ನೊಸುಮುದ್ದೀನ್ ಅಳುತ್ತಿದ್ದ. ಅವನು ಅಂದು ತನ್ನ ಮನೆಯಿಂದ ಹೆತ್ತವರನ್ನು ಬಿಟ್ಟು 10-12 ಕಿಲೋಮೀಟರ್ ದೂರದಲ್ಲಿ ವಾಸಿಸಲು ಹೊರಡಬೇಕಿತ್ತು. ಏಳು ವರ್ಷದ ಬಾಲಕನೊಬ್ಬನ ಪಾಲಿಗೆ ಇದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು. “ಅಂದು ಮನೆ ಮತ್ತು ಕುಟುಂಬವನ್ನು ತೊರೆದು ದೂರವಿರುವುದನ್ನು ನೆನೆದು ಬಹಳ ನೋವಾಗಿತ್ತು. ನಾನು ಅಳಲು ಪ್ರಾರಂಭಿಸಿದ್ದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಅಂದು ಅವರನ್ನು ರಾಖಲ್ (ಜಾನುವಾರುಗಳ ಆರೈಕೆ) ಕೆಲಸಕ್ಕೆ ಕಳುಹಿಸಲಾಗಿತ್ತು. "ನನ್ನ ಕುಟುಂಬವು ತುಂಬಾ ಬಡತನದಲ್ಲಿತ್ತು, ನನ್ನ ಹೆತ್ತವರಿಗೆ ಬೇರೆ ಆಯ್ಕೆ ಇದ್ದಿರಲಿಲ್ಲ" ಎಂದು ಈಗ 41 ವರ್ಷದ ನೊಸುಮುದ್ದೀನ್ ಶೇಖ್ ಹೇಳುತ್ತಾರೆ. "ನಮಗೆ ಊಟಕ್ಕೆ ಸಾಕಾಗುವಷ್ಟು ಆಹಾವಿರಲಿಲ್ಲ. ನಾವು ಹೊಲದಲ್ಲಿ ಯಾವುದು ಮುಕ್ತವಾಗಿ ಬೆಳೆಯುತ್ತದೆಯೋ ಅದನ್ನೇ ತಿನ್ನುತ್ತಿದ್ದೆವು, ಹೆಚ್ಚಿನ ದಿನಗಳಲ್ಲಿ ಕೇವಲ ಒಂದು ಊಟವನ್ನು ಮಾತ್ರ ಮಾಡಲು ಸಾಧ್ಯವಿತ್ತು. ಆ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ಕೆಲವೇ ಜನರು ಮಾತ್ರ ಎರಡು ಹೊತ್ತಿನ ಊಟ ಮಾಡುವಷ್ಟು ಶಕ್ತರಾಗಿದ್ದರು.” ಶಿಕ್ಷಣವು ಅವರ ಕಲ್ಪನೆಗೂ ಮೀರಿದ ವಿಷಯವಾಗಿತ್ತು: “ಆ ಸಮಯದಲ್ಲಿ ನಾನು ಶಾಲೆಗೆ ಹೋಗುವ ಯೋಚನೆ ಮಾಡಲಿಲ್ಲ. ನನ್ನ ಕುಟುಂಬದ ಸ್ಥಿತಿ ತುಂಬಾ ಕೆಟ್ಟದಾಗಿತ್ತು, ನಾವು ಹೇಗೆ ಶಾಲೆಗೆ ಹೋಗಲು ಸಾಧ್ಯ? "
ಆದುದರಿಂದ ಅವರು ಅಸ್ಸಾಂನ (ಅಂದಿನ) ಧುಬ್ರಿ ಜಿಲ್ಲೆಯ ಉರರ್ಭುಯಿ ಗ್ರಾಮದಲ್ಲಿನ ತನ್ನ ಸಾಧಾರಣವಾದ ಹುಲ್ಲಿನ ಗುಡಿಸಲನ್ನು ಬಿಟ್ಟು, ಬಸ್ಸಿನಲ್ಲಿ 3 ರೂಪಾಯಿಯ ಟಿಕೆಟ್ ಪಡೆದು ಮನುಲ್ಲಪಾರ ಗ್ರಾಮಕ್ಕೆ ಹೋಗಿ, 7 ಹಸುಗಳು ಮತ್ತು 12 ಬಿಘಾ ಭೂಮಿ (ಸುಮಾರು 4 ಎಕರೆ) ಹೊಂದಿರುವ ಮಾಲೀಕರ ಬಳಿ ಕೆಲಸಕ್ಕೆ ಸೇರಿದರು . "ರಾಖಲ್ ಆಗಿ ಜೀವನವು ಬಹಳ ಕಷ್ಟಕರವಾಗಿತ್ತು. ಆ ವಯಸ್ಸಿನಲ್ಲಿ ನಾನು ಹಲವು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು. ಕೆಲವೊಮ್ಮೆ ನನಗೆ ಸಾಕಷ್ಟು ಆಹಾರ ನೀಡುತ್ತಿರಲಿಲ್ಲ ಅಥವಾ ಹಳೆಯ ಆಹಾರವನ್ನು ಮಾತ್ರ ನೀಡಲಾಗುತ್ತಿತ್ತು. ನಾನು ಹಸಿವಿನಿಂದ ಅಳುತ್ತಿದ್ದೆ, ”ಎಂದು ನೊಸುಮುದ್ದೀನ್ ನೆನಪಿಸಿಕೊಳ್ಳುತ್ತಾರೆ. "ಆರಂಭದಲ್ಲಿ, ನನಗೆ ಯಾವುದೇ ಸಂಬಳ ನೀಡುತ್ತಿರಲಿಲ್ಲ, ಕೇವಲ ಊಟ ಮತ್ತು ಮಲಗಲು ಜಾಗವನ್ನು ನೀಡಲಾಯಿತು. ನನ್ನ ಉದ್ಯೋಗದಾತ ಪ್ರತಿ ವರ್ಷ 100-120 ಮಾನ್ ಅಕ್ಕಿಯನ್ನು ಬೇಸಾಯದಿಂದ ಗಳಿಸುತ್ತಿದ್ದ. ನಾಲ್ಕು ವರ್ಷಗಳ ನಂತರ, ಅವರು ನನಗೆ ಎರಡು ಮಾನ್ ನೀಡಲು ಆರಂಭಿಸಿದರು ” - ಸುಮಾರು 80 ಕಿಲೋ, ಮಾರ್ಚಿಯಿಂದ ನವೆಂಬರ್ ತನಕದ ಕೃಷಿ ಹಂಗಾಮಿನ ಕೊನೆಯಲ್ಲಿ ಕೊಡುತ್ತಿದ್ದರು.
ಕೆಲವು ದಶಕಗಳ ಹಿಂದೆ ಅಸ್ಸಾಂ ಮತ್ತು ಮೇಘಾಲಯದ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದಲ್ಲಿನ ಚಿಕ್ಕ ಹುಡುಗರನ್ನು ರಖಾಲ್ಗಳಾಗಿ ಕೆಲಸ ಮಾಡಲು ಕಳುಹಿಸುವುದು ಸಾಮಾನ್ಯ ಅಭ್ಯಾಸವಾಗಿತ್ತು. ಬಡ ಕುಟುಂಬಗಳ ಮಕ್ಕಳನ್ನು ಅವರ ಪೋಷಕರು ಶ್ರೀಮಂತ ರೈತರಿಗೆ ಜಾನುವಾರು ಪಾಲಕರಾಗಿ 'ಉದ್ಯೋಗ' ಮಾಡಲು 'ನೀಡುತ್ತಾರೆ'. ಈ ವ್ಯವಸ್ಥೆಯನ್ನು ಸ್ಥಳೀಯವಾಗಿ ಪೇಟ್ಭತ್ತಿ ಎಂದು ಕರೆಯಲಾಗುತ್ತಿತ್ತು (ಅಕ್ಷರಶಃ ಅನುವಾದ - 'ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುವುದು').











