“ಈ ಮಜಾರ್ ನಾವು ತಾತ್ಕಾಲಿಕವಾಗಿ ನಿರ್ಮಿಸಿದ್ದು. ಸಾವ್ಲಾ ಪೀರ್ ಮೂಲ ಮಂದಿರವನ್ನು ಇಂಡೋ-ಪಾಕ್ ಕಡಲ ಗಡಿಯಲ್ಲಿ ಆಯಕಟ್ಟಿನ ಸ್ಥಳದಲ್ಲಿ ಕಟ್ಟಲಾಗಿದೆ” ಎಂದು ಫಕೀರಾನಿ ಜಾಟ್ ಸಮುದಾಯದ ನಾಯಕ ಆಗಾ ಖಾನ್ ಸಾವ್ಲಾನಿ ಹೇಳುತ್ತಾರೆ. ಅವರು ಉಲ್ಲೇಖಿಸುತ್ತಿರುವ ತಾತ್ಕಾಲಿಕ ರಚನೆಯು ಲಖ್ಪತ್ ತಾಲ್ಲೂಕಿನ ಪಿಪರ್ ಕುಗ್ರಾಮದ ಬಳಿಯ ದೊಡ್ಡ ತೆರೆದ ಸ್ಥಳದ ಮಧ್ಯದಲ್ಲಿ ನಿಂತಿರುವ ಸಣ್ಣ, ಏಕಾಂಗಿ, ತಿಳಿ-ಹಸಿರು, ಸರಳ ಸಮಾಧಿ. ಇನ್ನು ಕೆಲವೇ ಕ್ಷಣಗಲ್ಲಿ ಇಲ್ಲಿ ಸಾವ್ಲಾ ಪೀರ್ ಹಬ್ಬ ಆಚರಿಸಲು ಜನರ ಗುಂಪು ಸೇರಲಿದೆ.
ಮೂಲ ದೇವಾಲಯವು ದ್ವೀಪದಲ್ಲಿದೆ, ಭದ್ರತಾ ಕಾರಣಗಳಿಂದಾಗಿ 2019ರಿಂದ ಪೂಜೆ ಸಲ್ಲಿಸದಂತೆ ಮುಚ್ಚಲಾಗಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಈಗ ಆ ಸ್ಥಳದಲ್ಲಿ ಒಂದು ಪೋಸ್ಟ್ ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೋಟೇಶ್ವರಕ್ಕೆ ಅಡ್ಡಲಾಗಿ ಕೋರಿ ದ್ವೀಪದಲ್ಲಿರುವ ಸಾವ್ಲಾ ಪೀರ್ ಸ್ವಂತ ಸ್ಥಳದಲ್ಲಿ ಜಾತ್ರೆ ನಡೆಯುತ್ತಿತ್ತು. ಆ ಸಮಯದಲ್ಲಿ, ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಟ್ ತಳಿಗಾರರು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಮತ್ತು ಪೂಜೆ ಸಲ್ಲಿಸಲು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು" ಎಂದು ಸಮುದಾಯದ ಇತಿಹಾಸ ಹೇಳುತ್ತದೆ.
ಎಲ್ಲಾ ಜಾತಿಗಳ ಹಿಂದೂ ಮತ್ತು ಮುಸ್ಲಿಂ ಕುಟುಂಬಗಳು ಜಾತ್ರೆಯಲ್ಲಿ ಭಾಗವಹಿಸುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಈ ಪ್ರದೇಶದ ಸಂಪ್ರದಾಯ. ಸಮುದಾಯವು ಆಯೋಜಿಸುವ ಈ ಜಾತ್ರೆಯು ವಾರ್ಷಿಕ ಕಾರ್ಯಕ್ರಮವಾಗಿದ್ದು, ಗುಜರಾತಿ ಕ್ಯಾಲೆಂಡರಿನ ಚೈತ್ರ ಮಾಸದ ಮೂರನೇ ಅಥವಾ ನಾಲ್ಕನೇ ದಿನದಂದು ನಡೆಯುತ್ತದೆ, ಇದು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ.
"ಸಾವ್ಲಾ ಪೀರ್ ದರ್ಗಾದಲ್ಲಿ, ಪ್ರಾರ್ಥನೆ ಮಾಡಲು ಎಲ್ಲರಿಗೂ ಸ್ವಾಗತವಿದೆ; ಇಲ್ಲಿ ಯಾವುದೇ ಪಕ್ಷಪಾತವಿಲ್ಲ. ಯಾರಾದರೂ ಬಂದು ತಮ್ಮ ಕಷ್ಟಸುಖ ಹೇಳಿಕೊಳ್ಳಬಹುದು. ಸಂಜೆಯವರೆಗೆ ಕಾಯ್ದು ಜನಸಂದಣಿ ಹೇಗಿರುತ್ತದೆ ಎಂದು ನೀವೇ ನೋಡಿ" ಎಂದು ಕಛ್ ಪ್ರದೇಶದ ಪಿಪರ್ ಕುಗ್ರಾಮದ ನಿವಾಸಿ ಬದುಕಿನ 4ನೇ ದಶಕದ ಕೊನೆಯಲ್ಲಿರುವ ಸೋನು ಜಾಟ್ ಹೇಳುತ್ತಾರೆ. ಈ ಕುಗ್ರಾಮದಲ್ಲಿ ಸುಮಾರು 50ರಿಂದ 80 ಫಕೀರಾನಿ ಜಾಟ್ ಕುಟುಂಬಗಳು ವಾಸಿಸುತ್ತಿವೆ.
ಫಕೀರಾನಿ ಜಾಟ್ ಸಮುದಾಯದವರು ಒಂಟೆ ಮೇಯಿಸುತ್ತಾ ಕರಾವಳಿ ಕಛ್ ಪ್ರದೇಶದ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದಾರೆ. ಅವರು ಖರಾಯ್ ಎಂದು ಕರೆಯಲ್ಪಡುವ ಸ್ಥಳೀಯ ಒಂಟೆ ತಳಿ ಮತ್ತು ಕಛಿ ಒಂಟೆಗಳನ್ನು ಸಾಕುತ್ತಾರೆ. ವೃತ್ತಿಯಿಂದ ಪಶುಪಾಲಕರಾದ ಅವರು ಶತಮಾನಗಳಿಂದ ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ, ಅವರನ್ನು ಹೈನುಗಾರರಾಗಿ ನೋಡಲಾಗುತ್ತದೆ, ಬೆಣ್ಣೆ, ತುಪ್ಪ, ಹಾಲು, ಉಣ್ಣೆ ಮತ್ತು ಗೊಬ್ಬರದಂತಹ ಅಗತ್ಯ ವಸ್ತುಗಳನ್ನು ನಗರ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಪೂರೈಸುತ್ತಾರೆ. ಅವರ ಹಿಂಡುಗಳಲ್ಲಿ ಕುರಿ, ಮೇಕೆ, ಎಮ್ಮೆ, ಹಸುಗಳು ಮತ್ತು ಇತರ ಸ್ಥಳೀಯ ತಳಿಗಳು ಇರುತ್ತವೆ. ಆದರೆ ಅವರು ತಮ್ಮನ್ನು ಮೊದಲು ಒಂಟೆ ಸಾಕಣೆದಾರರಾಗಿ ಗುರುತಿಸಿಕೊಳ್ಳುತ್ತಾರೆ, ತಮ್ಮ ಒಂಟೆಗಳು ಮತ್ತು ಕುಟುಂಬಗಳೊಂದಿಗೆ ಈ ಪ್ರದೇಶದ ಸುತ್ತ ತಿರುಗಾಡುತ್ತಿರುತ್ತಾರೆ. ಫಕೀರಾನಿ ಮಹಿಳೆಯರು ಹಿಂಡಿನ ಪಾಲನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ ಮತ್ತು ಅದೇ ತಾನೇ ಜನಿಸಿದ ಒಂಟೆಯ ಮರಿಗಳನ್ನು ನೋಡಿಕೊಳ್ಳುತ್ತಾರೆ.
"ಆದರೆ ಆರಂಭದಲ್ಲಿ ನಮ್ಮದು ಒಂಟೆ ಸಾಕುವ ವೃತ್ತಿಯಾಗಿರಲಿಲ್ಲ" ಎಂದು ಈ ಪ್ರದೇಶದ ಸೂಫಿ ಕವಿ ಉಮರ್ ಹಾಜಿ ಸುಲೇಮಾನ್ ಹೇಳುತ್ತಾರೆ. "ಒಮ್ಮೆ ಇಬ್ಬರು ರಬಾರಿ ಸಹೋದರರು ಒಂಟೆಯನ್ನು ಸಾಕುವ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು" ಎಂದು ಫಕೀರಾನಿ ಜಾಟ್ ತಮ್ಮ ಜೀವನೋಪಾಯದ ಹಿಂದಿನ ಕಥೆಯನ್ನು ಹೇಳಲು ಪ್ರಾರಂಭಿಸಿದರು. "ತಮ್ಮ ವಿವಾದವನ್ನು ಪರಿಹರಿಸಿಕೊಳ್ಳಲು, ಅವರು ನಮ್ಮ ಪೂಜ್ಯ ಸಂತ ಸಾವ್ಲಾ ಪೀರ್ ಅವರಲ್ಲಿಗೆ ಹೋದರು, ಅವರು ಜೇನು ಮೇಣದಿಂದ ಒಂಟೆಯನ್ನು ಮಾಡಿ, ನಿಜವಾದ ಒಂಟೆ ಮತ್ತು ಜೇನುನೊಣದಿಂದ ಮಾಡಿದ ಒಂಟೆಯ ನಡುವೆ ಒಂದನ್ನು ಆಯ್ದುಕೊಳ್ಳುವಂತೆ ಹೇಳಿದರು. ಅಣ್ಣ ಬೇಗನೆ ಜೀವಂತ ಒಂಟೆಯನ್ನು ಆರಿಸಿಕೊಂಡು ಹೊರಟುಹೋದನು. ಕಿರಿಯವನಾದ ದೇವಿದಾಸ್ ರಬಾರಿ ಬಳಿ ಮೇಣದ ಒಂಟೆ ಉಳಿದಿತ್ತು. ಸಂತನು ದೇವಿದಾಸನನ್ನು ಆಶೀರ್ವದಿಸಿ, ನೀನು ಮನೆಗೆ ಮರಳುವಾಗ ಒಂಟೆಯ ಹಿಂಡು ನಿನ್ನನ್ನು ಹಿಂಬಾಲಿಸುತ್ತದೆ ಎಂದು ಭರವಸೆ ನೀಡಿದರು. ಅವನು ಮನೆಗೆ ತಲುಪುವವರೆಗೂ ಹಿಂತಿರುಗಿ ನೋಡದಿದ್ದರೆ ಅವನ ಒಂಟೆಯ ಹಿಂಡು ಬೆಳೆಯಲಿದೆ ಎಂದೂ ಅವರು ಹೇಳಿದರು.
“ಆದರೆ ದೇವಿದಾಸ ಮನೆ ತಲುಪುವ ಮೊದಲೇ ಕುತೂಹಲ ತಾಳಲಾಗದೆ ಹಿಂತಿರುಗಿ ನೋಡಿದ. ಅವನ ಹಿಂದೆ ದೊಡ್ಡ ಒಂಟೆಯ ಹಿಂಡಿತ್ತು. ಆದರೆ ಅವನು ತಿರುಗಿ ನೋಡಿದ ಕಾರಣ ಮತ್ತೆ ಹೆಚ್ಚಾಗುವುದು ನಿಂತಿತು. ಹೆಚ್ಚು ಒಂಟೆಗಳನ್ನು ಹೊಂದಿದ್ದರೆ ನೀನು ಅವುಗಳನ್ನು ಜಾಟ್ ಸಮುದಾಯದವರ ಆರೈಕೆಗೆ ಒಪ್ಪಿಸಬೇಕು ಎಂದು ದೇವಿದಾಸನಿಗೆ ಸಾವ್ಲಾ ಪೀರ್ ಹೇಳಿದ್ದ. ಇದೇ ಕಾರಣಕ್ಕಾಗಿ ಜಾಟ್ ಸಮುದಾಯ ರಬಡೀ ಸಮುದಾಯ ತನಗೆ ನೀಡಿದ ಒಂಟೆಗಳನ್ನು ನೋಡಿಕೊಳ್ಳುತ್ತದೆ. ಮತ್ತು ಇದೇ ಕಾರಣಕ್ಕಾಗಿ ಅಂದಿನಿಂದ ಎಲ್ಲರೂ ಸಾವ್ಲಾ ಪೀರನನ್ನು ಅನುಸರಿಸಲು ಆರಂಭಿಸಿದರು” ಎಂದು ಅವರು ಹೇಳಿದರು.
ಫಕೀರಾನಿ ಜಾಟರು ಮುಸ್ಲಿಮರು ಮತ್ತು ಸುಮಾರು 400 ವರ್ಷಗಳ ಹಿಂದೆ ಕೋರಿ ದ್ವೀಪದಲ್ಲಿ ತನ್ನ ಒಂಟೆ ಹಿಂಡಿನೊಂದಿಗೆ ವಾಸಿಸುತ್ತಿದ್ದ 'ಸಾವ್ಲಾ ಪೀರ್' ಅವರ ಪ್ರೀತಿಯ ಸೂಫಿ ಸಂತ. ಪ್ರತಿ ವರ್ಷದಂತೆ, ಈ ವರ್ಷವೂ 2024ರ ಎಪ್ರಿಲ್ 28 ಮತ್ತು 29ರಂದು, ಅವರು ಲಖ್ಪತ್ ಎನ್ನುವಲ್ಲಿ ಎರಡು ದಿನಗಳ ಸಾವ್ಲಾ ಪೀರ್ ಣೋ ಮೇಲೋ ಆಯೋಜಿಸಿದ್ದರು.
*****
ಜಾತ್ರೆಯು ಜನರ ಗದ್ದಲದಿಂದ ಕೂಡಿರುತ್ತದೆ. ಬಣ್ಣಗಳು, ಶಬ್ದಗಳು, ಚಟುವಟಿಕೆಗಳು ಮತ್ತು ಭಾವನೆಗಳ ಚೆಲ್ಲಾಟವೇ ಈ ಜಾತ್ರೆಯಾಗಿರುತ್ತದೆ. ಜಾಟ್ ಸಮುದಾಯದ ಜನರು ಸಂಜೆಯ ಪ್ರದರ್ಶನಕ್ಕಾಗಿ ದೊಡ್ಡ ಪೆಂಡಾಲ್ ಅಡಿ ವೇದಿಕೆಯೊಂದನ್ನು ನಿರ್ಮಿಸಿದ್ದರು. ಅಲ್ಲಲ್ಲಿ ಬಟ್ಟೆಗಳು, ಆಹಾರ, ಪಾತ್ರೆಗಳು ಮತ್ತು ಕರಕುಶಲ ವಸ್ತುಗಳ ಸಣ್ಣ ಅಂಗಡಿಗಳು ತಲೆಯೆತ್ತುತ್ತಿದ್ದವು. ಚಹಾ ಕುಡಿಯುತ್ತಿರುವ ವೃದ್ಧರ ಗುಂಪೊಂದು ನನ್ನನ್ನು ಸ್ವಾಗತಿಸಿ, "ನೀವು ಜಾತ್ರೆಯಲ್ಲಿ ಭಾಗವಹಿಸಲು ಅಷ್ಟು ದೂರದಿಂದ ಬಂದಿರುವುದು ನಮಗೆ ತುಂಬಾ ಸಂತೋಷ ತಂದಿದೆ" ಎಂದು ಹೇಳಿದರು.
ಕಾಲ್ನಡಿಗೆಯಲ್ಲಿ, ವಾಹನಗಳಲ್ಲಿ, ಆದರೆ ಹೆಚ್ಚಾಗಿ ಟೆಂಪೊ ಟ್ರಾವೆಲರ್ ವಾಹನದಲ್ಲಿ ಗುಂಪು ಗುಂಪಾಗಿ ಜಾತ್ರೆಗೆ ಅನೇಕ ಯಾತ್ರಾರ್ಥಿಗಳು ಬರುತ್ತಿದ್ದರು. ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು, ರೋಮಾಂಚಕ ಬಣ್ಣಗಳ ಉಡುಪುಗಳನ್ನು ಅವರು ಧರಿಸಿದ್ದರು, ಅವರು ಮಾತನಾಡಲು ಅಥವಾ ಫೋಟೊ ತೆಗೆಸಿಕೊಳ್ಳಲು ಹಿಂಜರಿಯುತ್ತಿದ್ದರು.
ರಾತ್ರಿ 9 ಗಂಟೆಗೆ ಡೋಲು ಬಾರಿಸುವವರು ತಮ್ಮ ಪ್ರದರ್ಶನ ಆರಂಭಿಸಿದರು. ಆಗ ನಿಧಾನಗತಿಯ ಮತ್ತು ಲಯಬದ್ಧ ಡೋಲು ಬಡಿತದ ಸದ್ದು ಗಾಳಿಯಲ್ಲಿ ಪ್ರತಿಧ್ವನಿಸತೊಡಗಿತು. ಸಭೆಯಲ್ಲಿದ್ದ ಓರ್ವ ಹಿರಿಯ ವ್ಯಕ್ತಿ ಇದ್ದಕ್ಕಿದ್ದಂತೆ ಎದ್ದು ನಿಂತು ಸಿಂಧಿ ಭಾಷೆಯಲ್ಲಿ ಸಾವ್ಲಾ ಪೀರ್ ಕುರಿತಾದ ಹಾಡೊಂದನ್ನು ಹಾಡತೊಡಗಿದರು. ಕೆಲವೇ ನಿಮಿಷಗಳಲ್ಲಿ ಅವರೊಂದಿಗೆ ಇನ್ನಷ್ಟು ಜನರು ಸೇರಿಕೊಂಡರು. ಇನ್ನೂ ಕೆಲವರು ಡೋಲಿನ ಸದ್ದಿಗೆ ತಕ್ಕಂತೆ ವೃತ್ತಾಕಾರವಾಗಿ ನಿಂತು ಕುಣಿಯತೊಡಗಿದರು. ನೃತ್ಯ ನಿಧಾನಗತಿಯಲ್ಲಿ ಮಧ್ಯರಾತ್ರಿಯ ತನಕ ಸಾಗಿತು.
ಹಬ್ಬದ ಮುಖ್ಯ ದಿನವಾದ ಏಪ್ರಿಲ್ 29ರ ಬೆಳಗ್ಗೆ ಸಮುದಾಯದ ಮುಖಂಡರ ಧಾರ್ಮಿಕ ಭಾಷಣಗಳನ್ನು ಮಾಡಿದರು. ಇದರೊಂದಿಗೆ ಆ ದಿನದ ಹಬ್ಬ ಪ್ರಾರಂಭವಾಯಿತು. ಅಷ್ಟು ಹೊತ್ತಿಗೆ ಅಂಗಡಿಗಳು ಸಿದ್ಧವಾಗಿದ್ದವು, ಜನರು ಸಂತನ ಆಶೀರ್ವಾದ ಪಡೆಯಲು, ಜಾತ್ರೆಯನ್ನು ಆನಂದಿಸಲು ಬರುತೊಡಗಿದ್ದರು.
"ನಾವು ಮೆರವಣಿಗೆಗೆ ಸಿದ್ಧವಾಗಿದ್ದೇವೆ; ಎಲ್ಲರೂ, ದಯವಿಟ್ಟು ಪ್ರಾರ್ಥನಾ ಸ್ಥಳದಲ್ಲಿ ಒಟ್ಟುಗೂಡಿ." ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ದೊಡ್ಡ ಧ್ವನಿಯೊಂದು ಘೋಷಿಸಿತು. ಜನರು ಬಿಳಿಹಾಯಿಯಿಂದ ಅಲಂಕರಿಸಲ್ಪಟ್ಟ ಸಣ್ಣ ಮರದ ದೋಣಿಗಳನ್ನು ತಲೆಯ ಮೇಲೆ ಹಿಡಿಡಿದಿದ್ದರು, ದೋಣಿಯ ಮೇಲಿದ್ದ ಕಂಬದ ತುದಿಗೆ ವರ್ಣರಂಜಿತ ಕಸೂತಿಯಿದ್ದ ಬಾವುಟವಿತ್ತು. ಅದನ್ನು ಹಿಡಿದು ಸಂತೋಷದಿಂದ ಘರ್ಜಿಸುತ್ತಾ, ಹಾಡುತ್ತಾ ಮತ್ತು ಸಾವ್ಲಾ ಪೀರ್ ಹೆಸರನ್ನು ಜಪಿಸುತ್ತಾ ಜಾತ್ರೆಯ ಮೂಲಕ ಸುತ್ತುತ್ತಾ ಪುರುಷರ ಗುಂಪು, ಮಸುಕು ಬೆಳಕು ಮತ್ತು ಧೂಳಿನ ಮೋಡಗಳ ನಡುವೆ ದರ್ಗಾ ಕಡೆಗೆ ಧಾವಿಸುತ್ತದೆ. ಈ ದೋಣಿಯು ಸಾವ್ಲಾ ಪೀರ್ ಅವರ ಉಪಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಹಿಂದೆ ಈ ಸಂತ ತನ್ನ ದೋಣಿಯಲ್ಲಿ ಕೊಲ್ಲಿಗಳ ಮೂಲಕ ದ್ವೀಪಗಳ ನಡುವೆ ಪ್ರಯಾಣಿಸುತ್ತಿದ್ದನು.
"ನಾನು ಪ್ರತಿ ವರ್ಷ ಇಲ್ಲಿಗೆ ಬರುತ್ತೇನೆ. ನಮಗೆ ಸಾವ್ಲಾ ಬಾಬಾ ಆಶೀರ್ವಾದ ಬೇಕು" ಎಂದು ಜಾತ್ರೆಯ ಸಮಯದಲ್ಲಿ ಭೇಟಿಯಾದ 40 ವರ್ಷದ ಜಯೇಶ್ ರಬರಿ ಹೇಳಿದರು. ಅವರು ಅಂಜಾರ್ ಎನ್ನುವಲ್ಲಿಂದ ಬಂದಿದ್ದರು. "ನಾವು ರಾತ್ರಿಯನ್ನು ಇಲ್ಲಿಯೇ ಕಳೆಯುತ್ತೇವೆ. ಫಕೀರಾನಿ ಸಹೋದರರೊಂದಿಗೆ ಚಹಾ ಕುಡಿದು, ಆಚರಣೆಗಳು ಮುಗಿದ ನಂತರ ತುಂಬಿದ ಹೃದಯೊಂದಿಗೆ ಮನೆಗೆ ಹೋಗುತ್ತೇವೆ,”
“ಕುಟುಂಬದಲ್ಲಿ ಸಮಸ್ಯೆ ಅಥವಾ ಕಷ್ಟ ಎದುರಾದಾಗ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಈ ದೇವರು ನಮ್ಮ ಕಷ್ಟ ಪರಿಹರಿಸುತ್ತಾರೆ. ನಾನು ಕಳೆದ 14 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ" ಎಂದು ಜಾತ್ರೆಯಲ್ಲಿ ಭಾಗವಹಿಸಲು ಭುಜ್ ಪ್ರಾಂತ್ಯದಿಂದ ನಡೆದುಕೊಂಡು ಬಂದಿರುವ 30 ವರ್ಷದ ಗೀತಾ ಬೆನ್ ರಬಾರಿ ಹೇಳುತ್ತಾರೆ.
ಎರಡು ದಿನಗಳ ಉತ್ಸವದ ನಂತರ ವಿದಾಯ ಹೇಳಲು ಹೋದಾಗ, "ಎಲ್ಲಾ ಧರ್ಮಗಳೂ ಮೂಲಭೂತವಾಗಿ ಪ್ರೀತಿಯನ್ನು ಆಧರಿಸಿವೆ. ಪ್ರೀತಿಯಿಲ್ಲದೆ ಧರ್ಮವಿಲ್ಲ ಎಂಬುದನ್ನು ನೆನಪಿಡಿ" ಎಂದು ಕವಿ ಉಮರ್ ಹಾಜಿ ಸುಲೇಮಾನ್ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು