ಕಣಿಸಾಮಿ ಎನ್ನುವ ಈ ದೇವರು ಉತ್ತರ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕರಾವಳಿಯ ಹಳ್ಳಿಗಳ ಗಡಿಗಳನ್ನು ಕಾವಲು ಕಾಯುತ್ತಾನೆ. ಮೀನುಗಾರರ ಪಾಲಿಗೆ ದೇವರಾಗಿರುವ ಈ ಕಣಿಸಾಮಿ ನೋಡಲು ಅವರ ಸಮುದಾಯದಲ್ಲಿನ ಒಬ್ಬ ವ್ಯಕ್ತಿಯಂತೆಯೇ ಕಾಣುತ್ತಾನೆ; ಅವನು ಇಲ್ಲಿನ ಜನರಂತೆಯೇ ಎದ್ದು ಕಾಣುವ ಬಣ್ಣದ ಅಂಗಿಗಳನ್ನು ತೊಡುತ್ತಾನೆ, ವೇಟಿಯೊಂದನ್ನು ತನ್ನ ತಲೆಗೆ ರುಮಾಲಿನಂತೆ ಸುತ್ತಿಕೊಂಡಿರುತ್ತಾನೆ. ಸಾಮಾನ್ಯವಾಗಿ ಮೀನುಗಾರರು ಕಡಲಿಗಿಳಿಯುವ ಮೊದಲು ತಮ್ಮ ದೋಣಿಯನ್ನು ಸುರಕ್ಷಿತವಾಗಿ ದಡ ತಲುಪಿಸುವಂತೆ ಬೇಡಿಕೊಂಡು ಇವನನ್ನು ಪೂಜಿಸುತ್ತಾರೆ.
ಕಣಿ ಸಾಮಿಯನ್ನು ಈ ಕುಟುಂಬಗಳು ಹಲವು ಅವತಾರಗಳಲ್ಲಿ ಕಲ್ಪಿಸಿಕೊಂಡು ಪೂಜಿಸುತ್ತವೆ. ಮತ್ತು ಇಲ್ಲಿರುವುದು ಚೆನ್ನೈಯಿಂದ ಪಳವೆರ್‌ಕಾಡು ಎನ್ನುವ ಪ್ರದೇಶದವರೆಗಿನ ಜನಪ್ರಿಯ ಆಚರಣೆಯ ವಿವರವಾಗಿದೆ.
ಎಣ್ಣೂರ್ ಕುಪ್ಪಂ ಪ್ರದೇಶದ ಮೀನುಗಾರರು ಕಣಿಸಾಮಿ ವಿಗ್ರಹವನ್ನು ತರಲು ಅಲ್ಲಿಂದ ಏಳು ಕೀಲೋಮೀಟರ್ ದೂರದಲ್ಲಿದ್ದ ಅತ್ತಿಪಟ್ಟು ಎನ್ನುವ ಊರಿಗೆ ಹೊರಟಿದ್ದರು. ಇದು ವಾರ್ಷಿಕ ಜಾತ್ರೆಯಾಗಿದ್ದು ಪ್ರತಿವರ್ಷದ ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ಒಂದು ವಾರದ ಕಾಲದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. 2019ರಲ್ಲಿ ನಾನು ವಿಗ್ರಹ ತರಲು ಹೊರಟಿದ್ದ ಈ ಮೀನುಗಾರರೊಡನೆ ನಾನೂ ಹೊರಟಿದ್ದೆ. ಅಂದು ನಾವು ಮೊದಲು ಉತ್ತರ ಚೆನ್ನೈನ ಉಷ್ಣ ವಿದ್ಯುತ್ ಸ್ಥಾವರದ ಬಳಿ ಕೊಸಸ್ತಲೈಯರ್ ನದಿಯ ದಡದಲ್ಲಿ ಜೊತೆಯಾದೆವು, ನಂತರ ಅತ್ತಿಪಟ್ಟು ಗ್ರಾಮದ ಕಡೆಗೆ ನಡೆದೆವು.
ಅಲ್ಲಿಂದ ಹೊರಟ ನಾವು ಬಂದು ನಿಂತಿದ್ದು ಒಂದು ಎರಡು ಮಾಳಿಗೆಯ ಮನೆಯ ಮುಂದೆ. ಅಲ್ಲಿ ಹಲವಾರು ಕಣಿಸಾಮಿಯ ವಿಗ್ರಹಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ಅಲ್ಲಿದ್ದ ವಿಗ್ರಹಗಳೆಲ್ಲವನ್ನೂ ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗಿತ್ತು. ಬಿಳಿ ಪಟ್ಟಿಯ ಅಂಗಿ ಮತ್ತು ವೇಟಿ ತೊಟ್ಟು, ಹಣೆಯಲ್ಲಿ ತಿರುನೀರ್ (ವಿಭೂತಿ) ತೊಟ್ಟಿದ್ದ ಸುಮಾರು 40 ವರ್ಷದ ವ್ಯಕ್ತಿಯೊಬ್ಬರು, ವಿಗ್ರಹದ ಎದುರು ನಿಂತು ಕ್ರಪೂರ ಹಚ್ಚಿದರು. ಮೀನುಗಾರರ ಹೆಗಲಿನ ಮೇಲೆ ವಿಗ್ರಹವನ್ನು ಇಡುವ ಮೊದಲು ಅವರು ಅದಕ್ಕೆ ಹೀಗೆ ಪೂಜೆ ಸಲ್ಲಿಸುವುದು ವಾಡಿಕೆ.



































