“ಸುಟ್ಟು ಹಾಕಿ!”
ಮೋಹನ್ ಬಹದ್ದೂರ್ ಬುಧಾ ಅವರು ಮಾರ್ಚ್ 31, 2023ರ ರಾತ್ರಿಯ ಈ ಮಾತುಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ 113 ವರ್ಷದ ಮದರಸಾ ಅಜೀಜಿಯಾ ಸುಟ್ಟು ಕರಕಲಾಗಿತ್ತು.
“ಗ್ರಂಥಾಲಯದ ಮುಖ್ಯ ಬಾಗಿಲನ್ನು ಮುರಿದ ನಂತರ ಜನರು ಕಿರುಚುತ್ತಾ ಬರುತ್ತಿರುವುದನ್ನು ನಾನು ಕೇಳಿದೆ. ನಾನು ಹೊರಗೆ ಬರುವಷ್ಟರಲ್ಲಿ ಅವರು ಗ್ರಂಥಾಲಯಕ್ಕೆ ನುಗ್ಗಿ ಅಲ್ಲಿ ಧ್ವಂಸ ಮಾಡಲು ಆರಂಭಿಸಿದ್ದರು'' ಎಂದು ಭದ್ರತಾ ಸಿಬ್ಬಂದಿ 25ರ ಹರೆಯದ ಬುಧಾ ಹೇಳುತ್ತಾರೆ.
ಆ ಜನರ ಕೈಯಲ್ಲಿ "ಕತ್ತಿಗಳು ಮತ್ತು ಈಟಿಗಳು ಇದ್ದವು" ಎಂದು ಅವರು ಹೇಳುತ್ತಾರೆ. ಇಟ್ಟಿಗೆಗಳು ಕೂಡಾ ಇದ್ದವು. ಆ ಜನರು, “ಜಲಾದೋ, ಮಾರ್ ದೋ” ['ಸುಡು, ಕೊಲ್ಲು'] ಎಂದು ಕೂಗುತ್ತಿದ್ದರು.
ಕಪಾಟಿನಲ್ಲಿ 250 ಕಲ್ಮಿ [ಕೈಬರಹದ] ಪುಸ್ತಕಗಳಿದ್ದವು. ಇದು ತತ್ವಶಾಸ್ತ್ರ, ಔಷಧ ಮತ್ತು ವಾಕ್ಚಾತುರ್ಯದ ಪುಸ್ತಕಗಳನ್ನು ಒಳಗೊಂಡಿತ್ತು
ಬುಧಾ ನೇಪಾಳದಿಂದ ಇಲ್ಲಿಗೆ ವಲಸೆ ಬಂದಿದ್ದಾನೆ. ಕಳೆದ ಒಂದೂವರೆ ವರ್ಷಗಳಿಂದ ಬಿಹಾರ ಷರೀಫ್‌ನ ಮದರಸಾ ಅಜೀಜಿಯಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಲಭೆ ನಿಲ್ಲಿಸುವಂತೆ ಕೇಳಿದಾಗ, ಅವರು ನನ್ನ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. "ನಾಲಾ ನೇಪಾಳಿ, ಭಾಗೋ ಯಂಹಾ ಸೇ, ನಹೀ ತೊ ಮಾರ್ ದೇಂಗೆ [ನೇಪಾಳಿಯವನೇ ಸುಮ್ನೆ ಓಡಿ ಹೋಗು ಇಲ್ಲಿಂದ ಇಲ್ಲದಿದ್ದರೆ ಕೊಂದು ಹಾಕುತ್ತೇವೆ]" ಎಂದು ಹೊಡೆದರು.
ಮಾರ್ಚ್ 31, 2023ರಂದು ನಗರದಲ್ಲಿ ನಡೆದ ರಾಮನವಮಿ ಮೆರವಣಿಗೆಯಲ್ಲಿ ಗಲಭೆಕೋರರು ಇಸ್ಲಾಂ ಧರ್ಮವನ್ನು ಕಲಿಸುವ ಮತ್ತು ಗ್ರಂಥಾಲಯವನ್ನು ಹೊಂದಿದ್ದ ಮದರಸಾಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ಅವರು ವಿವರಿಸುತ್ತಾರೆ.
"ಲೈಬ್ರರಿಯಲ್ಲಿ ಏನೂ ಉಳಿದಿಲ್ಲ" ಎಂದು ಬುಧಾ ಹೇಳುತ್ತಾರೆ. “ಈಗ ಅವರಿಗೆ ಭದ್ರತಾ ಸಿಬ್ಬಂದಿ ಅಗತ್ಯವಿಲ್ಲ. ನಾನು ನಿರುದ್ಯೋಗಿಯಾಗಿದ್ದೇನೆ."
ಪರಿ 2023ರ ಏಪ್ರಿಲ್‌ನಲ್ಲಿ ಮದರಸಾಕ್ಕೆ ಭೇಟಿ ನೀಡಿತ್ತು. ಗಲಭೆಕೋರರು ಈ ಮದರಸಾ ಮಾತ್ರವಲ್ಲದೆ ಬಿಹಾರದ ನಳಂದ ಜಿಲ್ಲೆಯ ಪ್ರಧಾನ ಕಛೇರಿಯಾದ ಬಿಹಾರಶರೀಫ್ ಗ್ರಾಮದ ಅನೇಕ ಪೂಜಾ ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ಆರಂಭದಲ್ಲಿ ನಗರದಲ್ಲಿ ಸೆಕ್ಷನ್ 144 ಅಡಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಅದರ ನಂತರ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಒಂದು ವಾರದ ನಂತರ ಎರಡನ್ನೂ ಹಿಂಪಡೆಯಲಾಯಿತು.
ಅದೇ ಮದರಸಾದಿಂದ ತೇರ್ಗಡೆಯಾದ ಸಯೀದ್ ಜಮಾಲ್ ಅಲ್ಲಿ ನಿಶ್ಚೇಷ್ಟಿತನಾಗಿ ನಡೆಯುತ್ತಿದ್ದರು. "ಈ ಲೈಬ್ರರಿಯಲ್ಲಿ ಹಲವು ಪುಸ್ತಕಗಳಿದ್ದವು, ಆದರೆ ನನಗೆ ಅವೆಲ್ಲವನ್ನೂ ಓದಲಾಗಲಿಲ್ಲ" ಎಂದು ಅವರು ಹೇಳುತ್ತಾರೆ. 1970ರಲ್ಲಿ, ಅವರು ಮೂರನೇ ತರಗತಿಯಲ್ಲಿದ್ದಾಗ ಈ ಮದರಸಾವನ್ನು ಪ್ರವೇಶಿಸಿದರು ಮತ್ತು ಅಲಿಮ್ (ಪದವಿ) ಪಡೆದರು.
“ಏನಾದರೂ ಉಳಿದಿದೆಯೇ ಎಂದು ನೋಡಲು ಬಂದಿದ್ದೇನೆ” ಎಂದು ಹಸನ್ ಹೇಳುತ್ತಾರೆ.
70ರ ಹರೆಯದ ಹಸನ್ ಸುತ್ತಲೂ ಕಣ್ಣು ಹಾಯಿಸಿದಾಗ ಒಮ್ಮೆ ಓದಿದ ಸಭಾಂಗಣ ಸಂಪೂರ್ಣ ನಿರ್ಜನವಾಗಿ ಹೋಗಿರುವುದು ಸ್ಪಷ್ಟವಾಯಿತು. ಎಲ್ಲೆಂದರಲ್ಲಿ ಸಂಪೂರ್ಣ ಸುಟ್ಟ ಕಪ್ಪು ಕಾಗದಗಳು ಮತ್ತು ಭಾಗಶಃ ಸುಟ್ಟ ಪುಸ್ತಕಗಳ ರಾಶಿ ಮಾತ್ರ ಇತ್ತು. ವಿದ್ಯಾರ್ಥಿಗಳು, ಶಿಕ್ಷಕರು ಕುಳಿತು ಅಧ್ಯಯನ, ಸಂಶೋಧನೆ ನಡೆಸುತ್ತಿದ್ದ ಗ್ರಂಥಾಲಯದ ಗೋಡೆಗಳೆಲ್ಲ ಹೊಗೆಯಿಂದ ಕಪ್ಪಾಗಿದ್ದವು. ಅಲ್ಲೊಂದು ಇಲ್ಲೊಂದು ಬಿರುಕು ಕಾಣಿಸಿಕೊಂಡಿತ್ತು. ಸುಟ್ಟ ಪುಸ್ತಕಗಳ ವಾಸನೆ ಗಾಳಿಯಲ್ಲಿ ತುಂಬಿತ್ತು. ಪುಸ್ತಕಗಳನ್ನು ಇಟ್ಟಿದ್ದ ಪುರಾತನ ಮರದ ಕಪಾಟುಗಳು ಕೂಡ ಈಗ ಸುಟ್ಟುಹೋಗಿವೆ.
113 ವರ್ಷದಷ್ಟು ಹಳೆಯದಾದ ಮದ್ರಸಾ ಅಜೀಜಿಯಾದಲ್ಲಿ ಸುಮಾರು 4,500 ಪುಸ್ತಕಗಳಿದ್ದವು, ಅದರಲ್ಲಿ 300 ಖುರಾನ್ ಮತ್ತು ಹದೀಸ್‌ನ ಸಂಪೂರ್ಣ ಕೈಬರಹದ ಪುಸ್ತಕಗಳಾಗಿದ್ದವು, ಇದನ್ನು ಇಸ್ಲಾಂಗೆ ಪವಿತ್ರವೆಂದು ಪರಿಗಣಿಸಲಾಗಿದೆ. "ಈ ಕಪಾಟುಗಳಲ್ಲಿ 250 ಕಲಾಂ [ಕೈಬರಹ] ಪುಸ್ತಕಗಳಿದ್ದವು" ಎಂದು ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಶಾಕಿರ್ ಖಾಸ್ಮಿ ಹೇಳುತ್ತಾರೆ. ಇದು ತತ್ವಶಾಸ್ತ್ರ, ವಾಕ್ಚಾತುರ್ಯ ಮತ್ತು ವೈದ್ಯಕೀಯ ಪುಸ್ತಕಗಳನ್ನು ಒಳಗೊಂಡಿತ್ತು. ಅದಲ್ಲದೆ, 1910ರಿಂದ ಇಲ್ಲಿ ಓದಿದ ಮಕ್ಕಳ ದಾಖಲಾತಿಗಳು, ಅಂಕಪಟ್ಟಿಗಳು, ಪ್ರಮಾಣಪತ್ರಗಳು ಎಲ್ಲವೂ ಈ ಗ್ರಂಥಾಲಯದಲ್ಲಿದ್ದವು.
ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾ ಖಾಸ್ಮಿ ಹೇಳುತ್ತಾರೆ, “ನಾನು ಸಿಟಿ ಪ್ಯಾಲೇಸ್ ಹೋಟೆಲ್ ಬಳಿ ಬರುತ್ತಿದ್ದಂತೆ ನಗರದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ನನಗೆ ಅರ್ಥವಾಯಿತು. ಎಲ್ಲೆಂದರಲ್ಲಿ ಬರೀ ಹೊಗೆ. ಪ್ರಸ್ತುತ [ರಾಜಕೀಯ] ಪರಿಸ್ಥಿತಿಯಿಂದಾಗಿ ನಾವು ಮನೆಯಿಂದ ಹೊರಬರುವಂತಿಲ್ಲ.”
ಮರುದಿನ ಬೆಳಿಗ್ಗೆಯಷ್ಟೇ ಪ್ರಿನ್ಸಿಪಾಲ್ ಖಾಸ್ಮಿಯವರಿಗೆ ಮದರಸಾವನ್ನು ಪ್ರವೇಶಿಸಲು ಸಾಧ್ಯವಾಯಿತು. ಮೂರು ಲಕ್ಷ ಜನಸಂಖ್ಯೆಯ ಈ ನಗರದಲ್ಲಿ ವಿದ್ಯುತ್ ಇರಲಿಲ್ಲ. “ಬೆಳಿಗ್ಗೆ 4 ಗಂಟೆಗೆ ನಾನೊಬ್ಬನೇ ಇಲ್ಲಿಗೆ ಬಂದೆ. ಕೈಯಲ್ಲಿದ್ದ ಮೊಬೈಲ್ ಫೋನಿನ ಬೆಳಕಿನಲ್ಲಿ ನೋಡುತ್ತಿದ್ದೆ. ಇದನ್ನೆಲ್ಲ ನೋಡಿ ನಾನು ಆಘಾತಕ್ಕೊಳಗಾಗಿದ್ದೆ.”
*****
ಮದ್ರಸಾ ಅಜೀಜಿಯಾ ಪ್ರವೇಶದ್ವಾರದ ಬಳಿ ಆರಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳು ಮೀನು ಮಾರಾಟದಲ್ಲಿ ನಿರತರಾಗಿದ್ದಾರೆ. ಈ ಪ್ರದೇಶವು ಗ್ರಾಹಕರು ಮತ್ತು ಅಂಗಡಿಯವರ ಧ್ವನಿಗಳಿಂದ ಕಿಕ್ಕಿರಿದಿದೆ. ವಾಹನಗಳು ರಸ್ತೆಯ ಮೂಲಕ ಹಾದುಹೋಗುತ್ತಿವೆ; ಇಲ್ಲಿ ಎಲ್ಲವೂ ಸರಿಯಿರುವಂತೆ ಕಾಣುತ್ತದೆ.
“ಮದರಸಾದ ಪಶ್ಚಿಮಕ್ಕೆ ದೇವಸ್ಥಾನ ಮತ್ತು ಪೂರ್ವಕ್ಕೆ ಮಸೀದಿ ಇದೆ. ಗಂಗಾ-ಜಮುನಿ ತಹಜೀಬ್ [ಸೌಹಾರ್ದ ಪರಂಪರೆ] ಏನೆಂಬುದಕ್ಕೆ ಇದು ಅತ್ಯುತ್ತಮ ಅಲಾಮತ್ [ಉತ್ತಮ ಉದಾಹರಣೆ],” ಎಂದು ಖಾಸ್ಮಿ ಹೇಳುತ್ತಾರೆ.
"ಅವರು ನಮ್ಮ ಆಜಾನ್ [ಪ್ರಾರ್ಥನೆ]ಯಿಂದ ತೊಂದರೆಗೀಡಾಗಲಿಲ್ಲ ಅಥವಾ ಅವರ ಭಜನೆಗಳಿಂದ [ಭಕ್ತಿಗೀತೆಗಳಿಂದ] ನಾವು ಎಂದಿಗೂ ತೊಂದರೆಗೀಡಾಗಲಿಲ್ಲ. ದಂಗೆಕೋರರು ನಮ್ಮ ತೆಹಜೀಬ್ [ಸಂಸ್ಕೃತಿ]ಯನ್ನು ಹಾಳುಮಾಡುತ್ತಾರೆ ಎಂದು ನಾನು ಊಹಿಸಿರಲಿಲ್ಲ. ವಿಷಾದವೆನ್ನಿಸುತ್ತದೆ ಇದನ್ನು ನೋಡುವಾಗ."
ಮರುದಿನವೂ ಗಲಭೆಕೋರರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಇತರ ಕೊಠಡಿಗಳಿಗೆ ಹಾನಿ ಮಾಡಲು ಪ್ರಯತ್ನಿಸಿದರು ಎಂದು ಶಾಲೆಯ ಕೆಲವರು ಹೇಳಿದರು. ಕನಿಷ್ಠ ಹನ್ನೆರಡು ಅಂಗಡಿಗಳು ಮತ್ತು ಗೋಡೌನ್‌ಗಳು ಹಾನಿಗೊಳಗಾಗಿವೆ ಮತ್ತು ಸರಕುಗಳನ್ನು ಲೂಟಿ ಮಾಡಲಾಗಿದೆ. ಇಲ್ಲಿ ಸ್ಥಳೀಯರು ದಾಖಲಿಸಿರುವ ಅನೇಕ ಎಫ್‌ಐಆರ್‌ಗಳ ಪ್ರತಿಗಳನ್ನು ಜನರು ನಮಗೆ ತೋರಿಸುತ್ತಿದ್ದರು.
ಬಿಹಾರ ಷರೀಫ್ ಪ್ರದೇಶದಲ್ಲಿ ಧಾರ್ಮಿಕ ಗಲಭೆಗಳು ಮತ್ತು ಹಿಂಸಾಚಾರಗಳು ಹೊಸದಲ್ಲ. 1981ರಲ್ಲಿ, ಇಲ್ಲಿ ದೊಡ್ಡ ಧಾರ್ಮಿಕ ಗಲಭೆಗಳು ನಡೆದವು, ಆದರೆ ಆಗಲೂ ಯಾರೂ ಈ ಗ್ರಂಥಾಲಯ ಮತ್ತು ಮದರಸಾವನ್ನು ಮುಟ್ಟಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
*****
1896 ರಲ್ಲಿ ಬೀಬಿ ಸೋಘ್ರಾ ಅವರು ಪ್ರಾರಂಭಿಸಿದ ಈ ಮದರಸಾದಲ್ಲಿ ಒಟ್ಟು 500 ಹುಡುಗರು ಮತ್ತು ಹುಡುಗಿಯರು ಅಧ್ಯಯನ ಮಾಡುತ್ತಾರೆ. ಇಲ್ಲಿ ಪ್ರವೇಶ ಪಡೆದ ನಂತರ ಸ್ನಾತಕೋತ್ತರ ಪದವಿಯವರೆಗೂ ಇಲ್ಲಿ ಓದಬಹುದು. ಬಿಹಾರ ರಾಜ್ಯ ಪರೀಕ್ಷಾ ನಿಗಮಕ್ಕೆ ಸರಿಸಮಾನಾದ ಶಿಕ್ಷಣ ಇಲ್ಲಿ ಲಭ್ಯವಿದೆ.
ಬೀಬಿ ಸೊಘರ್ ತನ್ನ ಪತಿ, ಈ ಪ್ರದೇಶದ ಜಮೀನ್ದಾರ ಅಬ್ದುಲ್ ಅಜೀಜ್ ಅವರ ಮರಣದ ನಂತರ ಈ ಮದರಸಾವನ್ನು ಸ್ಥಾಪಿಸಿದರು. "ಅವರು ಬೀಬಿ ಸೋಘ್ರಾ ವಕ್ಫ್ ಎಸ್ಟೇಟನ್ನು ಸಹ ಸ್ಥಾಪಿಸಿದರು. ಅದರಿಂದ ಬರುವ ಆದಾಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಅದರ ಮೂಲಕ ಶಿಕ್ಷಣ ಪಡೆಯಲು ಮದರಸಾಗಳು, ಆಸ್ಪತ್ರೆಗಳು, ಮಸೀದಿಗಳ ನಿರ್ವಹಣಾ ವೆಚ್ಚ, ಪಿಂಚಣಿ, ಅನ್ನದಾನ ಮತ್ತು ಇತರ ಅನೇಕ ಕೆಲಸಗಳನ್ನು ಮಾಡಲಾಯಿತು,” ಎಂದು ಹೆರಿಟೇಜ್ ಟೈಮ್ಸ್ ಸಂಸ್ಥಾಪಕ ಉಮರ್ ಅಶ್ರಫ್ ಹೇಳುತ್ತಾರೆ.
2019ರಲ್ಲಿ ಯುಎನ್‌ಎಫ್‌ಎ, ಬಿಹಾರ ಮದ್ರಸಾ ಮಂಡಳಿ ಮತ್ತು ಬಿಹಾರ ಶಿಕ್ಷಣ ಇಲಾಖೆಯು ಹದಿಹರೆಯದವರಿಗಾಗಿ ಆಯೋಜಿಸಿದ ತಲೀಮ್-ಎ-ನಬಾಲಿಗನ್ ಕಾರ್ಯಕ್ರಮದಲ್ಲಿ ಮದ್ರಸಾ ಭಾಗವಹಿಸಿದೆ.
"ಗಾಯವು ವಾಸಿಯಾಗಬಹುದು[ಲೈಬ್ರರಿ ಸುಟ್ಟು ಹೋದ ನೆನಪು], ಆದರೆ ಅದರ ನೋವು ಉಳಿಯುತ್ತದೆ" ಎಂದು ಬೀಬಿ ಸೋಘ್ರ ವಕ್ಫ್ ಎಸ್ಟೇಟಿನ ನಿರ್ವಾಹಕ ಮೊಖ್ತರುಲ್ ಹಕ್ ಹೇಳುತ್ತಾರೆ.
ಈ ವರದಿಗೆ ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನಿಸ್ಟ್ ಸ್ಮರಣಾರ್ಥ ಫೆಲೋಶಿಪ್ ಸಹಾಯ ಪಡೆಯಲಾಗಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು