“ಯಾರು ಗೆದ್ದರೆ ನಮಗೇನು? ಅದು ಐಪಿಎಲ್ ಮ್ಯಾಚೋ ಅಥವಾ ವರ್ಲ್ಡ್ ಕಪ್ ಮ್ಯಾಚೋ ಯಾವ್ದಾದ್ರೂ ನಮಗೇನು ಪ್ರಯೋಜನ?
ಕ್ರಿಕೆಟ್ ಎನ್ನುವುದು ಧರ್ಮವೇ ಆಗಿರುವ ದೇಶದಲ್ಲಿ ಮದನ್ ಕೇಳುತ್ತಿರುವ ಪ್ರಶ್ನೆ ಅಪವಿತ್ರವಾದುದು.
ಅವರು ಮುಂದುವರೆದು ಹೇಳುತ್ತಾರೆ, “ಕೋಯಿ ಭೀ ಜೀತೇ ಹಮೇ ಕಾಮ್ ಮಿಲ್ ಜಾತಾ ಹೈ [ಯಾರೇ ಗೆಲ್ಲಲಿ, ನಮಗೆ ಕೆಲಸ ಸಿಗುತ್ತೆ].” 51 ವರ್ಷದ ಮದನ್ ಅವರು ಮೀರತ್ ನಗರದಲ್ಲಿ ಈ ಆಟದಲ್ಲಿ ಬಳಸಲಾಗುವ ಹೊಳೆಯುವ ಕೆಂಪು ಮತ್ತು ಬಿಳಿ ಬಣ್ಣದ ಚೆಂಡುಗಳನ್ನು ತಯಾರಿಸುವ ಘಟಕವೊಂದನ್ನು ಹೊಂದಿದ್ದಾರೆ. ಈ ನಗರದಲ್ಲಿ ಇಂತಹ ಹಲವು ಕಾರ್ಖಾನೆಗಳಿವೆ.
ಮಾರ್ಚ್ ತಿಂಗಳಿನಲ್ಲಿ ನಾವು ಅವರಲ್ಲಿಗೆ ಹೋದಾಗ ಅವರ ಸುತ್ತಲೂ 100 ಪೆಟ್ಟಿಗಗಳಿದ್ದವು. ಒಂದೊಂದು ಪೆಟ್ಟಿಗೆಯಲ್ಲೂ ಆರು ಚೆಂಡುಗಳಿದ್ದವು. ಇವು ಮುಂದೆ ಬರಲಿರುವ ಕಿಕ್ಕಿರಿದ ಜನಸಂದಣಿಯ ಪುರುಷರ ಕ್ರಿಕೆಟ್ ಸರಣಿಯಲ್ಲಿ ಆಡಲು ತಯಾರಿಗಿದ್ದವು. ಎರಡು ತಿಂಗಳ ಕಾಲ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸರಣಿಯ ಮೊದಲ ಪಂದ್ಯ ಮಾರ್ಚ್ ಅಂತ್ಯದಲ್ಲಿ ಶುರುವಾಗುವುದಿತ್ತು. ಅದರ ನಂತರ ಜೂನ್ ತಿಂಗಳಿನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುವುದಿತ್ತು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಭಾರತವು ಭಾರತ ಏಕದಿನ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಆತಿಥ್ಯ ವಹಿಸಲಿದೆ.
“ಯಾವ ಹಂತದಲ್ಲಿ ಚೆಂಡನ್ನು ಬಳಸಲಾಗುತ್ತದೆ, ಯಾರು ಚೆಂಡನ್ನು ಬಳಸಿ ಆಡಲಿದ್ದಾರೆ, ಆಡಲಿರುವ ಒಟ್ಟು ಓವರ್‌ಗಳು ಆಟ ಎನ್ನುವುದರ ಮೇಲೆ[ಚೆಂಡಿನ] ಗುಣಮಟ್ಟ ನಿರ್ಧರಿತವಾಗುತ್ತದೆ” ಎಂದು ಮದನ್ ಹೇಳುತ್ತಾರೆ.




















