“ಚಾದೊರ್ ಬಾದನಿ ಗೊಂಬೆಯಾಟ ನಮ್ಮ ಹಿರೀಕರೊಡನೆ ಬಹಳ ಆಳವಾದ ಸಂಬಂಧವನ್ನು ಹೊಂದಿದೆ… ಈ ಗೊಂಬೆಯಾಡಿಸುವಾಗ ನನಗೆ ಅವರೆಲ್ಲ ನನ್ನ ಸುತ್ತ ಇರುವಂತೆ ಭಾಸವಾಗುತ್ತದೆ” ಎನ್ನುತ್ತಾರೆ ತಪನ್ ಮುರ್ಮು.
2023ರ ಜನವರಿ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಖಂಜನ್ಪುರ ಗ್ರಾಮದ ಸರ್ಪುಕುರ್ದಂಗಾ ಎಂಬ ಕುಗ್ರಾಮದಲ್ಲಿ ಬಾಂದನಾ ಎನ್ನುವ ಸುಗ್ಗಿ ಹಬ್ಬ ನಡೆಯುತ್ತಿತ್ತು. ವೃತ್ತಿಯಿಂದ ಕೃಷಿಕರಾಗಿರುವ ತಪನ್ ತನ್ನ ಬದುಕಿನ ಎರಡನೇ ದಶಕದ ಕೊನೆಯ ಹಂತದಲ್ಲಿದ್ದಾರೆ. ಇವರಿಗೆ ತನ್ನ ಸಂತಾಲ್ ಸಮುದಾಯದ ಶ್ರೀಮಂತ ಪರಂಪರೆಯ ಕುರಿತು, ವಿಶೇಷವಾಗಿ ಚಾದೊರ್ ಬಾದನಿ ಎಂದು ಕರೆಯಲ್ಪಡುವ ಆಕರ್ಷಕ ಗೊಂಬೆಯಾಟದ ಕುರಿತು ಎಲ್ಲಿಲ್ಲದ ಹೆಮ್ಮೆ.
ಪರಿಯೊಡನೆ ಮಾತನಾಡಿದ ತಪನ್ ಅವರು ಕೈಯಲ್ಲಿ ಗೋಪುರದ ಆಕಾರವಿರುವ ಪಂಜರದಂತಹದ್ದೊಂದನ್ನು ಹಿಡಿದುಕೊಂಡಿದ್ದರು. ಅದಕ್ಕೆ ಎದ್ದುಕಾಣುವ ಕೆಂಪು ಬಣ್ಣದ ಬಟ್ಟೆ ಸುತ್ತಲಾಗಿತ್ತು. ಅದರೊಳಗೆ ಹಲವು ಮಾನವ ಆಕೃತಿಯ ಗೊಂಬೆಗಳಿದ್ದವು. ಇವುಗಳಿಗೆ ಕೀಲುಗಳಿದ್ದು, ಅವುಗಳನ್ನು ಬಿದಿರಿನ ಕಡ್ಡಿಗಳು ಮತ್ತು ಹಗ್ಗವನ್ನು ಬಳಸಿ ಕುಣಿಸಲಾಗುತ್ತದೆ.
“ನನ್ನ ಕಾಲುಗಳನ್ನು ನೋಡುತ್ತಿರಿ, ನಾನು ಗೊಂಬೆಗಳನ್ನು ಹೇಗೆ ಕುಣಿಸುತ್ತೇನೆ ನೋಡಿ” ಎನ್ನುತ್ತಾ ಈ ರೈತ ಅವರ ಮನೆ ಮಾತಾದ ಸಂತಾಲಿಯಲ್ಲಿ ಹಾಡತೊಡಗಿದಂತೆ ಅವರ ಧೂಳು ತುಂಬಿದ್ದ ಕಾಲುಗಳು ಕುಣಿಯತೊಡಗಿದವು.









