ಕಳೆದ ಚುನಾವಣೆಯಲ್ಲಿ ಬಬ್ಲು ಮೊದಲ ಬಾರಿಗೆ ಮತ ಚಲಾಯಿಸಲು ಹೋದಾಗ, ಅಧಿಕಾರಿಗಳು ಅವರನ್ನು ನೇರವಾಗಿ ಒಳಗೆ ಬಿಟ್ಟರು. ಅವರು ಸರತಿ ಸಾಲಿನಲ್ಲಿ ಕಾಯುವಂತಿರಲಿಲ್ಲ. ಆದರೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಪಾಲ್ಮಾ ಗ್ರಾಮದ ಮತಗಟ್ಟೆಗೆ ವೋಟ್ ಮಾಡಲೆಂದು ಹೋದ ಅವರಿಗೆ ತಾನು ಹೇಗೆ ಮತ ಹಾಕಬೇಕು ಎನ್ನುವುದರ ಕುರಿತು ಖಾತರಿಯಿರಲಿಲ್ಲ.
24 ವರ್ಷದ ಬಬ್ಲು ದೃಷ್ಟಿಹೀನ ವ್ಯಕ್ತಿಯಾಗಿದ್ದು, 2019ರ ಸಾರ್ವತ್ರಿಕ ಚುನಾವಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಬ್ರೈಲ್ ಮತಪತ್ರ ಅಥವಾ ಬ್ರೈಲ್ ಇವಿಎಂ (ಎಲೆಕ್ಟ್ರಾನಿಕ್ ಮತದಾನ ಯಂತ್ರ) ಲಭ್ಯವಿರಲಿಲ್ಲ.
“ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಒಂದು ವೇಳೆ ನನಗೆ ಸಹಾಯ ಮಾಡುತ್ತಿರುವ ವ್ಯಕ್ತಿ ಚಿಹ್ನೆಗಳ ವಿಷಯದಲ್ಲಿ ಸುಳ್ಳು ಹೇಳಿದರೆ ಏನು ಮಾಡುವುದು?” ಎಂದು ಎರಡನೇ ವರ್ಷದ ಪದವಿಪೂರ್ವ ತರಗತಿಯ ವಿದ್ಯಾರ್ಥಿ ಬಬ್ಲು ಕೇಳುತ್ತಾರೆ. ಒಂದು ವೇಳೆ ಆ ವ್ಯಕ್ತಿ ನಿಜವನ್ನೇ ಹೇಳಿದರೂ ತನಗೆ ನೀಡಲಾಗಿರುವ ರಹಸ್ಯ ಮತದಾನದ ಹಕ್ಕನ್ನು ಇಲ್ಲಿ ಉಲ್ಲಂಘಿಸಿದಂತಾಗುವುದಿಲ್ಲವೆ ಎಂದು ಅವರು ವಾದಿಸುತ್ತಾರೆ. ಆದರೂ ಒಂದಷ್ಟು ಹಿಂಜರಿಕೆಯಿಂದಲೇ ಬಬ್ಲು ತನಗೆ ಸೂಚಿಸಲಾದ ಗುಂಡಿಯನ್ನು ಒತ್ತಿ ಮತ ಚಲಾಯಿಸಿ ಬಂದು ನಂತರ ಹೊರಗೆ ತಮ್ಮ ಮತವನ್ನು ಖಾತರಿಪಡಿಸಿಕೊಂಡರು. "ಅದೃಷ್ಟವಶಾತ್, ಆ ವ್ಯಕ್ತಿ ನನಗೆ ಸುಳ್ಳು ಹೇಳಲಿಲ್ಲ" ಎಂದು ಅವರು ಹೇಳುತ್ತಾರೆ.
ಭಾರತದ ಚುನಾವಣಾ ಆಯೋಗವು ಪಿಡಬ್ಲ್ಯೂಡಿ ಸ್ನೇಹಿ (ಅಂಗವಿಕಲರು) ಮತಗಟ್ಟೆಗಳಲ್ಲಿ ಬ್ರೈಲ್ ಮತಪತ್ರಗಳು ಮತ್ತು ಇವಿಎಂಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ. "ಕಾಗದದ ಮೇಲೆ ಅನೇಕ ನಿಬಂಧನೆಗಳಿವೆ" ಎಂದು ಕೋಲ್ಕತ್ತಾ ಮೂಲದ ಶ್ರುತಿ ಅಂಗವೈಕಲ್ಯ ಹಕ್ಕುಗಳ ಕೇಂದ್ರದ ನಿರ್ದೇಶಕಿ ಶಂಪಾ ಸೇನ್‌ಗುಪ್ತಾ ಹೇಳುತ್ತಾರೆ. “ಆದರೆ ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ.”
ಸಾರ್ವತ್ರಿಕ ಚುನಾವಣೆಗಳು ಮತ್ತೆ ಸಮೀಪಿಸುತ್ತಿವೆ, ಆದರೆ 2024ರ ಸಾರ್ವತ್ರಿಕ ಚುನಾವಣೆಯ ಆರನೇ ಹಂತದಲ್ಲಿ ಮತ ಚಲಾಯಿಸಲು ಊರಿಗೆ ಹೋಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬಬ್ಲು ಇದ್ದಾರೆ. ಅವರು ಮೇ 25ರಂದು ಚುನಾವಣೆ ಎದುರಿಸಲಿರುವ ಪುರುಲಿಯಾಕ್ಕೆ ಸೇರಿದವರು.





