ಪ್ರತಿದಿನ ಬೆಳಿಗ್ಗೆ, ಆರಿಫ್ (ಎಡ) ಮತ್ತು ಶೇರು (ಕತ್ತೆ) ತರಕಾರಿಗಳು ಮತ್ತು ಹಣ್ಣುಗಳನ್ನು ಮಾರುತ್ತಾ ಮಾಂಡವಾದ ಬೀದಿಗಳಲ್ಲಿ ಸಂಚರಿಸುತ್ತಾರೆ. ಎಲೆಕೋಸು, ಹೂಕೋಸು, ಓಕ್ರಾ, ಬದನೆಕಾಯಿ, ಬಾಳೆಹಣ್ಣು ಇತ್ಯಾದಿಗಳನ್ನು ತುಂಬಿದ ಗಾಡಿಯನ್ನು ಶೇರು ಎಳೆಯುತ್ತದೆ, ಈ ಹಿಂದೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಆರಿಫ್ ಮೊಹಮ್ಮದ್ ಮತ್ತು ಅವರ ಸಹಾಯಕ (ಸ್ವಂತ ಹೆಸರನ್ನು ಹೇಳಲು ನಿರಾಕರಿಸಿದರು) ರಾಜಸ್ಥಾನದ ಜುಂಜುನುನ್ ಜಿಲ್ಲೆಯ ಈ ಪಟ್ಟಣದಲ್ಲಿ ನಿಯಮಿತ ಮತ್ತು ಹೊಸ ಗ್ರಾಹಕರೊಂದಿಗೆ ವ್ಯವಹರಿಸುತ್ತಾರೆ. ಸುಮಾರು ಎಂಟು ಗಂಟೆಗಳ ಸಾಂದರ್ಭಿಕ ಮಾರಾಟದ ನಂತರ, ಮನುಷ್ಯ ಮತ್ತು ಪ್ರಾಣಿ ಇಬ್ಬರೂ ಸಂಜೆ 5 ಗಂಟೆಗೆ ತಮ್ಮ ಕೆಲಸವನ್ನು ನಿಲ್ಲಿಸುತ್ತಾರೆ, ಆ ಹೊತ್ತಿಗೆ ಅವರು 300-400 ರೂಗಳನ್ನು ಗಳಿಸಿರುತ್ತಾರೆಂದು ಆರಿಫ್ ವಿವರಿಸುತ್ತಾರೆ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ಅವರು ಬಯಸಲಿಲ್ಲ ಮತ್ತು ಬೇಗನೆ ಅಲ್ಲಿಂದ ಮುಂದೆ ಹೋದರು ಏಕೆಂದರೆ ಇದು ಅವರ ವ್ಯಾಪಾರ ಸಮಯವಾಗಿತ್ತು ಮತ್ತು ಶೇರು ಕೂಡಾ ಯಾಕೋ ಗಡಿಬಿಡಿ ಮಾಡುತ್ತಿದ್ದ.
ರಾಜಸ್ಥಾನದಲ್ಲಿ ಒಂದು ಕಾಲದಲ್ಲಿ ಇಂತಹ ಅನೇಕ ಶೇರುಗಳು ಇದ್ದವು, ವಿಶೇಷವಾಗಿ ಬಾರ್ಮರ್, ಬಿಕಾನೇರ್, ಚುರೂ ಮತ್ತು ಜೈಸಲ್ಮೇರ್ ಜಿಲ್ಲೆಗಳಲ್ಲಿ. ಇಂದಿಗೂ, ಭಾರತದ ಒಟ್ಟು ಕತ್ತೆ ಗಳ ಸಂಖ್ಯೆಯ ಐದನೇ ಒಂದು ಭಾಗ ಈ ರಾಜ್ಯದಲ್ಲಿದೆ. ಆದರೆ 20ನೇ ಜಾನುವಾರು ಗಣತಿ (2019) ಹೇಳುವ ಪ್ರಕಾರ ಈ ಪ್ರಭೇದ ವೇಗವಾಗಿ ಕಣ್ಮರೆಯಾಗುತ್ತಿದೆ. ಭಾರತದಾದ್ಯಂತ, ಅವುಗಳ ಸಂಖ್ಯೆ 2012 ಜಾನುವಾರು ಗಣತಿಯಲ್ಲಿ 330,000 ಇದ್ದರೆ 2019ರಲ್ಲಿ ಅದು 120,000ಕ್ಕೆ ಇಳಿದಿದೆ, ಇದು ಶೇಕಡಾ 62ರಷ್ಟು ಕುಸಿತ ಕಂಡಿದೆ. ರಾಜಸ್ಥಾನದಲ್ಲಿ ಆ ಕುಸಿತದ ಪ್ರಮಾಣ ಶೇಕಡಾ 72ರಷ್ಟಿತ್ತು - ಅಲ್ಲಿ ಕತ್ತೆಗಳ ಸಂಖ್ಯೆ 81,000ದಿಂದ 23,000ಕ್ಕೆ ಇಳಿದಿದೆ.



