿ ದಾಳಿಗೆ ಬಲಿಯಾದರು. ಅವರ ಗ್ರಾಮ ತೆಕಾಡಿ ಭದ್ರಾವತಿ ತಹಸಿಲ್‌ನಲ್ಲಿರುವ ಟಿಎಟಿಆರ್‌ನ ಅಂಚಿನಲ್ಲಿದೆ. ಇದು ಪ್ರಸಿದ್ಧ ಮೊಹರ್ಲಿ ಶ್ರೇಣಿಯ ಸಮೀಪದಲ್ಲಿದೆ. ದಟ್ಟವಾದ ಅರಣ್ಯಕ್ಕೆ ಹೋಗಲು ಇಂದೊಂದು ಮುಖ್ಯ ದ್ವಾರ.
ಅದೊಂದು ದುರಾದೃಷ್ಟದ ಸಂಜೆ, ಅವರು ತಮ್ಮ ಸೊಸೆ ಸುಲೋಚನಾ ಜೊತೆಗೆ ಇರೈ ಅಣೆಕಟ್ಟಿನ ಹಿನ್ನೀರಿನ ಪಕ್ಕದಲ್ಲಿ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 5:30 ರ ಸುಮಾರಿಗೆ ಸುಲೋಚನಾ ಹುಲಿಯು ಅತ್ತೆ ಲಕ್ಷ್ಮಿಬಾಯಿಯನ್ನು ಹಿಂದಿನಿಂದ ಹಿಂಬಾಲಿಸುತ್ತಿರುವುದನ್ನು ನೋಡಿದ್ದರು. ಕೂಗಿ ತನ್ನ ಅತ್ತೆಯನ್ನು ಎಚ್ಚರಿಸುವ ಮೊದಲೇ ಹುಲಿ ಮೇಲೆರಗಿ, ಕುತ್ತಿಗೆಯನ್ನು ಹಿಡಿದು ಅವರ ದೇಹವನ್ನು ಅಣೆಕಟ್ಟಿನ ನೀರಿನಲ್ಲಿ ಎಳೆದಿತ್ತು. ಸುಲೋಚನಾ ಓಡಿಹೋಗಿ ತಮ್ಮನ್ನು ರಕ್ಷಿಸಿಕೊಳ್ಳಲು ಯಶಸ್ವಿಯಾದರು. ಜನರನ್ನು ಗದ್ದೆಗೆ ಕರೆದರು. ಲಕ್ಷ್ಮೀಬಾಯಿ ಅವರ ಮೃತದೇಹವನ್ನು ಗಂಟೆಗಳ ನಂತರ ನೀರಿನಿಂದ ಹೊರತೆಗೆಯಲಾಯಿತು.
ಕೂಡಲೇ ಅರಣ್ಯಾಧಿಕಾರಿಗಳು ಅವರ ಅಂತ್ಯಕ್ರಿಯೆ ನಡೆಸಲು 50,000 ರುಪಾಯಿ ನೀಡಿದರು. ಗ್ರಾಮಸ್ಥರ ಕೋಪ ಮತ್ತು ಸಾರ್ವಜನಿಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದ್ದರಿಂದ ಒಂದೆರಡು ದಿನಗಳ ನಂತರ ದುಃಖಿತ ಪತಿ, 74 ವರ್ಷ ಪ್ರಾಯದ ರಾಮರಾವ್ ಕನ್ನಕೆಯವರಿಗೆ 25 ಲಕ್ಷ ರುಪಾಯಿ ಹೆಚ್ಚಿನ ಪರಿಹಾರ ನೀಡುವ ಆದೇಶ ಮಾಡಲಾಯಿತು.
ಗಾರ್ಡ್‌ಗಳ ಬ್ಯಾಟರಿ ತೆಕಾಡಿಯನ್ನು ಕಾವಲು ಕಾಯುತ್ತಿದೆ. ಹುಲಿಯ ಚಲನವಲನವನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ ಮತ್ತು ಹಳ್ಳಿಯ ಜನರು ಭಯಭೀತರಾಗಿ ತಮ್ಮ ಹೊಲಗಳಿಗೆ ಕೆಲಸ ಮಾಡಲು ಗುಂಪು ಗುಂಪುಗಳಾಗಿ ಹೋಗುತ್ತಾರೆ.
ಅದೇ ತಹಸಿಲ್‌ನಲ್ಲಿ (ಭದ್ರಾವತಿ) ಸೆಪ್ಟೆಂಬರ್ 1, 2023 ರಂದು ಬೆಳಿಗ್ಗೆ ಕಾಡುಹಂದಿ ದಾಳಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ 20 ವರ್ಷ ಪ್ರಾಯದ ಮನೋಜ್ ನೀಲಕಾಂತ್ ಖೇರೆ ಎಂಬ ಪದವಿಪೂರ್ವ ವಿದ್ಯಾರ್ಥಿಯನ್ನು ನಾವು ಭೇಟಿಯಾದೆವು.
"ನಾನು ನನ್ನ ತಂದೆಯ ಜಮೀನಿನಲ್ಲಿ ಕಳೆ ಕೀಳುವ ಕೆಲಸವನ್ನು ನೋಡಿಕೊಳ್ಳುತ್ತಿದ್ದಾಗ ಹಂದಿಯೊಂದು ಹಿಂದಿನಿಂದ ಓಡಿ ಬಂದು ತನ್ನ ದಂತಗಳಿಂದ ನನ್ನನ್ನು ತಿವಿಯಿತು," ಎಂದು ಮನೋಜ್ ಹೇಳುತ್ತಾರೆ.
ಭದ್ರಾವತಿ ತಹಸಿಲ್‌ನಲ್ಲಿರುವ ಪಿರ್ಲಿ ಗ್ರಾಮದ ತನ್ನ ತಾಯಿಯ ಚಿಕ್ಕಪ್ಪ ಮಂಗೇಶ್ ಅಸುತ್ಕರ್ ಅವರ ಮನೆಯಲ್ಲಿ ಮಂಚದ ಮೇಲೆ ಮಲಗಿರುವ ಮನೋಜ್, ಘಟನೆಯನ್ನು ಕಣ್ಣಿಗೆ ಕಾಣುವಂತೆ ವಿವರಿಸುತ್ತಾರೆ. "ಇದು ಕೇವಲ 30 ಸೆಕೆಂಡುಗಳಲ್ಲಿ ಸಂಭವಿಸಿ ಹೋಯಿತು," ಎಂದು ಅವರು ಹೇಳುತ್ತಾರೆ.
ಹಂದಿ ಅವರ ಎಡತೊಡೆಯನ್ನು ಸೀಳಿತ್ತು. ಈಗ ಅದಕ್ಕೆ ಬ್ಯಾಂಡೇಜ್ ಮಾಡಲಾಗಿದೆ. ಅವರ ಎಡ ಮೀನಖಂಡದ ಮೇಲೆ ಎಷ್ಟು ಸೇಡು ತೀರಿಸಿಕೊಂಡಿದೆಯೆಂದರೆ ಮೀನಖಂಡದ ಸಂಪೂರ್ಣ ಸ್ನಾಯು ಅವರ ಕಾಲಿನಿಂದ ಬೇರ್ಪಟ್ಟಿತು. ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ಹೇಳಿದ್ದರು. ಅವರ ಚಿಕಿತ್ಸೆಗಾಗಿ ಕುಟುಂಬವು ದೊಡ್ಡ ಮೊತ್ತವನ್ನು ವ್ಯಯಿಸಬೇಕಾಗಿತ್ತು. "ನಾನು ದಾಳಿಯಿಂದ ಬದುಕುಳಿದಿರುವುದೇ ನನ್ನ ಅದೃಷ್ಟ" ಎಂದು ಅವರು ಹೇಳುತ್ತಾರೆ. ಬೇರೆ ಯಾರಿಗೂ ಗಾಯಗಳಾಗಿರಲಿಲ್ಲ.
ಮನೋಜ್ ಕಟ್ಟುಮಸ್ತಾದ ಯುವಕ. ಕೃಷಿಕರಾದ ತಂದೆ ತಾಯಿಗೆ ಒಬ್ಬನೇ ಮಗ. ಅವರ ಗ್ರಾಮ ವಡ್ಗಾಂವ್‌ಗೆ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಅವರ ತಾಯಿಯ ಚಿಕ್ಕಪ್ಪ ಅವರನ್ನು ಪಿರ್ಲಿಗೆ ಕರೆತಂದರು, ಅಲ್ಲಿಂದ 27 ಕಿಮೀ ದೂರದಲ್ಲಿರುವ ಭದ್ರಾವತಿ ಪಟ್ಟಣದ ಆಸ್ಪತ್ರೆಗೆ ಹೋಗುವುದು ಸುಲಭವಾಯಿತು.
ಅವರ ಮೊಬೈಲಿನಲ್ಲಿರುವ ದಾಳಿಯಾದ ದಿನ ಇದ್ದ ಹಸಿ ಗಾಯಗಳ ಫೋಟೋಗಳನ್ನು ತೋರಿಸಿದರು.
ಜನರ ಸಾವು ಮತ್ತು ಅಸಮರ್ಥತೆ ಹೊರತಾಗಿಯೂ, ಇಂತಹ ಘಟನೆಗಳು ಕೃಷಿ ಚಟುವಟಿಕೆಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತವೆ ಎಂದು ಚಾಂಡ್ಲಿ ಗ್ರಾಮದಲ್ಲಿ ಅರೆ-ಕುರುಬ ಸಮುದಾಯದ (ರಾಜ್ಯದಲ್ಲಿ ಇತರ ಹಿಂದುಳಿದ ಜಾತಿ ಎಂದು ಪಟ್ಟಿ ಮಾಡಲಾಗಿದೆ) ಸಾಮಾಜಿಕ ಕಾರ್ಯಕರ್ತ ಚಿಂತಾಮನ್ ಬಲಮ್ವಾರ್ ಹೇಳುತ್ತಾರೆ. "ರೈತರು ಅಪರೂಪವಾಗಿ ರಾಬಿ ಬೆಳೆಗಳನ್ನು ಬೆಳೆಯುತ್ತಾರೆ. ಅಂತದ್ದರಲ್ಲಿ ಈಗ ಕಾರ್ಮಿಕರು ಹೊಲಗಳಿಗೆ ಹೋಗಲು ಭಯಪಡುತ್ತಿದ್ದಾರೆ," ಎಂದು ಅವರು ಹೇಳುತ್ತಾರೆ.
ಕಾಡು ಪ್ರಾಣಿಗಳ ದಾಳಿಗಳು ಮತ್ತು ಹುಲಿಗಳ ಓಡಾಟ ವಿಶೇಷವಾಗಿ ಅನೇಕ ಹಳ್ಳಿಗಳಲ್ಲಿ ರಾಬಿ ಬಿತ್ತನೆಯ ಮೇಲೆ ಪರಿಣಾಮ ಬೀರಿದೆ. ರಾತ್ರಿ ಹೊಲಗಳಲ್ಲಿ ಜಾಗರಣೆ ಕೂರುವುದನ್ನು ನಿಲ್ಲಿಸಿದ್ದಾರೆ. ಜನರು ಮೊದಲಿನಂತೆ ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ಹಳ್ಳಿಯನ್ನು ಬಿಟ್ಟು ಸಂಜೆ ಹೊರಗೆ ಹೋಗಲು ಹೆದರುತ್ತಿದ್ದಾರೆ.
ಈ ಮಧ್ಯೆ, ಕವತಿಯಲ್ಲಿ ಸುಧೀರರ ತಾಯಿ, ಊರಿನ ಹಿರಿಯ ಕೃಷಿಕ ಮಹಿಳೆ ಶಶಿಕಲಾಬಾಯಿಗೆ ಆ ದುರಾದೃಷ್ಟದ ದಿನ ತಮ್ಮ ಮಗ ಕಾಡುಹಂದಿಯೊಂದಿಗೆ ಹೇಗೆ ಕಾದಾಡಿದರು ಎಂಬುದು ನೆನಪಿದೆ.
"ಅಜಿ ಮಜಾ ಪೊರ್ಗಾ ವಚ್ಲಾ ಜೀ," ಎಂದು ಅವರು ನನಗೆ ಪದೇ ಪದೇ ಮರಾಠಿಯಲ್ಲಿ ಹೇಳಿದರು. ಅವರು ಸರ್ವಶಕ್ತನಾದ ದೇವರಿಗೆ ಧನ್ಯವಾದ ಹೇಳುತ್ತಿದ್ದರು. “ಆ ದಿನ ನನ್ನ ಹುಡುಗ ಪ್ರಾಣಾಪಾಯದಿಂದ ಪಾರದ” ಎಂದು ಹೇಳುತ್ತಾರೆ. "ಅವನೇ ನನ್ನ ದೊಡ್ಡ ಬೆಂಬಲ," ಎಂದು ಅವರು ಹೇಳಿದರು. ಸುಧೀರ್ ತಂದೆ ಬಹಳ ಹಿಂದೆಯೇ ನಿಧನ ಹೊಂದಿದ್ದಾರೆ. "ಅದು ಹಂದಿಯಲ್ಲದೆ ಹುಲಿಯಾಗಿದ್ದರೆ ಏನಾಗುತ್ತಿತ್ತೋ ಏನೋ?" ಎಂದು ತಾಯಿ ಕೇಳಿದರು.
ಅನುವಾದ: ಚರಣ್ ಐವರ್ನಾಡು