ಹೆಸರು: ವಾಜೆಸಿಂಗ್ ಪಾರ್ಗಿ. ಜನನ: 1963. ಗ್ರಾಮ: ಇಟಾವಾ. ಜಿಲ್ಲೆ: ದಾಹೋಡ್, ಗುಜರಾತ್. ಸಮುದಾಯ: ಆದಿವಾಸಿ ಪಂಚಮಹಾಲಿ ಭಿಲ್. ಕುಟುಂಬ ಸದಸ್ಯರು: ತಂದೆ, ಚಿಸ್ಕಾ ಭಾಯ್. ತಾಯಿ, ಚತುರಾ ಬೆನ್. ಮತ್ತು ಐದು ಒಡಹುಟ್ಟಿದವರು, ಅವರಲ್ಲಿ ವಾಜೆಸಿಂಗ್ ಹಿರಿಯರು. ಕುಟುಂಬದ ಜೀವನೋಪಾಯ: ಕೃಷಿ ಕೂಲಿ.
ಬಡ ಆದಿವಾಸಿ ಕುಟುಂಬದಲ್ಲಿ ಜನಿಸಿದ ಅವರ ಪಿತ್ರಾರ್ಜಿತ ಆಸ್ತಿಯೆಂದರೆ, ವಾಜೇಸಿಂಗ್ ಅವರ ಸ್ವಂತ ಮಾತುಗಳಲ್ಲಿ: 'ಅವರ ತಾಯಿಯ ಗರ್ಭದ ಕತ್ತಲೆ'. 'ಒಂಟಿತನದಿಂದ ಕೂಡಿದ ಮರುಭೂಮಿ'. 'ಬೆವರು ತುಂಬಿದ ಬಾವಿ'. ಅಲ್ಲದೆ, 'ಹಸಿವು', 'ಕತ್ತಲೆಯ ನೆನಪುಗಳು', ಮತ್ತು 'ಮಿಣುಕು ಹುಳುಗಳ ಬೆಳಕು'. ಅವರಿಗೆ ಹುಟ್ಟಿನಿಂದಲೇ ಪದಗಳ ಮೇಲೆ ಪ್ರೀತಿಯಾಗಿತ್ತು.
ಒಮ್ಮೆ, ಅವರು ಯುವಕರಾಗಿದ್ದ ಸಂದರ್ಭದಲ್ಲಿ ಜಗಳದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೂರಿ ಬಂದ ಗುಂಡು ಅವರ ದವಡೆ ಮತ್ತು ಕುತ್ತಿಗೆಗೆ ತಗುಲಿತು. ಏಳು ವರ್ಷಗಳ ಚಿಕಿತ್ಸೆ, 14 ಶಸ್ತ್ರಚಿಕಿತ್ಸೆಗಳು ಹಾಗೂ ಭರಿಸಲಾಗದ ಸಾಲದ ನಂತರವೂ ಅವರು ಚೇತರಿಸಿಕೊಳ್ಳಲಾಗದ ಗಾಯದಿಂದ ಬಳಲಿದರು. ಜೊತೆಗೆ ಅವರ ದನಿಯೂ ಸದ್ದು ಕಳೆದುಕೊಂಡಿತ್ತು. ಅದು ಅವರ ಪಾಲಿಗೆ ಎರಡೆರಡು ಆಘಾತವಾಗಿತ್ತು. ದನಿಯೇ ಇಲ್ಲದ ಸಮುದಾಯದಲ್ಲಿ ಜನಿಸಿದ ಅವರಿಗೆ, ವೈಯಕ್ತಿಕ ಉಡುಗೊರೆಯಾಗಿ ದೊರಕಿದ್ದ ದನಿಯೂ ಗಂಭೀರವಾಗಿ ಹಾನಿಗೀಡಾಗಿತ್ತು. ಆದರೆ ಅವರ ಕಣ್ಣುಗಳು ಮೊದಲಿನಷ್ಟೇ ತೀಕ್ಷ್ಣವಾಗಿ ಉಳಿದುಕೊಂಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಗುಜರಾತಿ ಸಾಹಿತ್ಯ ಲೋಕ ಕಂಡ ಅತ್ಯುತ್ತಮ ಪ್ರೂಫ್ ರೀಡರ್ ಎಂದರೆ ಅದು ವಾಜೇಸಿಂಗ್. ಆದರೆ ಅವರ ಬರಹಗಳಿಗೆ ಸಿಗಬೇಕಾದಷ್ಟು ಗುರುತಿಸುವಿಕೆ ಸಿಗಲೇ ಇಲ್ಲ.
ಈ ಪದ್ಯವನ್ನು ಪಂಚಮಹಾಲಿ ಭಿಲಿಯಿಂದ ಇಂಗ್ಲಿಷ್ ಭಾಷೆಗೆ ಪ್ರತಿಷ್ಠಾ ಪಾಂಡ್ಯ ಅನುವಾದಿಸಿರುತ್ತಾರೆ ಮತ್ತು ಈ ಪದ್ಯವನ್ನು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ


