ಸೈಕಲ್ ಸವಾರಿ ಮೂಲಕ ಸಾಮಾಜಿಕ ಆಂದೋಲನ ನಡೆಸಬಹುದೆ? ಬಹುಶಃ ನಿಮಗೆ ಇದು ದೂರದ ಮಾತು ಎನ್ನಿಸಬಹುದು. ಆದರೆ ಅಷ್ಟೊಂದು ದೂರವಲ್ಲ- ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಇತ್ತೀಚೆಗೆ ವಯಸ್ಕರ ಶಿಕ್ಷಣದ ಮೂಲಕ ಅಕ್ಷರ ಕಲಿತ ಹತ್ತಾರು ಸಾವಿರ ಹಳ್ಳಿಯ ಹೆಣ್ಣುಮಕ್ಕಳಿಗೂ ಇದು ದೂರವಲ್ಲ. ಕೆಲವೊಮ್ಮೆ ಹೊಸ ಬಗೆಯ, ತಮ್ಮ ಹಿಂದುಳಿದಿರುವಿಕೆಯ ಜಾಡ್ಯದ ನಡುನರಕ್ಕೆ ಗುದ್ದು ಕೊಡುವಂತಹ, ಪ್ರತಿಭಟನಾತ್ಮಕವೂ ಆದಂತಹ, ಅವರನ್ನು ಬಂಧನದ ಸಂಕೋಲೆಗಳನ್ನು ತುಂಡರಿಸುವಂತಹ ದಾರಿಗಳನ್ನು ಜನರು ಹುಡುಕುತ್ತಾರೆ .
ಭಾರತದ ಅತಿ ಬಡಜಿಲ್ಲೆಗಳಲ್ಲೊಂದಾದ ಈ ಜಿಲ್ಲೆಯಲ್ಲಿ, ಗ್ರಾಮೀಣ ಮಹಿಳೆಯರಿಗೆ ಸೈಕಲ್ ಸವಾರಿಯೇ ಕ್ರಾಂತಿಯ ದಾರಿಯಾಗಿ ತೋರಿದೆ. ಕಳೆದ 18 ತಿಂಗಳುಗಳಲ್ಲಿ, 100,000ಕ್ಕಿಂತ ಹೆಚ್ಚು ಹಳ್ಳಿಯ ಮಹಿಳೆಯರು, ಅದರಲ್ಲೂ ಬಹುಪಾಲು ವಯಸ್ಕ ನವಸಾಕ್ಷರರು, ಬೈಸಿಕಲ್ ಸವಾರಿಯನ್ನು ಸ್ವಾತಂತ್ರ್ಯ, ಬಿಡುಗಡೆ ಮತ್ತು ಪ್ರಗತಿಯ ಸಂಕೇತವಾಗಿ ನೋಡುತ್ತಿದ್ದಾರೆ. ಇದರಲ್ಲಿ 10 ವರ್ಷಕ್ಕಿಂತ ಚಿಕ್ಕ ಹುಡುಗಿಯರನ್ನು ಹೊರತುಪಡಿಸಿದರೆ, ಇಡೀ ಜಿಲ್ಲೆಯ ಗ್ರಾಮೀಣ ಮಹಿಳೆಯರ ಕಾಲುಭಾಗದಷ್ಟು ಜನರು ಸೈಕಲ್ ಸವಾರಿ ಕಲಿತುಕೊಂಡಿದ್ದಾರೆ. ಅದರಲ್ಲಿ 70,000ಕ್ಕೂ ಹೆಚ್ಚು ಮಹಿಳೆಯರು ತಮ್ಮ ಈ ಹೊಸ ಕೌಶಲಗಳನ್ನು ಹೆಮ್ಮೆಯಿಂದ ಪ್ರದರ್ಶಿಸಲು ಸಾರ್ವಜನಿಕ ಪ್ರದರ್ಶನ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಮತ್ತು ತರಬೇತಿ ಶಿಬಿರಗಳು ಮತ್ತು ಕಲಿಯುವ ಹಂಬಲ ಇನ್ನೂ ಮುಂದುವರಿಯುತ್ತಲೇ ಇದೆ.
ಪುದುಕೋಟೆಯ ಒಳಗಿನ ಕಡುಹಳ್ಳಿಗಳಲ್ಲಿ, ಅತಿ ಸಂಪ್ರದಾಯವಾದಿ ಹಿನ್ನೆಲೆಯ ಮುಸ್ಲಿಂ ಹುಡುಗಿಯರು ತಮ್ಮ ಸೈಕಲ್ಲುಗಳ ಮೇಲೆ ರಸ್ತೆಗಳಲ್ಲಿ ಬಾಣದಂತೆ ಸುಯ್ಯನೆ ಬರುತ್ತಾರೆ. ಸೈಕಲ್ಲಿಗಾಗಿ ಕೆಲವರು ಬುರ್ಖಾ ಹಾಕುವುದನ್ನು ಬಿಟ್ಟಿರಬಹುದು. ಸೈಕಲ್ ಮೇಲೆ ಸವಾರಿ ಮಾಡುತ್ತಾ ಬಂದ ಮುಸ್ಲಿಂ ಹುಡುಗಿ, ಜಮೀಲಾ ಬೀಬಿ ನನಗೆ ಹೇಳಿದ್ದಿಷ್ಟು: “ಇದು ನನ್ನ ಹಕ್ಕು. ನಾವೀಗ ಎಲ್ಲಿಗೆ ಬೇಕಾದರೂ ಹೋಗಬಲ್ಲೆವು. ನಾನೀಗ ಬಸ್ಸಿಗಾಗಿ ಕಾಯಬೇಕಿಲ್ಲ. ನಾನು ಸೈಕಲ್ ಓಡಿಸಲು ಶುರುಮಾಡಿದಾಗ ಜನ ನನ್ನ ಬಗ್ಗೆ ಏನೇನೆಲ್ಲಾ ಮಾತಾಡಿಕೊಂಡರು ಅಂತ ನನಗೆ ಗೊತ್ತು, ಆದರೆ ನಾನು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ”
ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಫಾತಿಮಾರಿಗೆ ಎಷ್ಟರ ಮಟ್ಟಿಗೆ ಸೈಕಲ್ ಓಡಿಸುವ ಗೀಳೆಂದರೆ, ಪ್ರತಿದಿನ ಸಂಜೆ ಅರ್ಧಗಂಟೆಗೆ ಸೈಕಲನ್ನು ಬಾಡಿಗೆಗೆ ತೆಗೆದುಕೊಂಡು ಓಡಿಸುತ್ತಾರೆ. (ಹೊಸ ಸೈಕಲ್ಲಿನ ಬೆಲೆ ರೂ. 1200 ಕ್ಕಿಂತ ತುಸು ಹೆಚ್ಚಿರುವುದರಿಂದ ಅವರಿಗಿನ್ನೂ ಸ್ವಂತಕ್ಕೆ ಖರೀದಿಸಲು ಸಾಧ್ಯವಾಗಿಲ್ಲ.) “ಸೈಕಲ್ ಸವಾರಿಯಲ್ಲಿ ನಮ್ಮ ಸ್ವಾತಂತ್ರ್ಯವಿದೆ. ಈಗ ನಾವು ಯಾರನ್ನೂ ಅವಲಂಬಿಸಬೇಕಿಲ್ಲ. ಇನ್ನು ನನಗಿದನ್ನು ಕೈಬಿಡಲು ಸಾಧ್ಯವೂ ಇಲ್ಲ” ಎಂದು ಹೇಳಿದರು. ಜಮೀಲಾ, ಫಾತಿಮಾ ಮತ್ತವರ ಸ್ನೇಹಿತೆ ಅವಕನ್ನಿ, 20ರ ಹರೆಯದ ಇವರು, ಅವರ ಸಮುದಾಯದ ಲೆಕ್ಕವಿಲ್ಲದಷ್ಟು ಯುವತಿಯರಿಗೆ ಸೈಕಲ್ ಸವಾರಿಯ ತರಬೇತಿ ನೀಡಿದ್ದಾರೆ.





