ತನ್ನ ಬದುಕಿನ 82 ವರ್ಷಗಳನ್ನು ಕಳೆದಿರುವ ಆರಿಫಾ ಈಗಾಗಲೇ ಬದುಕಿನ ಹಲವು ಮಜಲುಗಳನ್ನು ನೋಡಿದ್ದಾರೆ. ಅವರ ಆಧಾರ್ ಕಾರ್ಡ್ ಅವರು ಜನವರಿ 1, 1938ರಂದು ಜನಿಸಿದರೆಂದು ಹೇಳುತ್ತದೆಯಾದರೂ ಆರಿಫಾರಿಗೆ ಆ ಕುರಿತು ಖಾತರಿಯಿಲ್ಲ. ಅವರಿಗೆ ನೆನಪಿರುವುದೆಂದರೆ ತನಗೆ ಹದಿನಾರು ವರ್ಷವಿದ್ದಾಗ 20 ವರ್ಷದ ರಿಜ್ವಾನ್ ಖಾನ್‌ಗೆ ಎರಡನೇ ಹೆಂಡತಿಯಾಗಿ ಈ ಹಳ್ಳಿಗೆ ಬಂದಿದ್ದು. ಅವರಿರುವ ಊರಿನ ಹೆಸರು ಬಿವಾನ್. ಇದು ಹರ್ಯಾಣದ ನುಹ್ ಜಿಲ್ಲೆಯಲ್ಲಿದೆ. "ನನ್ನ ಅಕ್ಕ [ರಿಜ್ವಾನ್ ಅವರ ಮೊದಲ ಹೆಂಡತಿ] ಮತ್ತು ಅವರ ಆರು ಮಕ್ಕಳು ದೇಶ ವಿಭಜನೆಯ ಸಮಯದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ತೀರಿಕೊಂಡರು. ನಂತರ ನನ್ನ ತಾಯಿ ರಿಜ್ವಾನ್ ಜೊತೆ ಮದುವೆ ಮಾಡಿಸಿದರು", ಎಂದು ಆರಿಫಾ ನೆನಪಿಸಿಕೊಳ್ಳುತ್ತಾರೆ (ಇದು ಅವರ ನಿಜವಾದ ಹೆಸರಲ್ಲ).
ಮಿಯೋ ಮುಸ್ಲಿಮ್ ಸಮುದಾಯವನ್ನು ಪಾಕಿಸ್ತಾನಕ್ಕೆ ಹೋಗದಂತೆ ಕೇಳಿಕೊಳ್ಳಲು ಮಹಾತ್ಮ ಗಾಂಧಿ ಮೇವತ್‌ನ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ಸಮಯದ ಮಸುಕಾದ ನೆನಪುಗಳೂ ಅವರಲ್ಲಿವೆ. ಪ್ರತಿ ಡಿಸೆಂಬರ್ 19 ದಿನಾಂಕವನ್ನು, ಹರಿಯಾಣದ ಮಿಯೋ ಮುಸ್ಲಿಮರು ಗಾಂಧಿಯವರು ನುಹ್‌ನ ಘಾಸೆರಾ ಗ್ರಾಮಕ್ಕೆ ಭೇಟಿಕೊಟ್ಟ ದಿನವನ್ನಾಗಿ ಆಚರಿಸುತ್ತಾರೆ. (ನುಹ್ ಜಿಲ್ಲೆಯನ್ನು 2006ರವರೆಗೆ ಮೇವತ್ ಎಂದು ಕರೆಯಲಾಗುತ್ತಿತ್ತು).
ಆರಿಫಾ ಅವರ ತಾಯಿ ಅವರನ್ನು ಜೊತೆಯಲ್ಲಿ ಕುಳ್ಳಿರಿಸಿಕೊಂಡು ರಿಜ್ವಾನ್ ಅವರನ್ನು ಯಾಕೆ ಮದುವೆಯಾಗಬೇಕೆಂದು ವಿವರಿಸಿದ ನೆನಪು ಅವರೊಳಗೆ ಹೆಚ್ಚು ಸ್ಪಷ್ಟವಾಗಿದೆ. "ಅವನ ಬಳಿ ಏನೂ ಉಳಿದಿಲ್ಲ ಎಂದು ತಾಯಿ ನನ್ನನ್ನು ಅವನಿಗೆ ಕೊಟ್ಟಿದ್ದರು". ತನ್ನ ಸ್ವಂತ ಹಳ್ಳಿಯಾದ ರೆಥೋರಾದಿಂದ ಸುಮಾರು 15 ಕಿಲೋಮೀಟರ್ ದೂರದ ಬಿವಾನ್ ಹೇಗೆ ತನ್ನ ಮನೆಯಾಯಿತು ಎನ್ನವುದನ್ನು ಆರಿಫಾ ಹೀಗೆ ವಿವರಿಸುತ್ತಾರೆ. ದೇಶದಲ್ಲೇ ಅತಿಯಾದ ದುರ್ಬಲ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ಜಿಲ್ಲೆಯಲ್ಲೇ ಇವೆರಡೂ ಹಳ್ಳಿಗಳಿವೆ.
ಫಿರೋಜ್‌ಪುರ ಜಿರ್ಕಾ ಬ್ಲಾಕ್‌ನಲ್ಲಿರುವ ಬಿವಾನ್ ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಹರಿಯಾಣ ಮತ್ತು ರಾಜಸ್ಥಾನದ ಗಡಿಯಲ್ಲಿರುವ ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿದೆ. ದೆಹಲಿಯಿಂದ ನುಹ್‌ಗೆ ಹೋಗುವ ರಸ್ತೆಯು ದಕ್ಷಿಣ ಹರಿಯಾಣದ ಗುರುಗ್ರಾಮ್ ಮೂಲಕ ಹಾದುಹೋಗುತ್ತದೆ. ಇದು ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ಗುರುಗ್ರಾಮ್ ತಲಾದಾಯದ ಸೂಚ್ಯಂಕದಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮತ್ತು ಈ ದಾರಿಯು ನಿಮ್ಮನ್ನು ದೇಶದಲ್ಲೇ ಅತಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿರುವ ಜಿಲ್ಲೆಗೆ ಕರೆತರುತ್ತದೆ. ಇಲ್ಲಿನ ಹಸಿರು ಹೊಲಗಳು, ಶುಷ್ಕ ಬೆಟ್ಟಗಳು, ಕಳಪೆ ಮೂಲಸೌಕರ್ಯಗಳು ಮತ್ತು ನೀರಿನ ಕೊರತೆಯು ಆರಿಫಾರಂತಹ ಅನೇಕರ ಬದುಕಿನ ಗುರುತಾಗಿ ಕಾಣುತ್ತವೆ.
ಮಿಯೋ ಮುಸ್ಲಿಂ ಸಮುದಾಯವು ಹರಿಯಾಣದ ಈ ಭಾಗ ಮತ್ತು ನೆರೆಯ ರಾಜಸ್ಥಾನದ ಕೆಲವು ಭಾಗಗಳಲ್ಲಿ ವಾಸಿಸುತ್ತಿದೆ. ನುಹ್ ಜಿಲ್ಲೆಯ ಜನಸಂಖ್ಯೆಯ ಶೇಕಡಾ 79.2ರಷ್ಟು ಮುಸ್ಲಿಮರಿದ್ದಾರೆ (ಜನಗಣತಿ 2011).
1970ರ ದಶಕದಲ್ಲಿ, ಆರಿಫಾ ಅವರ ಪತಿ ರಿಜ್ವಾನ್ ಬಿವಾನ್‌ನಿಂದ ದೂರದಲ್ಲಿರುವ ಮರಳು, ಕಲ್ಲು ಮತ್ತು ಸಿಲಿಕಾ ಗಣಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಆರಿಫಾರ ಪ್ರಪಂಚವು ಬೆಟ್ಟಗಳಿಂದ ಸುತ್ತುವರಿದಿತ್ತು. ಅವರ ದಿನದ ಅತ್ಯಂತ ಪ್ರಮುಖ ಕೆಲಸವೆಂದರೆ ನೀರು ಹೊಂದಿಸುವುದಾಗಿತ್ತು. 22 ವರ್ಷಗಳ ಹಿಂದೆ ರಿಜ್ವಾನ್ ನಿಧನರಾದಾಗ ಆರಿಫಾ ತನ್ನ ಮತ್ತು ತನ್ನ ಎಂಟು ಮಕ್ಕಳ ಹೊಟ್ಟೆ ಹೊರೆಯುವ ಸಲುವಾಗಿ ಹೊಲಗಳಲ್ಲಿ ದುಡಿಯಲು ಪ್ರಾರಂಭಿಸಿದರು. ದಿನಕ್ಕೆ ಹತ್ತರಿಂದ ಇಪ್ಪತ್ತು ರೂಪಾಯಿ ಸಂಪಾದಿಸುವ ಅವರು "ನಮ್ಮ ಜನ ನಿಮ್ಮಿಂದ ಸಾಧ್ಯ ಇರೋವಷ್ಟು ಮಕ್ಕಳನ್ನು ಪಡೆಯಿರಿ, ಅಲ್ಲಾಹ್ ಅವರಿಗೆ ಎಲ್ಲವನ್ನೂ ಒದಗಿಸುತ್ತಾನೆ ಎನ್ನುತ್ತಾರೆ", ಎಂದು ಹೇಳುತ್ತಾರೆ.









