ಜುಲೈ 2021ರ ಒಂದು ಮಂಜು ಕವಿದ ಮುಂಜಾನೆ ರೈತ ಶಿವರಾಮ್ ಗವಾರಿ ಭೀಮಾಶಂಕರ್ ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿರುವ ತಮ್ಮ ಹೊಲಕ್ಕೆ ಬಂದಾಗ ಅವರ ಐದು ಗುಂಟೆ (ಸುಮಾರು 0.125 ಎಕರೆ) ಅಳತೆಯ ಭತ್ತದ ಗದ್ದೆಯಲ್ಲಿ ಅರ್ಧ ಭಾಗವನ್ನು ಯಾವುದೋ ಪ್ರಾಣಿ ತಿಂದುಹೋಗಿರುವುದನ್ನು ಕಂಡರು. ಉಳಿದ ಬೆಳೆಯೂ ನೆಲಕ್ಕೆ ಒರಗಿ ನಜ್ಜುಗುಜ್ಜಾಗಿತ್ತು.
"ನಾನು ಈ ಮೊದಲು ಈ ರೀತಿ ಆಗಿದ್ದನ್ನು ನೋಡಿರಲಿಲ್ಲ" ಎಂದು ಅವರು ಹೇಳುತ್ತಾರೆ, ಅಂದಿನ ಆಘಾತವು ಅವರ ಮನಸ್ಸಿನಲ್ಲಿ ಇನ್ನೂ ತಾಜಾವಾಗಿದೆ. ನಂತರ ಅವರು ಕಾಡಿನತ್ತ ಹೋಗಿದ್ದ ಪ್ರಾಣಿಗಳ ಹೆಜ್ಜೆಗುರುತುಗಳನ್ನು ಅನುಸರಿಸಿದರು, ಮತ್ತು ಸ್ವಲ್ಪ ದೂರದಲ್ಲಿ ಗವಾ (ಕಾಡೆಮ್ಮೆ/ಬಾಸ್ ಗೌರಸ್ ಮತ್ತು ಕೆಲವೊಮ್ಮೆ ಭಾರತೀಯ ಕಾಡೆಮ್ಮೆ ಎಂದು ಕರೆಯಲಾಗುತ್ತದೆ) ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು. ಗೋವಿನ ಜಾತಿಯ ಪ್ರಾಣಿಗಳಲ್ಲಿ ಅತಿದೊಡ್ಡದಾದ ಅವು ನೋಡಲು ಭಯ ಹುಟ್ಟಿಸುವಂತಿರುತ್ತವೆ - ಗಂಡುಗಳು ಆರು ಅಡಿಗಳಿಗಿಂತ ಹೆಚ್ಚು ಎತ್ತರ ಮತ್ತು 500ರಿಂದ 1,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿರುತ್ತವೆ.
ಭಾರೀ ತೂಕದ ಕಾಡೆಮ್ಮೆಗಳ ಹಿಂಡು ಹೊಲಗಳನ್ನು ತುಳಿದಾಗ, ಅವು ಗದ್ದೆಯಲ್ಲಿ ದೊಡ್ಡ ಕುಳಿಗಳನ್ನು ಸೃಷ್ಟಿಸುತ್ತವೆ, ಅವು ಬೆಳೆಗಳು ಮತ್ತು ಸಸಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. "ಗವಾ ಈಗ ಮೂರು ವರ್ಷಗಳಿಂದ ಪ್ರತಿ ಬೆಳೆ ಹಂಗಾಮಿನಲ್ಲೂ ನನ್ನ ಬೆಳೆಯನ್ನು ನಾಶಪಡಿಸಿದೆ. ಈಗ ನನಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ಕೃಷಿಯನ್ನು ತ್ಯಜಿಸುವುದು" ಎಂದು ಶಿವರಾಂ ಹೇಳುತ್ತಾರೆ. ಅವರು ಡಾನ್ ಎನ್ನುವ ಊರಿನಲ್ಲಿರುವ ತಮ್ಮ ತಗಡಿನ ಛಾವಣಿಯ ಮನೆಯ ಮುಂದೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಅಲ್ಲಿ ಗವಾಗಳ ಹಿಂಡು 2021ರಿಂದ ಕ್ಯಾಂಪ್ ಮಾಡಿದೆ.














