ಅದು ಭಾನುವಾರದ ಮುಂಜಾನೆ, ಆದರೆ ಜ್ಯೋತಿರಿಂದ್ರ ನಾರಾಯಣ ಲಾಹಿರಿ ಮಾತ್ರ ಕೆಲಸದಲ್ಲಿ ತೊಡಗಿದ್ದರು. ಹೂಗ್ಲಿ ಜಿಲ್ಲೆಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ ಮೂಲೆಯ ಕೋಣೆಯೊಂದರಲ್ಲಿ 50 ವರ್ಷ ಪ್ರಾಯದ ಜ್ಯೋತಿರಿಂದ್ರ 1778 ರಲ್ಲಿ ಮೇಜರ್ ಜೇಮ್ಸ್ ರೆನ್ನೆಲ್ ಸಿದ್ಧಪಡಿಸಿದ ಸುಂದರಬನ್ಸ್‌ನ ಮೊದಲ ನಕ್ಷೆಯನ್ನು ನೋಡುತ್ತಿದ್ದರು.
"ಬ್ರಿಟಿಷರು ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ರಚಿಸಲ್ಪಟ್ಟ ಸುಂದರಬನ್ಸ್‌ನ ಮೊದಲ ಅಧಿಕೃತ ನಕ್ಷೆ ಇದು. ಈ ನಕ್ಷೆಯು ಕೋಲ್ಕತ್ತಾದವರೆಗೆ ವಿಸ್ತರಿಸಿರುವ ಮ್ಯಾಂಗ್ರೋವ್‌ಗಳನ್ನು ತೋರಿಸುತ್ತದೆ. ಈಗ ತುಂಬಾ ಬದಲಾಗಿದೆ,” ಎಂದು ನಕ್ಷೆಯ ಮೇಲೆ ಬೆರಳಾಡಿಸುತ್ತಾ ಲಾಹಿರಿ ಹೇಳುತ್ತಾರೆ. ಭಾರತ ಮತ್ತು ಬಾಂಗ್ಲಾದೇಶದ ಆಚೆಗೂ, ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್‌ಗಳ ತಾಣವಾದ ಸುಂದರಬನ್ಸ್ ತನ್ನ ಅಪಾರ ಜೀವವೈವಿಧ್ಯಕ್ಕೆ, ಅಷ್ಟು ಮಾತ್ರವಲ್ಲ, ರಾಯಲ್ ಬೆಂಗಾಲ್ ಹುಲಿಗಳಿಗೂ (ಪ್ಯಾಂಥೆರಾ ಟೈಗ್ರಿಸ್) ಹೆಸರುವಾಸಿಯಾಗಿದೆ.
ಅವರ ಕೋಣೆಯ ಗೋಡೆಗಳಲ್ಲಿರುವ ಕವಾಟುಗಳಲ್ಲಿ ಸುಂದರಬನ್ಸ್‌ನ ಸಸ್ಯ ಪ್ರಭೇದ - ಪ್ರಾಣಿಗಳಿಗೆ, ದೈನಂದಿನ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು, ನಕ್ಷೆಗಳು, ಅಟ್ಲಾಸ್‌ಗಳು ಮತ್ತು ಇಂಗ್ಲಿಷ್ ಹಾಗೂ ಬೆಂಗಾಲಿಯಲ್ಲಿರುವ ಮಕ್ಕಳ ಪುಸ್ತಕಗಳು ತುಂಬಿವೆ. 2009 ರಲ್ಲಿ ಐಲಾ ಚಂಡಮಾರುತವು ಈ ಪ್ರದೇಶದಲ್ಲಿ ವಿನಾಶದ ಜಾಡನ್ನು ಹರಡಿದ ನಂತರ ಅವರು ಸುಂದರಬನ್ಸ್ ಕುರಿತ ತ್ರೈಮಾಸಿಕ ಪತ್ರಿಕೆ 'ಸುಧು ಸುಂದರಬನ್ ಚರ್ಚಾ'ವನ್ನು ಆರಂಬಿಸಿದರು.
“ನಾನು ಪ್ರದೇಶದ ಸ್ಥಿತಿಗತಿಯನ್ನು ನೋಡಲು ಅನೇಕ ಬಾರಿ ಸುತ್ತಾಡಿದ್ದೇನೆ. ತುಂಬಾ ಭಯಾನಕವಾಗಿತ್ತು ಅದು,'' ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು, ಜನರು ಮನೆಮಠ ಕಳೆದುಕೊಂಡಿದ್ದರು, ಹೆಚ್ಚಿನ ಪುರುಷರು ಬೇರೆಕಡೆ ಹೋಗಿದ್ದರು ಮತ್ತು ಎಲ್ಲವನ್ನೂ ಮಹಿಳೆಯರೇ ನೋಡಿಕೊಳ್ಳಬೇಕಾಗಿತ್ತು. ಜನರ ಇಡೀ ಭವಿಷ್ಯ ನದಿಯ ಒಡ್ಡುಗಳು ಉಳಿಯುತ್ತದೆಯೇ ಅಥವಾ ಕುಸಿಯುತ್ತದೆಯೇ ಎಂಬುದರ ಮೇಲೆ ನಿಂತಿತ್ತು," ಎನ್ನುತ್ತಾರೆ. ಲಾಹಿರಿ ಅವರ ಪ್ರಕಾರ ಈ ದುರಂತದ ಕುರಿತು ಮಾಧ್ಯಮಗಳು ಮಾಡಿದ ವರದಿಗಳು ತುಂಬಾ ಕಡಿಮೆ ಮತ್ತು ಮೇಲಿಂದ ಮೇಲೆ ಮಾಡಿದ ವರದಿಗಳಾಗಿದ್ದವು.“ ಮಾಧ್ಯಮಗಳು ಸುಂದರಬನ್ಸ್ ಬಗ್ಗೆ ಇರುವ ಸ್ಟೀರಿಯೊಟೈಪ್‌ಗಳನ್ನು ಮರುಬಳಕೆ ಮಾಡುತ್ತದೆ. ಅದರಲ್ಲೂ, ನೀವು ಹುಲಿ ದಾಳಿ ಅಥವಾ ಮಳೆಯ ಬಗ್ಗೆ ನೋಡಬಹುದು. ಮಳೆಯಾಗದಿದ್ದಾಗ ಅಥವಾ ಪ್ರವಾಹಕ್ಕೆ ಸಿಲುಕದಿದ್ದಾಗ, ಸುಂದರ್‌ಬನ್ಸ್ ಅಲ್ಪಸ್ವಲ್ಪ ಸುದ್ದಿಯಲ್ಲಿರುತ್ತದೆ. ವಿಪತ್ತು, ವನ್ಯಜೀವಿ ಮತ್ತು ಪ್ರವಾಸೋದ್ಯಮ - ಇವುಗಳ ಮೇಲಷ್ಟೇ ಮಾಧ್ಯಮದ ಆಸಕ್ತಿ," ಎಂದು ಅವರು ಹೇಳುತ್ತಾರೆ.









