ಸೆರ ಬಡೋಲಿಯಲ್ಲಿ ಆಗ, ಆಗಸ್ಟ್ ಮಾಸದ ಬೆಚ್ಚನೆಯ ನಡುಹಗಲು. ರಸ್ತೆಯು ನಿರ್ಜನವಾಗಿತ್ತು. ಉತ್ತರಾಖಂಡದ ಅಲ್ಮೋರಾ ಮತ್ತು ಪಿತೌರಾಗಢ್ ಜಿಲ್ಲೆಗಳ ನಡುವಿನ ಸರಹದ್ದನ್ನು ರೂಪಿಸಿದ ಸರಯು ನದಿಯ ಮೇಲಿನ ಸೇತುವೆಯಾಚೆಗಿನ ಸುಮಾರು ಒಂದು ಕಿ.ಮೀ.ನಲ್ಲಿ ನಾವು ಬಿಸಿಲಿನಲ್ಲಿ ಮಿರುಗುತ್ತಿದ್ದ ಕೆಂಪು ಅಂಚೆ ಪೆಟ್ಟಿಗೆಯನ್ನು ಗುರುತಿಸಿದೆವು.
ಆ ಪ್ರದೇಶದಲ್ಲಿನ ಏಕೈಕ ಕೆಂಪು ಅಂಚೆ ಪೆಟ್ಟಿಗೆಯು ಬೇರೆಡೆಯಲ್ಲಿ ಸಾಧಾರಣ ವಿಷಯವೆನಿಸಬಹುದಾದರೂ, ಅದೊಂದು ದೊಡ್ಡ ಹೆಜ್ಜೆ. ಕುಮಾವೂನಲ್ಲಿನ ಈ ಭಾಗದ ಮೊದಲ ಅಂಚೆ ಕಚೇರಿಯ ಹೊಸ ವಿಭಾಗವು, 2016ರ ಜೂನ್ 23ರಂದು ಸೆರ ಬಡೋಲಿಯಲ್ಲಿ ಉದ್ಘಾಟನೆಯಾಯಿತು. ಈಗ ಅದು, ಭನೋಲಿ ಸೆರ ಗುಂಠ್, ಸೆರ (ಉರುಫ್) ಬಡೋಲಿ, ಚೌನಾಪಾಟಲ್, ನೈಲಿ, ಬಡೋಲಿ ಸೆರ ಗುಂಠ್ ಮತ್ತು ಸರ್‌ತೋಲ ಎಂಬ ಆರು ಗ್ರಾಮಗಳಿಗೆ ಸೇವೆ ಸಲ್ಲಿಸುತ್ತಿದೆ. ಈ ಹಳ್ಳಿಗಳಲ್ಲಿನ ಬಹುತೇಕ ಜನರು ರೈತರು.
ಸ್ಥಳೀಯ ಅಂಚೆ ಕಚೇರಿಯ ಅನುಪಸ್ಥಿತಿಯಲ್ಲಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಬರೆದ ‘The last post – and a bridge too far’ ಎಂಬ ಕಥಾನಕವು ʼಪರಿʼಯಲ್ಲಿ ಪ್ರಕಟಗೊಂಡ ಎರಡು ದಿನಗಳ ತರುವಾಯ ಇದು ಘಟಿಸಿತು. ಈಗ, ಸೆರ ಬಡೋಲಿಯ ಹೆಮ್ಮೆಯ ಪಿನ್ ಕೋಡ್, 262532.
ಈ ಆರು ಹಳ್ಳಿಗಳು ಪಿತೌರಗಢ್‌ನ ಗಂಗೊಲಿಹಾಟ್ ವಲಯದಲ್ಲಿವೆಯಾದರೂ ಅವರ ಅಂಚೆ ಕಚೇರಿಯು ಸೇತುವೆಯ ಮತ್ತೊಂದು ಬದಿಗಿದ್ದು, ಐದು ಕಿ.ಮೀ. ಆಚೆಗೆ, ಅಲ್ಮೋರಾ ಜಿಲ್ಲೆಯ ಭಸಿಯಾಚನಾ ವಲಯದಲ್ಲಿದೆ. ನಾನು ಮೊದಲು ಭೇಟಿಯಿತ್ತಾಗ, “ಎಂಥ ವಿಪರ್ಯಾಸ, ಅವರಿನ್ನೂ ನಮ್ಮನ್ನು ಪಿತೋರಾಗಢ್ ಜಿಲ್ಲೆಯ ಭಾಗವೆಂಬುದಾಗಿ ಭಾವಿಸುವುದಿಲ್ಲ. ಇದು ಹೇಗಿದೆಯೆಂದರೆ, ನಾವು ಪಿತೋರಾಗಢ್‌ನಲ್ಲಿ ವಾಸವಾಗಿದ್ದರೂ ನಮ್ಮ ವಿಳಾಸ ಅಲ್ಮೋರಾದಲ್ಲಿದ್ದಂತೆ” ಎಂದಿದ್ದರು ಭನೋಲಿ ಗುಂಠ್‌ನ ಮದನ್ ಸಿಂಗ್.
ʼಪರಿʼಯ ವರದಿಯು ಕಾಣಿಸಿಕೊಂಡ ಕೆಲವು ವಾರಗಳ ನಂತರ, ಹೊಸ ಅಂಚೆ ಕಚೇರಿಯನ್ನು ನೋಡಲು ವಾಪಸ್ಸು ಬಂದೆ. ಇಲ್ಲಿಯವರೆಗೂ ಹತ್ತಿರದ ಭಸಿಯಾಚನಾ ಅಂಚೆ ಕಚೇರಿಯಿಂದ ಟಪಾಲು ಬರಲು, ೧೦ ದಿನಗಳವರೆಗೆ ಹಾಗೂ ತಮ್ಮದೇ ಜಿಲ್ಲೆಯಾದ ಪಿತೌರಾಗಢ್ ಪ್ರಧಾನ ಕಚೇರಿಯಿಂದ ಪತ್ರ ಅಥವಾ ಮನಿ ಆರ್ಡರ್‌ಗಾಗಿ ಒಂದು ತಿಂಗಳವರೆಗೂ ಕಾಯಬೇಕಿದ್ದ ಗ್ರಾಮೀಣರಲ್ಲಿ ಎಷ್ಟು ಬದಲಾವಣೆಯಾಗಿದೆ? ವಿಳಂಬಗಳ ದೆಸೆಯಿಂದಾಗಿ, ಇವರಿಗೆ ಆಗಾಗ್ಗೆ ನಿರ್ಣಾಯಕ ಸಂದರ್ಶನಗಳು ಮತ್ತು ಅತ್ಯಂತ ಪ್ರಮುಖ ಘಟನೆಗಳು ತಪ್ಪಿಹೋಗುತ್ತಿದ್ದವು. ಕೆಲವೊಮ್ಮೆ, ಅವರು ಅಲ್ಮೋರಾಕ್ಕೆ 7೦ ಕಿ.ಮೀ. ಪ್ರಯಾಣಿಸಿ, ಅಂಚೆ ಕಚೇರಿಯಿಂದ ಖುದ್ದಾಗಿ ಪ್ರಮುಖ ಟಪಾಲುಗಳನ್ನು ಪಡೆದುಕೊಳ್ಳುತ್ತಿದ್ದರು.
ಹೊಸ ಅಂಚೆ ಕಚೇರಿಯ ಸೇವೆಯು ಲಭ್ಯವಾಗುವ ಆರು ಗ್ರಾಮಗಳ ನಿವಾಸಿಗಳು ಸಿಹಿಯನ್ನು ಹಂಚುವ ಮೂಲಕ ಅದರ ಉದ್ಘಾಟನೆಯನ್ನು ಸಂಭ್ರಮಿಸಿದೆವೆಂಬುದಾಗಿ ನನಗೆ ತಿಳಿಸಿದರು. “ಉಳಿದೆಡೆಗಳಲ್ಲಿ, ಜನರು ಹೊಸ ಟಪಾಲು ಮತ್ತು ನೇಮಕಾತಿಗಳು ತಲುಪಿದಾಗ ಸಂಭ್ರಮಿಸುತ್ತಾರೆ. ನಾವು, ಅಂಚೆ ಪೆಟ್ಟಿಗೆಯ ಆಗಮನವನ್ನು ಸಂಭ್ರಮಿಸಿದೆವು! ನಮ್ಮ ಜೀವನವಿನ್ನು ಹಿಂದಿನಂತಿರುವುದಿಲ್ಲ” ಎಂದ ಸೆರ ಬಡೋಲಿಯ ಮೋಹನ್ ಚಂದ್ರ ಜೋಶಿ ಮುಗುಳ್ನಕ್ಕರು.
ನಾಲ್ಕು ಕುರ್ಚಿಗಳು ಮತ್ತು ಒಂದು ಉಕ್ಕಿನ ಕಪಾಟು ಹಾಗೂ ಮೇಜನ್ನು ಒಳಗೊಂಡ ಒಂದು ಚಿಕ್ಕ ಕೊಠಡಿಯೇ ಅಂಚೆ ಕಚೇರಿ. ಕೈಲಾಶ್ ಚಂದ್ರ ಉಪಾಧ್ಯಾಯ್, ಅಂಚೆಪೇದೆ ಹಾಗೂ ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿಯ ಎರಡೂ ಕೆಲಸಗಳನ್ನು ನಿಭಾಯಿಸುವ ಇಲ್ಲಿನ ಏಕೈಕ ಸಿಬ್ಬಂದಿ. ಇವರು, ಸೆರ ಬಡೋಲಿಯಿಂದ ಸುಮಾರು ೧೨ ಕಿ.ಮೀ. ದೂರದ ಗನೈ ಅಂಚೆ ಕಚೇರಿಗೆ ನಿಯೋಜಿತರಾಗಿದ್ದು, ಯಾರನ್ನಾದರೂ ನೇಮಿಸುವವರೆಗೂ ಈ ಹೊಸ ಶಾಖೆಯನ್ನು ನೋಡಿಕೊಳ್ಳುವಂತೆ ಅವರಿಗೆ ತಿಳಿಸಲಾಗಿದೆ. ಇಲಾಖೆಯು, “ಒಂದು ಅಥವಾ ಎರಡು ತಿಂಗಳಲ್ಲಿ, ಒಬ್ಬ ಅಂಚೆಪೇದೆ ಮತ್ತು ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿಯನ್ನು ನೇಮಿಸಲಾಗುತ್ತದೆಯೆಂದು ತಿಳಿಸಿದೆ” ಎಂದರು ಉಪಾಧ್ಯಾಯ್. ಗನೈನಿಂದ ಪ್ರತಿ ಮುಂಜಾನೆ ಟಪಾಲನ್ನು ಸಂಗ್ರಹಿಸುವ ಅವರು, ಸೆರ ಬಡೋಲಿಗೆ ಹೋಗುವ ಮಾರ್ಗದಲ್ಲಿ ಅದನ್ನು ವಿತರಿಸುತ್ತಾರೆ.



