ದೀಪಿಕಾ ಕಮನ್ ಅವರ ಅನುಭವಿ ಕಣ್ಣುಗಳು ಬಹತೇಕ ಒಂದೇ ರೀತಿ ಕಾಣುವ ಗಂಡು ಮತ್ತು ಹೆಣ್ಣು ಪತಂಗಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲವು. “ಅವು ನೋಡಲು ಒಂದೇ ರೀತಿ ಕಾಣುತ್ತವೆ. ಆದರೆ ಅವುಗಳ ಉದ್ದದಲ್ಲಿ ವ್ಯತ್ಯಾಸವಿರುತ್ತದೆ. ಉದ್ದಕ್ಕಿರುವುದೇ ಗಂಡು” ಎಂದು ಅವರು ಸುಮಾರು 13 ಸೆಂಟಿಮೀಟರ್ ರೆಕ್ಕೆಗಳನ್ನು ಹೊಂದಿರುವ ಕಂದು ಮತ್ತುಬೀಜ್ ಬಣ್ಣದ ಜೀವಿಗಳನ್ನು ತೋರಿಸುತ್ತಾ “ಕುಳ್ಳಗಿರುವುದು ಹೆಣ್ಣು” ಹೇಳಿದರು.
ದೀಪಿಕಾ ಅಸ್ಸಾಂನ ಮಜುಲಿ ಜಿಲ್ಲೆಯ ಬೊರುನ್ ಚಿತಾದಾರ್ ಚುಕ್ ಗ್ರಾಮದ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ಎರಿ ರೇಷ್ಮೆ ಹುಳಗಳ (ಸಮಿಯಾ ರಿಸಿನಿ) ಸಾಕಣೆಯನ್ನು ಪ್ರಾರಂಭಿಸಿದರು. ಅವರು ಅದನ್ನು ತನ್ನ ತಾಯಿ ಮತ್ತು ಅಜ್ಜಿಯಿಂದ ಕಲಿತಿದ್ದರು.
ಎರಿ ಎನ್ನುವುದು ಅಸ್ಸಾಂನ ಬ್ರಹ್ಮಪುತ್ರ ಕಣಿವೆ ಮತ್ತು ನೆರೆಯ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬೆಳೆಯುವ ರೇಷ್ಮೆ ತಳಿ. ಮಿಸಿಂಗ್ (ಮಿಶಿಂಗ್ ಎಂದೂ ಕರೆಯಲಾಗುತ್ತದೆ) ಸಮುದಾಯವು ಸಾಂಪ್ರದಾಯಿಕವಾಗಿ ಸ್ವಂತ ಬಳಕೆಗಾಗಿ ಎರಿ ರೇಷ್ಮೆ ಸಾಕಣೆ ಮಾಡಿ ರೇಷ್ಮೆಯನ್ನು ನೇಯುತ್ತಿತ್ತು. ಆದರೆ ಒಂದು ವ್ಯವಹಾರವಾಗಿ ರೇಷ್ಮೆ ನೇಯ್ಗೆ ಸಮುದಾಯದ ಮಟ್ಟಿಗೆ ತುಲನಾತ್ಮಕವಾಗಿ ಹೊಸದು.
"ಈಗ ಕಾಲ ಬದಲಾಗಿದೆ" ಎಂದು 28 ವರ್ಷದ ದೀಪಿಕಾ ಹೇಳುತ್ತಾರೆ. "ಇತ್ತೀಚಿನ ದಿನಗಳಲ್ಲಿ ಯುವತಿಯರು ಸಹ ರೇಷ್ಮೆ ಹುಳು ಸಾಕಾಣಿಕೆಯನ್ನು ಕಲಿತು ಅದರಲ್ಲೇ ಮುಂದುವರೆಯುತ್ತಿದ್ದಾರೆ."













