ಗಡಚಿರೋಲಿ ಲೋಕಸಭಾ ಕ್ಷೇತ್ರ ಎಪ್ರಿಲ್ 19ರಂದು ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ತಯಾರಾಗುತ್ತಿತ್ತು. ಏಳು ಹಂತಗಳಲ್ಲಿ ನಡೆಯಲಿರುವ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುವುದರಲ್ಲಿತ್ತು. ಇದಕ್ಕೂ ಒಂದು ವಾರದ ಮೊದಲು ಜಿಲ್ಲೆಯ 12 ತಹಸಿಲ್‌ಗಳ ಸುಮಾರು 1450 ಗ್ರಾಮ ಸಭೆಗಳು ಕಾಂಗ್ರೆಸ್ ಅಭ್ಯರ್ಥಿ ಡಾ. ನಾಮದೇವ್ ಕಿರ್ಸನ್ ಅವರಿಗೆ ಷರತ್ತುಬದ್ಧ ಬೆಂಬಲವನ್ನು ಘೋಷಿಸಿದವು.
ಜಿಲ್ಲೆಯ ಮಟ್ಟಿಗೆ ಇದೊಂದು ಅಭೂತಪೂರ್ವ ಘಟನೆಯಾಗಿತ್ತು. ಏಕೆಂದರೆ ಬುಡಕಟ್ಟು ಸಮುದಾಯಗಳು ಎಂದಿಗೂ ಬಹಿರಂಗವಾಗಿ ರಾಜಕೀಯ ಪಕ್ಷಗಳನ್ನು ಬೆಂಬಲಿಸದ ಜಿಲ್ಲೆಯಲ್ಲಿ, ಗ್ರಾಮ ಸಭೆಗಳು ಒಟ್ಟಾಗಿ ಜಿಲ್ಲಾವ್ಯಾಪಿ ಒಕ್ಕೂಟದ ಮೂಲಕ ಹೀಗೆ ಬೆಂಬಲ ಘೋಷಿಸಿದ್ದವು. ಈ ಬೆಂಬಲ ಕಾಂಗ್ರೆಸ್ ಪಕ್ಷವನ್ನು ಅಚ್ಚರಿಗೆ ಒಳಗಾಗಿಸಿದರೆ, ಭಾರತೀಯ ಜನತಾ ಪಕ್ಷವನ್ನು ಬೆಚ್ಚಿಬೀಳಿಸಿತು. ಇಲ್ಲಿಂದ ಬಿಜೆಪಿಯ ಹಾಲಿ ಸಂಸದ ಅಶೋಕ್ ನೇಟೆ ಸತತ ಮೂರನೇ ಬಾರಿಗೆ ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ.
ಏಪ್ರಿಲ್ 12ರಂದು ಗಡಚಿರೋಲಿ ನಗರದ ಕಲ್ಯಾಣ ಮಂಟಪವಾದ ಸುಪ್ರಭಾತ್ ಮಂಗಲ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಾಯಕರ ಬಹಿರಂಗ ಸಭೆಗಾಗಿ ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಗ್ರಾಮ ಸಭೆಗಳ ಪ್ರತಿನಿಧಿಗಳು ತಾಳ್ಮೆಯಿಂದ ಕಾಯುತ್ತಿದ್ದರು. ಸಂಜೆ, ಜಿಲ್ಲೆಯ ಆಗ್ನೇಯ ಬ್ಲಾಕ್‌ನ ಮಡಿಯಾದ ದುರ್ಬಲ ಬುಡಕಟ್ಟು ಗುಂಪಿನ ವಕೀಲ ಕಾರ್ಯಕರ್ತ ಲಾಲ್ಸು ನೊಗೊಟಿ ಸದ್ದಿಲ್ಲದೆ ಕಿರ್ಸನ್ ಅವರೆದುರು ಷರತ್ತುಗಳನ್ನು ಓದಿ ಹೇಳಿದರು. ನಂತರ ಬೆಂಬಲ ಪತ್ರವನ್ನು ಸ್ವೀಕರಿಸಿದ ಕಿರ್ಸನ್ ತಾನು ಸಂಸತ್ತಿಗೆ ಆಯ್ಕೆಯಾದರೆ ಬೇಡಿಕೆಗಳಿಗೆ ಬದ್ಧನಾಗಿರುವುದಾಗಿ ಪ್ರತಿಜ್ಞೆ ಮಾಡಿದರು.
ಹಲವು ಬೇಡಿಕೆಗಳ ಜೊತೆಗೆ ಜಿಲ್ಲೆಯ ಅರಣ್ಯ ಭಾಗಗಳಲ್ಲಿ ಅಡೆತಡೆಯಿಲ್ಲದ ಹಾಗೂ ಅನಿಯಂತ್ರಿತ ಗಣಿಗಾರಿಕೆಯನ್ನು ನಿಲ್ಲಿಸುವುದು ಸಹ ಸೇರಿತ್ತು. ಅದರೊಂದಿಗೆ ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿನ ನಿಯಮಗಳನ್ನು ಸುಗಮಗೊಳಿಸುವುದು; ಇದುವರೆಗೂ ಸಮುದಾಯ ಅರಣ್ಯ ಹಕ್ಕುಗಳು (ಸಿಎಫ್ಆರ್) ಸಿಗದಿರುವ ಅರ್ಹ ಗ್ರಾಮಗಳಿಗೆ ಆ ಹಕ್ಕುಗಳನ್ನು ನೀಡುವುದು; ಮತ್ತು ಭಾರತದ ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಷರತ್ತುಗಳೂ ಇದ್ದವು.
"ನಮ್ಮ ಬೆಂಬಲ ಈ ಚುನಾವಣೆಗೆ ಮಾತ್ರ" ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ, "ಭರವಸೆಗೆ ದ್ರೋಹ ಬಗೆದರೆ ನಾವು, ಜನರು, ಭವಿಷ್ಯದಲ್ಲಿ ಭಿನ್ನ ನಿಲುವು ತೆಗೆದುಕೊಳ್ಳುತ್ತೇವೆ" ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಗ್ರಾಮ ಸಭೆಗಳು ಈ ಕ್ರಮವನ್ನು ಏಕೆ ತೆಗೆದುಕೊಂಡವು?
"ಸರ್ಕಾರಕ್ಕೆ ನಾವು ಗಣಿಗಳಿಗಿಂತಲೂ ಹೆಚ್ಚಿನ ರಾಯಧನವನ್ನು ನೀಡುತ್ತೇವೆ" ಎಂದು ಹಿರಿಯ ಬುಡಕಟ್ಟು ಕಾರ್ಯಕರ್ತ, ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರೂ ಆಗಿದ್ದ ಸೈನು ಗೋಟಾ ಹೇಳುತ್ತಾರೆ. "ಈ ಪ್ರದೇಶದಲ್ಲಿ ಕಾಡುಗಳನ್ನು ಕಡಿಯುವುದು ಮತ್ತು ಗಣಿಗಳನ್ನು ಅಗೆಯುವುದು ತಪ್ಪು."










